Spread the love

ಅಬ್ಬಬ್ಬಾ……

ಈ ದೊಡ್ಡ ಮನುಷ್ಯರಿಗೆ ಎಷ್ಟೊಂದು ಅಧಿಕಾರದ ದಾಹ……

ಒಮ್ಮೆ ಗೆದ್ದರೆ ಇನ್ನೊಮ್ಮೆ, ಇನ್ನೊಮ್ಮೆ ಗೆದ್ದರೆ ಮತ್ತೊಮ್ಮೆ, ಮತ್ತೊಮ್ಮೆ ಗೆದ್ದರೆ ಮಗದೊಮ್ಮೆ, ಮಗದೊಮ್ಮೆ ಗೆದ್ದರೆ ಸಾಯುವವರೆಗೂ…..

ಒಟ್ಟಿನಲ್ಲಿ ಅಧಿಕಾರದಲ್ಲಿ ಇರಲೇಬೇಕು. ಅಧಿಕಾರ ಇಲ್ಲದಿದ್ದರೆ ಬದುಕುವುದೇ ಕಷ್ಟ……

ರಾಜಕೀಯವೆಂಬುದು ಈ ಹಂತಕ್ಕೆ ಬಂದಿದೆಯೇ. ಕನಿಷ್ಠ ಒಬ್ಬರಾದರೂ ಒಂದೇ ಬಾರಿ ಚುನಾವಣೆಯಲ್ಲಿ ಗೆದ್ದು ಇನ್ನು ನನಗೆ ಸಾಕು ಎಂದು ಯಾವುದೇ ಒತ್ತಡವಿಲ್ಲದೆ ಆತ್ಮ ಸಾಕ್ಷಿಗೆ ಅನುಗುಣವಾಗಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿರುವ ಉದಾಹರಣೆ ಇದೆಯೇ…..

ಎಲ್ಲೋ ಅಪರೂಪದಲ್ಲಿ ಅಪರೂಪಕ್ಕೆ ಒಂದೋ ಎರಡೋ ಉದಾಹರಣೆ ಇರಬಹುದೇನೋ. ಆದರೆ ಸಾಮಾನ್ಯವಾಗಿ ಅದು ಕಾಣುವುದೇ ಇಲ್ಲ. ಯಾವುದೋ ಒತ್ತಡದ ಕಾರಣಕ್ಕಾಗಿ ರಾಜಕೀಯ ನಿವೃತ್ತಿಯೋ ಅಥವಾ ಬೇರೆಯವರಿಗೆ ಸಿಕ್ಕಾಗ ಅನಿವಾರ್ಯವಾಗಿ ತ್ಯಾಗ ಎಂಬ ಮುಖವಾಡ ಪ್ರದರ್ಶಿಸುವುದೇ ಹೆಚ್ಚಾಗಿದೆ…….

ಸಾಮಾನ್ಯ ಜನರಿಗೆ ಪ್ರೀತಿಯ, ತ್ಯಾಗದ, ಕರುಣೆಯ, ಶ್ರಮದ, ಕ್ಷಮೆಯ, ನಿರ್ಮೋಹದ, ನಿಸ್ವಾರ್ಥದ, ಸನ್ಯಾಸದ ಅನೇಕ ಗುಣಗಳನ್ನು ದೊಡ್ಡ ದೊಡ್ಡ ನಾಯಕರು, ಧಾರ್ಮಿಕ ಮುಖಂಡರು, ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಜಗದ್ಗುರುಗಳು ಎಲ್ಲರೂ ಹೇಳುತ್ತಲೇ ಇರುತ್ತಾರೆ……

ಅಧಿಕಾರ ಶಾಶ್ವತವಲ್ಲ, ಹಣ ಶಾಶ್ವತವಲ್ಲ, ಬದುಕೇ ಶಾಶ್ವತವಲ್ಲ. ಅಂತಹುದರಲ್ಲಿ ನಮಗೆ ಏನು ಸಿಕ್ಕಿದೆಯೋ ಅದನ್ನೇ ಸುಖ ಪಡುತ್ತಾ ಇನ್ನೊಬ್ಬರಿಗೆ ಮೋಸ ಮಾಡದೆ, ದುರಾಸೆ ಪಡದೆ, ಜೀವನ ಮಾಡಬೇಕು ಎಂದು…..

ಸಾಮಾನ್ಯ ಜನ ಅದನ್ನು ನಂಬಿ ರಾಮನ ಆದರ್ಶ, ಕೃಷ್ಣನ ಆದರ್ಶ, ಮಾನವೀಯತೆ, ಬಸವಣ್ಣನ, ಗಾಂಧಿ, ಅಂಬೇಡ್ಕರ್, ಬುದ್ಧ ವಿವೇಕಾನಂದ, ಜೀಸಸ್, ಪೈಗಂಬರ್, ಗುರುನಾನಕ್, ಮಹಾವೀರರ ಆದೇಶವೋ ಒಟ್ಟಿನಲ್ಲಿ ಯಾವುದೋ ಒಂದು ಆದರ್ಶದ ಹಿಂದೆ ಬಿದ್ದು ಬದುಕಲು ಪ್ರಯತ್ನಿಸುತ್ತಾರೆ…..

ಗೀತೆ ಕುರಾನ್ ಬೈಬಲ್ ಹೀಗೆ ನಾನಾ ಗ್ರಂಥಗಳನ್ನು ಓದಿಸುತ್ತಾ ಆದರ್ಶಗಳನ್ನು ತುಂಬಲಾಗಿರುತ್ತದೆ……

ಆದರೆ ಈ ರಾಜಕೀಯ ನಾಯಕರು ಮಾತ್ರ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲದಂತೆ ಅಧಿಕಾರದ ವ್ಯಾಮೋಹದಲ್ಲಿ ಬಂಧಿಗಳಾಗಿ ಅದನ್ನೇ ಉಸಿರಾಡುತ್ತಾ ಹೆಚ್ಚು ಕಡಿಮೆ ಸುಖವಾಗಿ ಇರುತ್ತಾರೆ ಅಥವಾ ಅದರಲ್ಲೇ ಒದ್ದಾಡುತ್ತಿರುತ್ತಾರೆ…..

ಆದರೆ ಅಧಿಕಾರವನ್ನು ತ್ಯಾಗ ಮಾಡುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಎಷ್ಟು ಉದಾಹರಣೆ ಬೇಕು. ಒಬ್ಬ ಸಾಮಾನ್ಯ ಪತ್ರಕರ್ತ 10 ವರ್ಷಗಳ ಕಾಲ ಸಂಸದರಾಗಿದ್ದು, ಒಂದು ಪಕ್ಷಕ್ಕೆ ನಿಷ್ಠರಾಗಿದ್ದು, ತನ್ನ ಯೋಗ್ಯತೆಗಿಂತ ಎಷ್ಟೋ ಉತ್ತಮ ಅಧಿಕಾರ ಅನುಭವಿಸಿ ಈಗ ಸೀಟು ಸಿಗುತ್ತಿಲ್ಲ ಎಂಬ ಒಂದೇ ಕಾರಣದಿಂದ ಅಂತರ್ಯದ ಅಸಮಾಧಾನವನ್ನು ಹೊರ ಹಾಕುವುದು, ಅಳುವುದು‌. ಇನ್ನೊಬ್ಬರು ಪಕ್ಷವನ್ನು ತಾಯಿಯೆನ್ನುತ್ತಿದ್ದವರು ಈಗ ಪಕ್ಷೇತರಾಗಿ ನಿಲ್ಲುತ್ತೇನೆ ಎನ್ನುವುದು, ಏಳು ಎಂಟು ಬಾರಿ ಸಂಸತ್ ಸದಸ್ಯರಾದವರು ಮತ್ತೆ ಅದೇ ಪಕ್ಷದಿಂದ ಅದೇ ಸ್ಥಾನಕ್ಕೆ ಸ್ಪರ್ಧಿಸಲು ಹಠ ಮಾಡುವುದು, ತಮ್ಮ ಗಂಡ ಹೆಂಡತಿ ಮಕ್ಕಳಿಗೆ ಸೀಟಿಗಾಗಿ ಒದ್ದಾಡುವುದು, ಎಷ್ಟೊಂದು ದುಷ್ಟತನದ ಪರಮಾವಧಿ ಅಲ್ಲವೇ…….

ಆದರೂ, ತಮ್ಮ ಜೊತೆಯ ಸಾಮಾನ್ಯ ಕಾರ್ಯಕರ್ತರನ್ನು ಈಗಲೂ ನಂಬಿಸುತ್ತಾ, ವಂಚಿಸುತ್ತಾ, ಇವರೇ ಅಧಿಕಾರ ಅನುಭವಿಸುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದುವರಿಯುತ್ತಿದ್ದಾರೆ….

ಸಾಮಾನ್ಯ ಜನ ಶಾಲಾ ಫೀಜಿಗಾಗಿ, ಆಸ್ಪತ್ರೆಯ ಖರ್ಚಿಗಾಗಿ, ಮನೆ ಬಾಡಿಗೆಗಾಗಿ, ಪೆಟ್ರೋಲ್ ಖರ್ಚಿಗಾಗಿ, ಮದುವೆಗಾಗಿ ಹೀಗೆ ನಾನಾ ತರದ ಸಮಸ್ಯೆಗಳಲ್ಲಿ ಮುಳುಗೇಳುತ್ತಾ ಇಡೀ ಬದುಕನ್ನು ಸವೆಸುತ್ತಾರೆ…….

ಜೀವನದಲ್ಲಿ ಒಂದು ಬಾರಿಯೂ ಐಷಾರಾಮಿ ಹೋಟೆಲ್ಗೆ ಹೋಗಿರುವುದಿಲ್ಲ, ವಿಧಾನಸೌಧದ ಒಳಗೆ ಪ್ರವೇಶಿಸಿರುವುದಿಲ್ಲ, ಸಂಸತ್ತಿನ ಒಳಗೂ ಹೋಗಿರುವುದಿಲ್ಲ, ವಿಮಾನ ಪ್ರಯಾಣ ಮಾಡಿರುವುದಿಲ್ಲ, ವಿದೇಶ ಯಾತ್ರೆ ಮಾಡಿರುವುದಿಲ್ಲ, ದೊಡ್ಡ ಕಾರುಗಳಲ್ಲಿ ಓಡಾಡಿರುವುದಿಲ್ಲ. ಆದರೂ ಚುನಾವಣೆ ಒಂದು ಪ್ರಜಾಪ್ರಭುತ್ವದ ಹಬ್ಬ ಇದರಲ್ಲಿ ನಾವು ಭಾಗವಹಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ ಅದರಿಂದಾಗಿ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಎಂಬ ನಿರೀಕ್ಷೆಯಿಂದ ನಿರಂತರವಾಗಿ ಮತ ಚಲಾಯಿಸುತ್ತಾರೆ……

ಒಂದಷ್ಟು ಬದಲಾವಣೆಗಳೇನು ಆಗಿದೆ. ಅದು ವಸ್ತುರೂಪದ, ತಂತ್ರಜ್ಞಾನ ರೂಪದ, ಸಂಪರ್ಕ ರೂಪದ ಬದಲಾವಣೆಗಳೇ ಹೊರತು ನೆಮ್ಮದಿ, ಆರೋಗ್ಯ, ಸುಖದ ಬದಲಾವಣೆಗಳು ಅಷ್ಟೇನೂ ತೃಪ್ತಿಕರವಾಗಿಲ್ಲ. ಅದನ್ನು ಮನೆ ಮಾಚಲು ನೋಡುವ ದೃಷ್ಟಿಯಲ್ಲಿ ನಿಮ್ಮ ಸುಖ ಸಂತೋಷ ಅಡಗಿದೆ, ಎಲ್ಲವನ್ನು ಒಳ್ಳೆಯ ದೃಷ್ಟಿಯಲ್ಲಿ ನೋಡಿದರೆ ಜಗತ್ತು ಒಳ್ಳೆಯದಾಗುತ್ತದೆ ಎನ್ನುವ ಭ್ರಮಾಲೋಕವನ್ನು ಸಾಮಾನ್ಯ ಜನರಿಗೆ ಸೃಷ್ಟಿಸಿ ಇವರು ಮಾತ್ರ ಈ ಜನರನ್ನ ನಿರಂತರವಾಗಿ ಶೋಷಿಸುತ್ತಾ ಅಧಿಕಾರ ದಾಹದಲ್ಲಿಯೇ ಮುಳುಗುತ್ತಾರೆ……

ಗಮನಿಸಿ ನೋಡಿ, ಊಟ ತಿಂಡಿ ದಿನನಿತ್ಯದ ಮೂಲಭೂತ ಅವಶ್ಯಕತೆಗಳಿಗೇ ಈ ಜನಸಂಖ್ಯೆಯ ಮುಕ್ಕಾಲು ಪಾಲು ಜನ ಜೀವನವಿಡಿ ಸಂಘರ್ಷ ಮಾಡುತ್ತಿರುವಾಗ ರಾಜ್ಯದ ಅಥವಾ ದೇಶದ ಕೆಲವೇ ಕೆಲವರಿಗೆ ಸಿಗಬಹುದಾದ ಶಾಸಕ ಸಂಸದ ಮಂತ್ರಿ ಮುಂತಾದ ಸ್ಥಾನಗಳನ್ನು ಒಮ್ಮೆಯೋ ಎರಡನೇ ಬಾರಿಯೋ ಪಡೆದ ನಂತರವೂ ಒಂದು ವೇಳೆ ಅದು ಸಿಗದಿದ್ದರೆ ಜೀವನವೇ ಮುಗಿದು ಹೋಯಿತು ಎನ್ನುವಷ್ಟು ತೀವ್ರವಾಗಿ ಅಸಮಾಧಾನ ಆಕ್ರೋಶ ದುಃಖ ಹೊರಹಾಕುತ್ತಾರೆ……

ಆದರೆ ಇವರಿಗೆ ಹೋಲಿಕೆ ಮಾಡಿದಾಗ ಸಾಮಾನ್ಯ ಜನ ಈ ವ್ಯವಸ್ಥೆಯ ಬಗ್ಗೆ ಎಷ್ಟು ಆಕ್ರೋಶ ವ್ಯಕ್ತಪಡಿಸಬೇಕು.

ಯಾವುದೇ ವ್ಯಕ್ತಿ ಇರಲಿ, ಯಾವುದೇ ಕ್ಷೇತ್ರವಿರಲಿ ಎಲ್ಲರಿಗೂ ಎಲ್ಲಾ ಅವಕಾಶಗಳು ದೊರೆಯುವುದಿಲ್ಲ. ಕೆಲವರಿಗೆ ಅದೃಷ್ಟವೋ, ಶ್ರಮವೋ ವ್ಯವಸ್ಥೆಯ ಕೆಲವು ಅನುಕೂಲಕರ ಪರಿಸ್ಥಿತಿಯೋ ಒಟ್ಟಿನಲ್ಲಿ ಒಂದಷ್ಟು ಅವಕಾಶ ದೊರೆಯುತ್ತದೆ. ಅದು ನಿರಂತರವಾಗಿರದೆ ಏರಿಳಿತಗಳನ್ನು ಕಾಣುತ್ತದೆ. ಒಬ್ಬ ಶಾಸಕ ಎರಡನೆಯ ಬಾರಿ ಅವಕಾಶ ಸಿಗದಿದ್ದರೆ ಮತ್ತೇನನ್ನಾದರೂ ಪ್ರಯತ್ನಿಸಬಹುದು.

ಒಂದು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರಾಗಿದ್ದು ಎಷ್ಟೋ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರವೂ ಈಗ ವಿಶ್ರಾಂತ ಜೀವನ ಮಾಡಿ ಅಥವಾ ಇರುವ ಸಮಯದಲ್ಲಿ ಅದೇ ಕ್ಷೇತ್ರದಲ್ಲಿ ಸಾಮಾಜಿಕ ಸೇವೆ ಮಾಡುವ ಅವಕಾಶವಿದ್ದರೂ, ಒತ್ತಡವೋ, ಆಸೆಯೋ ಅವರು ಸಹ ರಾಜಕೀಯ ಅಧಿಕಾರಕ್ಕಾಗಿ ಚುನಾವಣೆಗೆ ಸ್ಪರ್ಧಿಸುವುದು ಅಧಿಕಾರ ದಾಹದ ಉತ್ಕಟತೆಯನ್ನು ತೋರಿಸುತ್ತದೆ. ಇರಲಿ ಅವರ ಜೀವನೋತ್ಸಾಹವನ್ನು ಅಭಿನಂದಿಸೋಣ…..

ಆದರೆ ಅದೇ ಜೀವನೋತ್ಸಾಹವನ್ನು ಈ ಎಲ್ಲಾ ವ್ಯಕ್ತಿಗಳು ಸಾಮಾನ್ಯ ಜನರಲ್ಲಿ ತುಂಬುವಲ್ಲಿ ವಿಫಲವಾಗಿದ್ದಾರೆ ಅಥವಾ ಅದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಜನರೇ ವಿಫಲರಾಗಿದ್ದಾರೆ…..

ಒಳ್ಳೆಯ ತನವನ್ನು ಸಾಮಾನ್ಯ ಜನರಿಗೆ ತುಂಬಿ ಇವರು ಮಾತ್ರ ಅಧಿಕಾರದ ದುಷ್ಟ ವ್ಯಾಮೋಹದಲ್ಲಿ ಕಳೆದುಹೋಗಿರುವುದು ಈ ಸಮಾಜದ ದುರಂತ. ಈಗ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತರವನ್ನು ನಾವುಗಳು ಸಹ ಸೂಕ್ಷ್ಮವಾಗಿ ಗಮನಿಸಬೇಕು, ವಾಸ್ತವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಅವರು ರಾಜರು ನಾವು ಗುಲಾಮರು. ಇದು ನಿರಂತರ. ಪ್ರಜಾಪ್ರಭುತ್ವ ಎಂಬುದು ಅರ್ಥವನ್ನೇ ಕಳೆದುಕೊಳ್ಳುತ್ತದೆ…..

ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿರುವವರ ಎಲ್ಲ ಪಕ್ಷಗಳ ನಾಯಕರನ್ನು ನೋಡಿದರೆ ಹಿಂದೆ ರಾಜಪ್ರಭುತ್ವದ ವಂಶಾಡಳಿತ ಸಾಮಂತರ ಪೀಳಿಗೆ ಇನ್ನೂ ಮುಂದುವರಿಯುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ….

ಆದ್ದರಿಂದ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುವುದು ಇಡೀ ಪ್ರಜೆಗಳಲ್ಲಿ ಅತ್ಯುತ್ತಮ ವ್ಯಕ್ತಿಯನ್ನು ಪ್ರಜೆಗಳೇ ಸ್ವಯಂ ಆಸಕ್ತಿವಹಿಸಿ ಚುನಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಎಂದು ಹೇಳಬಹುದು. ಇಲ್ಲದಿದ್ದರೆ ಪ್ರಜಾಪ್ರಭುತ್ವ ಮುಖವಾಡದ ರಾಜಪ್ರಭುತ್ವ ಎಂದು ಕರೆಯುವುದು ಸೂಕ್ತವಾಗುತ್ತದೆ. ಯೋಚಿಸಿ ನೋಡಿ…….
ಧನ್ಯವಾದಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 984013068…….

error: No Copying!