Spread the love

ಈ ಪರಿಕಲ್ಪನೆಯ ವಾಸ್ತವಿಕ ಅರ್ಥವೇನು ?
ಇದು ಸಾಧ್ಯವೇ ?
ಇದರ ಅಗತ್ಯತೆ ಏನು ?
ಇದು ಅನಿವಾರ್ಯವೇ ?
ಇದನ್ನು ಒಪ್ಪಿಕೊಳ್ಳಬೇಕೆ ?
ಅಥವಾ
ತಿರಸ್ಕರಿಸಬೇಕೆ ?
ಅಥವಾ
ಇದಕ್ಕೆ ಪರ್ಯಾಯ ಮಾರ್ಗಗಳಿವೆಯೇ ?……,

ಈ ಬಗೆಯ ಚರ್ಚೆಗಳು ರಾಜಕೀಯ ಪಕ್ಷಗಳಲ್ಲಿ, ವಿಚಾರವಾದಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ನಡೆಯುತ್ತಿದೆ. ಬಹಳ ಹಿಂದಿನಿಂದಲೂ ಈ ಬೇಡಿಕೆ ಇದೆ. ಈಗ ಮತ್ತೆ ಚರ್ಚೆಯಾಗುತ್ತಿದೆ…….

ಮೊದಲಿಗೆ ಇದನ್ನು ಅರ್ಥಮಾಡಿಕೊಳ್ಳಲು ಭಾರತದ ಒಟ್ಟು ಇತಿಹಾಸ ಮತ್ತು ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕಾಗುತ್ತದೆ……

ಅನಾಗರಿಕ ಮನುಷ್ಯ ನಾಗರಿಕ ಪ್ರಪಂಚಕ್ಕೆ ಕಾಲಿಟ್ಟ ನಂತರ ಸಾಕಷ್ಟು ಬೆಳವಣಿಗೆಗಳು ನಡೆದಿದೆ. ಸುಮಾರು 3000 ವರ್ಷಗಳಷ್ಟು ಆಡಳಿತಾತ್ಮಕ ಅನುಭವವನ್ನು ಮಾನವ ಸಮಾಜ ಹೊಂದಿದೆ. ಪ್ರಾರಂಭದಲ್ಲಿ ಒಂದಷ್ಟು ಜನ ಕಾಡಿನಲ್ಲಿ ವಾಸಿಸುತ್ತಾ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತಾ ಇದ್ದರು. ತದನಂತರದಲ್ಲಿ ಆ ರಕ್ಷಣೆಗಾಗಿ ತಮ್ಮಲ್ಲೇ ಒಬ್ಬನನ್ನು ನಾಯಕನನ್ನಾಗಿ ಆರಿಸುವ ಪ್ರವೃತ್ತಿ ಬೆಳೆದು ಬಂದಿತು. ಆ ನಾಯಕ ಕೂಡ ಬಹುತೇಕ ಬಲಿಷ್ಠ ವ್ಯಕ್ತಿಯೇ ಆಗಿರುತ್ತಿದ್ದ…….

ಮುಂದಿನ ದಿನಗಳಲ್ಲಿ ಆ ನಾಯಕನಿಗೆ ವಿಶೇಷ ಸೌಲಭ್ಯಗಳು ದೊರೆಯಲಾರಂಭಿಸಿತು. ಹಾಗೇ ಮುಂದುವರಿದು ಕೃಷಿ ಅಭಿವೃದ್ಧಿಯ ನಂತರ ಈ ರೀತಿಯ ಗುಂಪುಗಳು ಹಳ್ಳಿಗಳಾಗಿ, ಊರುಗಳಾಗಿ ಅಭಿವೃದ್ಧಿ ಹೊಂದಿದವು. ಆ ಊರುಗಳು ಮತ್ತೆ ಆಕ್ರಮಣಕಾರಿಯಾಗಿ ಬೇರೆ ಬೇರೆ ಕಾರಣಗಳಿಂದ ಹೊಡೆದಾಟಗಳು, ಬಡಿದಾಟಗಳು ಆಹಾರಕ್ಕಾಗಿ ಯುದ್ಧಗಳು ನಡೆದವು. ಕೊನೆಗೆ ರಾಜ ಪ್ರಭುತ್ವ ಅಸ್ತಿತ್ವಕ್ಕೆ ಬಂದಿತು……..

ರಾಜ ಪ್ರಭುತ್ವದಲ್ಲಿ ರಾಜನೇ ಪ್ರತ್ಯಕ್ಷ ದೇವರು ಎಂಬಂತೆ ಆತನ ಆಡಳಿತದಲ್ಲಿ ಎಲ್ಲವೂ ಅವನ ನಿರ್ದೇಶನದಂತೆಯೇ ನಡೆಯುತ್ತಿದ್ದವು. ಅಲ್ಲಿಂದ ಅನೇಕ ಆಕ್ರಮಣಗಳು, ವಿದೇಶಿ ವಲಸೆಗಾರರು, ದಾಳಿಕೋರರು ಬಂದರು. ಹಾಗೂ ಹೀಗೂ ನಡೆಯುತ್ತಾ ಇದ್ದ ವ್ಯವಸ್ಥೆಗೆ ಪಾಶ್ಚಾತ್ಯ ದೇಶಗಳ ಈ ದೇಶವನ್ನು ಆಕ್ರಮಿಸಿ ಅವರ ಆಡಳಿತ ಶೈಲಿಯನ್ನು ಇಲ್ಲಿ ಸ್ವಲ್ಪಮಟ್ಟಿಗೆ ಸ್ಥಾಪಿಸಿದರು……….

ಅಂತಿಮವಾಗಿ 1947ರಲ್ಲಿ ಭಾರತ ಸ್ವತಂತ್ರವಾಗಿ 1950 ಜನವರಿ 26 ರಿಂದ ಸಂವಿಧಾನಾತ್ಮಕ ಆಡಳಿತ ಜಾರಿಗೆ ಬಂದಿತು……

ಇದು ರಾಜಕೀಯ ಇತಿಹಾಸವಾದರೆ, ಭಾರತದ ಮಟ್ಟಿಗೆ ಇಲ್ಲಿನ ಸಾಮಾಜಿಕ ವ್ಯವಸ್ಥೆ ಪ್ರಾರಂಭದಲ್ಲಿ ವೃತ್ತಿ ಆಧಾರಿತವಾಗಿದ್ದರು, ಅನಂತರ ವರ್ಣಾಶ್ರಮ ವ್ಯವಸ್ಥೆಯಾಗಿ ಮುಂದೆ ಅದು ತನ್ನೆಲ್ಲ ಮಿತಿಗಳನ್ನು ಮೀರಿ ಅನೇಕ ಜಾತಿಗಳಾಗಿ, ಆ ಜಾತಿಗಳಲ್ಲಿ ಶ್ರೇಣಿಕೃತ ವ್ಯವಸ್ಥೆ ಸೃಷ್ಟಿಯಾಗಿ, ಮೇಲು ಕೀಳು ಅಸ್ಪೃಶ್ಯ ಜನಾಂಗ ಇತ್ಯಾದಿ ಎಲ್ಲವೂ ಸೃಷ್ಟಿಯಾಗಿರುವುದು ಬಹುತೇಕ ನಮಗೆಲ್ಲಾ ತಿಳಿದಿದೆ……..

ಈ ಸೋಶಿಯಲ್ ಸ್ಟ್ರಕ್ಚರ್ ಎಷ್ಟು ಅಸಮಾನತೆಯಿಂದ ಕೂಡಿದ್ದಿತು, ಯಾರು ಯಾರಿಗೆ ಶಿಕ್ಷಣ, ಆಸ್ತಿ ಹಕ್ಕುಗಳನ್ನು ನಿರಾಕರಿಸಲಾಗಿತ್ತು, ಅದರಿಂದ ಎಷ್ಟೊಂದು ಸಮುದಾಯಗಳು ಶೋಷಣೆಗೆ ಒಳಗಾದವು ಇತ್ಯಾದಿ ಆ ಎಲ್ಲಾ ಐತಿಹಾಸಿಕ ಸತ್ಯಗಳೊಂದಿಗೆ ಭಾರತ ಸ್ವಾತಂತ್ರ್ಯವೇನೋ ಪಡೆಯಿತು. ಆದರೆ ಆ ಸ್ವಾತಂತ್ರ್ಯ ಕೇವಲ ಹಕ್ಕು ಮತ್ತು ಕರ್ತವ್ಯಗಳು, ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗೆ ಮಾತ್ರ ಸೀಮಿತವಾಯಿತು. ಅಲ್ಲಿಯವರೆಗೂ ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗದಲ್ಲಿದ್ದ ಕೆಲವು ಜನರೇ ಭೂಮಿಯ ಹಕ್ಕನ್ನು ಹೊಂದಿದ್ದರು. ಕೆಲವರ ಬಳಿಯೇ ಅಪಾರ ಆಸ್ತಿ ಅಂತಸ್ತು ಅಧಿಕಾರ ಉಳಿದುಬಿಟ್ಟಿತು. ಅದು ಹಂಚಿಕೆಯಾಗಲಿಲ್ಲ. ಆ ಬಗ್ಗೆ ಯೋಚನೆಗಳು, ಬೇಡಿಕೆಗಳು, ಪ್ರತಿಭಟನೆಗಳು ನಡೆದರು ಹೆಚ್ಚಿನ ಪ್ರಯೋಜನ ಆಗಲಿಲ್ಲ…….

ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ದೊರೆತು ಸಂಪತ್ತಿನ ಸಮಾನ ಹಂಚಿಕೆಯಾಗದೆ, ಸ್ವಾತಂತ್ರದ ನಿಜವಾದ ಅರ್ಥ ಸಾಧ್ಯವಾಗಲೇ ಇಲ್ಲ………….

ಇದು ಒಂದು ಹಂತದ ಮಾಹಿತಿಯಾದರೆ, ಸ್ವಾತಂತ್ರ್ಯ ನಂತರ ಈ ದೇಶದ ರಾಜಕೀಯದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ವಿರೋಧಪಕ್ಷವಾಗಿ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಪಕ್ಷಗಳು ಇರುತ್ತದೆ. ಜೊತೆಗೆ ಅಂಬೇಡ್ಕರ್ ಅವರ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಆ ಪ್ರಕಾರವಾಗಿ ದಲಿತ, ಹಿಂದುಳಿದ, ಅತಿ ಹಿಂದುಳಿದ, ಅಲ್ಪಸಂಖ್ಯಾತ ಜನಾಂಗಗಳಲ್ಲಿ ಜಾಗೃತಿ ಮೂಡಿ ಸಂಪತ್ತುಗಳ ವಿಷಯವಾಗಿ ಜನರಲ್ಲಿ ಹೋರಾಟಗಳು ಪ್ರಾರಂಭವಾಗುತ್ತವೆ. ಬಹುತೇಕ ಆಗಿನ ಕಾಂಗ್ರೆಸ್ ಬಂಡವಾಳಶಾಹಿಗಳ ಪರವಾಗಿ ನಿಂತರೆ ಕಮ್ಯುನಿಸ್ಟ್ ಮತ್ತು ಸಮಾಜವಾದಿಗಳು ಶೋಷಿತರ ಪರವಾಗಿ ನಿಲ್ಲುತ್ತಾರೆ. ನೆಹರು ಅವರದು ಸಮಾಜವಾದಿ ಆರ್ಥಿಕ ಅಭಿವೃದ್ಧಿಯೇ ಆದರೂ ಸಂಪತ್ತಿನ ಸಮಾನ ಹಂಚಿಕೆ ಆ ಕಾಲದ ರಾಜಕೀಯ ಪರಿಸ್ಥಿತಿಯಲ್ಲಿ ಸಾಧ್ಯವಾಗಲಿಲ್ಲ….

ಈ ಮಧ್ಯೆ ಆಚಾರ್ಯ ವಿನೋಬಾ ಬಾವೆಯವರ
” ಭೂದಾನ ಚಳುವಳಿ ” ಯು ಒಂದಷ್ಟು ಸಣ್ಣ ಪರಿವರ್ತನೆ ಮಾಡುತ್ತದೆ. ಆದರೆ ಅದು ವ್ಯಾಪಕವಾಗಿ ಹರಡುವುದಿಲ್ಲ. ಮುಂದೆ ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ” ಉಳುವವನೇ ಭೂಮಿಯ ಒಡೆಯ ” ಎಂಬ ಕಾನೂನನ್ನು ಜಾರಿ ತಂದರು. ಆಗ ಒಂದಷ್ಟು ಬದಲಾವಣೆಗಳಾದವು. ದೊಡ್ಡ ಜಮೀನ್ದಾರರು ತಮ್ಮ ಭೂಮಿಯನ್ನು ಕಳೆದುಕೊಂಡರು. ಅದರಲ್ಲೂ ಶ್ರೀ ದೇವರಾಜ ಅರಸರು ಕರ್ನಾಟಕದಲ್ಲಿ ಇದನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿದರು. ಆದರೂ ದೇಶ ವ್ಯಾಪಿ ಅದು ಸರಿಯಾದ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲೇ ಇಲ್ಲ………

ಈಗಲೂ ದೊಡ್ಡ ದೊಡ್ಡ ಜಮೀನ್ದಾರರು ದೇಶದ ಬಹುತೇಕ ಭೂಮಿಯನ್ನು ಉಳಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಅನೇಕರಿಗೆ ಭೂಮಿಯೇ ಇಲ್ಲ. ಈ ದೇಶದ ಬಹುತೇಕ ಸಂಪತ್ತು ಕೇವಲ 10% ಜನರ ಅಧಿಪತ್ಯಕ್ಕೆ ಒಳಪಟ್ಟಿದೆ…….

ಹಿಂದೆ ಬಂಡವಾಳ ಶಾಹಿಗಳ ಪರವಾಗಿದ್ದ ಕಾಂಗ್ರೆಸ್ ಪಕ್ಷ ಇಂದು ಕಮ್ಯುನಿಸಮ್ ಅಥವಾ ಸಮಾಜವಾದಿ ಸಿದ್ಧಾಂತದ ವಿರೋಧಪಕ್ಷವಾಗಿದ್ದರೆ, ಆ ಬಂಡವಾಳ ಶಾಹಿ ಜಾಗದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ಪಕ್ಷವಾಗಿದೆ. ಈ 18 ನೆಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಪತ್ತಿನ ಸಮಾನ ಹಂಚಿಕೆ ಬಗ್ಗೆ ಮಾತನಾಡಿದರೆ, ಬಿಜೆಪಿ ಅದಕ್ಕೆ ವಿರುದ್ಧವಾಗಿ ಮಾತನಾಡುತ್ತಿದೆ…….

ಈಗ ಇಷ್ಟೆಲ್ಲಾ ಮಾಹಿತಿಯ ಆಧಾರದ ಮೇಲೆ ಸಂಪತ್ತಿನ ಸ್ವಾತಂತ್ರ್ಯ ಎಲ್ಲರಿಗೂ ಸಮನಾಗಿ ಸಿಗಬೇಕೇ ಅಥವಾ ಹಿಂದಿನದನ್ನು ಮರೆತು ಹೀಗಿರುವ ವ್ಯವಸ್ಥೆಯಲ್ಲಿಯೇ ಮುಂದುವರಿಯಬೇಕೇ, ಹಾಗಾದರೆ ಸ್ವಾತಂತ್ರ್ಯ ಪಡೆದಾಗ ಇದ್ದ ಬಡವರು ಈಗಲೂ ಬಡವರಾಗಿಯೇ ಇದ್ದು ಕೆಲವರು ಮಾತ್ರ ಶ್ರೀಮಂತರಾಗುವ ವ್ಯವಸ್ಥೆ ಈಗಲೂ ಮುಂದುವರಿಯಬೇಕೇ, ಆ ಬಡವರಲ್ಲಿ ತಮ್ಮೆಲ್ಲ ಸಂಕಷ್ಟಗಳನ್ನು ಅನುಭವಿಸಿ ಈ ದೇಶದ ಬಗ್ಗೆ ಪ್ರೀತಿ, ಗೌರವ ಮೂಡುವುದಾದರೂ ಹೇಗೆ ? ಹಾಗೆಂದು ಈ ಆಧುನಿಕ ಕಾಲದಲ್ಲಿ ಇರುವ ಸಂಪತ್ತನ್ನು ಕಿತ್ತು ಬಡವರಿಗೆ ಹಂಚುವುದು ಅಷ್ಟು ಸುಲಭವೂ ಅಲ್ಲ, ಕಾರ್ಯಸಾಧುವು ಅಲ್ಲ. ಏಕೆಂದರೆ ಆಗ ಎಂದಿನಂತೆ ದ್ವೇಷ ಅಸೂಯೆ ಮೇಲುಗೈ ಪಡೆದು ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಹಾಗೆಂದು ಇದನ್ನು ಯಥಾಸ್ಥಿತಿ ಮುಂದುವರೆಯುವುದು ಕೂಡ ದೇಶದ ಹಿತಾಸಕ್ತಿಗೆ ಮಾರಕ…….

ಸಂಪತ್ತಿನ ಸಮಾನ ಹಂಚಿಕೆ ಎಂಬ ಪರಿಕಲ್ಪನೆಗೆ ಪರ್ಯಾಯವಾಗಿ ಮತ್ತೊಂದು ಮಾರ್ಗವನ್ನು ಕಂಡುಕೊಳ್ಳಬೇಕಿದೆ. ದೇಶದ ಸಂಪತ್ತು, ತೆರಿಗೆ ಕಟ್ಟುತ್ತೇವೆ ಎನ್ನುವ ಒಂದೇ ಆಧಾರದಲ್ಲಿ ಕೆಲವರೇ ಸಂಪೂರ್ಣ ಆಕ್ರಮಿಸಲು ಬಿಡಬಾರದು. ಸಂಪತ್ತಿನ ಮರು ಹಂಚಿಕೆ ಅಧಿಕೃತವಾಗಿ, ಸಂವಿಧಾನಾತ್ಮಕವಾಗಿ, ಸ್ಪರ್ಧಾತ್ಮಕವಾಗಿ, ನ್ಯಾಯಯುತವಾಗಿ, ಮೌಲ್ಯಯುತವಾಗಿ, ಆರ್ಥಿಕ ಪ್ರಗತಿಗೆ ಅಡ್ಡಿಯಾಗದೆ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಯಾಗದೆ, ಹಂಚಿಕೆ ಮಾಡಬೇಕಿದೆ…….

ಹಂಚಿಕೆ ಎಂದ ಮಾತ್ರಕ್ಕೆ ಎಲ್ಲರಿಗೂ ಸಮಾನವಾಗಿ ಸಮಪಾಲು ನೀಡುವುದು ಎಂದಲ್ಲ. ಅದು ಅಸಾಧ್ಯ. ಅಷ್ಟೊಂದು ಸಮಾನತೆ ಎಂದೆಂದಿಗೂ ಸಾಧ್ಯವಿಲ್ಲ. ಆದರೆ ಶ್ರಮಕ್ಕೆ ತಕ್ಕ ಫಲ ಬೇಕೇ ಬೇಕಾಗುತ್ತದೆ……

ದುರಂತವೆಂದರೆ ಶ್ರಮಕ್ಕೆ ತಕ್ಕ ಪಾಲು ಈ ದೇಶದಲ್ಲಿ ಈಗಿನವರಿಗೂ ಸಾಧ್ಯವಾಗಿಲ್ಲ . ಅದರಲ್ಲೂ ಜಾಗತೀಕರಣದ ನಂತರ ಉದ್ಯೋಗ, ನಿರುದ್ಯೋಗದ ಅರ್ಥವೂ ಬದಲಾಗಿದೆ. ಹೊಟ್ಟೆಪಾಡಿನ ಕಾರ್ಮಿಕರೇ ಹೆಚ್ಚಾಗಿದ್ದಾರೆ. ವೃತ್ತಿ ಕೌಶಲ್ಯತೆ ಕಡಿಮೆಯಾಗಿದೆ. ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಮಧ್ಯಮ ವರ್ಗದವರು ಬಹುತೇಕ ಸಾಲಗಾರರಾಗುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ದುಬಾರಿ ವ್ಯವಹಾರವಾಗಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ಜಾತೀಯತೆ ತುಂಬಿ ತುಳುಕುತ್ತಿದೆ. ಇಂತಹ ಸಂದರ್ಭದಲ್ಲಿ ಹುಚ್ಚರಂತೆ ಎಲ್ಲವನ್ನು ಒಪ್ಪಿಕೊಂಡು ಸಾಗಲು ಸಾಧ್ಯವಿಲ್ಲ. ಇದಕ್ಕೆ ಖಂಡಿತವಾಗಿಯೂ ಪರಿಹಾರ ಬೇಕೇ ಬೇಕು………

ಸಾಫ್ಟ್ವೇರ್ ಕಂಪನಿಗಳು, ಬ್ಯಾಂಕು ಮುಂತಾದ ಹಣಕಾಸು ಸಂಸ್ಥೆಗಳು, ಪೆಟ್ರೋಲಿಯಂ ಉತ್ಪಾದಕರು, ಅಗತ್ಯ ವಸ್ತುಗಳ ಮಾರಾಟಗಾರರು, ಸಿನಿಮಾ ನಟರು, ರಾಜಕೀಯ ಅಧಿಕಾರಸ್ಥರು, ರಿಯಲ್ ಎಸ್ಟೇಟ್ ಮಾಫಿಯಾದವರು, ಬ್ರೋಕರ್ಗಳು, ಔಷಧಿ ತಯಾರಕರು, ಚಿನ್ನ ವಜ್ರದ ವ್ಯಾಪಾರಿಗಳು ಮುಂತಾದವರು ಪ್ರತಿ ವರ್ಷ ಶ್ರೀಮಂತರ ಪಟ್ಟಿಯಲ್ಲಿ ಜಮಾಾವಣೆಯಾಗುತ್ತಿದ್ದರೆ, ರೈತರು, ಶ್ರಮಜೀವಿಗಳು ಕುಶಲ ಕಾರ್ಮಿಕರು, ಪ್ರಾಮಾಣಿಕರು ಮುಂತಾದವರು ಕೆಳ ಮಧ್ಯಮ ವರ್ಗಕ್ಕೆ ಜಾರುತ್ತಿದ್ದಾರೆ‌. ಅಂದರೆ ಎಲ್ಲೋ ವ್ಯಾವಹಾರಿಕ ಜಗತ್ತು ಬಲಿಷ್ಠವಾಗಿ, ಉತ್ಪಾದಕ ಜಗತ್ತು ಶೋಷಣೆಗೊಳಾಗುತ್ತಿದೆ. ಇದನ್ನು ತಪ್ಪಿಸಬೇಕಾಗುತ್ತದೆ…….

ಸಂಪತ್ತಿನ ಹಂಚಿಕೆ ಎಂಬುದು ಒಂದು ರಾಜಕೀಯ ದಾಳವಾಗಬಾರದು.
ಆದ್ದರಿಂದ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ರಾಜನೀತಿ ತಜ್ಞರು, ಸಂವಿಧಾನ ತಜ್ಞರು ಒಟ್ಟಿಗೆ ಸೇರಿ ಈ ಸಮಸ್ಯೆಯ ಮೂಲದಿಂದ ಅದಕ್ಕೆ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ನಾವು ವಿಶ್ವಮಟ್ಟದಲ್ಲಿ ಅತ್ಯಂತ ಪ್ರಬಲ ಶಕ್ತಿಯಾಗಿ ಬೆಳೆಯ ಬೇಕಾದರೆ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಅಸಮಾನತೆಯ, ಶೋಷಣೆಯ, ಸಮಾಜ ಎಂದಿಗೂ ಅಪಾಯಕಾರಿಯೇ. ಆದರೆ ಹೀಗೆ ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು, ಮಾಧ್ಯಮಗಳು, ಏನೇನೋ ತಮ್ಮ ಮೂಗಿನ ನೇರಕ್ಕೆ ಚರ್ಚೆ ಮಾಡಿದರೆ ಇದು ಗೊಂದಲದ ಗೂಡಾಗುತ್ತದೆ. ಅತ್ಯಂತ ಆಳ ಅಧ್ಯಯನ ,- ಚಿಂತನೆ ಬಯಸುವ ಈ ವಿಷಯಗಳು ಬೇರೆಯದೆ ನೆಲೆಗಟ್ಟಿನಲ್ಲಿ ಚರ್ಚಿಸಬೇಕಾದ ವಿಷಯಗಳು……

ಇದು ಸರಳ ನಿರೂಪಣೆ ಮಾತ್ರ.
ಇದರ ಆಳ ಅಗಲ ಇನ್ನೂ ಸಾಕಷ್ಟು ಇದೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……

error: No Copying!