- ಉಡುಪಿ: ದಿನಾಂಕ:14-03-2024(ಹಾಯ್ ಉಡುಪಿ ನ್ಯೂಸ್) ಕೊರೊನಾ ಸಮಯದಲ್ಲಿ ಸಹಾಯಕ್ಕಾಗಿ ಎಂದು ಮನೆಗೆ ಬಂದು 20 ಸಾವಿರ ಸಾಲ ನೀಡಿದ್ದ ಬ್ಯಾಂಕ್,ಇದೀಗ ಎರಡು ಲಕ್ಷ ಸಾಲ ಮರುಪಾವತಿಸುವಂತೆ ನೋಟೀಸ್ ಮಾಡಿ ವಂಚನೆ ಮಾಡಿದ್ದಾರೆ ಎಂದು ನೊಂದವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಉಡುಪಿ,ಅಂಬಾಗಿಲು ನಿವಾಸಿ ಶಾಹಿನ್ (48) ಎಂಬವರು ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಮಲ್ಪೆ ಯ ಸದಸ್ಯರಾಗಿದ್ದು ಅವರನ್ನು ಆರೋಪಿ ರಿಯಾಜ್ ಎಂಬುವವರು 2021ರಲ್ಲಿ ಆ ಬ್ಯಾಂಕ್ ನ ಮ್ಯಾನೇಜರ್ ರವರಾಗಿದ್ದ ಸುಬ್ಬಣ್ಣನವರನ್ನು ಪರಿಚಯ ಮಾಡಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ .
- ಬಳಿಕ ಜೂನ್ 2021 ರಲ್ಲಿ ಆ ಬ್ಯಾಂಕಿನ ಮ್ಯಾನೇಜರ್ ರವರಾದ ಆರೋಪಿ ದಿವಂಗತ ಸುಬ್ಬಣ್ಣ ನವರು ಶಾಹಿನ್ ಮತ್ತು ಇತರರಾದ ಅಫ್ರೀನ್ , ತಸ್ಲೀಮ್ , ರೆಹೇನಾ, ಮೈಮುನಾ, ಜೀನತ್, ನಬೀಸಾ, ರೇಷ್ಮಾ, ವಾರಿಜಾ, ಪ್ರೇಮಾ, ಮಣಿಪುರ ಮೈಮುನ್ನಾ,ಮುಫಿದಾ, ಮೊಹಮ್ಮದ್ ಆಸೀಫ್, ಮೊಮ್ತಾಜ್,ಶಂಶಾದ್, ನಸೀಮಾ, ಫೌಜಿಯಾ ಹಾಗೂ ಇತರರ ಮನೆಗಳಿಗೆ ಹೋಗಿ ತಾವು ತಮ್ಮ ಸಂಸ್ಥೆಯಿಂದ ರೂಪಾಯಿ 20,000/-ಹಣವನ್ನು ಅಗತ್ಯದ ಸಲುವಾಗಿ ನೀಡುತ್ತೇವೆ ನೀವು ಬ್ಯಾಂಕಿಗೆ ಬರುವುದು ಬೇಡ ಎಲ್ಲಾ ಇಲ್ಲಿಯೇ ನೀಡುತ್ತೇವೆ ನೀವು ತಿಂಗಳಿಗೆ ರೂಪಾಯಿ 900/- ನ್ನು ಬ್ಯಾಂಕಿಗೆ ಪಾವತಿಸಿ ಎಂದು ತಿಳಿಸಿ ಎಲ್ಲರನ್ನು ನಂಬಿಸಿ ಅವರಿಂದ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪಡೆದು ತಮ್ಮ ಯಾವುದೇ ದಾಖಲೆಗೆ ಸಹಿ ಪಡೆಯದೇ ಕೊರೊನಾ ಸಮಯದಲ್ಲಿ ರೂಪಾಯಿ 20,000/- ಹಣವನ್ನು ಶಾಹಿನ್ ಮತ್ತು ಇತರರಿಗೆ ಅವರ ಮನೆಯಲ್ಲಿ ನೀಡಿದ್ದರು ಎನ್ನಲಾಗಿದೆ.
- ಶಾಹಿನ್ ಮತ್ತು ಇತರರು ತಿಂಗಳಿಗೆ ಸರಿಯಾಗಿ ಹಣವನ್ನು ಪಾವತಿಸಿ ಆ ಬಗ್ಗೆ ತಾವು ಪಡೆದ ಸಾಲವನ್ನು ಸಂಪೂರ್ಣ ಮರುಪಾವತಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ವಿಷಯ ಹೀಗಿರುವಾಗ ಶಾಹಿನ್ ಹಾಗೂ ಇತರರಿಗೆ ಮಹಾಲಕ್ಷ್ಮೀ ಬ್ಯಾಂಕಿನಿಂದ ನೋಟಿಸ್ ಬಂದಿದ್ದು ಅದರಲ್ಲಿ ತಮ್ಮ ಬ್ಯಾಂಕಿನ ಷೇರು ಪತ್ರ ಇರುವುದಾಗಿ ತಿಳಿಸಿದ್ದು , ಅದರಂತೆ ಶಾಹಿನ್ ಹಾಗೂ ಇತರರು ಮಲ್ಪೆಯಲ್ಲಿರುವ ಮಹಾಲಕ್ಷ್ಮೀ ಬ್ಯಾಂಕಿಗೆ ಹೋದಾಗ ಅಲ್ಲಿ ಅವರುಗಳು ರೂಪಾಯಿ 2,00,000/- ಸಾಲವನ್ನು ಪಡೆದಿದ್ದು ಅದನ್ನು ಕೂಡಲೇ ಕಟ್ಟುವಂತೆ ತಿಳಿಸಿದಾಗ ಶಾಹಿನ್ ಹಾಗೂ ಇತರರು ತಾವು ಯಾವತ್ತು ಕೂಡ ರೂಪಾಯಿ 2,00,000/- ಸಾಲವನ್ನು ಪಡೆದಿರುವುದಿಲ್ಲ ಹಾಗೂ ತಾವು ಯಾವುದೇ ಸಾಲ ಪತ್ರಗಳಿಗೆ ಸಹಿ ಮಾಡಿರುವುದಿಲ್ಲ ಎಂದು ಹೇಳಿದಾಗ ಆರೋಪಿ ಸುಬ್ಬಣ್ಣ ಹಾಗೂ ಬ್ಯಾಂಕಿನ ಇತರರು ಅದನ್ನು ಸರಿಮಾಡಿಕೊಡುವುದಾಗಿ ಹೇಳಿದ್ದವರು ಇಲ್ಲಿಯ ತನಕ ವ್ಯವಹಾರವನ್ನು ಸರಿಮಾಡಿಕೊಡದೇ ಬ್ಯಾಂಕಿನ ಮ್ಯಾನೇಜರ್ ಹಾಗೂ ಇತರರು ಸೇರಿ ಶಾಹಿನ್ ಹಾಗೂ ಇತರರು ಬ್ಯಾಂಕ್ ನವರಿಗೆ ನೀಡಿದ್ದ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ ನ್ನು ಬಳಸಿಕೊಂಡು ಅವರ ನಕಲು ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಅವರುಗಳ ಹೆಸರಿನಲ್ಲಿ ರೂಪಾಯಿ 2,00,000/- ಸಾಲವನ್ನು ಪಡೆದು ತಮ್ಮ ಸ್ವಂತ ಬಳಕೆಗೆ ಉಪಯೋಗಿಸಿ ಶಾಹಿನ್ ಹಾಗೂ ಇತರರಿಗೆ ಮೋಸ ಮಾಡಿ ನಂಬಿಕೆ ದ್ರೋಹ ಎಸಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 406,120(b),409, 417, 420, 465, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.