ಕುಂದಾಪುರ: ದಿನಾಂಕ: 04-02-2024 ( ಹಾಯ್ ಉಡುಪಿ ನ್ಯೂಸ್) ಹೂಡಿಕೆ ಯಲ್ಲಿ ಅಧಿಕ ಲಾಭದ ಆಮಿಷ ಒಡ್ಡಿ ಯುವತಿಯೋರ್ವಳಿಗೆ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ ನಿವಾಸಿ ಅಕ್ಷತಾ(26) ಎಂಬವರಿಗೆ ದಿನಾಂಕ: 14/01/2024 ರಂದು ಮೊಬೈಲ್ ಗೆ ವಾಟ್ಸ್ ಆಪ್ ಮೆಸೇಜ್ ಬಂದಿದ್ದು, ಅದರಲ್ಲಿ ಅಪರಿಚಿತ ವ್ಯಕ್ತಿಯು ಕೆಲವು ಲಿಂಕ್‌ಗಳನ್ನು ಕಳುಹಿಸಿ ಈ ವೀಡಿಯೋವನ್ನು ಲೈಕ್ ಮಾಡಿ ಟಾಸ್ಕ್ ಮಾಡಿ ಉದ್ಯೋಗದ ಬಗ್ಗೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಬರುವುದಾಗಿ ತಿಳಿಸಿದ್ದು, ನಂತರದಲ್ಲಿ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಅಪ್ಲಿಕೇಶನ್ ನಲ್ಲಿ ಅಕ್ಷತಾ ಅವರನ್ನು ಸಂಪರ್ಕಿಸಿ ಉದ್ಯೋಗದ ಬಗ್ಗೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಬರುವುದಾಗಿ ನಂಬಿಸಿದ್ದಾನೆ ಎಂದು ಪೊಲೀಸರಿಗೆ ದೂರಿದ್ದಾರೆ.
ಅದರಂತೆ ಆ ವ್ಯಕ್ತಿಯು ತಿಳಿಸಿದ ಬ್ಯಾಂಕ್ ಅಕೌಂಟ್ ಗೆ ಒಟ್ಟು ರೂಪಾಯಿ 8,00,000/- ಹಣವನ್ನು ಆನ್ ಲೈನ್ ಮುಖಾಂತರ ವರ್ಗಾವಣೆ ಮಾಡಿರುತ್ತಾರೆ ಎಂದಿದ್ದಾರೆ. ಆದರೆ ಆರೋಪಿಗಳು ಅಕ್ಷತಾರಿಗೆ ಲಾಭಾಂಶವನ್ನು ನೀಡದೇ, ಹಾಗೂ ಅಕ್ಷತಾರಿಂದ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ವಂಚನೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅಕ್ಷತಾ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 420 ಐಪಿಸಿ ಮತ್ತು ಕಲಂ: 66(C), 66 (D) I T Act ರಂತೆ ಪ್ರಕರಣ ದಾಖಲಾಗಿದೆ.