Spread the love

ಕನ್ನಡ ಭಾಷೆ ಮತ್ತು ಸಾಮಾಜಿಕ ಜಾಲತಾಣಗಳು…….

ಸಾಮಾಜಿಕ ಜಾಲತಾಣಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ…………..

ಸುಮಾರು 10/15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಎಕ್ಸ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ ಬೆಳವಣಿಗೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಹಳ ಉಪಯೋಗವಾಗಿದೆ ಎಂಬುದನ್ನು ಗಮನಿಸಬಹುದು.

ಮೊದಲೆಲ್ಲಾ ಕೇವಲ ಪತ್ರಿಕೆಗಳು, ನಿಯತಕಾಲಿಕೆಗಳು , ಒಂದಷ್ಟು ಸಾಂಸ್ಕೃತಿಕ ವೇದಿಕೆಗಳು, ಪ್ರಕಾಶನಗಳು ಮತ್ತು ಬೆರಳೆಣಿಕೆಯ ಬರಹಗಾರರು ಬಿಟ್ಟರೆ ಸಾಮಾನ್ಯರಿಂದ ಸಾಹಿತ್ಯ ದೂರವೇ ಇತ್ತು. ಸಿನಿಮಾ ಜನಪ್ರಿಯತೆಗೆ ಹೋಲಿಸಿದರೆ ಸಾಹಿತ್ಯ ಕೆಲವೇ ಜನರ ಆಸಕ್ತಿದಾಯಕ ಕ್ಷೇತ್ರವಾಗಿತ್ತು.

ಆದರೆ ಈಗ ನೋಡಿ ಸಾಮಾನ್ಯ ಜನರೂ ತಮ್ಮ ಭಾವನೆ ಅಭಿಪ್ರಾಯಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅದೂ ಕನ್ನಡದಲ್ಲಿಯೇ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಯುವ ಪ್ರತಿಭೆಗಳಂತೂ ಮೂಕವಿಸ್ಮಿತರಾಗುವಂತೆ ತಮ್ಮ ಬರಹಗಳನ್ನು ಮೂಡಿಸುತ್ತಿದ್ದಾರೆ. ಅವರ ಭಾಷೆ, ಕಲ್ಪನೆ, ನಿರೂಪಣೆ ಹಿಂದಿನ ಕನ್ನಡ ಸಾಹಿತ್ಯದ ಸ್ವರ್ಣಯುಗ ಮತ್ತೆ ಮರುಕಳಿಸುತ್ತಿದೆಯೇನೋ ಎಂಬ ಭಾವನೆ ಉಂಟುಮಾಡುತ್ತಿದೆ.
FACEBOOK /WATSAPP ಗ್ರೂಪ್ ಗಳ ಹೆಸರನ್ನೇ ಗಮನಿಸಿ, ಎಷ್ಟೊಂದು
ಆಕರ್ಷಕ, ಎಷ್ಟೊಂದು ಸುಂದರ, ಎಷ್ಟೊಂದು ಮುದ್ದು,

ಎಲ್ಲೋ ಆಗಾಗ ಕೆಲವೇ ಸಾಹಿತ್ಯಾಸಕ್ತ ಗುಂಪುಗಳಲ್ಲಿ ನಡೆಯುತ್ತಿದ್ದ ಕವಿಗೋಷ್ಟಿ, ವಿಚಾರ ಸಂಕಿರಣ, ಸಾಹಿತ್ಯ ಸ್ಪರ್ಧೆ ಈಗ ರಾಜ್ಯಾದ್ಯಂತ ಆಗಾಗ ನಡೆಯುತ್ತಲೇ ಇದೆ. ತಮ್ಮದೇ ಗ್ರೂಪ್ ಗಳಲ್ಲಿ ಸಾಹಿತ್ಯದ ಬಗ್ಗೆ ನಿರಂತರ ಚರ್ಚೆಗಳಾಗುತ್ತಲೇ ಇದೆ. ಅದರಲ್ಲೂ ಶಾಲಾ ಶಿಕ್ಷಕ/ಶಿಕ್ಷಕಿಯರು, ಮಾಹಿತಿ ತಂತ್ರಜ್ಞಾನದ ಆಧುನಿಕ ಜೀವನ ಶೈಲಿಯ ಹುಡುಗ/ಹುಡುಗಿಯರು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು , ಇನ್ನೂ ಆಶ್ಚರ್ಯವೆಂದರೆ ಉರ್ದು ಮಾತೃಭಾಷೆಯ ಮುಸ್ಲಿಂಮರೂ ಕೂಡ ಕನ್ನಡದ ಅತ್ಯಂತ ಪ್ರತಿಭಾವಂತ ಬರಹಗಾರರಾಗಿ ಮೂಡಿಬರುತ್ತಿರುವುದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹೆಮ್ಮೆಪಡುವ ಸಂಗತಿ.

ಇದೇನು ಕಡಿಮೆ ಸಾಧನೆಯಲ್ಲ. ಹಳೆಯ ತಲೆಮಾರಿನ ಕೆಲವು ಬರಹಗಾರರು ಒಂದಷ್ಟು ಅಸೂಯೆ ಪಡುವಷ್ಟು, ತಳಮಳಗೊಳ್ಳುವಷ್ಟು ಇದು ಬೆಳೆದಿದೆ. ಬದಲಾವಣೆಯ ಸಂದರ್ಭಗಳಲ್ಲಿ ಇದು ಸಹಜ ಇರಲಿ. ಅದೂ ಅಲ್ಲದೆ ಸಾಹಿತ್ಯ ಪ್ರಕಾರದ ಅತ್ಯಂತ ಕಠಿಣ ರೂಪವಾದ ವಿಮರ್ಶಾ ವಿಭಾಗದಲ್ಲಿಯೂ ಹೊಸ ರೀತಿಯ ಚಿಂತನಾ ನೋಟ ಕಾಣುತ್ತಿರುವುದು ತುಂಬಾ ಸಂತೋಷ ಉಂಟುಮಾಡುತ್ತಿದೆ .

ಎಂದಿನಂತೆ ಒಂದಷ್ಟು ಉಢಾಪೆ, ಜೊಳ್ಳು ಇದ್ದದ್ದೇ. ಅದು ಅನುಭವದೊಂದಿಗೆ ಪಕ್ವವಾಗುತ್ತಾ ಸಾಗುತ್ತದೆ ಎಂದು ನಿರೀಕ್ಷಿಸೋಣ.

ಕೊನೆಯದಾಗಿ ಒಂದು ಕಾಡುವ ಕೊರತೆಯೆಂದರೆ ಕನ್ನಡ ಶಾಲೆಗಳ ಅಧೋಗತಿ ಮತ್ತು ಅಲ್ಲಿ ಕಲಿಯುವವರ ಸಂಖ್ಯೆ ಗಾಬರಿಯಾಗುವಷ್ಟು ಕಡಿಮೆಯಾಗಿರುವುದು. ಅದು ದೀರ್ಘಾವಧಿಯಲ್ಲಿ ಖಂಡಿತ ಕೆಟ್ಟ ಪರಿಣಾಮ ಬೀರುತ್ತದೆ. ಇದು ಆಡಳಿತಾಗಾರರ – ವ್ಯವಸ್ಥೆಯ ಲೋಪ.

ಅದು ಬಿಟ್ಟರೆ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಉಲ್ಲಾಸದಾಯಕವಾಗಿದೆ.
ಸಾಹಿತ್ಯ ಮತ್ತು ಭಾಷೆಯ ಮೇಲಿನ ಪ್ರಭಾವದ ಬಗ್ಗೆ ಮಾತ್ರ ಇಲ್ಲಿ ಹೇಳಲಾಗಿದೆ. ಇದಲ್ಲದೆ ಸಾಮಾಜಿಕ ಜಾಲತಾಣ ಇಡೀ ವ್ಯವಸ್ಥೆಯ ಮೇಲೆ ಬೀರಿರುವ ಪ್ರಭಾವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದರಿಂದಾಗಿ ಆಗುತ್ತಿರುವ ಬದಲಾವಣೆಗಳನ್ನು ಕುರಿತು ಮುಂದೆ ಅಭಿಪ್ರಾಯ ವ್ಯಕ್ತಪಡಿಸುವೆ…………..


ನಿನ್ನೆ, ದಿನಾಂಕ 26/06/2024 ರ ಬುಧವಾರ ಬೆಂಗಳೂರಿನ ಕೋರಮಂಗಲದಲ್ಲಿ ಇರುವ ಸೆಂಟ್ ಫ್ರಾನ್ಸಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ವಿಭಾಗದವರು ಏರ್ಪಡಿಸಿದ್ದ ” ವಿದ್ಯಾರ್ಥಿಗಳಲ್ಲಿ ಮಾನವಿಯ ಅರಿವು ” ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದೆ….


ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……….

error: No Copying!