ಬೈಂದೂರು: ದಿನಾಂಕ 27/06/2024 (ಹಾಯ್ ಉಡುಪಿ ನ್ಯೂಸ್) ಶಿರೂರು ಟೋಲ್ ಗೇಟ್ ಬಳಿ ಪೊಲೀಸ್ ಸೂಚನೆ ಯನ್ನು ಮೀರಿ ಕಾರೊಂದರಲ್ಲಿ ನಾಲ್ಕೈದು ಜನರ ತಂಡ ಅಪಾಯಕಾರಿ ರೀತಿಯಲ್ಲಿ ಪರಾರಿಯಾಗಿರುವ ಬಗ್ಗೆ ಬೈಂದೂರು ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ ಬಿ.ಎನ್ ಅವರು ದೂರು ದಾಖಲಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ.ಎನ್ ಅವರು ದಿನಾಂಕ :26-06-2024 ರಂದು ಕುಂದಾಪುರದಲ್ಲಿ ಮೀಟಿಂಗ್ ಮುಗಿಸಿಕೊಂಡು ಇಲಾಖೆಯ ಜೀಪಿನಲ್ಲಿ ವಾಪಾಸು ಬೈಂದೂರಿಗೆ ಬರುತ್ತಿದ್ದಾಗ ನಾವುಂದ ಪರಿಸರದಲ್ಲಿ KL-11 ನೊಂದಣಿಯ ಆಕಾಶ ನೀಲಿ ಬಣ್ಣದ ಐ20 ಕಾರು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಂತೆ ಕೂಡಲೇ ನಾವುಂದದಲ್ಲಿ ರೌಂಡ್ಸ್ ಮಾಡುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಡಾಕೆರೆ ಕ್ರಾಸ್ ನಲ್ಲಿ ಪಶ್ಚಿಮ ಬದಿಯ ರಸ್ತೆಯಲ್ಲಿ ಆ ವಾಹನವನ್ನು ಅದರ ಚಾಲಕ ಬೈಂದೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದರೂ ಕೂಡ ಕಾರು ಚಾಲಕ ನಿಲ್ಲಿಸದೇ ವಾಹನವನ್ನು ಬೈಂದೂರು -ಭಟ್ಕಳ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು ಕಾರನ್ನು ತಿಮ್ಮೇಶ್ ಬಿ.ಎನ್ ರವರು ಇಲಾಖೆಯ ಜೀಪಿನಲ್ಲಿ ಬೆನ್ನಟ್ಟಿ ಹೋಗಿದ್ದು ಹಾಗೂ ವಾಹನದ ಬಗ್ಗೆ ಹೆದ್ದಾರಿ ಗಸ್ತು ವಾಹನ ಹಾಗೂ ಶೀರೂರು ಚೆಕ್ ಪೋಸ್ಟ್ ಕರ್ತವ್ಯದ ಸಿಬ್ಬಂದಿಯವರಿಗೆ ಮಾಹಿತಿ ನೀಡಿ ಕಾರನ್ನು ನಿಲ್ಲಿಸಲು ಸೂಚನೆ ನೀಡಿದ್ದು ಕಾರು ಚಾಲಕನು ಶಿರೂರು ಟೋಲ್ ಹತ್ತಿರ ಹೋಗಿ ಅಲ್ಲಿ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ಯೂ ಟರ್ನ್ ಮಾಡಿ ಬೈಂದೂರು ಕಡೆಗೆ ಬಂದು ಶಿರೂರು ಸಿಲ್ವರ್ ಆರ್ಚ್ ಬಾರ್ ಹತ್ತಿರ ಕಾರನ್ನು ಯೂ ಟರ್ನ್ ಮಾಡಿ ಪುನಃ ಶಿರೂರು ಕಡೆಗೆ ಹೋಗಿ ಪುನಃ ಟೋಲ್ ನಲ್ಲಿ ಪೊಲೀಸರು ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ಟೋಲ್ ನಲ್ಲಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಾರಿಸಿಕೊಂಡು ಪರಾರಿಯಾಗಿರುತ್ತಾನೆ ಎಂದು ತಿಳಿಸಿದ್ದಾರೆ.
ಕಾರಿನಲ್ಲಿ ಚಾಲಕ ಹಾಗೂ ಇತರರು ಕುಳಿತುಕೊಂಡಿರುವುದು ಕಂಡುಬಂದಿರುತ್ತದೆ ಎನ್ನಲಾಗಿದೆ .ಕಾರು ಚಾಲಕನು ಕಾರನ್ನು ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರ ಪ್ರಾಣ ಆಸ್ತಿಗೆ ಅಪಾಯ ಉಂಟಾಗುವ ಸ್ಥಿತಿಯಲ್ಲಿ ಅಡ್ಡಾದಿಡ್ಡಿಯಾಗಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆಂದು ದೂರು ನೀಡಿದ್ದಾರೆ.
. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 279, 336 ಐಪಿಸಿ & 184,119,177 IMV ACT ರಂತೆ ಪ್ರಕರಣ ದಾಖಲಾಗಿದೆ.