ಕನ್ನಡದ ಜನಪ್ರಿಯ ನಿರೂಪಕಿ ಅಪರ್ಣ ಅವರ ಸಾವಿನ ಹಿನ್ನೆಲೆಯಲ್ಲಿ ಕ್ಯಾನ್ಸರ್ ಮತ್ತು ಭವಿಷ್ಯದ ಆರೋಗ್ಯದ ಸವಾಲುಗಳು, ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ…….
ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ….
ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ ನಿರ್ದಿಷ್ಟ ಕಾರಣಗಳ ಬಗ್ಗೆ ಸಂಶೋಧನೆ ಮಾಡಿ ಒಂದು ವರದಿ ಪ್ರಕಟಿಸುತ್ತದೆ. ಅದರಲ್ಲಿ ಬಂದ ಫಲಿತಾಂಶ….
ಶೇಕಡಾ 80% ರಷ್ಟು ಜನರಿಗೆ ಈ ಖಾಯಿಲೆ ಬೆಳವಣಿಗೆ ಹೊಂದಲು ನಿರ್ಧಿಷ್ಟ ಕಾರಣಗಳು ಇವೆ. ಉಳಿದ 20% ರಷ್ಟು ಜನರಿಗೆ ಏಕೆ ಬಂದಿದೆ ಎಂಬುದೇ
ಅರ್ಥವಾಗುತ್ತಿಲ್ಲ.
ಸದ್ಯಕ್ಕೆ ” ದುರಾದೃಷ್ಟ ” ಎಂದಷ್ಟೇ ಹೇಳಬೇಕಾಗುತ್ತದೆ ಎಂಬ ವರದಿ ನೀಡಿದೆ……
ಯಾವುದೇ ಮಾನದಂಡಗಳಿಂದ ನೋಡಿದರೂ ಒಬ್ಬ ವ್ಯಕ್ತಿಗೆ ಈ ಒಂದು ರೀತಿಯ ಕ್ಯಾನ್ಸರ್ ಬರಲೇಬಾರದು ಎಂದಿದ್ದರೂ ಆತನಿಗೆ ಬಂದಿರುವ ಆಶ್ಚರ್ಯಕರ ಸಂಗತಿ ಈ ಸಂಶೋಧನೆಯಲ್ಲಿ ಕಂಡುಬಂದಿದೆ…..
ಇದರ ಒಟ್ಟು ಸಾರಾಂಶ,
ಯಾರಿಗೆ ಬೇಕಾದರೂ ಬರಬಹುದು ಮತ್ತು ಯಾವಾಗ ಬೇಕಾದರೂ ಬರಬಹುದಾದ ಖಾಯಿಲೆ ಕ್ಯಾನ್ಸರ್……
ಇದರ ಜೊತೆಗೆ
ಮನುಷ್ಯರ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಆಹಾರದ ಮಲಿನತೆಯಿಂದಾಗಿ ಕ್ಯಾನ್ಸರ್ ಬಹುಬೇಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂಬುದು ವಾಸ್ತವಾಂಶ. ಕ್ಯಾನ್ಸರ್ ಕಾರಕ ಅಂಶಗಳು ದೇಹದಲ್ಲಿ ಅಭಿವೃದ್ಧಿ ಹೊಂದಲು ಈ ಮಾಲಿನ್ಯದ ಕೊಡುಗೆ ಸಹ ತುಂಬಾ ಇದೆ……
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ, ಅಜ್ಞಾನ, ಮೂಢನಂಬಿಕೆ, ಬಡತನದ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ, ವೈದ್ಯಕೀಯ ಸೌಲಭ್ಯಗಳು ಈಗಲೂ ಸಾಕಷ್ಟು ಜನರಿಗೆ ತಲುಪದ ಮತ್ತು ಅತ್ಯಂತ ದುಬಾರಿಯಾಗಿರುವ ವ್ಯವಸ್ಥೆಯಲ್ಲಿ ನಾವು ಇರುವಾಗ, ಕ್ಯಾನ್ಸರ್ ಮನುಷ್ಯನ ದೇಹದ ಮೇಲೆ ದಾಳಿ ಮಾಡುವುದರ ಜೊತೆಗೆ ಸಮಾಜದ ಮೇಲೂ ಪರೋಕ್ಷವಾಗಿ ದಾಳಿ ಮಾಡುತ್ತಿದೆ……
ಮುಖ್ಯವಾಗಿ ಅಪಘಾತ, ಅನಾರೋಗ್ಯ, ಆತ್ಮಹತ್ಯೆ, ಅನಿರೀಕ್ಷಿತ, ಅಕಾಲಿಕ, ಸಾವುಗಳು ಕರುಳು ಹಿಂಡುವ ಸನ್ನಿವೇಶ ಸೃಷ್ಟಿ ಮಾಡುತ್ತವೆ.…
ಸತ್ತ ವ್ಯಕ್ತಿ ಇನ್ನೆಂದೂ ಬರುವುದಿಲ್ಲ ಎಂಬುದು ಒಂದು ಕಡೆ, ಸ್ವತಃ ನಮ್ಮ ಸಾವು ಈ ಲೋಕದಿಂದ ನಮ್ಮನ್ನು ಶಾಶ್ವತವಾಗಿ ಇಲ್ಲವಾಗಿಸುತ್ತದೆ ಎಂಬ ಅರಿವು ನಮಗಿರುವುದರಿಂದ ಅದು ಉಂಟುಮಾಡುವ ಭಯ ಭೀಕರವಾಗಿರುತ್ತದೆ. ಸಾವು ಅನಿವಾರ್ಯ ಎಂದು ಭಾವಿಸಿ ಆಧ್ಯಾತ್ಮಿಕ ಭಾವನೆಯಿಂದ ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದಾದರೂ ನಮ್ಮ ಸಮಾಜದ ಒಟ್ಟು ವಾತಾವರಣ ಅಷ್ಟೊಂದು ಉತ್ತಮವಾಗಿಲ್ಲದಿರುವುದರಿಂದ ನಮ್ಮ ಪ್ರೀತಿ ಪಾತ್ರರು ಭವಿಷ್ಯದಲ್ಲಿ ಅನುಭವಿಸಬಹುದಾದ ಕಷ್ಟಗಳನ್ನು ನೆನೆದು ನಮ್ಮ ನೋವು ಆತಂಕ ಮತ್ತಷ್ಟು ಹೆಚ್ಚಾಗುತ್ತದೆ……
ಈ ಸಾವಿನ ನೋವಿಗೆ ಪರಿಹಾರವೇನು ?
ಬಹುತೇಕ ಜಗತ್ತಿನ ಜೀವಿಗಳ ಹೋರಾಟ ಬದುಕಿಗಾಗಿಯೇ ಇರುತ್ತದೆ. ಪ್ರಾಣ ಉಳಿಸಿಕೊಳ್ಳಲು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸುತ್ತಾರೆ. ಸಾವು ಖಚಿತ ಎಂದು ತಿಳಿದಿದ್ದರೂ ಮತ್ತು ಸತ್ತ ನಂತರ ಸಾವು ತನ್ನ ಅರಿವಿಗೆ ಬರುವುದಿಲ್ಲ ಎಂದು ಅರ್ಥವಾಗಿದ್ದರೂ ಸಹ…..
ನಮ್ಮ ಆತ್ಮೀಯರ ಸಾವನ್ನು ಮತ್ತು ನಮ್ಮ ಸಾವಿಗೆ ಕೆಲವೇ ಸಮಯವಿದೆ ಎಂದು ತಿಳಿದಾಗ ಅದನ್ನು ಹೆಚ್ಚಿನ ಭಯ ಆತಂಕಗಳಿಲ್ಲದೆ ಘನತೆಯಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವುದು ಒಂದು ಬಹುದೊಡ್ಡ ಸವಾಲಿನ ಮಾನಸಿಕ ಸ್ಥಿತಿ. ಸಹಜ ಪರಿಸ್ಥಿತಿಯಲ್ಲಿ ಯಾವುದೇ ತೊಂದರೆ ಇಲ್ಲದಿರುವಾಗ ಇದನ್ನು ಹೇಳುವುದು – ಬರೆಯುವುದು – ಬೇರೆಯವರಿಗೆ ಧೈರ್ಯ ತುಂಬುವುದು ಸುಲಭ. ಆದರೆ ಸ್ವತಃ ಅಂತಹ ಸಂದರ್ಭವನ್ನು ಎದುರಿಸುವುದು ಕಷ್ಟ ಕಷ್ಟ….
ಹಣದ ಒತ್ತಡ, ನಮ್ಮ ಸುತ್ತಮುತ್ತಲಿನ ಜನರ ಅಜ್ಞಾನದಿಂದ ಕೂಡಿರುವ ಹಿಂಸಾತ್ಮಕ ಮನೋಭಾವ, ಸಾವಿನ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ಮಾನಸಿಕತೆ, ಅತಿಯಾದ ಭಾವುಕ ಪ್ರೀತಿ ಅಥವಾ ಅಸೂಯಪರ ವ್ಯಂಗ್ಯ, ಪರೋಕ್ಷ ನಿಂದನೆಗಳು, ಕಷ್ಟದ ಸಮಯದಲ್ಲಿ ಸಹಾಯ, ಸಾಂತ್ವಾನಕ್ಕೆ ಬರದಿರುವುದು ಮುಂತಾದ ಎಲ್ಲವೂ ಈ ನೋವಿಗೆ ತನ್ನ ಕಾಣಿಕೆ ಸಲ್ಲಿಸುತ್ತವೆ……
ಕಾರಣಗಳೇನೋ ಪತ್ತೆ ಹಚ್ಚಬಹುದು. ಪರಿಹಾರ……
ಕ್ಯಾನ್ಸರ್ ಮತ್ತು ಆ ರೀತಿಯ ಮಾರಣಾಂತಿಕ ಖಾಯಿಲೆಗಳು ಬರದಂತೆ ತಡೆಯಲು ವೈದ್ಯಕೀಯ ಕ್ಷೇತ್ರ ಹೆಚ್ಚು ಶ್ರಮಪಡಬೇಕು. ಆದರೆ ಖಾಯಿಲೆ ಬಂದ ನಂತರ ಅದನ್ನು ಸ್ವೀಕರಿಸುವ ಮನಸ್ಥಿತಿ ತೀರಾ ಖಾಸಗಿಯಾದದ್ದು. ನಮ್ಮ ನಿಜವಾದ ಜ್ಞಾನದ ಮಟ್ಟ, ನಮ್ಮ ವಾಸ್ತವದ ವ್ಯಕ್ತಿತ್ವ ಅನಾವರಣಗೊಳ್ಳುವುದು ಆಗಲೇ……
ಅದಕ್ಕಾಗಿಯೇ ದೇವರು, ಧರ್ಮ, ಕರ್ಮ, ಜನ್ಮಾಂತರ, ದೇಹಕ್ಕೆ ಸಾವು ಆತ್ಮಕ್ಕಲ್ಲ ಎಂಬ ವೇದಾಂತ ಎಲ್ಲವನ್ನೂ ಸೃಷ್ಟಿ ಮಾಡಲಾಗಿದೆ. ಇವು ಸಾವಿನ ಭಯವನ್ನು ಎಷ್ಟರಮಟ್ಟಿಗೆ ಕಡಿಮೆ ಮಾಡಿದೆಯೋ ಅದು ಅವರವರ ವೈಯಕ್ತಿಕ ಮನೋಭಾವವನ್ನು ಅವಲಂಬಿಸಿದೆ……
ಆದರೆ ಸಾವಿಗೆ ಸಿದ್ದರಾಗುವ ಮನಸ್ಥಿತಿ ಬೆಳೆಸಿಕೊಂಡು ಸಾವನ್ನು ಘನತೆಯಿಂದ ಸ್ವೀಕರಿಸುವ ವೈಯಕ್ತಿಕ, ಕೌಟುಂಬಿಕ ಹಾಗು ಒಟ್ಟು ಸಮಾಜದ ಸಾಮೂಹಿಕ ಪ್ರಯತ್ನಗಳು ನಡೆಯಬೇಕಿದೆ. ಇದು ನಮ್ಮ ಆ ನೋವುಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು……
ತಮ್ಮ ಧ್ವನಿಯ ಮೂಲಕ, ನಿರೂಪಣಾ ಶೈಲಿಯ ರೀತಿಯಿಂದ, ಭಾಷೆಯ ಸ್ಪಷ್ಟ ಉಚ್ಚಾರಣೆಗಾಗಿ ಪ್ರಸಿದ್ಧರಾಗಿದ್ದ ಶ್ರೀಮತಿ ಅಪರ್ಣಾ ಅವರು ತಮ್ಮ 57 ನೆಯ ವಯಸ್ಸಿನಲ್ಲಿ ನಿರ್ಗಮಿಸಿದ ಸಂದರ್ಭದಲ್ಲಿ……..
ಎಷ್ಟೇ ಬರೆದರೂ ಸಾವಿನ ನಿರೀಕ್ಷೆಯ ಕ್ಷಣಗಳು, ಅದರ ಒತ್ತಡ, ಸಾವಿನ ಸ್ವೀಕಾರದ ಸ್ಥಿತಪ್ರಜ್ಞತೆ, ಅದಕ್ಕೆ ಇರಬಹುದಾದ ಪರಿಹಾರ ಇವುಗಳನ್ನು ಅಕ್ಷರಗಳಲ್ಲಿ ಮೂಡಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕ್ಷಮೆಯಾಚಿಸುತ್ತಾ……
ಸರ್ಕಾರಗಳು ಆರೋಗ್ಯ ಕ್ಷೇತ್ರದ ಬಗ್ಗೆ, ಸಾರ್ವಜನಿಕ ಜೀವವಿಮೆಯ ಬಗ್ಗೆ, ಕಿದ್ವಾಯಿಯಂತ ಸಂಸ್ಥೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತಷ್ಟು ವಿಸ್ತರಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಮಾಧ್ಯಮಗಳು ಮತ್ತು ಸಾರ್ವಜನಿಕರು ಸಹ ಈ ಬಗ್ಗೆ ಒತ್ತಡ ಹೇರುವ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸುತ್ತಾ…….
ನಿನ್ನೆ, ದಿನಾಂಕ 12.07.2024 ರ ಶುಕ್ರವಾರ, ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಇಲಾಖೆಯ ಮುರಾರ್ಜಿ ಪದವಿಪೂರ್ವ ವಿದ್ಯಾರ್ಥಿನಿಯರ ವಸತಿ ಕಾಲೇಜು, ಹಾವೇರಿಯಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರು ಮತ್ತು ನನ್ನ ಆತ್ಮೀಯರಾದ, ಸಾಹಿತಿಗಳು ಸಹ ಆಗಿರುವ ಶ್ರೀ ಸೋಮನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ,
ಒಡೆದ ಮನಸುಗಳ
ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವ ಎಂಬ ಪ್ರಖ್ಯಾತ ಹಾಡನ್ನು ಬರೆದಿರುವ ಖ್ಯಾತ ಸಾಹಿತಿಗಳಾದ ಸತೀಶ್ ಕುಲಕರ್ಣಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕನಾಗಿ ಭಾಗವಹಿಸಿ ಮಕ್ಕಳಿಗೆ ಗ್ರಾಹಕ ಸಂಸ್ಕೃತಿ ಮತ್ತು ಮಾನವೀಯ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿದೆನು…..
**#
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068……..