Spread the love

ಸರಕಾರಿ ಶಾಲೆಯ ಶಿಕ್ಷಕರ ಬೆಂಗಳೂರು ಚಲೋ
ಹಾಗೂ ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆ

ಇಲಾಖಾಧಿಕಾರಿಗಳು ಹಾಗೂ ಶಿಕ್ಷಣ ಮಂತ್ರಿಗಳು ಮೌನ ಯಾಕೆ?

ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಶಿಕ್ಷಕರಿಗೆ ನೈತಿಕ ಬೆಂಬಲದ ಅಗತ್ಯತೆ

ಆಗಸ್ಟ್ 12 ಸರಕಾರಿ ಶಾಲಾ ಶಿಕ್ಷಕರ ಬೆಂಗಳೂರು ಚಲೋ ಮತ್ತು ಪ್ರತಿಭಟನೆಯ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಹತವಾಗಿ ಸಂದೇಶಗಳು ಹರಿದಾಡುತ್ತಿದೆ .

ಈ ಒಂದು ಪ್ರತಿಭಟನೆಗೆ ಪೂರಕವಾಗಿ ಕನಿಷ್ಠ ಒಂದು ತಿಂಗಳಿನಿಂದ ಈ ಶಿಕ್ಷಕರು ಪೂರ್ವಭಾವಿ ಸಿದ್ಧತೆಗಳನ್ನು ಮಾಡುತ್ತಿದ್ದು, ಶಾಲೆ ಶಾಲೆ ಭೇಟಿ,ತಹಶೀಲ್ದಾರ್ ಭೇಟಿ, ಶಿಕ್ಷಣಾಧಿಕಾರಿಗಳ ಭೇಟಿ,ಉಪ ನಿರ್ದೇಶಕರ ಭೇಟಿ,ಶಾಸಕರ ಭೇಟಿ,ಮಂತ್ರಿಗಳ ಭೇಟಿ,ಉನ್ನತಾಧಿಕಾರಿಗಳ ಭೇಟಿ ಹೀಗೆ ಉದ್ದವಾದ ಸಾಲುಗಳು ಎಲ್ಲವೂ ಮಕ್ಕಳ ಪಾಠಮಾಡುವಂತವ ಸಮಯವನ್ನು ತಿಂದು ತೇಗುತ್ತಿದೆ. ಈ ಎಲ್ಲವೂ ಹೆಚ್ಚಿನ ಎಲ್ಲಾ ಪತ್ರಿಕೆಗಳಲ್ಲಿ, ವಾರ್ತಾ ಮಾಧ್ಯಮಗಳಲ್ಲಿ ಕೂಡ ಬರುತ್ತಿದ್ದು ರಾಜ್ಯದ ಎಲ್ಲಾ ಶಿಕ್ಷಕರನ್ನು ತಲುಪಿಸುವಲ್ಲಿ ನಿರತವಾಗಿದೆ

ಶಿಕ್ಷಕರ ಪ್ರತಿಭಟನೆಯ ಕಾವು ಹೇಗಿದೆಯೆಂದರೆ ಶಾಲೆಯಲ್ಲಿ ಮಕ್ಕಳಿಗೆ ಪಾಠಮಾಡಲು ಕೂಡ ಸಮಯವಿಲ್ಲದ ರೀತಿಯಲ್ಲಿ,ಮೊಬೈಲ್ ಗಳು ರಿಂಗಾಗುತ್ತಿದ್ದು ಇಲಾಖೆಯ ನಿಯಮಗಳು ಎಲ್ಲವೂ ಗಾಳಿಗೆ ತೂರಲಾಗಿದೆ.

ಸರಕಾರ ಅಥವಾ ಇಲಾಖೆ ಇದನ್ನೆಲ್ಲವನ್ನು ಕಂಡು ಮೌನವಾಗಿರುವುದು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ.
ಒಂದು ಶಿಕ್ಷಕ ಅಥವಾ ಶಿಕ್ಷಕಿ ಮದ್ಯಾಹ್ನ ಒಂದು ಗಂಟೆಗೆ ಅಥವಾ ಸಂಜೆ 4 ಗಂಟೆಗೆ ಇಲಾಖಾಧಿಕಾರಿಗಳು,ಶಾಸಕರು,ಮಂತ್ರಿಗಳ ಬಳಿಗೆ ತಲುಪುತ್ತಾರೆ ಎಂದಾದರೆ ಅವರು ಮಕ್ಕಳಿಗೆ ವಾರ್ಷಿಕವಾಗಿ RTE ಪ್ರಕಾರ ಪಾಠ ಮಾಡಬೇಕಾದ 1000 ಗಂಟೆಯ ಪಾಠದಿಂದ ಒಂದರ್ಧ ಗಂಟೆ ಮುಂಚಿತವಾಗಿ ಹೋಗುವ ಕಾರಣ ಮಕ್ಕಳಿಗೆ ಪಾಠ ಮಾಡಬೇಕಾದ ಅಮೂಲ್ಯ ಸಮಯದಿಂದ ಕಡಿತ ಆಗುತ್ತದೆಯೇ ವಿನಃ ನೋಡುಗರಿಗೆ ಏನೂ ನಷ್ಟ ಇರುವುದಿಲ್ಲ. ಮಳೆಗಾಲದಲ್ಲಿ ರಜೆಯನ್ನು ಕೊಟ್ಟಾಗ ಅದನ್ನು ಶನಿವಾರ ಮಕ್ಕಳು ಹೋಗುವ ಪಠ್ಯೇತರ ಚಟುವಟಿಕೆಗಳನ್ನು ಮೊಟಕು ಗೊಳಿಸಿ, ಶೈಕ್ಷಣಿಕ ನಷ್ಟವನ್ನು ಸರಿದೂಗಿಸುವ ಶಿಕ್ಷಣ ಇಲಾಖೆ,ಅವರದೇ ವ್ಯವಸ್ಥೆಯಲ್ಲಿರುವ ಶಿಕ್ಷಕರು ಅವರ ಲಾಭಕ್ಕಾಗಿ ಮಾಡುವ ಇಂತಹ ಶೈಕ್ಷಣಿಕ ನಷ್ಟವನ್ನು ಸರಿದೂಗಿಸುವುದು ಹೇಗೆ ಮತ್ತು ಯಾರು ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ

ಕಳೆದ ಶೈಕ್ಷಣಿಕ ವರ್ಷ ಮಾರ್ಚ್ 1 ರಂದು ರಾಜ್ಯವ್ಯಾಪಿ ನೌಕರರ ಪ್ರತಿಭಟನೆಯಲ್ಲಿ ಭಾಗಿಯಾದ ಶಿಕ್ಷಕರ ಒತ್ತಡಕ್ಕೆ ಮಣಿದು ಬೇಡಿಕೆಯನ್ನು ಈಡೇರಿಸಿದ್ದು ಅಲ್ಲದೆ, ಆ ಒಂದು ದಿನದ ರಜೆಯನ್ನು ಕೊಟ್ಟಂತಹ ಸರಕಾರ ಆ ಒಂದು ದಿನ ರಾಜ್ಯದ 45 ಲಕ್ಷದಷ್ಟು ಪ್ರಾಥಮಿಕ ಶಾಲಾ ಮಕ್ಕಳ ಕಲಿಕೆಯ 2.25 ಕೋಟಿ ಗಂಟೆ ನಷ್ಟವಾಗಿದ್ದು ಇದನ್ನು ಯಾವ ರೀತಿಯಲ್ಲಿ ಸರಿದೂಗಿಸಿದೆ?

ಈಗ 12 ತಾರಿಕಿನ ಶಿಕ್ಷಕರ ಒತ್ತಡ ತಂತ್ರದ ಭಾಗವಾಗಿ ನಡೆಯುವ ಬೆಂಗಳೂರು ಚಲೋ ಮತ್ತು ಪ್ರತಿಭಟನೆಯ ಕಾರಣ ರಾಜ್ಯದಲ್ಲಿ ಒಬ್ಬರೇ ಶಿಕ್ಷಕರು ಇರುವಂತಹ 6500 ದಷ್ಟು ಸರಕಾರಿ ಶಾಲೆಗಳು ಮುಚ್ಚಲಿವೆ,ಅಲ್ಲಿಯ ಮಕ್ಕಳ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ಕೊಡುವಂತಹ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ವಾಗಲಿದ್ದು ಅದು ಸರಕಾರಿ ನೌಕರರ ನಿಯಮಗಳ ಉಲ್ಲಂಘನೆ ಹಾಗೂ ಮಕ್ಕಳ ಹಕ್ಕುಗಳ ಕೂಡ ಉಲ್ಲಂಘನೆ ಆಗಿರುವ ಕಾರಣ ಅವರ ಯಾವುದೇ ಒತ್ತಡಕ್ಕೆ ಮಣಿಯದೆ ಸರಕಾರವು ಇಂತಹ ಪ್ರತಿಭಟನೆಗೆ ಆಹ್ವಾನ ನೀಡಿದ ಸಂಘಟನೆಯನ್ನು ಬ್ಯಾನ್ ಮಾಡುವುದು ಹಾಗೂ ಇದಕ್ಕೆ ಸಹಕಾರವನ್ನು ನೀಡುವವರನ್ನು ಕೆಲಸದಿಂದ ಅಮಾನತು ಮಾಡುವ ಸುಗ್ರೀವಾಜ್ಞೆಯನ್ನು ಹೊರಡಿಸಬೇಕಿದೆ.

ಶಿಕ್ಷಣ ಇಲಾಖೆಯ ಆದೇಶದಂತೆ ಮುಖ್ಯ ಶಿಕ್ಷಕರನ್ನು ಬಿಟ್ಟು ಶಾಲಾ ಅವಧಿಯಲ್ಲಿ ಶಿಕ್ಷಕರು ಮೊಬೈಲ್ ಉಪಯೋಗಿಸುವ ಆಗಿಲ್ಲ ಎನ್ನುವ ನಿಯಮಗಳು ಇದ್ದು ಕೂಡ ಈ ಪ್ರತಿಭಟನೆಗೆ ಆಹ್ವಾನ ನೀಡಿದವರು ಎಲ್ಲರೂ ಶಿಕ್ಷಕರಾಗಿದ್ದು ಕೊಂಡು ಇಡೀ ದಿನ ಈ ಪ್ರತಿಭಟನೆಯ ಭಾಗವಾಗಿ ಶಿಕ್ಷಕರನ್ನು ಒಗ್ಗೂಡಿಸುವ ಕೆಲಸದಲ್ಲಿ ನಿರತರಾಗಿದ್ದು,ಕೇವಲ ಇಂತಹ ಶಿಕ್ಷಕರ ಫೋನ್ ಕರೆಗಳ ಪಟ್ಟಿಯನ್ನು ಇಲಾಖೆಯೇ ಪಡೆದು ಕೊಂಡರೆ ಈ ನಿಯಮ ಬಾಹಿರ ಕೃತ್ಯವನ್ನು ಮಾಡುತ್ತಿರುವ ಎಲ್ಲಾ ಶಿಕ್ಷಕರ ಹಣೆ ಬರಹವು ತಿಳಿಯಲಿದೆ. ಸರಕಾರ ಮತ್ತು ಇಲಾಖೆಯು ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಕೈ ಗೊಳ್ಳದೆ ಇದ್ದರೆ ಸರಕಾರಿ ಶಾಲೆಗಳು ಆದಷ್ಟು ಬೇಗ ಮುಚ್ಚಲಿದೆ.

ಸರಕಾರಿ ಶಾಲೆಯ ಶಿಕ್ಷಕರ ಬೇಡಿಕೆಗಳಲ್ಲಿ ಇರುವಂತಹ ಹಿಂಬಡ್ತಿ ಎನ್ನುವುದು ಸರಕಾರಿ ಶಾಲೆಯಲ್ಲಿ ಕಲಿಯುವ ಸಣ್ಣ ಮಕ್ಕಳಿಗೆ ವರದಾನವಾಗಿವೆ,10 ರಿಂದ 20 ವರ್ಷ ಮಕ್ಕಳಿಗೆ ಪಾಠ ಮಾಡಿ ಅನುಭವ ಇರುವಂತಹ ಹಿರಿಯ ಶಿಕ್ಷಕರು ,ಶಿಕ್ಷಣದ ಬುನಾದಿ ಆಗಿರುವ ಸಣ್ಣ ಮಕ್ಕಳಿಗೆ ಪಾಠ ಮಾಡುವುದರಿಂದ ಆ ಮಕ್ಕಳಿಗೆ ಬುನಾದಿ ಶಿಕ್ಷಣವು ದೊರಕಲಿವೆ, ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಲಿವೆ. ಅದರಿಂದ ಹಿರಿಯ ಶಿಕ್ಷಕರು ಇದನ್ನು ಹಿಂಬಡ್ತಿ ಎಂದು ತಿಳಿಯದೆ ಇದನ್ನು ಗೌರವ ಎನ್ನುವ ರೀತಿಯಲ್ಲಿ ಅರ್ಥೈಸಿ ಮಕ್ಕಳ ಪರವಾಗಿ ಯೋಚಿಸಬೇಕಿದೆ. ಉಳಿದ ಬೇಡಿಕೆಗಳನ್ನು ಸರಕಾರವು ಚರ್ಚಿಸಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ತೀರ್ಮಾನವನ್ನು ತೆಗೆದು ಕೊಳ್ಳಬೇಕಿದೆ.

ಶಿಕ್ಷಕರ ಬೇಡಿಕೆಗಳು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ ಎಂದಾದರೆ ಅದನ್ನು ಸರಕಾರವು ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ಮಹತ್ವ ಕೊಡುವ ತೀರ್ಮಾನಗಳನ್ನು ಹಾಗೂ ಬೇಡಿಕೆಗಳನ್ನು ಸರಕಾರದೊಂದಿಗೆ ಚರ್ಚಿಸುವ ವ್ಯವಸ್ಥೆಗಳು ಆಗಬೇಕಿವೆ.

ಯಾವುದೇ ಕಾರಣಕ್ಕೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗದೆ ಇರುವಂತಹ ಪ್ರತಿಭಟನೆಗಳನ್ನು ಶಿಕ್ಷಣ ಇಲಾಖೆ ಮತ್ತು ಸರಕಾರವು ಹತ್ತಿಕ್ಕ ಬೇಕಿದೆ. ಹಾಗೂ ಇಂತಹ ಪ್ರತಿಭಟನೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಬಾರದು ಹಾಗೂ ಸರಕಾರಿ ಶಾಲೆಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಇರುವ ಶಿಕ್ಷಕ ವೃಂದ ಹಾಗೂ ಅತಿಥಿ ಶಿಕ್ಷಕರನ್ನು ಬಳಸಿಕೊಂಡು ಯಾವುದೇ ಶಾಲೆಗಳು ಮುಚ್ಚದಂತೆ ಹಾಗೂ ಪೌಷ್ಟಿಕ ಆಹಾರವು ಸಿಗುವಂತೆ ಕ್ರಮವನ್ನು ಕೈ ಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ (ರಿ) ಯ ಸಂಚಾಲಕರಾದ  ಮೊಯ್ದಿನ್ ಕುಟ್ಟಿ ಅವರು ಈ ಮೂಲಕ ಆಗ್ರಹಿಸಿದ್ದಾರೆ.

error: No Copying!