ಧ್ಯಾನ,
ಕನ್ಯಾಕುಮಾರಿ,
ಸ್ವಾಮಿ ವಿವೇಕಾನಂದ,
ನರೇಂದ್ರ ಮೋದಿ,
ಭಾರತ ದೇಶ,
ಜನಸಾಮಾನ್ಯರು……
” ಭಾರತ ಭೂ ಶಿರಾ, ಮಂದಿರ ಸುಂದರಿ, ಭುವನ ಮನೋಹರಿ ಕನ್ಯಾಕುಮಾರಿ ” ಉಪಾಸನೆ ಸಿನಿಮಾದ ಹಾಡಿದು……
ಕನ್ಯಾಕುಮಾರಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ಸ್ವಾಮಿ ವಿವೇಕಾನಂದರಿಗೆ ಅತ್ಯಂತ ಇಷ್ಟವಾದ ಸ್ಥಳವಿದು. ದಕ್ಷಿಣದ ತುತ್ತ ತುದಿಯ ಈ ಸ್ಥಳದಲ್ಲಿ ಆಗಿನ ಕಾಲಕ್ಕೇ ವಿವೇಕಾನಂದರು ಸಮುದ್ರದಲ್ಲಿ ದ್ದ ಶಿಲೆಯ ಮೇಲೆ ಈಜಿನ ಮೂಲಕ ತಲುಪಿ ಧ್ಯಾನಾಸ್ಥರಾಗುತ್ತಿದ್ದರು. ಈಗಲೂ ಅದನ್ನು ವಿವೇಕಾನಂದ ರಾಕ್ ಎಂದೇ ಕರೆಯಲಾಗುತ್ತದೆ…..
ಈಗ ಅಲ್ಲಿಗೆ ಹೋಗಿ ಬರಲು ಸಣ್ಣ ದೋಣಿಗಳ ವ್ಯವಸ್ಥೆ ಇದೆ ಮತ್ತು ಅಲ್ಲಿ ಧ್ಯಾನ ಮಂದಿರ ನಿರ್ಮಿಸಿ ಸುಸಜ್ಜಿತವಾಗಿ ಇಡಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನಾಳೆಯಿಂದ ಸುಮಾರು 48 ಗಂಟೆಗಳ ಕಾಲ ಅಲ್ಲಿ ಉಳಿದು ಧ್ಯಾನಾಸಕ್ತರಾಗುತ್ತಾರೆ ಎಂಬ ಸುದ್ದಿ ಪ್ರಸಾರವಾಗುತ್ತಿದೆ…..
ದೀರ್ಘ ಚುನಾವಣಾ ಪ್ರಚಾರದ ದಣಿವಿನ ನಿವಾರಣೆಗೆ ಅವರು ಆಯ್ದುಕೊಂಡ ಜಾಗ ಮತ್ತು ಮಾರ್ಗ ತುಂಬಾ ಉತ್ತಮವಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಧ್ಯಾನ, ಸ್ವಾಮಿ ವಿವೇಕಾನಂದರ ಚಿಂತನೆ, ನರೇಂದ್ರ ಮೋದಿಯವರ ಆಡಳಿತದ ಬಗ್ಗೆ ಸಂಕ್ಷಿಪ್ತವಾಗಿ ಕೆಲವು ಸಾಲುಗಳು………
ಧ್ಯಾನ, …..
ನಿಜಕ್ಕೂ ಜ್ಞಾನದ ನಂತರ ಧ್ಯಾನವೆಂಬುದು ದೇಹ ಮನಸ್ಸುಗಳ ನಿಯಂತ್ರಣದ ಅತ್ಯುತ್ತಮ ಮಾರ್ಗ. ಅದರಲ್ಲೂ ಬುದ್ಧ ಪ್ರಜ್ಞೆಯ ಧ್ಯಾನ ಅತ್ಯಂತ ಉತ್ಕೃಷ್ಟ ಮತ್ತು ಧ್ಯಾನದ ಅಂತಿಮ ಹಂತ ಎಂದೇ ಕರೆಯಬಹುದು. ಅದು ಸಾಮಾನ್ಯವಾಗಿ ಎಲ್ಲರೂ ಮಾಡುವ ಯೋಗಾಭ್ಯಾಸದ ಧ್ಯಾನವಾಗಲಿ ಅಥವಾ ಸಮಯ ಸಿಕ್ಕಾಗ ಮೌನದಿಂದ ಧ್ಯಾನಾಸಕ್ತರಾಗುವುದಾಗಲಿ ಅಥವಾ ಪ್ರತಿನಿತ್ಯ ದೈವಭಕ್ತಿಯ ಓಂ ಧ್ಯಾನವಾಗಲಿ, ಅದು ಧ್ಯಾನದ ಪ್ರಾರಂಭಿಕ ಅಂತ ಮಾತ್ರ. ನಿಜವಾದ ಧ್ಯಾನ ದೀರ್ಘಕಾಲ, ಅನೇಕ ವರ್ಷಗಳ ನಿರಂತರ ಪ್ರಯತ್ನ ಮತ್ತು ಸುಧೀರ್ಘ ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅದರಲ್ಲೂ ಪ್ರಶಾಂತ ಸ್ಥಳದಲ್ಲಿ ಸಮುದ್ರದ ನಡವಿನಂಚಿನಲ್ಲಿ ಏಕಾಂಗಿಯಾಗಿ ಧ್ಯಾನ ಮಾಡುವುದು ನಿಜಕ್ಕೂ ದೇಹ ಮನಸ್ಸು ಪುನಶ್ಚೇತನಗೊಳ್ಳುವುದಕ್ಕೆ ಖಂಡಿತವಾಗಲೂ ಸಹಕಾರಿಯಾಗುತ್ತದೆ. ಆಗ ಮಾತ್ರ ಧ್ಯಾನದ ನಿಜವಾದ ಫಲಿತಾಂಶ ಪಡೆಯಬಹುದು. ಅದು ಸಾಧ್ಯವಿಲ್ಲದವರು ಕನಿಷ್ಠ ಮನೆಯಲ್ಲಾದರೂ ಸಮಯ ಸಿಕ್ಕಾಗ ಎಷ್ಟು ಸಾಧ್ಯವೋ ಅಷ್ಟು ದೀರ್ಘಕಾಲ ನಿರಂತರವಾಗಿ ಧ್ಯಾನಾಸಕ್ತರಾಗುವುದು ನಮ್ಮ ಬದುಕಿನ ಗುಣಮಟ್ಟವನ್ನು ಖಂಡಿತ ಹೆಚ್ಚಿಸುತ್ತದೆ. ಧ್ಯಾನವನ್ನೇ ಕುರಿತು ಈಗಾಗಲೇ ಕೆಲವು ಬಾರಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ…….
ಇನ್ನೂ ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರನ್ನು ಕುರಿತು ಹೆಚ್ಚಿಗೆ ಹೇಳುವುದೇನು ಇಲ್ಲ. ಈಗಾಗಲೇ ಎಲ್ಲರಿಗೂ ಸಾಕಷ್ಟು ತಿಳಿದಿದೆ. ಅವರೊಬ್ಬ ಧೀಮಂತ ಸನ್ಯಾಸಿ. ಈ ನೆಲದ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ವಾತಾವರಣವನ್ನು ತುಂಬಾ ಚೆನ್ನಾಗಿ ಗ್ರಹಿಸಿದ್ದರು. ಈ ಧರ್ಮದ ಅಸಮಾನತೆ, ಶೋಷಣೆಗಳನ್ನು ಸಹ ಅದೇ ಧ್ವನಿಯಲ್ಲಿ ಖಂಡಿಸುತ್ತಿದ್ದರು. ಈ ಕ್ಷಣದವರೆಗೂ ಭಾರತದ ಇತಿಹಾಸದಲ್ಲಿ ಯುವಕರ ಐಕಾನ್ ಆಗಿ, ಅನೇಕ ಸಮಾಜ ಸೇವಾ ಸಂಸ್ಥೆಗಳ ಶೀರ್ಷಿಕೆಯಾಗಿ, ಶಿಕ್ಷಣ ಸಂಸ್ಥೆಗಳ ಸ್ಪೂರ್ತಿಯಾಗಿ, ಬೆಳಗಿನ ಶುಭ ಸಂದೇಶಗಳ ರಾಯಭಾರಿಯಾಗಿ ಸ್ವಾಮಿ ವಿವೇಕಾನಂದರು ಸದಾ ಮುಂಚೂಣಿಯಲ್ಲಿದ್ದಾರೆ. ಅವರು ಧ್ಯಾನಾಸಕ್ತರಾದ ಕನ್ಯಾಕುಮಾರಿಯ ಆ ಬಂಡೆಗಲ್ಲು ಇಂದು ಪ್ರಖ್ಯಾತ ಪ್ರವಾಸಿ ಸ್ಥಳವಾಗಿ ಗುರುತಿಸಲ್ಪಡುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿ ಮತ್ತೊಮ್ಮೆ ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಾ……..
ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರು ಧ್ಯಾನಸ್ಥರಾದ ಅದೇ ಸ್ಥಳದಲ್ಲಿ ಧ್ಯಾನ ಮಾಡುತ್ತಿರುವ ಈ ಸಂದರ್ಭದಲ್ಲಿ ಮೋದಿಯವರಿಗೆ ವಿವೇಕಾನಂದರ ಚಿಂತನೆಗಳು, ವಿಶಾಲ ಮನೋಭಾವ, ಹೃದಯ ಶ್ರೀಮಂತಿಕೆ, ದರಿದ್ರ ನಾರಾಯಣರ ಸೇವೆಯಲ್ಲಿ ದೇವರನ್ನು ಕಾಣುವ ಮನಸ್ಥಿತಿ, ಸರ್ವಧರ್ಮ ಸಮನ್ವಯದ ಆಡಳಿತ, ಸಾಮಾಜಿಕ ಸಾಮರಸ್ಯ, ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಶ್ರೀಮಂತಿಕೆ ಮುಂತಾದುವುಗಳನ್ನು ನೆನಪಿಸುತ್ತಾ……
ಒಂದು ವೇಳೆ ಇನ್ನು ಕೆಲವೇ ದಿನಗಳಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರೆ, ಅವರ ಆರ್ಥಿಕ ಆಡಳಿತ ವೈಖರಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಇಲ್ಲಿಯವರೆಗೆ ಡಿಜಿಟಲೀಕರಣ, ಎಲ್ಲಕ್ಕೂ ಅತಿಯಾದ ತೆರಿಗೆ, ಶ್ರೀಮಂತ, ವ್ಯಾಪಾರ ಸ್ನೇಹಿ ಆಡಳಿತ ನೀಡಿದ್ದಾಯಿತು. ನಿರುದ್ಯೋಗ, ಬೆಲೆ ಏರಿಕೆ ಹೆಚ್ಚಿಸಿದ್ದಾಯಿತು. ಜೊತೆಗೆ ಪ್ರತಿ ಮಾತಿಗೊಮ್ಮೆ ಈ ದೇಶವನ್ನು ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗಿ ಅಭಿವೃದ್ಧಿ ಪಡಿಸುವುದನ್ನೇ ಗುರಿಯಾಗಿಸಿ ಮಾತನಾಡಿದ್ದಾಯಿತು. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬ್ರಾಂಡ್ ಮೌಲ್ಯ ಹೆಚ್ಚಿಸಿದ್ದೂ ಆಯಿತು….
ಇದರಲ್ಲಿ ಕೆಲವು ನಿಜಕ್ಕೂ ಸ್ವಾಮಿ ವಿವೇಕಾನಂದರ ಚಿಂತನೆಗೆ ಸ್ವಲ್ಪ ವಿರುದ್ಧವಾಗಿದೆ. ಏಕೆಂದರೆ ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರ ಭಾರತದ ನಿಜವಾದ ಅಭಿವೃದ್ಧಿ ಎಂದು ಭಾವಿಸಬಾರದು. ಆರ್ಥಿಕತೆ ಅಭಿವೃದ್ಧಿಯ ಬಹುದೊಡ್ಡ ಮಾನದಂಡ ನಿಜ. ಆದರೆ ಅದರ ಹಿಂದೆ ಬಿದ್ದು ಪರಿಸರವನ್ನು ಬಹುತೇಕ ನಾಶಪಡಿಸಿ, ಮಾನವೀಯ ಮೌಲ್ಯಗಳನ್ನು ಧಿಕ್ಕರಿಸಿ, ಮನುಷ್ಯ ಸಂಬಂಧಗಳನ್ನು ಹಾಳು ಮಾಡಿಕೊಂಡು, ಕೇವಲ ಹಣ ಕೇಂದ್ರೀಕೃತ ಮನೋಭಾವವೇ ಎಲ್ಲ ಕಡೆ ಹಬ್ಬಿದರೆ ದೇಶ ಆರ್ಥಿಕವಾಗಿ ಪ್ರಬಲವಾದರೂ ಒಟ್ಟಾರೆಯಾಗಿ ವಿನಾಶದ ಅಂಚಿಗೆ ಬಂದು ತಲುಪುವುದು ಶತಸಿದ್ಧ. ಹಣ ಮುಖ್ಯವಲ್ಲ ಆ ಹಣದ ದುಡಿಮೆ, ಹಂಚಿಕೆ, ನಿಯಂತ್ರಣ ಮತ್ತು ಸಂಪಾದನೆಯ ಮಾರ್ಗಗಳು ಮುಖ್ಯವಾಗಬೇಕು. ಇನ್ನು ಮುಂದೆಯಾದರೂ ಆ ನಿಟ್ಟಿನಲ್ಲಿ ಯೋಚಿಸಲು ಈ ಧ್ಯಾನದ ಸಮಯವನ್ನು ಮೀಸಲಿಡಲಿ ಎಂದು ಮನವಿ ಮಾಡಿಕೊಳ್ಳುತ್ತಾ…..
ಹಾಗೆಯೇ, ಜನಸಾಮಾನ್ಯರ ಬದುಕು ಖಂಡಿತವಾಗಿಯೂ ಉತ್ತಮವಾಗಿಲ್ಲ. ದಿನೇ ದಿನೇ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ನನಗೆ ತಿಳಿದಿರುವಂತೆ ಭಾರತೀಯರು ವಿಶ್ವದಲ್ಲಿಯೇ ಸ್ವಲ್ಪ ಮೃದು ಸ್ವಭಾವದವರು, ನಾಚಿಕೆ ಸ್ವಭಾವದವರು, ಅಂಜಿಕೆ ಇರುವವರು, ಸಾಹಸ ಪ್ರವೃತ್ತಿ ಇಲ್ಲದಿರುವವರು, ಆದರೆ ಒಳ್ಳೆಯ ಮನಸ್ಸಿನವರು. ಇದನ್ನು ನೆನಪಿನಲ್ಲಿಟ್ಟುಕೊಂಡು ಈಗಿನ ಚುನಾವಣೆಯ ನಂತರ ಯಾರೇ ಅಧಿಕಾರಕ್ಕೆ ಬಂದರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಶಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..