ವಿಶ್ವ ಪುಸ್ತಕ ದಿನದ ಅಂಗವಾಗಿ,
ಏಪ್ರಿಲ್ 23……..
ಈ ದಿನದ ನೆನಪಾಗಿ ನನಗೂ ಪುಸ್ತಕ ಬರೆಯುವ ಆಸೆಯಾಗುತ್ತಿದೆ. ಬಹಳಷ್ಟು ಜನರು, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಲು ಇದ್ದಾರೆ. ಆ ಪುಸ್ತಕಗಳ ಶೀರ್ಷಿಕೆಗಳೇ ನನಗೊಂದು ಅದ್ಭುತ, ಆಶ್ಚರ್ಯ, ಕುತೂಹಲಕರ……
ಎಂತೆಂತಹ ಹೆಸರುಗಳು, ಅದನ್ನು ಓದುತ್ತಿದ್ದರೆ ಯಾವುದೋ ಮಾಯಾ ಲೋಕದಲ್ಲಿದ್ದಂತೆ ಭಾಸವಾಗುತ್ತದೆ. ಕೆಲವರು ಕಾವ್ಯವನ್ನು, ಮತ್ತೆ ಕೆಲವರು ಕಥೆ ಕಾದಂಬರಿಗಳನ್ನು, ಇನ್ನೊಂದಷ್ಟು ಜನ ಪ್ರಬಂಧಗಳನ್ನು, ಮತ್ತೊಂದಷ್ಟು ಜನ ಅಂಕಣಗಳನ್ನು, ಮತ್ತೆ ಕೆಲವರು ವೈಚಾರಿಕ ಲೇಖನಗಳನ್ನು, ಇನ್ನು ಹಲವರು ಆತ್ಮಕಥೆಗಳನ್ನು, ಬೇರೆಯವರು ಅವರವರಿಗೆ ಅನಿಸಿದ ವಿಜ್ಞಾನ ಕ್ರೀಡೆ ಸಾಹಸ ಪ್ರವಾಸ ಕೌತುಕ ಪತ್ತೆದಾರಿ ಹೀಗೆ ಬರೆಯುತ್ತಲೇ ಇರುತ್ತಾರೆ…..
ಅದನ್ನು ಓದುತ್ತಾ ಓದುತ್ತಾ ಬೆಳೆದಿದ್ದೇನೆ. ಶಾಲೆಗಳಲ್ಲಿ ಅಂದು ಪಠ್ಯವಾಗಿದ್ದ ಪುಸ್ತಕಗಳು ಇಂದು ಬದುಕಿನ ದಾರಿ ದೀಪಗಳಾಗಿರುವುದು ಸಹ ನಿಜ. ಅಂದು ಪುಸ್ತಕದಲ್ಲಿ ಅದನ್ನು ಬರೆದವರ ಹೆಸರು ಮತ್ತು ಪರಿಚಯ ನೋಡಿ ನಾನು ಹಾಗೆಯೇ ಪುಸ್ತಕ ಬರೆಯಬೇಕು, ಅವರಂತೆ ಬದುಕಬೇಕು ಎಂದು ಕನಸು ಕಂಡವನು. ನಿದ್ದೆಯಲ್ಲೂ ಬೃಹತ್ ಕಥೆ ಕಾದಂಬರಿಗಳನ್ನು ಬರೆದು ಪ್ರಖ್ಯಾತನಾಗಿದ್ದೇನೆ ಎಂದೇ ಅನೇಕ ಸಲ ಭಾಸವಾಗಿದೆ……
ಎಲ್ಲರಂತೆ ನಾನು ಸಹ ಪುಸ್ತಕಗಳನ್ನು ಓದುತ್ತಾ ಅತ್ತಿದ್ದೇನೆ, ನಕ್ಕಿದ್ದೇನೆ, ಭಯಗೊಂಡಿದ್ದೇನೆ, ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇನೆ, ನಿರಾಶನಾಗಿದ್ದೇನೆ, ಅಸಹಾಯಕನಾಗಿದ್ದೇನೆ, ಸ್ಪೂರ್ತಿ ಪಡೆದಿದ್ದೇನೆ. ಅದು ಆಯಾ ಸಂದರ್ಭವನ್ನು, ಪುಸ್ತಕದ ವಿಷಯವನ್ನು ಅವಲಂಬಿಸಿರುತ್ತದೆ. ಎಷ್ಟೋ ಬಾರಿ ತೀರಾ ದು:ಖಿತನಾದಾಗ ಓದಿದ ಕೆಲವು ಆತ್ಮ ಕಥೆಗಳು ನನಗೆ ಮತ್ತೆ ಜೀವನೋತ್ಸಾಹ ನೀಡಿದೆ. ಬದುಕುವ ಉತ್ಸಾಹ ಮೂಡಿಸಿದೆ…..
ಇತ್ತೀಚೆಗೆ ಏನನ್ನಾದರೂ ಬರೆಯಬೇಕು, ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು ಎಂದು ಮನಸ್ಸು ಒತ್ತಡ ಹಾಕುತ್ತಿದೆ. ಏನು ಬರೆಯುವುದು ಅದೇ ದೊಡ್ಡ ಸಮಸ್ಯೆಯಾಗಿದೆ. ಹೇಗೆ ಬರೆಯುವುದು, ಏನನ್ನು ಬರೆಯುವುದು, ಯಾವ ಪ್ರಕಾರದಲ್ಲಿ ಬರೆಯುವುದು, ಯಾರಿಗಾಗಿ ಬರೆಯುವುದು, ಎಷ್ಟು ಬರೆಯುವುದು, ಇದೇ ಮನಸ್ಸಿನಲ್ಲಿ ಕೊರೆಯುತ್ತಿದೆ…..
ಕೆಲವೊಮ್ಮೆ ಯೋಚಿಸುತ್ತೇನೆ, ಈ ಪರಿಸರ ಬಹುತೇಕ ವಿನಾಶದ ಅಂಚಿಗೆ ಬಂದು ತಲುಪಿದೆ. ಗಾಳಿ ನೀರು ಆಹಾರ ಮಲ್ಲಿನವಾಗುತ್ತಿರುವುದನ್ನು ತಡೆಯಲು ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆಯಲೇ !. ಈಗಾಗಲೇ ಎಷ್ಟೋ ಜನ ಬರೆದಿದ್ದಾರೆ. ಏನೂ ಪ್ರಯೋಜನವಾಗುತ್ತಿಲ್ಲ. ಇನ್ನು ನೀನು ಬರೆದರು ಏನೂ ಆಗುವುದಿಲ್ಲ. ಪರಿಸರ ರಕ್ಷಣೆ ಬರೆಯುವುದಲ್ಲ. ಅದನ್ನು ರಕ್ಷಿಸುವುದು ಮತ್ತು ಹಾಗೆಯೇ ಅದನ್ನು ಉಳಿಸುವುದು ಎಂದು ಮನಸ್ಸು ಹೇಳುತ್ತದೆ…..
ತಲೆ ಕೊಡವಿದಾಗ ಮತ್ತೆ ಬೇರೊಂದು ವಿಷಯ ಕೊರೆಯಲಾರಂಭಿಸುತ್ತದೆ. ಬಾಲ್ಯದಲ್ಲಿ ನಾನು ಕಂಡಂತಹ ಮನುಷ್ಯ ಸಂಬಂಧಗಳು, ಅಪ್ಪ ಅಮ್ಮ ಅಣ್ಣ ಅಕ್ಕ ಅಜ್ಜ ಅಜ್ಜಿ ತಮ್ಮ ತಂಗಿ ಮುಂತಾದ ಒಡಹುಟ್ಟಿದವರ ನಡುವೆ ಬೆಳೆದಿದ್ದ ಆ ಬಾಂಧವ್ಯ, ಒಬ್ಬರಿಗೊಬ್ಬರು ತೋರಿಸುತ್ತಿದ್ದ ನಿಸ್ವಾರ್ಥ ಪ್ರೀತಿ, ಕುಟುಂಬದಲ್ಲಿ ಸದಾ ನಳನಳಿಸುತ್ತಿದ್ದ ಮುಗ್ಧ ನಗುವಿನ ವಾತಾವರಣ, ಆಗಿನ ಆಹಾರದ ರುಚಿ, ಆಗಿನ ಹಬ್ಬಗಳ ಸಂಭ್ರಮ, ಹಾಗೇನೇ ನಿದ್ರಾ ಸುಖ, ಎಲ್ಲವನ್ನು ಬರೆದು ಮತ್ತೆ ನಾನು ಅನುಭವಿಸಬೇಕು, ಸಮಾಜಕ್ಕೂ ಅರ್ಥ ಮಾಡಿಸಬೇಕು ಎಂದು ಆಸೆಯಾಗುತ್ತದೆ. ಆದರೆ ವಾಸ್ತವಕ್ಕೆ ಮರಳಿದಾಗ ಈ ದುಡ್ಡಿನ ಹಪಾಹಪಿ ಸಮಾಜದಲ್ಲಿ ಸಂಬಂಧಗಳೆಲ್ಲವೂ ವ್ಯಾಪಾರಿಕರಣವಾಗಿ, ಎಲ್ಲ ಸಂಬಂಧಿಕರು ದೂರ ದೂರವಾಗಿ, ಈಗ ಒಂಟಿಯಾಗಿ ಮನೆಯಲ್ಲಿ ಕುಳಿತಿರುವಾಗ ಅದೆಲ್ಲ ಇನ್ನು ನೆನಪು ಮಾತ್ರ, ಅದನ್ನು ಬರೆದು ಪ್ರಯೋಜನವಾದರೂ ಏನು ಎಂದು ನಿರಾಶನಾಗುತ್ತೇನೆ…….
ಮತ್ತೆ ಇನ್ನೊಂದು ದಿನ ಇದ್ದಕ್ಕಿದ್ದಂತೆ ಇನ್ನೇನಾದರೂ ಬರೆಯುವ ತುಡಿತ ಪ್ರಾರಂಭವಾಗುತ್ತದೆ. ಮತ್ತೆ ಏನು ಬರೆಯುವುದು ಎಂದು ಯೋಚಿಸುತ್ತೇನೆ. ಈ ಸಮಾಜ ಇಲ್ಲಿಯವರೆಗೂ ಕ್ರಮಬದ್ಧವಾಗಿ ಮುಂದುವರೆದುಕೊಂಡು ಬರಲು ಅನೇಕ ಮಹನೀಯರ, ವಿದ್ವಾಂಸರ, ಚಿಂತಕರ, ದಾರ್ಶನಿಕರ ಪುಸ್ತಕಗಳು, ಗ್ರಂಥಗಳು ಕಾರಣವಾಗಿದೆ. ಆ ರೀತಿ ನಾನು ಕೂಡ ನನ್ನ ಅನುಭವಗಳನ್ನು ಬರೆದು ಈ ಸಮಾಜದಲ್ಲಿ, ಜನರ ಚಿಂತನೆಯಲ್ಲಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ನಾಗರೀಕ ಪ್ರಜ್ಞೆಯನ್ನು ಬೆಳೆಸುವ, ಜನರ ಜೀವನಮಟ್ಟ ಸುಧಾರಿಸುವ, ಅವರನ್ನು ಮಾನಸಿಕವಾಗಿ ಜಾಗೃತಗೊಳಿಸುವ, ಬರಹಗಳನ್ನು ಬರೆದು ಪುಸ್ತಕ ರೂಪದಲ್ಲಿ ಹಂಚಬೇಕು ಎಂದು ಆಗಾಗ ಯೋಚಿಸುತ್ತೇನೆ. ಆದರೆ ಹೀಗೆ ಬರೆಯಬೇಕೆಂದು ಕೆಲವು ಮಿತ್ರರಲ್ಲಿ ವಿಷಯ ಹಂಚಿಕೊಂಡಾಗ ‘ ಅಯ್ಯೋ ಈಗ ಯಾರು ಓದುವವರಿಲ್ಲ, ಎಲ್ಲರೂ ನೋಡುಗರು ಕೇಳುಗರಾಗಿದ್ದಾರೆ. ಮೊಬೈಲ್ ಬಂದ ನಂತರ ಓದು ಮರೆಯಾಗಿದೆ. ನೀವು ಯಾರಿಗಾಗಿ ಬರೆಯುವಿರಿ. ಈಗೆಲ್ಲಾ ದೀರ್ಘ ಲೇಖನಗಳನ್ನು ಯಾರು ಓದುವುದಿಲ್ಲ. ಶಾರ್ಟ್ ಅಂಡ್ ಸ್ವೀಟ್ ಆಗಿ ವಿಡಿಯೋ ಮಾಡಿ, ಆಡಿಯೋ ಮಾಡಿ, ಎಂದು ಸಲಹೆ ನೀಡುತ್ತಾರೆ. ಆಗ ಬರೆಯಬೇಕೆಂದಿದ್ದ ಉತ್ಸಾಹ ಕರಗಿ ಮತ್ತೆ ಗೊಂದಲಕ್ಕೀಡಾಗಿ ಬೇರೊಂದು ವಿಷಯ ಚಿಂತಿಸುತ್ತೇನೆ…….
ಕೆಲವೊಮ್ಮೆ ಸಂಜೆಯ ನಡಿಗೆಗಾಗಿ ಪಾರ್ಕಿನಲ್ಲಿ ಹೋಗುತ್ತಿರುವಾಗ ಅಲ್ಲಿ ಕಾಣುವ ಯುವಕ ಯುವತಿಯರ ನಗುವನ್ನು ನೋಡಿದಾಗ ಯೌವ್ವನದ ನನ್ನ ಪ್ರೀತಿಯು ನೆನಪಾಗುತ್ತದೆ. ಅರೆ ಪ್ರೀತಿ ಒಂದು ಮುಗಿಯದ ಅಕ್ಷಯ ಪಾತ್ರೆ, ಇಂದಿನ ಯುವಕ ಯುವತಿಯರಿಗೆ ಪ್ರೀತಿಯ ಮಹತ್ವ, ಪ್ರೀತಿಯ ಪಾವಿತ್ರ್ಯತೆ, ಪ್ರೀತಿಯ ಜೀವನದ ಬಗ್ಗೆ ಬರೆಯಬೇಕು, ಅವರನ್ನು ಎಚ್ಚರಿಸಬೇಕು, ಪ್ರೀತಿಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಬಾರಿ ಏನಾದರೂ ಮಾಡಿ ಅಮರ್ ಪ್ರೇಮ್ ಕಹಾನಿ ಬರೆಯಲೇಬೇಕು ಎಂದು ಯೋಚಿಸುತ್ತೇನೆ. ಆದರೆ ಟಿವಿಗಳಲ್ಲಿ ಬರುವ ಪ್ರೀತಿಗಾಗಿ ಕೊಲೆಗಳು, ವಂಚನೆಗಳು, ಮುಖವಾಡಗಳು ಎಲ್ಲವನ್ನು ನೋಡುತ್ತಿದ್ದರೆ ಈಗ ಇರುವುದು ನಿಜ ಪ್ರೀತಿ ಅಲ್ಲ, ಕಪಟ ಪ್ರೀತಿ. ಈಗಿನ ಯುವಕ ಯುವತಿಯರಿಗೆ ಪ್ರೀತಿಯ ಬಗ್ಗೆ, ಅದರ ಆಳದ ಬಗ್ಗೆ ಗೊತ್ತೇ ಇಲ್ಲ. ಪ್ರೀತಿ ಒಂದು ವ್ಯಾಪಾರದ, ಕಾಮ ಪ್ರಚೋದನೆಯ, ಹದಿಹರೆಯದ ಒಂದು ಭಾವ ಮಾತ್ರವಾಗಿದೆ. ಈಗ ಆದನ್ನು ಬರೆದು ಪ್ರಯೋಜನವಾದರೂ ಏನು ಎಂದು ಮತ್ತೆ ಒಳಗಿನ ಮನಸ್ಸು ನುಡಿಯುತ್ತದೆ. ಹಳೆಯ ನನ್ನ ಪ್ರೀತಿಯನ್ನು ನೆನಪು ಮಾಡಿಕೊಂಡು ಹಾಗೆಯೇ ಮರೆಯುತ್ತೇನೆ…..
ಪುಸ್ತಕ ಬರೆಯಲು ಸಾಧ್ಯವಾಗಲಿಲ್ಲ. ಈ ಯೋಚನೆಗಳೆಲ್ಲವೂ ಹಳೆಯದಾಯಿತು. ಹೊಸ ಟ್ರೆಂಡ್ ಏನೆಂದರೆ ಯುವಕರಿಗೆ ಮಾರ್ಗದರ್ಶನ ಮಾಡುವ, ವ್ಯಕ್ತಿತ್ವ ವಿಕಸನದ, ಅವರ ಉದ್ಯೋಗ, ವ್ಯಾಪಾರಕ್ಕೆ ಮಾರ್ಗದರ್ಶನ ನೀಡುವ ಹೊಸ ಹೊಸ ಐಡಿಯಾಗಳು, ಟಿಪ್ಸ್ ಗಳು, ಆಲೋಚನೆಗಳ ಬಗ್ಗೆ ಪುಸ್ತಕ ಬರೆದರೆ ಹೆಚ್ಚು ಜನಪ್ರಿಯವಾಗುತ್ತದೆ ಎಂದು ಆಗಾಗ ಕೆಲವರು ಮಾತನಾಡುವುದನ್ನು ಕೇಳಿ ಅದನ್ನಾದರೂ ಬರೆಯೋಣ ಎಂದು ಪೆನ್ನು ಪೇಪರ್ ಹಿಡಿದು ಕುರ್ಚಿಯ ಮೇಲೆ ಕುಳಿತೆ. ಆಗ ಪಕ್ಕದಲ್ಲಿದ್ದ ಪತ್ರಿಕೆಯ ಮೇಲೆ ಕಣ್ಣಾಡಿಸಿದರೆ ಅಲ್ಲಿ ಬರೆದಿದ್ದ ಅನೇಕ ವಿಷಯಗಳನ್ನು ಓದಿದ ಮೇಲೆ ಇದು ನನ್ನಿಂದ ಸಾಧ್ಯವಿಲ್ಲ. ನನ್ನ ಆಲೋಚನೆಗಳು ತುಂಬಾ ಹಳೆಯದು. ಈಗ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ಯುವಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿಯು ದೊರೆಯುತ್ತದೆ. ಅವರಿಗೆ ಹಣ ಮಾಡುವ, ಏನನ್ನಾದರೂ ಸಾಧಿಸುವ, ಮಜಾ ಮಾಡುವ ಆಲೋಚನೆಗಳೇ ತುಂಬಿ ತುಳುಕುತ್ತಿವೆ. ಅವರನ್ನು ಮೆಚ್ಚಿಸಲು ನಾನು ಅದಕ್ಕೆ ಪೂರಕವಾದ ವಿಷಯಗಳನ್ನೇ, ಮಾರ್ಗಗಳನ್ನೇ, ಬರೆಯಬೇಕು. ನನಗೆ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಾನು ಯಾವುದೋ ಮೌಲ್ಯಯುತ ದಾರಿಗಳನ್ನು ಬರೆದು ಅಪಹಾಸ್ಯಕ್ಕೆ ಒಳಗಾಗಬಹುದು. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ನನ್ನ ಸಲಹೆಗಳು ಹಾಸ್ಯಾಸ್ಪದವಾಗಿ ಕಾಣಬಹುದು ಎಂದು ಒಳ ಮನಸ್ಸು ನುಡಿಯುತ್ತಿದ್ದಂತೆ ಆ ರೀತಿಯ ಪುಸ್ತಕಗಳನ್ನು ಬರೆಯುವ ಯೋಚನೆಗಳನ್ನು ಮಾಡಲಾಗುತ್ತಿಲ್ಲ……
ಬರೆಯಬಹುದಾದ ಎಲ್ಲ ವಿಷಯಗಳನ್ನು ಮತ್ತೆ ಮತ್ತೆ ಯೋಚಿಸಿದ ನಂತರ ಬಹುಶಃ ನನ್ನ ಬದುಕಿನ ಅನುಭವವೇ ಬೇರೆ. ಈಗಿನ ಸಾಮಾಜಿಕ ವ್ಯವಸ್ಥೆಯೇ ಬೇರೆ. ನನ್ನ ಬದುಕು ಈಗಿನ ಕಾಲಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಈಗಿನ ಬದುಕು ವೇಗ, ಸ್ಪರ್ಧೆ ಯಶಸ್ಸನ್ನು ಅವಲಂಬಿಸಿದೆ. ಫಲಿತಾಂಶಗಳು ಯಾವಾಗಲೂ ಐಪಿಎಲ್ ಮ್ಯಾಚ್ ನಂತೆ ಇರಬೇಕು, ಅಂದರೆ ಗೆಲ್ಲುತ್ತಲೇ ಇರಬೇಕು. ಅದೂ ಸಹ ಆಕರ್ಷಕವಾಗಿಯೂ, ಸದಾ ಥ್ರಿಲ್ ಕೊಡುತ್ತಿರಬೇಕು. ನಮ್ಮ ಯೋಚನೆಗಳು ಬಹುತೇಕ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ……..
ಈ ಬಿಸಿಲಿನ ತಾಪಮಾನದಲ್ಲಿ, ರಾಜಕೀಯ ವಾತಾವರಣದಲ್ಲಿ, ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ನಲ್ಲಿ, ನಾವು ಬರೆಯುವ ಪುಸ್ತಕವನ್ನು ಓದುವುದಾದರೂ ಯಾರು ? ಇಲ್ಲ, ಬರೆಯಲು ಸಾಧ್ಯವಾಗುತ್ತಿಲ್ಲ…..
ಹಾಗೆಂದು ಬದುಕು ಭಾರವೇನು ಆಗಿಲ್ಲ. ಬದುಕೇ ಒಂದು ಪುಸ್ತಕ. ಆ ಪುಸ್ತಕದಲ್ಲಿಯ ಎಲ್ಲ ಪುಟಗಳು ಸಾಧ್ಯವಾದಷ್ಟು ಮಾನವೀಯ, ಜೀವಪರ ನಿಲುವುಗಳನ್ನೇ ಪ್ರತಿಪಾದಿಸುತ್ತಾ ಬದುಕಬೇಕು. ಪುಸ್ತಕಗಳನ್ನು ಬೇರೆಯವರು ಓದಲು ಬರೆಯಬೇಕು, ಆದರೆ ಬದುಕು ನನಗಾಗಿ ಬದುಕಬೇಕು……
ಬದುಕೇ ಒಂದು ಪುಸ್ತಕವಾಗಿ, ಆ ಪುಸ್ತಕ ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕು, ಮಾರ್ಗದರ್ಶನವಾಗಬೇಕು, ಇಂದಿನ ಅತಿಅವಶ್ಯಕತೆ ಇದೇ ಆಗಿದೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ….
ಹಾಗೆಂದು ಬದುಕಿನ ಬಗ್ಗೆ ನನ್ನ ದೃಷ್ಟಿಕೋನವೇ ಸರಿ ಎಂದೇನೂ ಅಲ್ಲ. ಬದುಕುತ್ತಾ ಬರೆಯುವವರು, ಬರೆಯುತ್ತಾ ಬದುಕುವವರು, ಮುದ್ರಿಸುತ್ತಾ ಬದುಕುವವರು, ನಿದ್ರಿಸುತ್ತಾ ಬದುಕುವವರು, ಮಾರಾಟ ಮಾಡುತ್ತಾ ಬರೆಯುವವರು, ಮಾರಾಟವಾಗುತ್ತಾ ಬರೆಯುವವರು, ಅನುಭವಗಳಿಗೆ ಅಕ್ಷರ ರೂಪ ಕೊಡುವವರು, ಅಕ್ಷರಗಳಲ್ಲಿಯೇ ಅನುಭವವನ್ನು ಬರೆಯುವವರು,
ಕದ್ದು ಬರೆಯುವವರು, ಬರೆಯುವುದನ್ನು ಕದಿಯುವವರು, ಅಧ್ಯಯನ ಚಿಂತನೆಗಳನ್ನೇ ಬರೆಯುವವರು, ಇದು ಯಾವುದೂ ಇಲ್ಲದೆ ಹಾಗೆಯೇ ಸಹಜವಾಗಿ ಬದುಕುತ್ತಿರುವವರು, ಬದುಕನ್ನೇ ಪುಸ್ತಕವಾಗಿಸಿಕೊಂಡವರು, ಪುಸ್ತಕಗಳಿಂದಲೇ ಬದುಕುತ್ತಿರುವವರು,
ಹೀಗೆ ಬದುಕು ಸಹ ಒಂದು ನಿರಂತರ ಪಯಣ……
ಪುಸ್ತಕಗಳಿಗೆ ಹೇಗೆ ನಿರ್ದಿಷ್ಟ ವಿಷಯಗಳಿಲ್ಲವೋ, ಅಂತ್ಯವಿಲ್ಲವೋ, ಬದುಕು ಸಹ ಅದೇ ರೀತಿ ಅನೇಕ ಪ್ರಕಾರಗಳಲ್ಲಿ ಮುಂದುವರೆಯುತ್ತಲೇ ಇರುತ್ತದೆ. ಹೇಗೆ ಪುಸ್ತಕಗಳು ನಮ್ಮ ಆತ್ಮೀಯ ಗೆಳೆಯರಾಗುತ್ತವೋ, ಜ್ಞಾನ ಭಂಡಾರವಾಗುತ್ತವೋ, ಹಾಗೆಯೇ ಪುಸ್ತಕಗಳು ನಮ್ಮ ಶತ್ರುಗಳು ಹೌದು ಹಾಗೂ ಪುಸ್ತಕಗಳು ನಮ್ಮ ಮಿತಿಯೂ ಹೌದು…..
ಒಟ್ಟಿನಲ್ಲಿ ಪುಸ್ತಕಗಳು ನಮ್ಮ ಬದುಕಿನ ಭಾಗವಾದರೆ ಬದುಕು ಒಂದಷ್ಟು ಸಹನೀಯವಾಗುತ್ತದೆ ಎಂಬುದು ವಾಸ್ತವ. ಅದರಲ್ಲೂ ಬಾಲ್ಯದ ಪುಸ್ತಕಗಳ ಓದು ನಮಗೆ ನಮ್ಮೊಳಗಿನ ಮೌಲ್ಯಯುತ ಅರಿವು ಮೂಡಲು ಸಹಕಾರಿಯಾದರೆ, ಯೌವ್ವನದ ಪುಸ್ತಕಗಳ ಓದು ನಾವು ದಾರಿ ತಪ್ಪದಂತೆ ಎಚ್ಚರಿಕೆ ನೀಡುತ್ತವೆ. ಉದ್ಯೋಗ ಮತ್ತು ಕೌಟುಂಬಿಕ ಬದುಕಿನಲ್ಲಿ ಓದುವ ಪುಸ್ತಕಗಳು ನಮ್ಮ ಸಮಸ್ಯೆಗಳನ್ನು ಕಡಿಮೆಗೊಳಿಸಿ ಹೆಚ್ಚು ಜೀವನೋತ್ಸಾಹ ತುಂಬಿದರೆ, ನಿವೃತ್ತಿಯ ಅಂಚಿನ ಪುಸ್ತಕಗಳ ಓದು ನಮಗೆ ಬದುಕಿನ್ನು ಮುಗಿದಿಲ್ಲ ಎಂಬ ಭರವಸೆ ಮೂಡಿಸುತ್ತದೆ. ಅಂತಿಮವಾಗಿ ಹಾಸಿಗೆಯ ಮೇಲಿನ ಓದು ನಮ್ಮ ಸಂಪೂರ್ಣ ಬದುಕಿನ ನೆನಪುಗಳನ್ನು ನೆನಪಿಸುತ್ತ ಸಾವು ಸಹ ಸಹನೀಯವಾಗುವಂತೆ ಸಮಾಧಾನ ನೀಡುತ್ತದೆ……
ಆದ್ದರಿಂದ ಓದುವ ಅಭ್ಯಾಸ ಖಂಡಿತವಾಗಲೂ ಬಹಳ ಮುಖ್ಯ. ಅನೇಕ ಆಸ್ಪತ್ರೆಗಳು, ವೃದ್ಧಾಶ್ರಮಗಳು, ಜೈಲು ಎಲ್ಲವನ್ನು ನೋಡಿ ಅಲ್ಲಿನ ಶಾಶ್ವತ ನಿವಾಸಿಗಳನ್ನು ಗಮನಿಸಿದಾಗ, ಓದುವ ಹವ್ಯಾಸ ಇದ್ದವರು ತಮ್ಮ ಪರಿಸ್ಥಿತಿಯನ್ನು ಸಹ ಉತ್ತಮ ರೀತಿಯಲ್ಲಿ ಎದುರಿಸುತ್ತಿರುತ್ತಾರೆ. ಈ ಹವ್ಯಾಸಗಳಿಲ್ಲದವರು ನರಕಯಾತನೇ ಅನುಭವಿಸುತ್ತಿರುತ್ತಾರೆ……
ಬದುಕು ಹೇಗೆ ಇರುತ್ತದೆ ಗೊತ್ತಿಲ್ಲ. ಆದರೆ ಓದುವ ಹವ್ಯಾಸ ನಿಮ್ಮ ಬದುಕನ್ನು ಎಲ್ಲ ಸಂದರ್ಭದಲ್ಲೂ, ಎಲ್ಲಾ ಕಾಲದಲ್ಲೂ ಸಹನೀಯಗೊಳಿಸುವುದು ಮಾತ್ರ ವಾಸ್ತವ. ದಯವಿಟ್ಟು ಪುಸ್ತಕಗಳನ್ನು ಬರೆಯುತ್ತಿರಿ, ಸಾಧ್ಯವಾಗದಿದ್ದರೆ ಓದುತ್ತಿರಿ, ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ, ಎಚ್. ಕೆ,
9844013068…….