Spread the love

ಪೂರ್ವ ಭಾರತ,
ಪಶ್ಚಿಮ ಭಾರತ,
ಉತ್ತರ ಭಾರತ,.
ದಕ್ಷಿಣ ಭಾರತ,
ವಾಯವ್ಯ ಭಾರತ,
ಆಗ್ನೇಯ ಭಾರತ,
ಈಶಾನ್ಯ ಭಾರತ,
ನೈರುತ್ಯ ಭಾರತ,
ಆರ್ಯ ಭಾರತ,
ದ್ರಾವಿಡ ಭಾರತ,
ಮಧ್ಯ ಭಾರತ…
ಹೀಗೆ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿ ಕರೆಯಲಾಗುತ್ತದೆ.
ಇದಲ್ಲದೆ ಪರಿಸರ, ರಾಜಕೀಯ, ವಸ್ತ್ರ, ಆಹಾರ, ಭಾಷೆ ಮುಂತಾದ ವಿಷಯಗಳಲ್ಲಿ ಸಹ ವೈವಿಧ್ಯಮಯ ಭಾರತದ ಬಗ್ಗೆ ಮಾತನಾಡುತ್ತೇವೆ.

ಆದರೆ ಮುಖ್ಯವಾಗಿ ಚರ್ಚಿತವಾಗುವುದು ಡೆಲ್ಲಿ ಮತ್ತು ಮದ್ರಾಸಿಗಳೆಂದು ಕರೆಯಲಾಗುತ್ತಿದ್ದ ಉತ್ತರ ಮತ್ತು ದಕ್ಷಿಣ ಭಾರತದ ಬಗೆಗೆ…….

ಸ್ವಾತಂತ್ರ್ಯ ನಂತರದ ಭಾರತವನ್ನು ಪರಿಗಣಿಸುವುದಾದರೆ, ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಈ ವಿಷಯ ಗ್ರಹಿಸುವುದಾದರೆ ಉತ್ತರದ ಹಿಂದಿ ಮತ್ತು ಅದರ ಪೂರಕ ಭಾಷೆಗಳ‌ ರಾಜ್ಯಗಳು ದಕ್ಷಿಣದ ದ್ರಾವಿಡ ಭಾಷೆಗಳ ರಾಜ್ಯಗಳ ಮೇಲೆ ದೊಡ್ಡಣ್ಣನ ರೀತಿಯಲ್ಲಿ ಸ್ವಲ್ಪ ವರ್ತಿಸುತ್ತಿರುವುದು ಕಂಡುಬರುತ್ತದೆ. ಜನಸಂಖ್ಯೆ ಮತ್ತು ರಾಜಕೀಯ ಪ್ರಾತಿನಿಧ್ಯದಲ್ಲಿ ಸಹ ಉತ್ತರ ಭಾರತದವರದೇ ಮೇಲುಗೈ.

ಉತ್ತರ ಭಾರತೀಯರ ದೈಹಿಕ ಸಾಮರ್ಥ್ಯ ಸಹ ದಕ್ಷಿಣದವರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಬಲಿಷ್ಠರು ಎಂದು ಹೇಳಬಹುದು. ದೇಹ ಶಕ್ತಿ ಹೆಚ್ಚಾಗಿ ಬಯಸುವ ಕುಸ್ತಿ, ಬಾಕ್ಸಿಂಗ್, ಜಾವೆಲಿನ್, ಡಿಸ್ಕಸ್ ಮುಂತಾದ ಕ್ರೀಡೆಗಳಲ್ಲಿ ಉತ್ತರ ಭಾರತೀಯರು ಮುಂದಿದ್ದಾರೆ. ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಅಲಂಕರಿಸಿರುವುದು ಸಹ ಬಹುತೇಕ ಉತ್ತರ ಭಾರತೀಯರೇ ಆಗಿದ್ದಾರೆ.

ಉತ್ತರದ ಅನೇಕರಿಗೆ ನಾವು ದಕ್ಷಿಣ ಭಾರತೀಯರಿಗಿಂತ ಶ್ರೇಷ್ಠ ಎಂಬ ಭಾವನೆ ಬೆಳೆದಿದೆ. ಅದಕ್ಕಾಗಿ ಹಿಂದಿ ಹೇರಿಕೆ ಸಹ ನಡೆಯುತ್ತದೆ. ಉತ್ತರದಲ್ಲಿ ಅತಿಯಾದ ಜನಸಾಂದ್ರತೆ ಮತ್ತು ನಿರುದ್ಯೋಗದ ಕಾರಣ ದಕ್ಷಿಣದೆಡೆಗೆ ಅತಿಹೆಚ್ಚು ವಲಸೆ ಸಹ ಕಂಡುಬರುತ್ತದೆ……

ಉತ್ತರ ಭಾರತೀಯರು ಮತ್ತು ಹಿಂದಿ ಭಾಷೆಯ ಬಗ್ಗೆ ಸ್ವಲ್ಪ ಅಸಹನೆ ಹೊಂದಿರುವ ತಮಿಳು ನಾಡಿನ ಜನರು ಆಗಾಗ ಪ್ರತ್ಯೇಕ ದ್ರಾವಿಡ ನಾಡಿನ ಬೇಡಿಕೆಯನ್ನು ಮಂಡಿಸುತ್ತಲೇ ಇರುತ್ತಾರೆ……

ಇನ್ನು ದಕ್ಷಿಣ ಭಾರತೀಯರಿಗೆ ಕೇಂದ್ರ ಸರ್ಕಾರ ಸ್ವಲ್ಪ ಮಲತಾಯಿ ಧೋರಣೆ ತೋರುವುದು ನಿಜವೇ ಎಂದರೆ ಖಂಡಿತ ನಿಜ ಎಂದೇ ಹೇಳಬೇಕಾಗುತ್ತದೆ. ಇದು ನೆಹರು ಕಾಲದಿಂದ ಮೋದಿ ಆಡಳಿತದವರೆಗೆ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಅದರಲ್ಲೂ ಇಂದಿರಾಗಾಂಧಿ ಮತ್ತು ಈಗಿನ ಮೋದಿಯವರ ಆಡಳಿತದಲ್ಲಿ ಅತಿಹೆಚ್ಚು ಎಂದು ಹೇಳಬಹುದು. ಅಂದರೆ ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಮತ್ತು ಸರ್ವಾಧಿಕಾರಿ ಧೋರಣೆಯ ಉತ್ತರ ಭಾರತೀಯ ವ್ಯಕ್ತಿ ಪ್ರಧಾನಿ ಆಗಿದ್ದಾಗ ಇದು ಹೆಚ್ಚಾಗಿದೆ ಎಂಬುದನ್ನು ಗಮನಿಸಬಹುದು….

ಬಹುಶಃ ಉತ್ತರ ಭಾರತದ ಸಂಸತ್ ಸದಸ್ಯರ ಸಂಖ್ಯೆ ಅತಿಹೆಚ್ಚು ಇರುವುದರಿಂದ ರಾಜಕೀಯ ಲಾಭಕ್ಕಾಗಿ, ಅಲ್ಲದೆ ಉತ್ತರದ ಅನೇಕ ರಾಜ್ಯಗಳನ್ನು ಅಭಿವೃದ್ಧಿಯ ದೃಷ್ಟಿಯಿಂದ ಬೀಮಾರು ( ರೋಗಿಷ್ಠ ) ರಾಜ್ಯಗಳು ಎಂದು ಕರೆಯಲಾಗುವ ಬಡತನ, ಅಜ್ಞಾನ, ನಿರುದ್ಯೋಗದ ಕಾರಣದಿಂದ, ಜೊತೆಗೆ ದಕ್ಷಿಣ ರಾಜ್ಯಗಳ ಬಹುತೇಕ ರಾಜಕಾರಣಿಗಳ ಅಧಿಕಾರ ಕೇಂದ್ರಿತ ಸ್ವಾರ್ಥ ರಾಜಕಾರಣದ ಗುಲಾಮಿ ಮನಸ್ಥಿತಿ ಕೇಂದ್ರದ ಮಲತಾಯಿ ಧೋರಣೆಗೆ ಹೆಚ್ಚಿನ ಕಾರಣ ಇರಬಹುದು…

ಹಾಗೆಯೇ ರಾಜ್ಯ ಮತ್ತು ಕೇಂದ್ರಗಳಲ್ಲಿ ಬೇರೆ ಬೇರೆ ಪಕ್ಷದ ಸರ್ಕಾರ ಇದ್ದಾಗ ಈ ಧೋರಣೆ ಇನ್ನೂ ಹೆಚ್ಚಾಗುತ್ತದೆ. ರಾಜಕೀಯ ಸೇಡಿನ ಕ್ರಮಗಳು ಭಾರತೀಯ ಸಮಾಜದಲ್ಲಿ ಅತ್ಯಂತ ಸಹಜವಾಗಿಯೇ ನಡೆಯುತ್ತದೆ. ಬರ ಪರಿಹಾರದ ಹಣ ಇನ್ನೂ ಬಿಡುಗಡೆ ಆಗದಿರುವುದು ಇದಕ್ಕೆ ಒಂದು ಸ್ಪಷ್ಟ ಉದಾಹರಣೆ…..

ಈಗ ಕರ್ನಾಟಕ ಸರ್ಕಾರ ದೆಹಲಿಯಲ್ಲಿ ಇದರ ಪ್ರತಿಭಟನೆಗೆ ಮುಂದಾಗಿದೆ. ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳು ಸಹ ಭಾಗಿಯಾಗುವ ಸಾಧ್ಯತೆ ಇದೆ. ಇದು ಅಂತಹ ಉತ್ತಮ ಬೆಳವಣಿಗೆಯಲ್ಲ. ಸಂಸದೀಯ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಇದು ಧಕ್ಕೆಯನ್ನು ಉಂಟುಮಾಡುತ್ತದೆ. ಇದಕ್ಕೆ ಅವಕಾಶ ನೀಡಬಾರದು…

ಇದಕ್ಕೆ ರಾಜಕೀಯ ಹೊರತುಪಡಿಸಿದರೆ ಅನೇಕ ಸರಳ ಪರಿಹಾರಗಳಿವೆ. ಈ‌ ಆಧುನಿಕ ಕಾಲದಲ್ಲಿ ಅಂಕಿಅಂಶಗಳ ಮಾಹಿತಿಯ ಸಂಗ್ರಹ ಸುಲಭ ಮತ್ತು ಸ್ಪಷ್ಟವಾಗಿದೆ. ಅದರ ಆಧಾರದ ಮೇಲೆ ರಾಜ್ಯಗಳ ಪಾಲಿನ ಹಣಕಾಸಿನ ಹಂಚಿಕೆಯನ್ನು ಮತ್ತೊಮ್ಮೆ ಪುನರ್ ವಿಮರ್ಶಿಸಬೇಕು. ಉತ್ತರದ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಈಗ ಮೊದಲಿಗಿಂತ ಉತ್ತಮವಾಗಿರುವುದರಿಂದ ಅವರಿಗೆ ನೀಡುವ ಅನುದಾನದಲ್ಲಿ ಸ್ವಲ್ಪ ಕಡಿಮೆ ಮಾಡಬಹುದು. ಅಲ್ಲಿನ ಸರ್ಕಾರಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವುದು. ಆರ್ಥಿಕ ಹಂಚಿಕೆಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಲು ನೀತಿ ಆಯೋಗ, ಹಣಕಾಸು ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯೆ ಹೊಂದಾಣಿಕೆ ಮಾಡಲು ಮತ್ತೊಂದು ಸ್ವತಂತ್ರ ಆರ್ಥಿಕ ಇಲಾಖೆ ಸ್ಥಾಪಿಸಬೇಕು….

ಇದು ಇಂದಿನ ತುರ್ತು ಅಗತ್ಯ. ಇಲ್ಲದಿದ್ದರೆ ಈ ಅಸಮಾಧಾನಗಳು ಮಾಧ್ಯಮಗಳ ಮೂಲಕ ಜನಸಾಮಾನ್ಯರ ಮನ – ಮನೆ ತಲುಪಿ ಉತ್ತರ ಮತ್ತು ದಕ್ಷಿಣ ಎಂಬ ಭಾವನೆ ಮತ್ತಷ್ಟು ಆಳವಾಗಿ ಬೇರೂರಿ ವಿಭಜನೆಯ ಕೂಗಿಗೆ ಮತ್ತಷ್ಟು ಬಲ ಬರಬಹುದು. ಕೇಂದ್ರ ಸರ್ಕಾರ ಮತ್ತು ಹಣಕಾಸು ಇಲಾಖೆಯ ಮಂತ್ರಿಗಳು ಹಠ ಮಾಡದೆ, ಇದನ್ನು ಪ್ರತಿಷ್ಟೆಯ ಪ್ರಶ್ನೆಯಾಗಿ ನೋಡದೆ ದೇಶದ ಒಟ್ಟು ಹಿತಾಸಕ್ತಿಯಿಂದ ಇದನ್ನು ನೋಡಬೇಕು. ಹಾಗೆಯೇ ರಾಜ್ಯ ಸರ್ಕಾರ ಸಹ ಹೆಚ್ಚು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು….

ಆಯಾ ಪಕ್ಷಗಳ ಕಾರ್ಯಕರ್ತರು ಮತ್ತು ಸಹಾನುಭೂತಿ ಹೊಂದಿರುವವರು ಅಂಕಿಅಂಶಗಳನ್ನು ನೀಡಿ ಅವರು ಸರಿ, ಇವರು ತಪ್ಪು ಎಂದು ಇದನ್ನು ಸಮರ್ಥಿಸಿ ಕೊಳ್ಳಬಹುದು ಅಥವಾ ವಿರೋಧಿಸಬಹುದು. ಆದರೆ ಈ ವಿಷಯ ಅದನ್ನು ಮೀರಿದ್ದಾಗಿದೆ. ಅಖಂಡ ಭಾರತದ ರಕ್ಷಣೆ ” ಬಹುತ್ವ ಭಾರತ್ ಬಲಿಷ್ಠ ಭಾರತ್ ” ಪರಿಕಲ್ಪನೆಯಲ್ಲಿ ಅಡಗಿದೆ. ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾಗಿದೆ.

ರಾಜಕೀಯ ಲಾಭಗಳು ದೇಶವನ್ನು ಮತ್ತೊಮ್ಮೆ ಒಡೆಯಬಾರದು. ಆ ಎಚ್ಚರಿಕೆ ಮತ್ತು ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದು. ಕರ್ನಾಟಕ ಸರ್ಕಾರದ ದೆಹಲಿ ಪ್ರತಿಭಟನೆಯು ಒಂದು ಹಂತ ಮೀರುವ ಮೊದಲು ಅದನ್ನು ತಡೆಯಬೇಕು. ಚುನಾವಣಾ ಲಾಭವೇ ಮುಖ್ಯವಾದರೆ ಮುಂದೆ ಇದರ ಪರಿಣಾಮ ದುಬಾರಿಯಾಗಬಹುದು. ಇದರಲ್ಲಿ ಕೇಂದ್ರದ ಪಾತ್ರ ಹೆಚ್ಚು ಮಹತ್ವದ್ದು ಎಂದು ನೆನಪಿಸುತ್ತಾ……

ಭಾರತ ಅಖಂಡವಾಗಿ ಉಳಿದು ಹೆಚ್ಚು ಬಲಿಷ್ಠವಾಗಲಿ, ಅದರಿಂದ ಅಭಿವೃದ್ಧಿ ಸಾಧ್ಯ. ಅದರ ಜೊತೆಗೆ ಇಲ್ಲಿನ ಬಹತ್ವವೂ ರಕ್ಷಣೆಯಾಗಲಿ. ಯಾರದೋ ರಾಜಕೀಯ ಮಹತ್ವಾಕಾಂಕ್ಷೆಯ ತೆವಲಿಗೆ ದೇಶ ವಿಭಜನೆಯಾಗದಿರಲಿ ಎಂದು ಆಶಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!