Spread the love

ಜುಲೈ ‌30 ಮತ್ತು
ಆಗಸ್ಟ್ 4……..

ವಿಶ್ವ ಗೆಳೆತನದ ದಿನ ಜುಲೈ 30. ಆದರೆ ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ ಆಚರಿಸಲಾಗುತ್ತದೆ. ಆ ಪ್ರಕಾರ ಈ ವರ್ಷ ಆಗಸ್ಟ್ 4 ನಾಳೆ………….

” ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವೆಲ್ಲರೂ ನನ್ನ ಜೊತೆಯಾಗಿರುವಾಗ ಈ ದಾರಿ ಎಂದೆಂದಿಗೂ ಕೊನೆಯಾಗದಿರಲಿ ಎಂದೆನಿಸುತ್ತಿದೆ. “

” ನನ್ನ ಪ್ರೀತಿಯ ಸ್ನೇಹಿತರೆ, ನೀವು ಇಲ್ಲಿಯವರೆಗೆ ತೋರಿದ ಪ್ರೀತಿ ಗೌರವ ಅಭಿಮಾನಕ್ಕೆ ಅಕ್ಷರಗಳಿಂದ ಉತ್ತರಿಸಿದರೆ ಅದು ನನಗೆ ತೃಪ್ತಿಯಾಗುವುದಿಲ್ಲ…….

ಒಂದು ವೇಳೆ ನಾನು ಸರ್ವಶಕ್ತ ದೇವರಾಗಿದ್ದಿದ್ದರೆ…..

ಈ ದೇಶದ ಒಬ್ಬರನ್ನೂ ಹಸಿವಿನಿಂದ ಸಾಯಲು ಬಿಡುತ್ತಿರಲಿಲ್ಲ….

ಒಂದೇ ಒಂದು ಹೆಣ್ಣನ್ನು ಆಕೆಯ ಮನಸ್ಸಿಗೆ ವಿರುದ್ದವಾಗಿ ಬಲವಂತ ಮಾಡದಂತೆ ತಡೆಯುತ್ತಿದ್ದೆ…..

ಮನುಷ್ಯನನ್ನು ಸೇರಿ ಒಂದು ಜೀವಿಯೂ ಅಪಘಾತ – ಅನಾರೋಗ್ಯದಿಂದ ಸಾಯದಂತೆ ನೋಡಿಕೊಳ್ಳುತ್ತಿದ್ದೆ…..

ಪ್ರಕೃತಿಯ ವಿರುದ್ದವಾಗಿ ಹೋಗದೆ ಸಹಜ ಸಾವುಗಳನ್ನು ತಡೆಯದೆ ಅವುಗಳನ್ನು ಸಂಭ್ರಮಿಸುವ ಮಾನಸಿಕ ಸ್ಥಿತಿಯನ್ನು ಉಂಟುಮಾಡುತ್ತಿದ್ದೆ…….

ಎಲ್ಲಾ ಪ್ರೇಮಿಗಳು ಅವರು ಇಷ್ಟಪಡುವ ಸಂಗಾತಿಯೊಂದಿಗೆ ಬಾಳು ನಡೆಸುವಂತೆ ಮೇಲ್ವಿಚಾರಣೆ ನಡೆಸುತ್ತಿದ್ದೆ‌……

ರೈತರು – ಸೈನಿಕರನ್ನು ಅವರ ಕೆಲಸಗಳಿಂದ ಮುಕ್ತಗೊಳಿಸಿ ಅವರ ಇಷ್ಟದ ಕೆಲಸ ಕೊಡುತ್ತಿದ್ದೆ. ಆಹಾರ ಮತ್ತು ರಕ್ಷಣೆಯ ಜವಾಬ್ದಾರಿ ನಾನೇ ಹೊರುತ್ತಿದ್ದೆ….,..

ಕೊಲೆ – ದರೋಡೆ – ಅನ್ಯಾಯ – ಭ್ರಷ್ಟಾಚಾರಗಳೆಂಬ ಪದಗಳೇ ಇರದಂತೆ ಆಡಳಿತ ನಡೆಸುತ್ತಿದ್ದೆ…….

ಮನುಷ್ಯನ ರೂಪ – ಬಣ್ಣ – ಗುಣ – ಆಹಾರಗಳಲ್ಲಿ ಭಿನ್ನತೆ ಕಾಪಾಡಿದರೂ ಶ್ರೇಷ್ಠ ಮತ್ತು ಕನಿಷ್ಠ ತಾರತಮ್ಯ ಇಲ್ಲದಂತೆ ಸೃಷ್ಟಿಸುತ್ತಿದ್ದೆ…….

ವೇಷ ಭೂಷಣಗಳ ಹಂಗಿಲ್ಲದೆ ಹುಟ್ಟಿನಿಂದ ಸಾಯುವವರೆಗೂ ಚರ್ಮದ ಹೊದಿಕೆಯನ್ನೇ ಶಾಶ್ವತ ಮಾಡುತ್ತಿದ್ದೆ……..

ಇನ್ನೂ ಇನ್ನೂ ಇನ್ನೂ……..

ಅತಿಮುಖ್ಯವಾಗಿ,…….

ನನ್ನ ಈ ಸ್ನೇಹಿತರ ಕಣ್ಗಳಲ್ಲಿ ಒಂದೇ ಒಂದು ನೋವಿನ ಹನಿಯೂ ಜಿನುಗದಂತೆ ನೋಡಿಕೊಂಡು ಅವರುಗಳು ಸದಾ ತಾವು ಬಯಸಿದ ರೀತಿಯಲ್ಲಿ ನಗುನಗುತ್ತಾ ಬದುಕು ಸಾಗಿಸುವ ಕಲೆಯನ್ನು ಕಲಿಸಿಕೊಡುತ್ತಿದ್ದೆ……..

ಏನು ಮಾಡಲಿ. ನಾನೊಬ್ಬ ನರಮಾನವ.
ನಿಮ್ಮ ನಲಿವಿಗೆ ಜೊತೆಯಾಗದಿದ್ದರೂ ನಿಮ್ಮ ನೋವಿಗೆ ಜೊತೆಯಾಗುವಾಸೆ…….

ಈಗಲೂ ಕಾಲ ಮಿಂಚಿಲ್ಲ. ಅಷ್ಟಲ್ಲದಿದ್ದರೂ ಇಷ್ಟಾದರೂ ಮಾಡುವಾಸೆ………

ನಿರಾಶರಾಗದಿರಿ. ಎಲ್ಲರೂ ಒಟ್ಟಾಗಿ ನಮ್ಮ ಜೀವತಾವಧಿಯಲ್ಲೇ ಒಂದಷ್ಟು ಸುಂದರ ಬದುಕಿನ ಕ್ಷಣಗಳಿಗೆ ಸಾಕ್ಷಿಯಾಗೋಣ……….

ನನ್ನ ತಾಯಿ ಭಾಷೆಯೇ…….

ಎರವಲು ಕೊಡು ಕೆಲವು ಪದಗಳನ್ನು ನಾನು ಗೆಳೆಯರಿಗೆ ಕೃತಜ್ಞತೆಗಳನ್ನು ಅರ್ಪಿಸಬೇಕಿದೆ…….

ಸವಕಲಾಗಿದೆ ಧನ್ಯವಾದಗಳು ಎಂಬ ಪದ ಪ್ರೀತಿಯ ಭಾವದ ಮುಂದೆ………..

ಕನ್ನಡ ತಾಯಿಯೇ ಸೃಷ್ಟಿಸು ಇನ್ನೊಂದಿಷ್ಟು ಪದಗಳನ್ನು ನಾನವರಿಗೆ ಪ್ರತಿ ನಮಸ್ಕಾರ ಹೇಳಬೇಕಿದೆ…………..

ಗೆಳೆಯಗೆಳತಿರೆಲ್ಲರೆದೆಯ ಪ್ರೀತಿಗೊಂದು ಮುದ್ದಿನ ಗುದ್ದು ನೀಡಬೇಕಿದೆ……..

ಎಂದೆಂದೂ ಮರೆಯದ ಅಮರವಾಣಿಯನ್ನು ಅವರೊಳಗೆ ಬಿತ್ತಬೇಕಿದೆ…..

ಮರೆಯಲಾಗದ, ಅಳಿಸಲಾಗದ,
ಸವಕಲಾಗದ ಪದಗಳನ್ನು………

ನನ್ನದೆಯೊಳಗಿನ ಭಾವ ತುಂಬಿ, ದೇಹದೊಳಗಿನ ಕಸವು ಹಿಂಡಿ, ಮನಸ್ಸಿನ ಆದ್ರತೆಯನ್ನು ಹೊರಹೊಮ್ಮಿಸುವ ಪದವ ನೀಡು……..

ಆ ಪದವು ,
ಗೆಳೆತನವನ್ನು ನಿರಂತರವಾಗಿಸಬೇಕು,
ಶಾಶ್ವತವಾಗಿಸಬೇಕು,
ಅಮರವಾಗಿಸಬೇಕು,
ಅವರೆದೆಯೊಳಗೆ ಅಚ್ಚಳಿಯದೆ ನೆಲೆ ನಿಲ್ಲುವಂತಿರಬೇಕು………

ಆ ಪದವೇ ಗೆಳೆತನದ ಭಾವನೆಗಳ ಸಮ್ಮಿಲನದಂತಿರಬೇಕು,
ಎಲ್ಲಾ ಅರ್ಥಗಳನ್ನು ಒಟ್ಟಿಗೇ ಹೇಳುವಂತಿರಬೇಕು.
ಸ್ನೇಹದ ಬಾಂಧವ್ಯಕ್ಕೆ ಸಂಕೇತವಾಗಿರಬೇಕು……

ಆ ಪದ ಸಿಗುವವರೆಗೆ,
ಗೆಳೆಯಗೆಳತಿಯರೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು….. ‌…..

ನುಡಿದಂತೆ ನಡೆಯುವ,
ನಡೆದಂತೆ ನುಡಿಯುವ,
ಮಾತು – ಕೃತಿಗಳ ನಡುವಿನ ಅಂತರ ಪ್ರಜ್ಞಾಪೂರ್ವಕವಾಗಿ ಕಡಿಮೆಯಾಗಿ ನಾಗರಿಕ ಸಮಾಜ ಮತ್ತಷ್ಟು ಉತ್ತಮವಾಗಲಿ ಎಂದು ಹಂಬಲಿಸುತ್ತಾ………..

ಇರುವವರೆದೆಯಲ್ಲಿ‌ ಇಲ್ಲದವರು,
ನೋವಿರುವವರ ಜೊತೆಯಲ್ಲಿ ನಲಿವಿರುವವರು,
ಕಳೆದುಕೊಂಡವರ ಬದುಕಲ್ಲಿ ಪಡೆದುಕೊಂಡವರು,
ಒಂದಾಗಿ ಸಾಗುವ ದಿನಗಳು ಮರಳಲಿ,
ಎಂದು ಆಶಿಸುತ್ತಾ…….

ಚಡ್ಡಿಯನ್ನೂ ಹಾಕಲು ಬಾರದ ದಿನಗಳಲ್ಲಿ ಕಲ್ಲು ಮಣ್ಣು ಕಡ್ಡಿ ಬೊಂಬೆ ಚಾಕಲೇಟುಗಳಿಗೆ ಜಗಳವಾಡುತ್ತಾ ಸ್ವಲ್ಪ ಮುನಿಸು, ತುಸು ಪ್ರೀತಿಗಳ ತಾತ್ಕಾಲಿಕ ಭಾವನೆಗಳಿಂದ ಸ್ನೇಹದ ಮೊದಲ ಆಟ ಪ್ರಾರಂಭವಾಗುತ್ತದೆ…….

ಅಕ್ಕ ಪಕ್ಕದ ಮನೆಯ ಸಹಪಾಠಿಗಳು, ಶಿಶುವಿಹಾರದಿಂದ ಕಾಲೇಜುಗಳವರೆಗೂ ದಂಡಿಯಾಗಿ ಗೆಳೆಯರ ಗುಂಪುಗಳು ಜೊತೆಯಾಗುತ್ತದೆ……

ಸಮಾರಂಭಗಳಲ್ಲಿ,
ಬಸ್ಸು ರೈಲು ವಿಮಾನಗಳ ಪ್ರಯಾಣದಲ್ಲಿ,
ದೇವಸ್ಥಾನ ಹೋಟೆಲು ಪಾರ್ಕುಗಳಲ್ಲಿ, ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ, ಚಳವಳಿ ಹೋರಾಟದ ಸಮಯದಲ್ಲಿ, ಉದ್ಯೋಗ ವ್ಯವಹಾರಗಳ ಸ್ಥಳಗಳಲ್ಲಿ, ಜೈಲು ಆಸ್ಪತ್ರೆ ಆಶ್ರಮ ಕಚೇರಿಗಳಲ್ಲಿ, ಹೀಗೆ ಎಲ್ಲೆಂದರಲ್ಲಿ ಸ್ನೇಹ ಬೆಳೆಯಬಹುದು…..

ಆದರೆ ಸಮೂಹ ಸಂಪರ್ಕ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಗೆಳೆತನ ಹೊಸ ಅರ್ಥವನ್ನು ಮತ್ತು ಹೊಸ ರೂಪವನ್ನು ಪಡೆದುಕೊಂಡಿತು.

ಸಾಮಾನ್ಯವಾಗಿ ಸ್ನೇಹವೆಂದರೆ ಮುಖಾಮುಖಿ ಮಿಲನದಲ್ಲಿ ಏರ್ಪಡುತ್ತದೆ ಎಂಬ ಮೂಲ ನಂಬಿಕೆಯೇ ಬುಡಮೇಲಾಗಿ ಒಬ್ಬರಿಗೊಬ್ಬರು ಮುಖತಃ ಭೇಟಿಯಾಗದೆಯೂ ಸಹ ಗೆಳೆತನ ಮಾಡಬಹುದು ಎಂಬ ಸಾಧ್ಯತೆಯನ್ನು ಸೋಷಿಯಲ್ ಮೀಡಿಯಾಗಳು ತೋರಿಸಿಕೊಟ್ಟಿವೆ……..

ಹಾಗಾದರೆ ಗೆಳೆತನದ ಆಳ – ಅಗಲ , ಜೊಳ್ಳು – ಗಟ್ಟಿತನ , ಸಹಜ – ಮುಖವಾಡ, ನಿಸ್ವಾರ್ಥ – ಕೃತಕ ಇತ್ಯಾದಿ ಭಾವಗಳನ್ನು ಅಳೆಯುವುದಾದರೂ ಹೇಗೆ ?

ಇದು ಅನುಭವ – ಅರಿವು – ಅಕ್ಷರ – ಭಾವನೆ – ನಂಬಿಕೆ – ವೈಚಾರಿಕತೆಗೂ ನಿಲುಕದಷ್ಟು ವಿಸ್ತಾರವನ್ನು ಹೊಂದಿದೆ. ಇದು ಹೀಗೇ ಎಂದು ನಿರ್ಧರಿಸಲು ಸಾಧ್ಯವೇ ಇಲ್ಲ. ಕೇವಲ ನಮ್ಮ ಜ್ಞಾನದ ಮಿತಿಯಲ್ಲಿ ಒಂದು ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸಬಹುದಷ್ಟೆ….

ಯೌವನದ ದಿನಗಳವರೆಗೂ ಸಾಮಾನ್ಯ ಸ್ಥಿತಿಯಲ್ಲಿ ಸ್ನೇಹ ಉತ್ತಮ ಬಾಂಧವ್ಯವನ್ನು ಹೊಂದಿರುತ್ತದೆ. ಕಷ್ಟ ಸುಖಗಳಿಗೆ ಒಂದಷ್ಟು ಸ್ಪಂದನೆ ಇರುತ್ತದೆ.

ಯೌವ್ವನದ ದಿನಗಳನ್ನು ದಾಟಿ ಉದ್ಯೋಗ ಸಂಘಟನೆ ವಿವಾಹ ವ್ಯವಹಾರ ಮುಂತಾದ ಬದುಕಿನ ಮುಂದಿನ ಪಯಣದಲ್ಲಿ ಸ್ನೇಹ ಬಹಳಷ್ಟು ಶಿಥಿಲಾಗುತ್ತಾ ಸಾಗುತ್ತದೆ…..

ನೀನು ಮೊದಲು ಎಂಬ ಭಾವ ಹಿನ್ನೆಲೆಗೆ ಸರಿದು ನಾನು ಮೊದಲು ಎಂಬ ಭಾವ ಮುನ್ನಲೆಗೆ ಬರುತ್ತದೆ.
ಇದು ಭಾರತೀಯ ಸಮಾಜದ ಸಹಜ ನಡವಳಿಕೆ…..

ಗೆಳೆತನದ ಗಾಢತೆ ಮತ್ತು ಆಪ್ತತೆಯನ್ನು ಅರಿಯುವುದು ಒಂದು ದೊಡ್ಡ ಸವಾಲು.

ನನ್ನ ವೈಯಕ್ತಿಕ ಅನುಭವದ ಆಧಾರದಲ್ಲಿ……….

ಗೆಳೆತನದ ಅವಧಿ ಕನಿಷ್ಠವೆಂದರೂ 4/5 ವರ್ಷಗಳಷ್ಟು ದೀರ್ಘಕಾಲ ತನ್ನ ಸಹಜತೆಯನ್ನು ಕಾಪಾಡಿಕೊಂಡಿರಬೇಕು.

ಗೆಳೆತನ ಪರಿಚಯದ ಹಂತವನ್ನೂ ಮೀರಿ ತನ್ನ ಕೊಡು ಕೊಳ್ಳುವಿಕೆಯಲ್ಲಿ ಆಪ್ತತೆ ಹೊಂದಿರಬೇಕು.

ಗೆಳೆತನ ಪ್ರೀತಿಯಷ್ಟು ಗಾಢವಲ್ಲದಿದ್ದರೂ ನಮ್ಮ ಇಲ್ಲದಿರುವಿಕೆಯ ಸಮಯದಲ್ಲೂ ಸದಾ ನಮ್ಮನ್ನು ಕಾಡುತ್ತಲೇ ಇರಬೇಕು.

ಗೆಳೆತನ ಅನೇಕ ಅಗ್ನಿ ಪರೀಕ್ಷೆಗಳನ್ನು ದಾಟಿಯೂ ಅದೇ ಸ್ಪಂದನೆ ಉಳಿಸಿಕೊಂಡಿರಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಅದು ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ ತನ್ನ ಘನತೆಯನ್ನು ಕಾಪಾಡುವಂತೆ ಇರಬೇಕು.

ಸ್ವಾರ್ಥವಿಲ್ಲದ ಯಾವ ಭಾವವೂ ಪರಿಪೂರ್ಣವಲ್ಲ. ಆದ್ದರಿಂದ ಸ್ನೇಹದಲ್ಲಿ ಸ್ವಲ್ಪ ಸ್ವಾರ್ಥವೂ ಬೆರೆತಿರಬೇಕು.

ಹಾಗೆಯೇ ವರ್ಣಿಸಲಾಗದ, ಪದಗಳಿಗೆ ನಿಲುಕದ ಒಂದು ಅವರ್ಣನೀಯ ಸೆಳೆತ ಇರುವ ಭಾವವೇ ನಿಜವಾದ ಗೆಳೆತನ.

ಇವುಗಳಿಲ್ಲದ ಸಂಬಂಧಗಳು ಕೇವಲ ಪರಿಚಯದ ಮಟ್ಟದಲ್ಲಿಯೇ ಉಳಿಯುತ್ತದೆ.

ಗೆಳೆತನದ ಭಾವ ಸಂಪೂರ್ಣ ಆವರಿಸುವವರೆಗೂ ನಾವು ಅದಕ್ಕೆ ಕಾಲಾವಕಾಶ ಕೊಡಬೇಕು.

ಅಂತಹ ಸಂದರ್ಭಗಳಲ್ಲಿ ನಾವು ಸಂಪೂರ್ಣ ಮುಕ್ತವಾಗುವ ಮೊದಲು ಒಂದಷ್ಟು ಎಚ್ಚರಿಕೆಯ ನಡೆ ಇಡಬೇಕಾಗುತ್ತದೆ. ಇದೊಂದು ಸರಳ ನಿರೂಪಣೆ. ಇದನ್ನು ಮೀರಿಯೂ ಸ್ನೇಹವೆಂಬುದು ಬಹಳಷ್ಟು ಅರ್ಥಗಳನ್ನು ಹೊಂದಿದೆ.

ಬತ್ತಿದೆದೆಯಲ್ಲಿ ಭರವಸೆಯ ಕಿರಣ ಮೂಡಿಸಿದ,
ಅನಾಥ ಪ್ರಜ್ಞೆಯ ಬಡಿದೋಡಿಸಿ ಜೀವನೋತ್ಸಾಹ ಚಿಮ್ಮಿಸಿದ, ಏನನ್ನಾದರೂ ಸಾಧಿಸುವ ಛಲ ಹುಟ್ಟಿಸಿದ ನಿಮ್ಮೆಲ್ಲರಿಗೂ ಮತ್ತೊಮ್ಮೆ ಪ್ರೀತಿಪೂರ್ವಕ ನಮನಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.‌ ಕೆ.
9844013068……

error: No Copying!