ಡಾಕ್ಟರ್ ರಾಜಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ….. ಏಪ್ರಿಲ್ 24…,
ರಾಜಕುಮಾರನಾದ ಮುತ್ತುರಾಜ……….
ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ. ಜನರ ಕಾಲ್ಪನಿಕ ಲೋಕವೇ ಬೇರೆ. ಅದರಲ್ಲೂ ಸಿನಿಮಾ ನಟನನ್ನು ರಂಗುರಂಗಿನ ಬೆಳಕಿನಲ್ಲಿ, ಬಣ್ಣ ಬಣ್ಣದ ಚಿತ್ತಾರದಲ್ಲಿ, ವಿವಿಧ ರೀತಿಯ ರಮ್ಯ ಪಾತ್ರಗಳಲ್ಲಿ, ದೇವ ಮಾನವ – ಸೂಪರ್ ಮ್ಯಾನ್ ಶೈಲಿಯಲ್ಲಿ ಜನರ ಭಾವನೆಗಳ ಮೇಲೆ ನಾಲ್ಕೈದು ದಶಕಗಳ ಕಾಲ ಸವಾರಿ ಮಾಡಿರುವ ರಾಜ್ ಕುಮಾರ್ ಅವರನ್ನು ಈಗಿನ ತಲೆಮಾರಿಗೆ ವಿವರಿಸುವುದು ಸ್ವಲ್ಪ ಕಷ್ಟ……..
ಬೆರಳ ತುದಿಯಲ್ಲಿ ಒತ್ತಿ ವಿಶ್ವದ ಎಲ್ಲವನ್ನೂ ನೋಡುವ ಸೌಲಭ್ಯಗಳು ಈಗ ಇರುವ ಸಂದರ್ಭದಲ್ಲಿ……
ಅಂದು ಬಡತನದ ಜೊತೆಗೆ ಮನರಂಜನೆಯ ಬಹುಮುಖ್ಯ ಮಾಧ್ಯಮವಾಗಿದ್ದ ಸಿನಿಮಾದ ಪ್ರತಿ ಹಾಡು, ಸಂಭಾಷಣೆ, ದೃಶ್ಯಗಳು ಮನಸ್ಸಿನೊಳಗೆ ಇಳಿದು ಮತ್ತೆ ಹೊರಬಂದು ಬದುಕಿನಲ್ಲೂ ಪ್ರವೇಶಿಸುತ್ತಿದ್ದವು. ನೋಡುಗರೇ ಪಾತ್ರಗಳಾಗಿ ತಮ್ಮನ್ನು ಕಲ್ಪಸಿಕೊಳ್ಳುತ್ತಿದ್ದರು…….
ತಂದೆ ತಾಯಿ ಅಕ್ಕ ತಮ್ಮ ಅಣ್ಣ ತಂಗಿ ಮುಂತಾದ ರಕ್ತ ಸಂಬಂಧಗಳು, ಪ್ರೀತಿ ಪ್ರೇಮ ಪ್ರಣಯ ಹಾಸ್ಯ ಭಕ್ತಿ ವಿರಹ ಭಯ ಭೀಭತ್ಸ ಮುಂತಾದ ನವರಸಗಳ ಸರಮಾಲೆಯೇ ದೃಶ್ಯಗಳಾಗಿ ಜೋಡಣೆಗೊಂಡು ಆಗಿನ ಸಾಮಾಜಿಕ ಜನಜೀವನವನ್ನು ಪ್ರಭಾವಿಸುತ್ತಿದ್ದವು……
ಇಂತಹ ವಾತಾವರಣದಲ್ಲಿ ಬೆಳೆದು ಬಂದ ವ್ಯಕ್ತಿಯೇ ಅಭಿಮಾನಿಗಳಿಂದ
” ಅಣ್ಣಾವ್ರು ” ಎಂದು ಕರೆಸಿಕೊಳ್ಳುವ ಡಾಕ್ಟರ್ ರಾಜ್ ಕುಮಾರ್…….
ಆರಾಧನಾ ಭಾವದಿಂದ ಅಥವಾ ಪೂರ್ವಾಗ್ರಹ ದೃಷ್ಟಿಕೋನದಿಂದ ಅವರನ್ನು ನೋಡಿದರೆ ಅದು ಅವಾಸ್ತವವಾಗಬಹುದು. ಅವರ ಹತ್ತಿರದ ಸಂಬಂಧಿಗಳು, ಅವರ ಜೊತೆಗಾರರು, ಅವರಿಂದ ಲಾಭ ಪಡೆದವರು ಅವರನ್ನು ಚಿತ್ರಿಸುವುದಕ್ಕಿಂತ ಅವರ ಸಿನಿಮಾ ನೋಡಿ, ಮಾಧ್ಯಮಗಳ ಸಂದರ್ಶನ ನೋಡಿ, ಸಭೆ ಸಮಾರಂಭಗಳಲ್ಲಿ ಭಾಷಣ ಕೇಳಿ, ಅವರ ಬಗ್ಗೆ ಇತರರು ಬರೆದ ಪುಸ್ತಕ ಓದಿ ಅವರನ್ನು, ಅವರ ಸಾಧನೆಯ ಆಧಾರದ ಮೇಲೆ ನೋಡಬೇಕಿದೆ.….
ಕನ್ನಡ ಭಾಷೆ, ಸಿನಿಮಾ, ಸಂಸ್ಕೃತಿಗೆ ಅವರ ಕೊಡುಗೆ ಏನು ಎಂಬುದನ್ನು ಗಮನಿಸಬೇಕಿದೆ. ಅವರ ಸಾರ್ವಜನಿಕ ನಡವಳಿಕೆಗಳು ಎಷ್ಟು ಆದರ್ಶಪ್ರಾಯವಾದುವು ಎಂಬುದನ್ನು ನೋಡಬೇಕಿದೆ. ಒಂದು ತಲೆಮಾರಿನ ಮೇಲೆ ಅವರ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕಿದೆ……
ಜನಪ್ರಿಯತೆಯ ದೃಷ್ಟಿಯಲ್ಲಿ ಕನ್ನಡ ನಾಡಿನಲ್ಲಿ ಅತ್ಯಂತ ಹೆಚ್ಚು ಎತ್ತರಕ್ಕೆ ಏರಿದ್ದ ವ್ಯಕ್ತಿ ರಾಜ್ ಕುಮಾರ್. ಅವರ ಹುಟ್ಟು, ಸಾವು, ಬಾಲ್ಯ, ಆರಂಭದ ದಿನಗಳು, ನಟಿಸಿದ ಸಿನಿಮಾಗಳು, ಪ್ರಶಸ್ತಿಗಳು, ಮಕ್ಕಳು, ಸಂಸಾರ, ಹೋರಾಟ ಕುರಿತ ಎಲ್ಲಾ ಮಾಹಿತಿಗಳು ಈಗಾಗಲೇ ಅನೇಕ ಪುಸ್ತಕಗಳಲ್ಲಿ ದಾಖಲಾಗಿದೆ. ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಮಾಧ್ಯಮಗಳಲ್ಲಿ ಚರ್ಚಿಸಲಾಗಿದೆ.
ಅದರ ಭಾಗವಾಗಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ಸಣ್ಣ ಅಭಿಪ್ರಾಯ…..
ಕರ್ನಾಟಕದ ಕನ್ನಡ ಮಣ್ಣಿನ ಯಾರಾದರೂ ಒಬ್ಬ ಅತ್ಯಂತ ಜನಪ್ರಿಯ ಅಥವಾ ಪ್ರಸಿದ್ಧ ಅಥವಾ ಸಾಧಕ ಅಥವಾ ಅಧಿಕಾರಸ್ಥ ವ್ಯಕ್ತಿಗಳ ಸಂಪೂರ್ಣ ಜೀವನ ವೃತ್ತಾಂತವನ್ನು ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಿ
” ಹಳ್ಳಿ ಹೈದ “
ಎಂಬ ಅನ್ವರ್ಥನಾಮಕ್ಕೆ ಸೂಕ್ತ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದರೆ ಅದು ಮುತ್ತುರಾಜನೆಂಬ ಡಾ. ರಾಜ್ ಕುಮಾರ್………..
ನೀವು ಹೇಗೇ ನೋಡಿ, ಹುಟ್ಟಿನಿಂದ ಸಾಯುವತನಕ ಅವರ ಭಾಷೆ, ದೇಹಚಲನೆ, ಉಡುಗೆ ತೊಡುಗೆ, ಊಟ, ಸಾಂದರ್ಭಿಕ ನಿರ್ಧಾರಗಳು ಈ ನೆಲದ ಅಪ್ಪಟ ಮಣ್ಣಿನ ಸೊಗಡಿನ ಗ್ರಾಮೀಣ ಪರಿಸರದ ಹಳ್ಳಿ ಹೈದನಂತೆಯೇ ಕಾಣುತ್ತಾರೆ. ಕೆಲವೊಂದು ಶಿಷ್ಟಾಚಾರದ ಹೊರತಾಗಿಯೂ ಅವರು ಅದನ್ನು ಉಳಿಸಿಕೊಂಡಿದ್ದರು…..
ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ,
ಎಷ್ಟೋ ಇಲ್ಲಿನ ಮಣ್ಣಿನ ಮಕ್ಕಳು ಬೆಳೆಯುತ್ತಾ ರೈತ ನಾಯಕರೋ, ರಾಜಕಾರಣಿಗಳೋ, ಕ್ರೀಡಾಪಟುಗಳೋ, ವಿಜ್ಞಾನಿಗಳೋ, ಉದ್ಯಮಿಗಳೋ,
ಹೀಗೆ ಏನೋ ಆಗಿ ದೊಡ್ಡ ಹೆಸರು ಮಾಡಿ, ಅವರೆಲ್ಲ ಕ್ರಮೇಣ ಹಳ್ಳಿ ಸೊಗಡನ್ನು ಮೇಲ್ನೋಟದ ತೋರಿಕೆಗಾಗಿಯೋ ಅಥವಾ ನೆನಪಿನ ಬುತ್ತಿಯಾಗಿಯೋ ಬಳಸುತ್ತಾರೆ ಮತ್ತು ಬಹುತೇಕರು ನಗರೀಕರಣಗೊಂಡು ತಮ್ಮ ತನ ಕಳೆದುಕೊಂಡಿರುತ್ತಾರೆ….
ಆದರೆ ,
ಈ ರಾಜಕುಮಾರ ಅಪ್ಪಟ ಹಳ್ಳಿ ಹೈದನಂತೆಯೇ ಕೊನೆಯವರೆಗೂ ಇದ್ದರು.
ಆಂತರಿಕವಾಗಿ ಅವರ ಮನಸ್ಥಿತಿ ಹೇಗಿತ್ತೋ ಅವರೇ ಬಲ್ಲರು. ಆದರೆ ನಡವಳಿಕೆ ಮಾತ್ರ ಅವರು ಎಷ್ಟು ಮುಗ್ಧರೋ ಅಷ್ಟೇ ಒಬ್ಬ ಹಳ್ಳಿ ಪೆದ್ದು ಎಂದು ನಾವೆಲ್ಲ ಹಾಸ್ಯ ಮಾಡುವ ಗ್ರಾಮ್ಯ ಶೈಲಿಯ ಗುಣ ಅವರಲ್ಲಿ ಅಂತರ್ಗತವಾದಂತೆ ಭಾಸವಾಗುತ್ತದೆ.
ನಟನೆಯಲ್ಲೂ ಅದೇ ಮುಗ್ಧತೆ, ಅದೇ ರಸಿಕತೆ, ಭಕ್ತಿಯಲ್ಲೂ ಅದೇ ತನ್ಮಯತೆ, ಹೊಡೆದಾಟಗಳಲ್ಲಿ ಅದೇ ಗ್ರಾಮ್ಯ ಶೈಲಿ, ಕಣ್ಣುಗಳಲ್ಲಿ ಅದೇ ಹಳ್ಳಿಯ ನೋಟ,
ಹೊರ ಪ್ರಪಂಚದ ಆಗುಹೋಗುಗಳಲ್ಲಿ ಅದೇ ಪೆದ್ದುತನ ಎಲ್ಲವೂ ಹಳ್ಳಿಹೈದನ ಗುಣಲಕ್ಷಣಗಳು ಅವರಲ್ಲಿ ಐಕ್ಯವಾದಂತಿವೆ……
ರಾಜಕೀಯವೆಂದರೆ ಏನೋ ಕೆಟ್ಟದ್ದು ಎಂಬಂತೆ ಅದರಿಂದ ಮಾರು ದೂರ, ಮಾಂಸಹಾರ ಊಟವೆಂದರೆ ಪಂಚಪ್ರಾಣ, ಪ್ರಣಯದ ಕಣ್ಣೋಟದಲ್ಲಿ ಅದೇ ಹಳ್ಳಿಯ ಕಿಲಾಡಿತನ, ಹಣದ ವಿಷಯದಲ್ಲಿ ಸ್ವಲ್ಪ ಜಿಪುಣತನ, ಗೊಂದಲವಾದಾಗ ತಲೆ ಕರೆದುಕೊಳ್ಳುವ ಅದೇ ಮಣ್ಣಿನ ಗುಣ ಎಲ್ಲವೂ ಪಕ್ಕಾ ಹಳ್ಳಿ ಹೈದ. ನನಗಂತೂ ವೈಯಕ್ತಿಕವಾಗಿ ಕನ್ನಡ ಮಣ್ಣಿನ ಸಮಷ್ಠಿ ಪ್ರಜ್ಙೆಯಿಂದ ಅವಲೋಕಿಸಿದಾಗ ನಿಜವಾದ ಹಳ್ಳಿ ಹೈದ ಡಾ.ರಾಜ್ ಕುಮಾರ್……
ಆದರೆ ಆ ಮುಗ್ದತೆ ಸ್ವಾಭಾವಿಕವೇ ಅಥವಾ ಜನಪ್ರಿಯತೆಯ ಒತ್ತಡದಿಂದ ಬಂದದ್ದೇ ಎಂಬುದು ಪ್ರಶ್ನಾರ್ಹ. ನವರಸಗಳನ್ನು ಪಾತ್ರಗಳಲ್ಲಿ ಸಮರ್ಥವಾಗಿ ತುಂಬುವ ಸಾಮರ್ಥ್ಯ ಅವರಲ್ಲಿ ಇದ್ದಾಗ ಅಷ್ಟು ಸುಲಭವಾಗಿ ಮುಗ್ದತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಬದುಕಿನ ನಿಜವಾದ ಅನುಭವಗಳು ಅಭಿನಯದ ಭಾಗವಾಗಿರುತ್ತದೆ…..
ಭಾಷೆ, ಸಂಸ್ಕೃತಿ, ಜನಜೀವನದ ಮೇಲೆ ಪ್ರಭಾವ ಎಲ್ಲವನ್ನೂ ಗಮನಿಸಿದಾಗ ಅವರ ಸಾಧನೆ ಎತ್ತರದಲ್ಲಿ ನಿಲ್ಲುತ್ತದೆ. ಅದು ಈಗಾಗಲೇ ಸಾಬೀತಾಗಿರುವ ವಿಷಯ….
ಸಾರ್ವಜನಿಕ ಸೇವೆಗಳ ವಿಷಯ ಬಂದಾಗ, ಚಿತ್ರರಂಗದ ಒಟ್ಟು ನಿಯಂತ್ರಣ ಗಮನಿಸಿದಾಗ, ಅವರ ವಿರೋಧಿಗಳು ಅವರ ಮೇಲೆ ಒಂದಷ್ಟು ಆಪಾದನೆ ಮಾಡುತ್ತಾರೆ. ಅದು ಎಲ್ಲಾ ಕಾಲಕ್ಕೂ ಎಲ್ಲರ ಮೇಲೆಯೂ ಇರುತ್ತದೆ. ಅದು ಅವರವರ ಭಾವಕ್ಕೆ ಬಿಡುತ್ತಾ…..
ಕೆಲವೊಂದು ಒಪ್ಪು ತಪ್ಪುಗಳ ನಡುವೆಯೂ ಕನ್ನಡಿಗರು ಹೆಮ್ಮೆ ಪಡಬಹುದಾದ ಕೆಲವೇ ಅಗ್ರಗಣ್ಯ ವ್ಯಕ್ತಿತ್ವಗಳ ಶ್ರೇಷ್ಠ ಸಾಲಿನಲ್ಲಿ ರಾಜ್ ಕುಮಾರ್ ಅವರೂ ಪ್ರಮುಖವಾಗುತ್ತಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು…..
ಮತ ಹಾಕುವ ಮುನ್ನ……..
ದಯವಿಟ್ಟು ಸಾಕಷ್ಟು ಯೋಚಿಸಿ. ನಾವು ಹಾಕುತ್ತಿರುವ ಮತ ಯಾರಿಗೆ, ಯಾವ ಕಾರಣದಿಂದ ಎಂಬುದನ್ನು ಸ್ವಲ್ಪ ಗಮನಿಸಿ, ಸಮಗ್ರವಾಗಿ ಚಿಂತಿಸಿ. ಇರುವುದರಲ್ಲಿ ಭವಿಷ್ಯದ ದೃಷ್ಟಿಯಿಂದ ಉತ್ತಮ ಎನ್ನಬಹುದಾದ ಅಭ್ಯರ್ಥಿಗೆ ಮತ ಚಲಾಯಿಸಿ. ಯಾವುದೇ ಆಕರ್ಷಣೆಗೆ ಒಳಗಾಗಬೇಡಿ. ಭಾರತದ ಪ್ರಜಾಪ್ರಭುತ್ವದ ಯಶಸ್ಸು ನಿಮ್ಮ ಒಂದು ಮತವನ್ನು ಅವಲಂಬಿಸಿರುತ್ತದೆ. ಈ ರೀತಿಯ ಒಟ್ಟು ಮತಗಳ ಸಮೂಹವೇ ನಮ್ಮ ಜೀವನಮಟ್ಟವನ್ನು ನಿರ್ಧರಿಸುತ್ತದೆ. ಆದ್ದರಿಂದ ನಿಮ್ಮ ಸಂಪೂರ್ಣ ವಿವೇಚನೆ – ಸಂವೇದನಾ ಶೀಲತೆ ಇಲ್ಲಿ ಬಳಸಿಕೊಳ್ಳಿ. ಯಾವುದೋ ಒತ್ತಡ, ಭ್ರಮೆಗೆ ಒಳಗಾಗದೆ ವಾಸ್ತವದ ಪ್ರಜ್ಞೆ ಸದಾ ಜಾಗೃತವಾಗಿರಲಿ ಎಂದು ನೆನಪಿಸಿಕೊಳ್ಳುತ್ತಾ – ಮನವಿ ಮಾಡಿಕೊಳ್ಳುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
9844013068……..