ಅಕ್ರಮ ಸಕ್ರಮವೇ,
ಸುಪ್ರೀಂ ಕೋರ್ಟ್ ಬೀಸಿದ ಚಾಟಿಯೇಟಿಗೆ
ತಬ್ಬಿಬ್ಬಾದ ಸರ್ಕಾರ ಮತ್ತು ರಾಜಕೀಯ ಪಕ್ಷಗಳು, ಆತ್ಮ ವಂಚನೆಗೆ ಸಿಲುಕಿ ಬೆತ್ತಲಾದ ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ……
ಭಾರತದ ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರದ ಮೂಲವೇ ಚುನಾವಣೆ ಎಂಬುದಾಗಿ ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಾರೆ. ರಾಜಕೀಯ ಪಕ್ಷಗಳು ಭ್ರಷ್ಟಾಚಾರದ ಬೀಜವನ್ನು ಬಿತ್ತುವುದೇ ಚುನಾವಣಾ ಸಂದರ್ಭದ ಅಕ್ರಮಗಳಲ್ಲಿ, ಮುಖ್ಯವಾಗಿ ಹಣ ಹೆಂಡ ಹಂಚಿಕೆಯ ಮೂಲಕ ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ ಹಾಗೂ ಯಶಸ್ವಿಯಾಗಿದೆ….
ನಾವು ಗಮನಿಸಿದಂತೆ ಇವತ್ತಿಗೂ ಕೂಡ ಯಾವುದೇ ಧಂದೆಯಲ್ಲಾದರೂ ಸಾಕಷ್ಟು ಹಣ ಮಾಡಿದ ವ್ಯಕ್ತಿ ಚುನಾವಣೆಯ ಸಮಮದಲ್ಲಿ ಯಥೇಚ್ಛ ಹಣವನ್ನು ಮತದಾರರಿಗೆ ಚೆಲ್ಲಿ ಜನಪ್ರತಿನಿಧಿಯಾಗಿ ಬಹುಮತದಿಂದ ಆಯ್ಕೆಯಾಗುತ್ತಾನೆ. ಅದಕ್ಕೆ ಮೊದಲು ರಾಜಕೀಯ ಪಕ್ಷಗಳಿಗೆ ಕ್ಷೇತ್ರದ ಟಿಕೆಟಿಗಾಗಿ ಸಹ ಕೋಟ್ಯಂತರ ಹಣವನ್ನು ನೀಡಿರುತ್ತಾನೆ. ಈ ರೀತಿ ಬೆಳೆದು ಬಂದ ಚುನಾವಣಾ ವ್ಯವಸ್ಥೆಯನ್ನು ಕಾಲಕಾಲಕ್ಕೆ ತಕ್ಕಂತೆ ಅನೇಕ ಕಾನೂನು ತಿದ್ದುಪಡಿಗಳ ಮೂಲಕ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ…..
ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ ದೇಣಿಗೆಯನ್ನು ಪಡೆಯುತ್ತಿರುತ್ತವೆ. ಅದು ಮೇಲ್ನೋಟಕ್ಕೆ ದೇಣಿಗೆ ಎನಿಸಿದರು ಸಹ ಅನೇಕ ಸ್ವಹಿತಾಶಕ್ತಿಯ ಲಾಭಕೋರರು ರಾಜಕೀಯ ಪಕ್ಷಗಳನ್ನು ಬೆಂಬಲಿಸಲು ಹಣವನ್ನು ನೀಡುತ್ತಾರೆ. ಉದ್ಯಮಿಗಳು, ವ್ಯಾಪಾರಿಗಳು, ಬ್ರೋಕರ್ಗಳು ಹೀಗೆ ಮುಂದೆ ಆ ಪಕ್ಷ ಚುನಾವಣೆಯಲ್ಲಿ ಜಯಗಳಿಸಿ ಆಡಳಿತ ರಚಿಸುವುದಾದರೆ ತಮಗೆ ಅನೇಕ ರೀತಿಯ ಅನುಕೂಲಗಳು ಸಿಗುತ್ತವೆ ಎಂಬ ನಿರೀಕ್ಷೆಯೊಂದಿಗೆ ಹಣ ಸಹಾಯ ಮಾಡಿರುತ್ತಾರೆ ಇದು ಎಲ್ಲರಿಗೂ ಬಹಿರಂಗವಾಗಿಯೇ ತಿಳಿದಿರುವ ಸತ್ಯ.
ಆದರೆ ಒಂದು ವಿಚಿತ್ರ ಪರಿಸ್ಥಿತಿಯಲ್ಲಿ ಕೆಲವು ವರ್ಷಗಳ ಹಿಂದೆ ಈಗಿನ ಕೇಂದ್ರ ಸರ್ಕಾರ ರಾಜಕೀಯ ಪಕ್ಷಗಳಿಗೆ ಹಣ ಸಹಾಯ ಮಾಡುವವರು ಎಸ್ ಬಿಐ ಬ್ಯಾಂಕ್ ಮೂಲಕ ಚುನಾವಣಾ ಬಾಂಡ್ ಖರೀದಿಸಿ ಅದನ್ನು ಪಕ್ಷಗಳಿಗೆ ನೀಡಬಹುದು. ಆ ವಿಷಯವನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂಬ ಹೊಸ ನಿಯಮವನ್ನು ರೂಪಿಸಿದರು. ಇದು ಚುನಾವಣೆಗೆ ಅಕ್ರಮ ಹಣ ಸಂಗ್ರಹಿಸಲು ಮಾಡಿದ ತಿದ್ದುಪಡಿ ಎಂದು ಸಾರ್ವಜನಿಕರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲ ವಾದ ವಿವಾದ ಗಳ ನಂತರ ಸುಪ್ರೀಂಕೋರ್ಟ್ ಈ ಚುನಾವಣಾ ಬಾಂಡ್ ಗೌಪ್ಯತೆ ಒಳ್ಳೆಯದಲ್ಲ ಇದನ್ನು ಪಾರದರ್ಶಕಗೊಳಿಸಬೇಕಾಗಿದೆ. ಆದ್ದರಿಂದ ಯಾವ ಯಾವ ರಾಜಕೀಯ ಪಕ್ಷಗಳಿಗೆ ಎಷ್ಟು ಹಣ ತಡೆಗೆ ಬಂದಿದೆ, ಅದನ್ನು ಯಾರು ನೀಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿ ಎಂದು ಈ ಬಾಂಡುಗಳು ಚಲಾವಣೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ನಿರ್ದೇಶನ ನೀಡಿದೆ…..
ವಾಸ್ತವವಾಗಿ ಇದರಲ್ಲಿ ಅಂತಹ ವಿಶೇಷವೇನು ಇಲ್ಲ. ಅದರಲ್ಲೂ ರಾಜಕೀಯ ಪಕ್ಷಗಳ ಜೊತೆ ಅಕೌಂಟ್ ಹೊರತುಪಡಿಸಿ ಯಾವುದೇ ನೇರ ಸಂಬಂಧವಿಲ್ಲದ ಎಸ್‌ಬಿಐ ಈ ಕ್ಷಣದಲ್ಲಿಯೇ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಾಹಿತಿಯನ್ನು ಬಹಿರಂಗಪಡಿಸಬೇಕಾಗಿತ್ತು. ಆದರೆ ಎಸ್ ಬಿ ಐ ವಕೀಲರನ್ನು ನೇಮಿಸಿಕೊಂಡು ಅನಾವಶ್ಯಕವಾಗಿ ಮಾಹಿತಿಯ ಗೌಪ್ಯತೆಯನ್ನು ಕಾಪಾಡಲು ಸಾಕಷ್ಟು ಪ್ರಯತ್ನ ಪಡುತ್ತಿದೆ ಮತ್ತು ಇನ್ನೂ ಸಮಯ ಬೇಕು ಎಂದು ನಾಟಕ ಮಾಡುತ್ತಿದೆ ಅದಕ್ಕೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ…..
ಏಕೆಂದರೆ ಅತಿ ಹೆಚ್ಚು ಹಣ ಸಂಗ್ರಹಿಸಿರುವ ಅದು ಭ್ರಷ್ಟರು ತಮಗೆ ಹಣ ನೀಡಿರುವ ವಿಷಯ ಬಹಿರಂಗವಾಗಬಹುದೇನೋ, ಸಾರ್ವಜನಿಕರಿಗೆ ನಮ್ಮ ಬಗ್ಗೆ ಇರುವ ಭ್ರಷ್ಟಾಚಾರ ವಿರೋಧಿಗಳು ಎಂಬ ಅಭಿಪ್ರಾಯಕ್ಕೆ ವಿರುದ್ಧವಾದ ಮಾಹಿತಿ ಬಹಿರಂಗಗೊಳ್ಳಬಹುದೇನೋ ಎಂಬ ಆತಂಕವೋ, ಒಟ್ಟಿನಲ್ಲಿ ಮಾಹಿತಿ ನೀಡುವುದನ್ನು ತಡಮಾಡುತ್ತಿದೆ. ಇದೀಗ ಸುಪ್ರೀಂಕೋರ್ಟ್ 15ನೇ ತಾರೀಖು ಗಡುವು ನೀಡಿ ಎಚ್ಚರಿಕೆ ಕೊಟ್ಟು ಬ್ಯಾಂಕಿಗೆ ಛೀಮಾರಿ ಹಾಕಿದೆ…..
ಈ ದೇಶದಲ್ಲಿ ರಾಜಕೀಯ ಪಕ್ಷಗಳ ಭ್ರಷ್ಟಾಚಾರ ಹೊಸದೇನು ಅಲ್ಲ ಅದಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಆದರೆ ಬ್ಯಾಂಕ್ ಒಂದು ಇಷ್ಟೊಂದು ಬಹಿರಂಗವಾಗಿ ಸುಪ್ರೀಂಕೋರ್ಟ್ ನಿರ್ದೇಶನದ ನಂತರವೂ ತನ್ನ ಕೈ ಬೆರಳಿನ ಅಂತರದಲ್ಲಿಯೇ ಇರುವ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಲಭ್ಯವಿರುವ ಕಂಪ್ಯೂಟರ್ ಒಳಗಿನ ಮಾಹಿತಿಯನ್ನು ಹಂಚಿಕೊಳ್ಳಲು ಹೆದರುತ್ತಿರುವುದು, ಯಾವುದೋ ಬಾಹ್ಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಸಾಮಾನ್ಯ ಜನ ಇರುವ ನಂಬಿಕೆ ದ್ರೋಹವಾಗುತ್ತದೆ……
ಎಲ್ಲದರಲ್ಲೂ ಪಾರದರ್ಶಕವನ್ನು ಬಯಸುವ ಸರ್ಕಾರಗಳು ತಮಗೆ ಯಾರು, ಯಾವ ಸಮಯದಲ್ಲಿ, ಎಷ್ಟು ಹಣವನ್ನು ನೀಡಿದ್ದಾರೆ ಎಂಬುದು ಬಹಿರಂಗವಾದರೆ ಸಮಸ್ಯೆ ಏನು. ಅದಕ್ಕೆ ಹೆದರುವುದು ಏಕೆ, ಚುನಾವಣೆಗಾಗಿ ಪಕ್ಷಗಳಿಗೆ ಹಣ ಕೊಡುವುದು ತಪ್ಪೇನು ಅಲ್ಲ. ಆದರೆ ತದನಂತರ ಹಣಕೊಟ್ಟವರ ಪರವಾಗಿ ಸರ್ಕಾರಗಳು ಏನಾದರೂ ಅನಧಿಕೃತವಾಗಿ ಸಹಾಯ ಮಾಡಿದೆಯೇ, ಅಕ್ರಮ ಏನಾದರು ಎಸಗಿದೆಯೇ ಅಥವಾ ಹಣ ಕೊಟ್ಟವರು ಈ ವ್ಯವಸ್ಥೆಯ ಭ್ರಷ್ಟಾಚಾರದಲ್ಲಿ ಭಾಗಿಗಳೇ ಎಂಬುದು ನಿಜವಾಗಿದೆಯೇ ಈ ಮಾಹಿತಿಯಾದರು ಬಹಿರಂಗವಾಗಲಿ, ಜೊತೆಗೆ ಕೆಲವು ದೇಶ ವಿರೋಧಿಗಳು, ವಿದೇಶಿ ಶಕ್ತಿಗಳು ಈ ರಾಜಕೀಯ ಪಕ್ಷಗಳಿಗೆ ಹಣ ನೀಡಿವೆಯೇ ಎಂಬುದು ಸಹ ಬಹಿರಂಗವಾಗಲಿ….
ತುಂಬಾ ಆಶ್ಚರ್ಯವಾಗುವುದು ಬ್ಯಾಂಕೊಂದು ಈ ರೀತಿಯ ವಂಚನೆ ಜಾಲದೊಳಗೆ ಸಿಲುಕಿದೆ ಎಂಬ ಅನುಮಾನಕ್ಕೆ ಆಸ್ಪದ ನೀಡುವುದೇ ಅಪಾಯಕಾರಿ ಪರಿಸ್ಥಿತಿಯನ್ನು ನಿರ್ಮಿಸಿದಂತಾಗಿದೆ. ಅದಕ್ಕಾಗಿಯೇ ಹೇಳುವುದು ಯಾವುದೇ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಧರ್ಮದ, ಅಭಿವೃದ್ಧಿಯ, ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಬೆಂಬಲಿಸಬಾರದು. ಅದನ್ನು ವಾಸ್ತವ ಪ್ರಜ್ಞೆಯಲ್ಲಿ, ಸೂಕ್ಷ್ಮದೃಷ್ಟಿಯಿಂದ ಗಮನಿಸಿ, ಅದರ ಪ್ರಾಮಾಣಿಕತೆಯನ್ನು, ದಕ್ಷತೆಯನ್ನು ಸಮಗ್ರ ಚಿಂತನೆಯ ಮೂಲಕ ಪರಿಶೀಲಿಸಿ ಬೆಂಬಲಿಸಬೇಕಾಗುತ್ತದೆ. ನಮಗೆ ಅನುಕೂಲವಾಗುತ್ತದೆ ಎಂಬ ಒಂದೇ ಕಾರಣದಿಂದ ಎಲ್ಲ ವಿಷಯವನ್ನು ಬೆಂಬಲಿಸಬಾರದು…..
ಸಾಮಾನ್ಯ ವಿಷಯವೊಂದು ಭ್ರಷ್ಟಾಚಾರದ ವಾಸನೆಯ ಕಾರಣದಿಂದ ಅತ್ಯಂತ ಕುತೂಹಲಕಾರಿ ಸುದ್ದಿಯಾಗಿ ಮಾರ್ಪಟ್ಟು ಜನರ ಗಮನ ಸೆಳೆಯುವ ಇಂದಿನ ಆಧುನಿಕ ಸಮೂಹ ಮಾಧ್ಯಮಗಳ ಕ್ರಾಂತಿ ನಿಜಕ್ಕೂ ಅದ್ಬುತ ಆಶ್ಚರ್ಯ ಶ್ಲಾಘನೀಯ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ. 9844013068…….