Spread the love

ಚೆಂಬು – ಚಿಪ್ಪು – ಮಂಗಳಸೂತ್ರ – ಅಕ್ಷಯ ಪಾತ್ರೆ – ಹಿಂದೂ – ಮುಸ್ಲಿಂ – ಗ್ಯಾರಂಟಿ – ಮುಂತಾದ ವಿಷಯಗಳ ಸುತ್ತ 2024 ನೇ ಲೋಕಸಭಾ ಚುನಾವಣಾ ರಾಜಕೀಯ ನಡೆಯುತ್ತಿದೆ……

ಪ್ರಧಾನಮಂತ್ರಿಗೂ ಅಧಿಕಾರದ ಚಿಂತೆ, ಮುಖ್ಯಮಂತ್ರಿಗೂ ಅಧಿಕಾರದ ಚಿಂತೆ, ಎಲ್ಲಾ ರಾಜಕೀಯ ನಾಯಕರಿಗೂ ತಮ್ಮ ಸ್ವಹಿತಾಸಕ್ತಿಯ ಸ್ವಾರ್ಥದ ಚಿಂತೆಯ ನಡುವೆ ನಲುಗುವುದು ಮಾತ್ರ ದೇಶ ಮತ್ತು ಜನರು……

ಇದರಿಂದ ಚುನಾವಣೆ ಮುಗಿದ ನಂತರವೂ ಅದರ ದುಷ್ಪರಿಣಾಮ ಮುಂದುವರಿದು ಅದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅವರಿಗೆ ಅರಿವಾಗದಿರುವುದು ಒಂದು ದೊಡ್ಡ ದುರಂತವೇ ಸರಿ…..

ಚುನಾವಣೆಯನ್ನು ರೋಚಕವಾಗಿಸುವುದರ ಪರಿಣಾಮವಿದು. ಜನರು ಇದನ್ನು ಗಮನಿ‌ಸುತ್ತ ಇನ್ನೂ ಹಿತಾನುಭವದಲ್ಲಿದ್ದಾರೆ…..

ದೇಶ ಮುಖ್ಯವೋ ದ್ವೇಷ ಮುಖ್ಯವೋ ದಯವಿಟ್ಟು ಅರ್ಥಮಾಡಿಕೊಳ್ಳಿ…..

ತುಂಬಾ ಕಷ್ಟದ ಸಮಯ ಕಣ್ರೀ……

ತಾಪಮಾನ ಏರಿಕೆಯಾಗುತ್ತಲೇ ಇದೆ. ಬರಗಾಲ ಇನ್ನೂ ಮುಂದುವರಿಯುತ್ತಲೇ ಇದೆ.
ತಲೆಗೊಂದು ಮಾತನಾಡಬೇಡಿ. ಕೂಗಾಡಬೇಡಿ, ಕಿರುಚಾಡಬೇಡಿ. ಪೆಟ್ರೋಲ್ ಸುರಿಯಬೇಡಿ, ಬೆಂಕಿ ಹಚ್ಚಬೇಡಿ…..

ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲವಲ್ರೀ.
ಸಮಸ್ಯೆ ಒಂದೋ ಎರಡೋ ಅಲ್ಲ, ಹಲವಾರು…..

ಇವುಗಳ ಮಧ್ಯೆ ಹಿಂದೂ – ಮುಸ್ಲಿಂ ಆಂತರಿಕ ಸಂಘರ್ಷ ಪ್ರಾರಂಭವಾದರೆ ಅದನ್ನು ತಡೆದುಕೊಳ್ಳುವ ಶಕ್ತಿ ಭಾರತಕ್ಕೆ ಇಲ್ಲ ಕಣ್ರೀ…….

ನಿಮ್ಮ ಹುಚ್ಚಾಟಗಳು, ಬಾಯಿ ಚಪಲಗಳು, ಅಪ್ರಬುದ್ದತೆ, ಹೆಸರಿನ ಹಪಾಹಪಿ, ಜನಪ್ರಿಯತೆಯ ಮೋಹ, ಅಧಿಕಾರದ ದಾಹ, ಧಾರ್ಮಿಕ ಮೌಢ್ಯಕ್ಕೆ ದಯವಿಟ್ಟು ದೇಶದ ಜನರನ್ನು ಬಲಿಕೊಡಬೇಡಿ……

ದ್ವೇಷ ಮತ್ತು ಸೇಡು ಯಾವಾಗಲೂ ತೂಗುಯ್ಯಾಲೆಯಂತೆ ವರ್ತಿಸುತ್ತದೆ ರೀ, ಒಬ್ಬೊಬ್ಬರಿಗೆ ಒಂದೊಂದು ಕಾಲ…….

ವಿವೇಚನೆ ಎಂಬುದು ಬಹುದೊಡ್ಡ ಪರಿಕಲ್ಪನೆ ಕಣ್ರೀ, ತುಂಬಾ ತೂಕ ಮತ್ತು ಬೆಲೆಯುಳ್ಳದ್ದು,
360 ಡಿಗ್ರಿ ಕೋನದ ವಿಶಾಲತೆ ಹೊಂದಿದೆ…..

ದ್ವೇಷ ಭುಗಿಲೆದ್ದು ಗಲಭೆಯ ಹಂತ ತಲುಪಿದರೆ ಅಲ್ಲಿಂದ ಮುಂದೆ ನ್ಯಾಯ ನೀತಿ ಧರ್ಮ ಇರುವುದೇ ಇಲ್ಲ. ರೌಡಿಸಂ ಕ್ಷೇತ್ರದಲ್ಲಿ ಒಂದು ಮಾತಿದೆ,…,
” ಯಾರ ಕೈ ಮೊದಲಾಗುತ್ತದೆಯೋ ಅವರೇ ವಿಜೇತರು ” ಆ ರೀತಿ ಆಗುವುದು ಬೇಡ………

ಯಾವನೋ ಒಬ್ಬ ಪತ್ರಕರ್ತ, ಯಾವನೋ ಒಬ್ಬ ರಾಜಕಾರಣಿ, ಯಾವನೋ ಒಬ್ಬ ಸಂಘಟಕ,
ಯಾವನೋ ಒಬ್ಬ ಧಾರ್ಮಿಕ ಮುಖಂಡ,
ಯಾವನೋ ಒಬ್ಬ ಅಧಿಕಾರಿ,
ಮತ್ಯಾರೋ ಸಾರ್ವಜನಿಕರು
ತನ್ನ ತೆವಲುಗಳಿಗೆ ಬಾಯಿಗೆ ಬಂದಂತೆ ಮಾತನಾಡಿ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ…….

ಈ ಬಗ್ಗೆ ಪ್ರತಿಕ್ರಿಯಿಸುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಭಾಷೆ ತುಂಬಾ ಉದ್ರೇಕಕಾರಿಯಾಗಿದೆ. ಅದರಿಂದ ಪ್ರೇರಿತರಾದ ಜನರು ಸಹ ಅದೇ ಭಾಷೆ ಬಳಸುತ್ತಿದ್ದಾರೆ……..

ಹೌದು,
ಕೆಲವು ನಡೆಯಬಾರದ ಘಟನೆಗಳು ನಡೆಯುತ್ತಿವೆ. ಅದನ್ನು ನಮ್ಮ ಪೋಲೀಸ್ ವ್ಯವಸ್ಥೆ ಖಂಡಿತ ನಿಯಂತ್ರಣ ಮಾಡುತ್ತದೆ. ಅದಕ್ಕೆ ಆ ಶಕ್ತಿ ಇದೆ. ಆದರೆ ವ್ಯವಸ್ಥೆಯ ಸಂಪೂರ್ಣ ಅರಿವಿಲ್ಲದ ಸಾಮಾನ್ಯ ಜನ ಮತ್ತು ಅವರ ಅಭಿಪ್ರಾಯಗಳಿಗೆ ವೇದಿಕೆ ಕಲ್ಪಿಸುತ್ತಿರುವ ಮಾಧ್ಯಮಗಳು ತಮ್ಮ ಸೂಕ್ಷ್ಮತೆಯನ್ನು ಕಳೆದುಕೊಂಡಿವೆ…..

ಸಾಮಾನ್ಯ ಜನರು ಕೇವಲ ನೇರ ದೃಶ್ಯಗಳನ್ನು ಮಾತ್ರ ನೋಡಿ ಪ್ರತಿಕ್ರಿಯಿಸುತ್ತಾರೆ. ಇಡೀ ವ್ಯವಸ್ಥೆಯ ಒಳ ಅರ್ಥ ಅಥವಾ ಒಳ ನೋಟ ಚಿಂತಿಸುವ ದೂರದೃಷ್ಟಿ ಅವರಿಗೆ ಇರುವುದಿಲ್ಲ……

” ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ” ಎಂಬುದು ಕೇವಲ ನಾಣ್ಣುಡಿಯಲ್ಲ ಅದು ವಾಸ್ತವ…..

ಧರ್ಮದ ವಿಷಯಗಳ ಗಲಭೆಯ ಬಗ್ಗೆ ಒಂದು ಸೂಕ್ಷ್ಮ ಅರ್ಥಮಾಡಿಕೊಳ್ಳಿ.
ಒಬ್ಬರು ಮಾತಿನಲ್ಲಿ ಹೆದರಿಸಿದರೆ, ಇನ್ನೊಬ್ಬರು ಹೊಡೆಯುತ್ತಾರೆ, ಒಬ್ಬರು ಹೊಡೆದರೆ ಇನ್ನೊಬ್ಬರು ಚಾಕು ತೆಗೆಯುತ್ತಾರೆ, ಒಬ್ಬರು ಚಾಕು ತೆಗೆದರೆ ಇನ್ನೊಬ್ಬರು ಮಚ್ಚು ತೆಗೆಯುತ್ತಾರೆ. ಒಬ್ಬರು ಮಚ್ಚು ತೆಗೆದರೆ ಮತ್ತೊಬ್ಬರು ಲಾಂಗು ತೆಗೆಯುತ್ತಾರೆ. ಒಬ್ಬರು ಲಾಂಗ್ ತೆಗೆದರೆ ಮತ್ತೊಬ್ಬರು ಬಂದೂಕು ತೆಗೆಯುತ್ತಾರೆ, ಒಬ್ಬರು ಬಂದೂಕು ತೆಗೆದರೆ ಮತ್ತೊಬ್ಬರು ಬಾಂಬು ತೆಗೆಯುತ್ತಾರೆ, ಒಬ್ಬರು ಬಾಂಬು ತೆಗೆದರೆ ಮತ್ತೊಬ್ಬರು ಅತ್ಯಂತ ಅಪಾಯಕಾರಿ ವೈರಸ್ ತೆಗೆಯುತ್ತಾರೆ….
ಇದು ಹೀಗೆಯೇ ಸಾಗುತ್ತದೆ. ಇದಕ್ಕೆ ಕೊನೆಯೇ ಇಲ್ಲ…..

ಇಂದಿನ ಬಹುಮುಖ್ಯ ಅವಶ್ಯಕತೆ, ಚರ್ಚೆಗಳ ಮುಖಾಂತರ ಜಗಳ ಹೆಚ್ಚಿಸುವುದಲ್ಲ, ಶೂಟ್ ಮಾಡಿ, ಕೊಂದು ಬಿಡಿ ಎಂದು ಪ್ರಚೋದಿಸುವುದಲ್ಲ. ಒಬ್ಬ ಹೇಳುತ್ತಿದ್ದ, ನಾಲ್ಕು ಭಾರಿಸಿದರೆ ಎಲ್ಲಾ ಸರಿ ಹೋಗುತ್ತದೆ ಎಂದು. ಅಯ್ಯಾ ಈ ದೇಶದಲ್ಲಿ ಇನ್ನೂ ಗಲ್ಲು ಶಿಕ್ಷೆ ಜಾರಿಯಲ್ಲಿದೆ. ಆದರೂ ಗಂಟೆಗೆ ಎಷ್ಟೋ ಕೊಲೆಗಳು, ಅತ್ಯಾಚಾರಗಳು ನಡೆಯುತ್ತದೆ. ಭ್ರಷ್ಟಾಚಾರಕ್ಕೆ ಕಠಿಣ ಶಿಕ್ಷೆ ಇದೆ. ಆದರೆ ಅದು ಸರ್ವಾಂತರ್ಯಾಮಿಯಾಗಿದೆ. ಶಿಕ್ಷೆ ಮತ್ತು ಹೊಡೆತ ಒಂದು ಅಸ್ತ್ರಗಳು ಅಷ್ಟೇ. ಅದೇ ಅಂತಿಮವಲ್ಲ……

ಅತಿಯಾದ ಹಿಂಸೆ ಗಮನಿಸಿದ ಮೇಲೆ ಪೋಲೀಸ್ ವ್ಯವಸ್ಥೆಯನ್ನು ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು. ಕ್ರಿಮಿನಲ್ ಗಳ ಅಟ್ಟಹಾಸಕ್ಕೆ ತಡೆ ಒಡ್ಡಬೇಕು…..

ಆದರೆ ಮಾಧ್ಯಮಗಳ ಉದ್ದಟತನ, ಅವಿವೇಕಿ ಮಾತುಗಳು ನಿಲ್ಲಬೇಕು. ಅವರ ವರ್ತನೆ ಹೇಗಿದೆ ಎಂದರೆ, ಒಂದು ವೇಳೆ ಈ ಸಮಸ್ಯೆ ಬೇಗ ಮುಗಿದರೆ ಕನಿಷ್ಠ ಮತ್ತೊಂದು ಗಲಭೆಯಾದರೂ ಸುದ್ದಿಯಲ್ಲಿರಲಿ ಎಂದು ಬಯಸಿದಂತಿದೆ. ಪ್ರತಿ ನಿರೂಪಕರು ರೋಷಾವೇಷದಿಂದ ಮಾತನಾಡುತ್ತಾರೆ. ಅದರ ಪರಿಣಾಮವೇ ಗೊತ್ತಿಲ್ಲದ ದಡ್ಡ ಶಿಖಾಮಣಿಗಳು. ಭಾಷೆ ಮತ್ತು ಭಾವನೆಗಳ ಮೇಲೆ ಹಿಡಿತವೇ ಇಲ್ಲ. ಎಲ್ಲಾ ಗೊತ್ತಿದೆ ಎಂಬ ಬುದ್ದಿಮಾಂಧ್ಯರು………

ಈಗಿನ ಸಮಯದಲ್ಲಿ ಸಂಯಮದಿಂದ ಜಗಳಗಳನ್ನು ಬಿಡಿಸುವುದು ಮುಖ್ಯ. ದ್ವೇಷವನ್ನು ಕಡಿಮೆ ಮಾಡುವುದು ಮುಖ್ಯ. ಸತ್ಯ ‌ಏನೇ ಇರಲಿ ಈ ಕ್ಷಣದಲ್ಲಿ ಸಭ್ಯತೆಯೇ ಮುಖ್ಯ.
ಅದೇ ಈ ದೇಶಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ನಾವು ಸಲ್ಲಿಸಬಹುದಾದ ಬಹುದೊಡ್ಡ ಸೇವೆ‌………

ಸಮಸ್ಯೆಗಳ ವಿರುದ್ಧ ಹೋರಾಡುವುದು ಬಿಟ್ಟು ಕೋಮುಗಳ ವಿರುದ್ಧ ಹೋರಾಡಬೇಡಿ. ಧರ್ಮ ಅಫೀಮು ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಬೇಡಿ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಬರದೇ ಇರುವಂತೆ ತಡೆಯುವುದು ಮುಖ್ಯ. ಕೆಟ್ಟ ನಂತರ ಬುದ್ದಿ ಕಲಿಯುವುದಕ್ಕಿಂತ ಕೆಡದೇ ಇರುವುದು ಉತ್ತಮ ಯೋಚಿಸಿ……….

ಜನರನ್ನು ಕುರಿಗಳು ಎಂದು ಭಾವಿಸಿ ಪ್ರಧಾನಿ – ಮುಖ್ಯಮಂತ್ರಿ ಮುಂತಾದ ರಾಜಕೀಯ ನಾಯಕರು ಖಂಡಿತ ಆಡಬಾರದ ಮಾತುಗಳನ್ನು ಆಡುತ್ತಿದ್ದಾರೆ. ಅವರವರ ಅಭಿಮಾನಿಗಳಿಗೆ ಅದು ಸರಿ ಎನಿಸಬಹುದು. ಆದರೆ ಅದು ಅತ್ಯಂತ ಅಪಾಯಕಾರಿ. ತೀರಾ ಕೆಳಮಟ್ಟದ ನೀಚ ಮನಸ್ಥಿತಿ….

ಭಾರತ ಅಥವಾ ಕರ್ನಾಟಕ ಯಾವುದೋ ಪಕ್ಷ ಅಥವಾ ವ್ಯಕ್ತಿಯ ಆಸ್ತಿಯಲ್ಲ. ಅದರ ಮೇಲೆ ಇಲ್ಲಿನ ಪ್ರತಿ ಪ್ರಜೆಯ ಹಕ್ಕೂ ಇದೆ. ಅವರು ಕೇವಲ ಪ್ರತಿನಿಧಿಗಳು ಮಾತ್ರ. ವ್ಯಕ್ತಿ ಯಾವುದೇ ಕ್ಷಣ ಅಳಿಯಬಹುದು, ದೇಶ ಶಾಶ್ವತ…‌

ಒಬ್ಬರ ಒಂದು ನಿರ್ದಿಷ್ಟ ಹೇಳಿಕೆ ಕುರಿತು ಮಾತನಾಡಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿ ಒಟ್ಟಾರೆಯಾಗಿ ಎಲ್ಲವನ್ನೂ ಖಂಡಿಸುವ ವಿವೇಚನೆ ಮುಖ್ಯ. ಇಲ್ಲದಿದ್ದರೆ ಸರಿ ತಪ್ಪುಗಳ ನಡುವೆ ದೇಶ ಜನ ನರಳುತ್ತಾರೆ. ರಾಜಕಾರಣಿಗಳು ಅದರ ಲಾಭ ಪಡೆದು ನಮ್ಮನ್ನು ನಿರಂತರವಾಗಿ ಶೋಷಿಸುತ್ತಾರೆ ಎಚ್ಚರವಿರಲಿ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068…….

error: No Copying!