ಬೆಂಗಳೂರು: ದಿನಾಂಕ:23-04-2024(ಹಾಯ್ ಉಡುಪಿ ನ್ಯೂಸ್)
ರಾಜ್ಯಕ್ಕೆ ಬರಪರಿಹಾರ ನೀಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ ಕೇಳಲು ಮಾತ್ರ ಕರ್ನಾಟಕಕ್ಕೆ ಬರುತ್ತಿದ್ದಾರೆ.ಅವರಿಗೆ ಗೋಬ್ಯಾಕ್ ಎನ್ನುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಸೌಧ ಮುಂಭಾಗದ ಗಾಂಧಿ ಪ್ರತಿಮೆಯ ಮುಂದೆ ನಡೆದ ಪ್ರತಿಭಟನೆಯಲ್ಲಿ ನುಡಿದರು.
ಮೋದಿ ಅವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಪ್ರವಾಹ,ಭೀಕರ ಬರಗಾಲದಲ್ಲಿ ರಾಜ್ಯಕ್ಕೆ ಅವರು ಭೇಟಿ ನೀಡಲಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ ,ಬರ ಪರಿಹಾರಕ್ಕೆ ಅಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ನಾವು ಗ್ಯಾರಂಟಿ ಯೋಜನೆಗಳಿಗೆ ಒಂದು ನಯಾ ಪೈಸೆ ಕೇಂದ್ರದಿಂದ ಕೇಳಿಲ್ಲ. ನಮಗೆ ಅದು ಬೇಕಾಗಿಯೂ ಇಲ್ಲ.ನಾವು ಕೇಂದ್ರದ ಸಹಾಯವಿಲ್ಲದೆ ಬರಗಾಲವನ್ನೂ ಸಮರ್ಥವಾಗಿ ಎದುರಿಸುತ್ತಿದ್ದೇವೆ. ರೈತರಿಗೆ ಮೊದಲ ಕಂತಿನ ಪರಿಹಾರವನ್ನು ನೀಡಿದ್ದೇವೆ ಎಂದರು.
ನಮ್ಮ ತೆರಿಗೆ ನಮ್ಮ ಹಕ್ಕು, ಕರ್ನಾಟಕಕ್ಕೆ ಖಾಲಿ ಚೆಂಬು ಕೊಟ್ಟ ನರೇಂದ್ರ ಚೊಂಬೇಶ್ವರನಿಗೆ, ಬಿಜೆಪಿಗೆ, ಚೆಂಬು ಕೊಟ್ಟ ಮೋದಿಗೆ ಧಿಕ್ಕಾರ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.