ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ.,…………
ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ.
ಇದೊಂದು ಕೋಟ್ಯಾಂತರ ರೂಪಾಯಿಗಳ ಮನರಂಜನಾ ವ್ಯವಹಾರ.
ಆದರೆ ಈಗ ಆ ವ್ಯವಹಾರ ನಮ್ಮ ಮನೆಗಳಿಗೇ ಮುಖ್ಯವಾಗಿ ಕೌಟುಂಬಿಕ ಮೌಲ್ಯಗಳಿಗೇ ಕೈ ಹಾಕಿದೆ.
ವ್ಯಾವಹಾರಿಕ ಪೈಪೋಟಿಗಿಳಿದ ಅದರಲ್ಲೂ ಮುಖ್ಯವಾಗಿ ಟೆಲಿವಿಷನ್ ಮಾಧ್ಯಮ ಇನ್ನೂ ಬಹಳಷ್ಟು ವಿಷಯಗಳಲ್ಲಿ ಮಾನಸಿಕವಾಗಿ ಭ್ರೂಣಾವಸ್ಥೆಯಲ್ಲೇ ಇರುವ ಅನೇಕ ಮಹಿಳೆಯರ ಅಂತರಾಳಕ್ಕೆ ಲಗ್ಗೆ ಇಟ್ಟು ತಪ್ಪು ಸಂದೇಶಗಳನ್ನು ಹರಿಯಬಿಡುತ್ತಿದೆ.
ಹೆಣ್ಣು ಸಮಾಜದ ಮುಕ್ತತೆಗೆ ತೆರೆದುಕೊಳ್ಳುತ್ತಿರುವ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಕೆಟ್ಟ ಮೌಲ್ಯಗಳನ್ನು – ಅಮಾನವೀಯ ವರ್ತನೆಗಳನ್ನು ಸಮರ್ಥಿಸುವ,
ಅತಿರಂಜಿತ ಘಟನೆಗಳನ್ನು ವೈಭವೀಕರಿಸಿ ವಾಸ್ತವದ ಅರ್ಥವನ್ನು ಮರೆಮಾಚುತ್ತಿವೆ.
ಒಬ್ಬ ಕಥೆಗಾರ ಅಥವಾ ಚಿತ್ರ ಕಥೆಗಾರ ತನ್ನ ಕಲ್ಪನೆ – ಅನುಭವದಲ್ಲಿ ಮೂಡಿದ ದೃಶ್ಯಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಹಲವಾರು ಮಾರ್ಗಗಳನ್ನು ಉಪಯೋಗಿಸುತ್ತಾನೆ.
ಆದರೆ ಇದು ವ್ಯಾವಹಾರಿಕ ಪೈಪೋಟಿಯ ಮನರಂಜನಾ ಉದ್ಯಮವಾಗಿ ಮಾರ್ಪಟ್ಟಿರುವುದರಿಂದ ಅತಿಹೆಚ್ಚು ವೀಕ್ಷಕರನ್ನು ತಲುಪುವ – ಅವರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳವ – ಅದರಿಂದ ಬರುವ ಜಾಹೀರಾತು ಮುಖಾಂತರ ಹಣ ಗಳಿಸುವ ಪ್ರಲೋಭನೆಗೆ ಒಳಗಾಗುತ್ತಾನೆ.
ಅಲ್ಲಿಂದ ಶುರುವಾಗುತ್ತದೆ ನೋಡಿ ಈ ಮಾಯಾಜಾಲದ ವಿಕೃತಿಗಳು.
ಪ್ರತಿ ಪಾತ್ರಗಳನ್ನು ವಿಚಿತ್ರವಾಗಿ ಸೃಷ್ಟಿಸುವ, ಘಟನೆಗಳನ್ನು ಊಹೆಗೂ ನಿಲುಕದಂತೆ ಬೆಸೆಯುವ, ವರ್ತನೆಗಳನ್ನು ಅತಿರೇಕಕ್ಕೆ ಕೊಂಡೊಯ್ಯುವ, ಕುತೂಹಲಕ್ಕಾಗಿ ಸ್ಥಾಪಿತ ಮಾನವೀಯ ಮೌಲ್ಯಗಳನ್ನೇ ಉಲ್ಟಾ ಪಲ್ಟಾ ಮಾಡುವ ಅನೇಕ ಚಾಕಚಕ್ಯತೆಯ ಬಲೆ ಬೀಸಲಾಗುತ್ತದೆ.
ಅನೈತಿಕತೆಯನ್ನು ಚಾಣಾಕ್ಷವಾಗಿ ನಿಭಾಯಿಸುವ, ಕೊಲೆ ಮುಂತಾದ ಅಪರಾಧಗಳನ್ನು ವಾಸ್ತವ ಲೋಕಕ್ಕಿಂತ ಬರಹಗಾರನ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವ ರೀತಿಗಳು ನಿಜ ಲೋಕದ ಅರಿವಿರದ ಜನರನ್ನು ಪ್ರಚೋದಿಸುತ್ತಿರುವುದು ನಮ್ಮ ದಿನನಿತ್ಯದ ನೇರ ಅರಿವಿಗೆ ಬರುತ್ತಿದೆ. ಇದು ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ.
ಈಗ ಪ್ರಸಾರವಾಗುತ್ತಿರುವ ಬಹುತೇಕ ಧಾರವಾಹಿಗಳಲ್ಲಿ ಮಹಿಳೆಯರನ್ನು ವಿಲನ್ ಗಳಾಗಿ ಚಿತ್ರಿಸಿ ಆಕೆಯ ವ್ಯಕ್ತಿತ್ವವನ್ನೇ ಸಂಪೂರ್ಣ ಕೆಳಮಟ್ಟಕ್ಕೆ ಇಳಿಸುವ ಮೂಲಕ ಒಂದು ಸಾಂಪ್ರದಾಯಿಕ ವಾತಾವರಣವನ್ನೇ ಬಡಮೇಲು ಮಾಡಲಾಗಿದೆ. ಇಂದಿನ ಯುವ ಜನಾಂಗ ಮಹಿಳೆಯರ ಮೇಲೆ ಗೌರವ ಕಳೆದುಕೊಳ್ಳಲು ಇದು ಒಂದು ಕಾರಣವಾಗಿದೆ….
ಎಷ್ಟೋ ಮಹಿಳೆಯರು ಈಗಲೂ ಧಾರಾವಾಹಿಯ ಪಾತ್ರಗಳು ವರ್ತಿಸುವ ರೀತಿಯನ್ನು ದಿನನಿತ್ಯ ತಮ್ಮದೇ ಶೈಲಿಯಲ್ಲಿ ಚರ್ಚಿಸುತ್ತಾ, ಅದರ ಪ್ರಭಾವಕ್ಕೆ ಒಳಗಾಗಿ ತಮ್ಮ ನಡತೆಯ ಕೆಲವು ಕೆಟ್ಟ ಅಂಶಗಳನ್ನು ಸಮರ್ಥಿಸಿಕೊಳ್ಳತೊಡಗಿದ್ದಾರೆ. ಕೆಟ್ಟದ್ದಕ್ಕೆ ಮಾನಸಿಕ ಪ್ರೋತ್ಸಾಹ ದೊರೆತರೆ ಆ ಸಮಾಜ ದಾರಿ ತಪ್ಪುವ ಸಾಧ್ಯತೆ ಹೆಚ್ಚು.
ಮಾಧ್ಯಮಗಳನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಆದರೆ ವೈಯಕ್ತಿಕ ಮಟ್ಟದಲ್ಲಿ ನಾವುಗಳು ಹೆಚ್ಚು ಪ್ರಬುದ್ಧರಾಗುವ ಮುಖಾಂತರ, ನಮ್ಮ ವ್ಯಕ್ತಿತ್ವಗಳನ್ನು ಉನ್ನತ ದರ್ಜೆಗೆ ಏರಿಸಿಕೊಳ್ಳುವ ಮೂಲಕ, ವಾಸ್ತವ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ವಿಧಾನದಿಂದ ಇದನ್ನು ನಿರ್ಲಕ್ಷಿಸಬಹುದು ಮತ್ತು ಅನಾಹುತಗಳನ್ನು ತಡೆಯಬಹುದು.
ಆ ನಿಟ್ಟಿನಲ್ಲಿ ಮತ್ತಷ್ಟು ಕ್ರಿಯಾತ್ಮಕವಾಗಿ ಯೋಚಿಸಿ ಎಂದು ಮನವಿ ಮಾಡಿಕೊಳ್ಳುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068………..