Spread the love

” ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮದಲ್ಲಾಗಲಿ – ದೈವದಲ್ಲಾಗಲಿ ನನಗೆ ನಂಬಿಕೆ ಇಲ್ಲ……”
ಸ್ವಾಮಿ ವಿವೇಕಾನಂದ…..

ಎಂಥಾ ಮೂರ್ಖರಯ್ಯ ನಾವು, ಒಂದು ಹೆಣ್ಣು ಗಂಡು ಮದುವೆಯಾಗುತ್ತಾರೆ, ಕಾರಣಾಂತರದಿಂದ ಸ್ವಲ್ಪ ವರ್ಷಗಳ ನಂತರ ಗಂಡು ಸಾಯುತ್ತದೆ, ಆಗ ಬದುಕಿದ ಹೆಣ್ಣನ್ನು ವಿಧವೆ ಅಂತಲೋ, ನತದೃಷ್ಟೇ ಅಂತಲೋ, ಮುಂ.. ಅಂತಲೋ ಕರೆಯುತ್ತೇವೆ…..

ಯಾವುದೇ ನಾಗರಿಕ ಸಮಾಜದ ಮನುಷ್ಯ ಪ್ರಾಣಿ, ಈ ಸಹಜ ಕ್ರಿಯೆಯನ್ನು ದರಿದ್ರ, ಅಪಶಕುನ ಎಂದು ಭಾವಿಸುವುದೇ ಆದರೆ ಆ ಜಾತಿ ಆ ಧರ್ಮ ಆ ದೇವರು ಆ ಮನಸ್ಥಿತಿ ಎಷ್ಟೊಂದು ನೀಚವಾಗಿರಬಹುದು ಎಂದು ಯೋಚಿಸಿ……

ಸಹಜವಾಗಿಯೇ ನಾವು ಆ ಪರಿಸ್ಥಿತಿಯನ್ನು ಕೆಟ್ಟದ್ದು ಎನ್ನುವುದಾದರೆ ಅದು ಪ್ರಕೃತಿಗೆ ನಾವು ಮಾಡುತ್ತಿರುವ ಬಹುದೊಡ್ಡ ಅವಮಾನವಲ್ಲವೇ….

ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಐಪಿಎಲ್ ಕ್ರಿಕೆಟ್ ಫ್ರಾಂಚೈಸಿ ಆರ್ ಸಿಬಿಯ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಆನಂತರದಲ್ಲಿ ಆ ತಂಡ ಹೆಚ್ಚು ಕಡಿಮೆ ಎಲ್ಲ ಪಂದ್ಯದಲ್ಲೂ ಸೋಲುತ್ತಿದೆ. ಇದಕ್ಕೂ ಅದಕ್ಕೂ ತಳುಕು ಹಾಕುವುದು, ಚರ್ಚಿಸುವುದು, ಪ್ರತಿಕ್ರಿಯಿಸುವುದೇ ಹಾಸ್ಯಾಸ್ಪದ ನಾಚಿಕೆಗೇಡು, ನನ್ನ ಈ ಬರಹವೂ ಸೇರಿ…..

ಏಕೆಂದರೆ ಸೋಲುತ್ತಿರುವುದು ಕೇವಲ ಆರ್ಸಿಬಿ ಮಾತ್ರವಲ್ಲ. ಐದು ಬಾರಿಯ ಚಾಂಪಿಯನ್ ನೀತಾ ಅಂಬಾನಿ ಒಡೆತನದ ಮುಂಬೈ ಸಹ ಸೋಲುತ್ತಿದೆ, ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಸೋಲುತ್ತದೆ. ಆಟದಲ್ಲಿ ಸೋಲು ಗೆಲುವು ಇದ್ದದ್ದೇ ಅದಕ್ಕೆ ಅನೇಕ ಕಾರಣಗಳು ಇರುತ್ತವೆ……

ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಿರುವುದು ಶ್ರಿಮತಿ ಅಶ್ವಿನಿ ಪುನೀತ್ ರಾಜಕುಮಾರ್ ವಿಷಯವಲ್ಲ. ಸಾರ್ವತ್ರಿಕ ಸತ್ಯ ಮತ್ತು ಪ್ರಾಕೃತಿಕ ಸತ್ಯವನ್ನು. ನಾವು ದೊಡ್ಡ ಧ್ವನಿಯಲ್ಲಿ ಇದನ್ನು ಎತ್ತಿ ಹಿಡಿಯದಿದ್ದರೆ, ವೈಚಾರಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳದಿದ್ದರೆ ಈ ರೀತಿಯ ಅನಾಗರಿಕ ವರ್ತನೆಗಳು ಎಲ್ಲಾ ಕಡೆಯೂ ನಡೆಯುತ್ತಲೇ ಇರುತ್ತದೆ….

ಇದು ಕೇವಲ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಲ್ಲ. ಈ ದೇಶದ ಶೇಕಡಾ 90% ಕ್ಕೂ ಹೆಚ್ಚು ಸಾಂಪ್ರದಾಯಿಕ ಕುಟುಂಬಗಳಲ್ಲಿ ಗಂಡ ಸತ್ತ ಹೆಣ್ಣಿನ ಬಗ್ಗೆ ಇದೇ ಅಭಿಪ್ರಾಯವಿದೆ. ಈ ದೇಶದ ರಾಷ್ಟ್ರಪತಿಗಳನ್ನು ಸಹ ಗಂಡ ಸತ್ತಿದ್ದಾರೆ ಎನ್ನುವ ಕಾರಣಕ್ಕೆ ಶುಭ ಕಾರ್ಯಗಳಿಗೆ ಕರೆಯಲೇ ಇಲ್ಲ ಎಂದು ಆರೋಪಿಸಲಾಗುತ್ತದೆ…..

ಅಶ್ವಿನಿ ಪುನೀತ್ ರಾಜಕುಮಾರ್ ಮನೆಯಲ್ಲೂ ಸಹ ಇದೇ ರೀತಿಯ ಮೌಡ್ಯಗಳು ಇರುತ್ತವೆ. ನಾವು ನಮಗೆ ನೋವಾದಾಗ ಮಾತ್ರ ಪ್ರತಿಕ್ರಿಯಿಸುವುದಷ್ಟೇ ಅಲ್ಲ ಸಹಜ ಪರಿಸ್ಥಿತಿಯಲ್ಲಿ ಎಲ್ಲ ಮೌಡ್ಯಗಳನ್ನು ಖಂಡಿಸಬೇಕು. ಇಲ್ಲದಿದ್ದರೆ ಈ ಮೌಡ್ಯಗಳ ದುಷ್ಪರಿಣಾಮ ಒಂದಲ್ಲ ಒಂದು ದಿನ ನಮ್ಮ ಮೇಲೆಯೂ ಬೀರುತ್ತದೆ. ನಾವು ಕೂಡ ಅದನ್ನು ಅನುಭವಿಸಲೇಬೇಕು….

ಕೇವಲ ವಿಧವೆ ಎನ್ನುವ, ನತದೃಷ್ಟ ಎನ್ನುವ ಮೌಡ್ಯ ಮಾತ್ರವಲ್ಲ ಅನೇಕ ರೀತಿಯ ಮೌಡ್ಯಗಳು ಈ ಸಮಾಜದಲ್ಲಿವೆ. ಸಿನಿಮಾನಟರು, ಜನಪ್ರಿಯ ವ್ಯಕ್ತಿಗಳು, ಪತ್ರಕರ್ತರು, ರಾಜಕಾರಣಿಗಳು, ಬುದ್ಧಿಜೀವಿಗಳು, ದೇಶಭಕ್ತರು, ಧಾರ್ಮಿಕ ಮುಖಂಡರು, ಹೋರಾಟಗಾರರು ಎಲ್ಲರೂ ಸಹ ಇದರ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ…..

ಮಾಧ್ಯಮಗಳು ನಕಲಿ ಜ್ಯೋತಿಷಿಗಳ ಮುಖಾಂತರ ಇಡೀ ಸಮಾಜದಲ್ಲಿ ಮೌಢ್ಯಗಳನ್ನು ಬಿತ್ತುವ ಮುಖಾಂತರ ಅನೇಕ ಧರ್ಮಾಂಧ ಹುಚ್ಚರು ಈ ರೀತಿ ಅಶ್ವಿನಿ ಪುನೀತ್ ರಾಜಕುಮಾರ್ ತರಹದವರನ್ನು ಅವಹೇಳನ ಮಾಡುತ್ತಿರುವಾಗ ಅದರ ವಿರುದ್ಧ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ, ಜೊತೆಗೆ ಹಾಗೆ ಮಾತನಾಡಲು ಪ್ರೇರೇಪಣೆ ನೀಡಿದ ಬೆಳವಣಿಗೆಯ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳಬೇಕಾಗುತ್ತದೆ……

ಕೈಗೆ ಯಾವುದೋ ಹರಳನ್ನು, ಯಾವುದೋ ಬಣ್ಣಗಳನ್ನು, ಯಾವುದೋ ಸಂಖ್ಯೆಗಳನ್ನು, ಯಾವುದೋ ದಿಕ್ಕುಗಳನ್ನು ಶ್ರೇಷ್ಠ – ಅನಿಷ್ಠ ಎಂದು ವಿಂಗಡಿಸುವಾಗ ಎಲ್ಲರೂ ಅದನ್ನು ಖಂಡಿಸಬೇಕು . ಇಲ್ಲದಿದ್ದರೆ ಈ ರೀತಿಯ ಘಟನೆಗಳು, ಹೇಳಿಕೆಗಳು ಸಹಜವಾಗುತ್ತಾ ಇರುತ್ತದೆ…..

ಯಾವುದು ಮೌಡ್ಯ, ಯಾವುದು ವಾಸ್ತವ, ಯಾವುದು ಸತ್ಯ, ಯಾವುದು ಸಹಜ ಎಂದು ತಿಳಿದುಕೊಳ್ಳಲು ದೊಡ್ಡ ಅಧ್ಯಯನದ, ಚಿಂತನೆಯ, ಶ್ರಮದ, ಜ್ಞಾನದ ಅವಶ್ಯಕತೆ ಏನೂ ಇಲ್ಲ. ಸಹಜ, ಸ್ವಾಭಾವಿಕ, ಸಾಮಾಜಿಕ ಅನುಭವದಲ್ಲಿಯೇ ಅದನ್ನು ನಿರ್ಧರಿಸಬಹುದು..

ಒಂದು ಜೀವ ಹೋಗಲು ಸಾವಿರಾರು ಕಾರಣಗಳಿರಬಹುದು. ಅದು ಗಂಡು, ಹೆಣ್ಣು, ಮಗು ಯಾರೇ ಆಗಿರಲಿ. ಅದಕ್ಕೂ ನಂಬಿಕೆಗಳಿಗೂ ಸಂಬಂಧವೇ ಇಲ್ಲ. ಅಂತಹುದರಲ್ಲಿ ಗಂಡ ಸತ್ತ ನಂತರ ಹೆಣ್ಣು ಅದೇಗೆ ಅಪಶಕುನವಾಗುತ್ತಾಳೆ…..

ಮೌಡ್ಯ ಧರ್ಮವೂ ಅಲ್ಲ, ವಿಜ್ಞಾನವು ಅಲ್ಲ, ಸಂಪ್ರದಾಯವೂ ಅಲ್ಲ ಸ್ವಾಭಾವಿಕವೂ ಅಲ್ಲ. ಅದೊಂದು ಭಯ, ಅಜ್ಞಾನ ಆತಂಕದಿಂದ ಸೃಷ್ಟಿಯಾಗಿರುವ ಕೆಟ್ಟ ಪದ್ಧತಿ ಅಥವಾ ನಂಬಿಕೆ. ಇದನ್ನು ಸಮಗ್ರವಾಗಿ ಅರ್ಥಮಾಡಿಕೊಂಡಾಗ ಈ ರೀತಿಯ ಹೇಳಿಕೆಗಳು ಬರುವುದೇ ಇಲ್ಲ……

ಅದನ್ನು ಮುಖ್ಯವಾಗಿ ಮಾಡಬೇಕಾಗಿರುವುದು ಸಾಮಾನ್ಯ ಜನರಲ್ಲ. ಸಾಮಾನ್ಯ ಜನರು ಯಾವಾಗಲೂ ಅನುಸರಿಸುವವರು. ಆದರೆ ತಿಳುವಳಿಕೆ ಇರುವ, ಸಮಾಜದ ಮುಖ್ಯ ವಾಹಿನಿಯಲ್ಲಿರುವ ಎಲ್ಲಾ ಜನರು ಮೌಡ್ಯವನ್ನು ಧಿಕ್ಕರಿಸುವ ಮಾತನ್ನು ಆಡಬೇಕಾಗುತ್ತದೆ. ಹಾಗೆಯೇ ನಡೆದುಕೊಳ್ಳಬೇಕಾಗುತ್ತದೆ…..

ಸಿನಿಮಾ ನಟರೇ ಇರಲಿ, ರಾಜಕಾರಣಿಗಳೇ ಇರಲಿ, ಪತ್ರಕರ್ತರೇ ಇರಲಿ, ಸ್ವಾಮೀಜಿಗಳೇ ಇರಲಿ, ಅಧಿಕಾರಿಗಳೇ ಇರಲಿ, ಮೌಡ್ಯವನ್ನ ಪೋಷಿಸಿ ಈಗ ಆದರಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರೆ ಅದೊಂದು ಮುಖವಾಡವಾಗುತ್ತದೆ….

ನಮ್ಮ ಇಡೀ ವ್ಯಕ್ತಿತ್ವವೇ ವೈಚಾರಿಕವಾಗಿ, ವೈಜ್ಞಾನಿಕವಾಗಿ ನಾಗರಿಕವಾಗಿ ಅರಳಬೇಕಾಗುತ್ತದೆ…..


ನಿನ್ನೆ ದಿನಾಂಕ 7.04.2024 ಭಾನುವಾರ ಆತ್ಮೀಯ ಗೆಳೆಯರು ಮತ್ತು ಪರಿಸರ ಸಂರಕ್ಷಕರು ಆದ ಶ್ರೀ ವಿನೋದ್ ಕರ್ತವ್ಯ ಅವರು ಯಲಹಂಕ ಪೊಲೀಸ್ ಠಾಣೆಯ ಬಳಿ ಗಿಡಮರಗಳು ಗೆದ್ದಲು ಹಿಡಿಯದಂತೆ ಅದರ ಬುಡಕ್ಕೆ ಬಣ್ಣ ಮಿಶ್ರಿತ ಔಷಧಿ ಸಿಂಪಡಿಸುವ ಪರಿಸರ ಸ್ನೇಹಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿದ್ದವರೊಂದಿಗೆ ಪರಿಸರದ ಮಹತ್ವ ಕುರಿತು ಕೆಲವು ಮಾತನಾಡಿದೆನು. ನಿಜಕ್ಕೂ ಇಂದಿನ ಸಂದರ್ಭದಲ್ಲಿ ಈ ರೀತಿಯ ಪರಿಸರ ಜಾಗೃತಿ ಕಾರ್ಯಕ್ರಮಗಳು ತುಂಬಾ ಅವಶ್ಯಕತೆಯೂ ಇದೆ, ಅನಿವಾರ್ಯವೂ ಆಗಿದೆ…


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ. 9844013068……

error: No Copying!