ನನ್ನ ದೇವರೆಂದರೆ ಅದರಲ್ಲಿ ಅಲ್ಲಾ ರಾಮ ಕೃಷ್ಣ ಹರಿ ಶಿವ ಜೀಸಸ್ ಮಾರಮ್ಮ ಕಾಟೇರಮ್ಮ ಎಲ್ಲರೂ ಸೇರಿಕೊಂಡಿರುತ್ತಾರೆ…..
ಹಾಗೆಯೇ ನನ್ನ ಧರ್ಮದ ಬೃಹತ್ ಗ್ರಂಥಗಳಾದ ಭಗವದ್ಗೀತೆ, ವೇದ ಉಪನಿಷತ್ತುಗಳು, ಕುರಾನ್, ಬೈಬಲ್ ಮುಂತಾದ ಎಲ್ಲಾ ಪವಿತ್ರ ಗ್ರಂಥಗಳ ಅನುಯಾಯಿಗಳಿಗೂ ಇದರ ಒಂದು ಪ್ರತಿಯನ್ನು ಲಗತ್ತಿಸಿದ್ದೇನೆ…….
ಭಾರತದಲ್ಲಿ 2024 ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ವಿಶ್ವದ ಬೃಹತ್ ಪ್ರಜಾಪ್ರಭುತ್ವ ದೇಶವಿದು. 140 ಕೋಟಿಗೂ ಹೆಚ್ಚು ಜನ ಈ ದೇಶದಲ್ಲಿ ವಾಸಿಸುತ್ತಿದ್ದಾರೆ. ಅವರೆಲ್ಲರ ಉತ್ತಮ ಜೀವನಮಟ್ಟವನ್ನು ನಿರ್ಧರಿಸುವ ಚುನಾವಣೆ. ಆ ಕಾರಣದಿಂದ ಈಗ ನನ್ನ ದೇವರು ಜವಾಬ್ದಾರಿ ತುಂಬಾ ಇದೆ……..
ಸಾಮಾನ್ಯ ಹುಲು ಮಾನವನಾಗಿ ಈ ದೇಶವನ್ನು ಸ್ವಲ್ಪ ಸುತ್ತಾಡಿ ನೋಡಿರುವುದರಿಂದ ನನ್ನ ಕೋರಿಕೆಯನ್ನು ದೇವರ ಮುಂದೆ ಇಡುತ್ತಿದ್ದೇನೆ……
1) ಈ ಚುನಾವಣೆಯಲ್ಲಿ ಜೀವಪರ ನಿಲುವಿನ, ಮಾನವೀಯತೆಯ, ಪರಿಸರ ಪ್ರೇಮಿ ಗುಣ ಇರುವ ವ್ಯಕ್ತಿಗಳು ಸ್ಪರ್ಧಿಸುವಂತಾಗಲಿ ಮತ್ತು ಸ್ಪರ್ಧಿಸಿರುವ ಆ ರೀತಿಯ ಮನೋಭಾವದ ವ್ಯಕ್ತಿಗಳಿಗೆ ದೇವರು ಗೆಲುವು ತಂದುಕೊಡಬೇಕು. ಇದು ದೇವರ ಪ್ರಮುಖ ಕರ್ತವ್ಯವಾಗಬೇಕು……
2) ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ, ಭಾಷೆಗಳ ನಡುವೆ, ಮನುಷ್ಯರ ನಡುವೆ, ದ್ವೇಷ ಅಸೂಯೆ ಹುಟ್ಟು ಹಾಕಿ ಹಿಂಸೆಯಲ್ಲಿ ತೊಡಗುವ ಯಾವ ವ್ಯಕ್ತಿಯೂ ಈ ಚುನಾವಣೆಯಲ್ಲಿ ಗೆಲ್ಲದಿರುವಂತೆ ನೋಡಿಕೊಳ್ಳಬೇಕು…….
3) ಈ ಚುನಾವಣೆಯಲ್ಲಿ ಭ್ರಷ್ಟರು, ತನ್ನದಲ್ಲದ ಇನ್ನೊಬ್ಬರ ಹಣ ಆಸ್ತಿಗೆ ಮನಸೊಲುವ ದುಷ್ಟರು ಸಹ ಗೆಲ್ಲಲೇಬಾರದು. ಆ ಜವಾಬ್ದಾರಿಯನ್ನು ದೇವರು ವಹಿಸಿಕೊಳ್ಳಬೇಕು. ಏಕೆಂದರೆ ಈ 140 ಕೋಟಿ ಜನ ಇವತ್ತು ನರಳುತ್ತಿರುವುದು ಬಹುತೇಕ ಭ್ರಷ್ಟಾಚಾರದಿಂದ ಅದನ್ನು ಮುಕ್ತಗೊಳಿಸುವ ಒಂದು ಸುವರ್ಣ ಅವಕಾಶ ದೇವರಿಗಿದೆ………
4) ದೇವರೇ, ನೀನೇ ಸೃಷ್ಟಿಸಿದ ಈ ಗಾಳಿ ನೀರು ಆಹಾರ ಎಲ್ಲವೂ ಕಲುಷಿತವಾಗಿದೆ. ರಾಜಕಾರಣಿಗಳು ತಮ್ಮ ದುರಾಸೆಯಿಂದ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ನಾಶ ಮಾಡುತ್ತಿದ್ದಾರೆ. ಎಲ್ಲರೂ ಹಣದ ಹಿಂದೆ ಬಿದ್ದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ. ನಿನ್ನ ಸೃಷ್ಟಿಯ ಮನುಜರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಆದ್ದರಿಂದ ಪರಿಸರವನ್ನು ಉಳಿಸುವ ವ್ಯಕ್ತಿಗಳಿಗೆ ಆದ್ಯತೆ ನೀಡಿ ಅವರನ್ನು ಗೆಲ್ಲಿಸಬೇಕು….
5) ಸಾಮಾನ್ಯ ಜನರಾದ ನಮಗೆ ಒಳ್ಳೆಯವರು ಯಾರು, ಕೆಟ್ಟವರು ಯಾರು, ಕೃತಕ ಮುಖವಾಡದವರು ಯಾರು, ಮೇಕಪ್ ಆಗಿರುವವರು ಯಾರು ಒಂದೂ ಅರ್ಥವಾಗುವುದಿಲ್ಲ. ಆದರೆ ಸರ್ವಶಕ್ತ, ಸರ್ವಾಂತರ್ಯಾಮಿ ಯಾದ ನಿನಗೆ ನಿಜವಾಗಲೂ ಒಳ್ಳೆಯ ವ್ಯಕ್ತಿಗಳು ಯಾರೆಂದು ತಿಳಿದಿರುತ್ತದೆ. ಆದ್ದರಿಂದ ಅಂತಹವರನ್ನು ಆಯ್ಕೆ ಮಾಡುವುದು ನಿನಗೆ ಸುಲಭ. ಮತದಾರರಿಗೆ ಆ ಆಯ್ಕೆಯನ್ನು ಕೊಟ್ಟಲ್ಲಿ ಅವರಿಗೆ ಅರ್ಥವಾಗುವುದಿಲ್ಲ. ಅವರು ಕಳ್ಳರು ಸುಳ್ಳರು ಮೋಸಗಾರರಿಗೆ ಮತ ಹಾಕುತ್ತಾರೆ. ಆದ್ದರಿಂದ ಈ ಬಾರಿ ಮಾತ್ರ ನಿರ್ಧಾರ ನಿನ್ನದೇ ಆಗಿರಲಿ……..
6) ಕಳ್ಳ ಮಾರ್ಗದಲ್ಲಿ ಯಾರು ಯಾರು, ಎಷ್ಟು ದುಡ್ಡು ಮಾಡಿ, ಎಲ್ಲೆಲ್ಲಿ ಬಚ್ಚಿಟ್ಟಿದ್ದಾರೆ ಎಂಬುದು ಐಟಿ – ಇಡಿ ಅವರಿಗಿಂತ ನಿನಗೆ ಚೆನ್ನಾಗಿ ಗೊತ್ತಿರುತ್ತದೆ. ಅಂತಹವರನ್ನು ಖಂಡಿತವಾಗಿಯೂ ಚುನಾವಣೆಯಲ್ಲಿ ಗೆಲ್ಲಿಸಬೇಡ…….
7) ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೇ ಕುಟುಂಬದ ತಾತ ಅಪ್ಪ ಮಕ್ಕಳು ಗುತ್ತಿಗೆ ಪಡೆದವರಂತೆ ಅನೇಕ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಆಡಳಿತ ಮಾಡುತ್ತಿದ್ದಾರೆ. ಇದು ತುಂಬಾ ತಪ್ಪು. ನಿನ್ನದೇ 140 ಕೋಟಿ ಜನರಲ್ಲಿ ಬೇರೆಯವರಿಗೂ ಅವಕಾಶ ಮಾಡಿಕೊಡುವುದು ನಿನ್ನ ಕರ್ತವ್ಯ. ದಯವಿಟ್ಟು ಒಳ್ಳೆಯವರಿಗೂ ಒಂದು ಅವಕಾಶ ಮಾಡಿಕೊಡು…….
8) ನಿನ್ನ ಹೆಸರು ಹೇಳಿಕೊಂಡೇ ಅಧಿಕಾರಕ್ಕೂ ಬರುತ್ತಾರೆ. ಕೊಲೆಗಳನ್ನು ಮಾಡಿಸುತ್ತಾರೆ. ನಿನ್ನದೇ ಮಂದಿರ ಮಸೀದಿ ಚರ್ಚುಗಳನ್ನು ಕಟ್ಟಿಸುತ್ತಾರೆ. ಒಟ್ಟಿನಲ್ಲಿ ನೀನೇ ಅವರ ಕೆಟ್ಟತನಗಳಿಗೆ ಕಾರಣವಾಗಿರುವೆ. ಆದ್ದರಿಂದ ನಿನ್ನ ಮೇಲಿನ ನಂಬಿಕೆಯು ಕಡಿಮೆಯಾಗುತ್ತಿದೆ. ಅವರನ್ನು ಸೋಲಿಸುವ ಜವಾಬ್ದಾರಿಯು ನಿನ್ನದೇ……
ದೇವರಿಗೆ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲವಾದರೆ ಇನ್ನು ಸಾಮಾನ್ಯ ಮನುಷ್ಯರಿಂದ ಏನನ್ನು ನಿರೀಕ್ಷಿಸುವುದು. ಸೃಷ್ಟಿಕರ್ತನೆ ತನ್ನ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬೇಕಲ್ಲವೇ……
ಈ ಭೂಮಿಯ ಮೇಲಿರುವ, ಅದರಲ್ಲೂ ಭಾರತೀಯರು ಬಹುತೇಕ ದೇವರನ್ನೇ ನಂಬಿದ್ದಾರೆ. ಆ ದೇವರು ಜನರ ನಂಬಿಕೆಯನ್ನು ಉಳಿಸಿಕೊಳ್ಳದೆ ದ್ರೋಹ ಮಾಡಿದರೆ ನಾವು ಮೊರೆ ಹೋಗಬೇಕಾಗಿರುವುದು ಯಾರಿಗೆ ಅಥವಾ ದೇವರ ಅಸ್ತಿತ್ವವನ್ನು ಅಲ್ಲಗಳೆದು ಈಗಿನ ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯಗಳನ್ನೇ ದೇವರು ಧರ್ಮ ಎಂದು ಪರಿಗಣಿಸಬೇಕಾಗುತ್ತದೆ……
ಆ ಆಶಯಗಳನ್ನು ಅನುಷ್ಠಾನಗೊಳಿಸುವುದು ಸಹ ಜನರೇ ಆಗಿರುತ್ತಾರೆ. ಆ ಜನರನ್ನು ಮತದಾರರೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಜನಪ್ರತಿನಿಧಿಗಳೇ ಭ್ರಷ್ಟರು ದುಷ್ಟರು ಆಗಿದ್ದಾರೆ. ಈಗ ಸಾಮಾನ್ಯರಾದ ನಾವು ಒಂದು ರೀತಿಯ ವಿಷ ಚಕ್ರದಲ್ಲಿ ಸಿಲುಕಿಕೊಂಡಿದ್ದೇವೆ…..
ಆದರೂ ನಿರಾಶರಾಗದೆ, ದೇವರ ಮೇಲೆ ಭಾರ ಹಾಕಿ ನುಣುಚಿಕೊಳ್ಳದೆ ಪ್ರಜ್ಞಾವಂತರಾಗಿ ಉತ್ತಮ, ಒಳ್ಳೆಯ ಗುಣನಡತೆಯವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವಂತಹ ಮತ್ತು ಅವರು ಆಯ್ಕೆಯಾಗುವಂತ ಮನೋಭಾವವನ್ನು ಇಡೀ ಮತದಾರರ ಸಮೂಹ ಪ್ರದರ್ಶಿಸಬೇಕು. ಆಗ ಮಾತ್ರ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ……
ಇಲ್ಲದಿದ್ದರೆ ಈ ದಿನನಿತ್ಯದ ಮೂಲಭೂತ ಅವಶ್ಯಕತೆಗಳಿಗಾಗಿ ಹೋರಾಟ ನಿರಂತರ. ದಯವಿಟ್ಟು ಗಂಭೀರವಾಗಿ ಸಮಗ್ರವಾಗಿ ಯೋಚಿಸಿ ಮತದಾನ ಮಾಡಿ ಮತ್ತು ಇತರರಿಗೂ ಜಾಗೃತಿ ಮೂಡಿಸಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….