ಆರ್ಥಿಕ ಮೌಲ್ಯಗಳ ಬೆಳವಣಿಗೆ,
ಧಾರ್ಮಿಕ ಮೌಲ್ಯಗಳ ವೃದ್ಧಿ,
ರಕ್ಷಣಾ ಮೌಲ್ಯಗಳ ಹೆಚ್ಚಳ,
ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ,
ವಿದೇಶಗಳಲ್ಲಿ ಭಾರತದ ಬ್ರಾಂಡ್ ಮೌಲ್ಯ ಏರಿಕೆ,………
ಸಾಮಾಜಿಕ ಸಾಮರಸ್ಯ ಕುಸಿತ,
ಪ್ರಜಾಪ್ರಭುತ್ವದ ಮೌಲ್ಯಗಳ ನಾಶ,
ಪ್ರಾಕೃತಿಕ ಸಂಪನ್ಮೂಲಗಳ ದುರುಪಯೋಗ,
ರಾಜಕೀಯ ಮತ್ತು ಆಡಳಿತದಲ್ಲಿ ಸೇಡಿನ ಮನೋಭಾವ,
ಮಾನವೀಯ ಮೌಲ್ಯಗಳ ಸಂಪೂರ್ಣ ಅಧೋಗತಿ….
ನರೇಂದ್ರ ಮೋದಿಯವರನ್ನು ಮೆಚ್ಚುವವರು ಮೇಲಿನ ಅಂಶಗಳಿಗೆ ಮತ್ತಷ್ಟು ಸೇರಿಸಿ ಅವರನ್ನು ಅಭಿವೃದ್ಧಿಯ ಹರಿಕಾರ ಎನ್ನುತ್ತಾರೆ,
ಹಾಗೆಯೇ ಅವರನ್ನು ವಿರೋಧಿಸುವವರು ಕೆಳಗಿನ ಅಂಶಗಳಿಗೆ ಮತ್ತಷ್ಟು ಸೇರಿಸಿ ವಿನಾಶದ ಮುನ್ಸೂಚನೆ ಎಂದು ಟೀಕಿಸುತ್ತಾರೆ……
ವಾದ – ಪ್ರತಿವಾದ, ಅಂಕಿಅಂಶಗಳನ್ನು ಬಳಸಿಕೊಂಡು ವಿರೋಧಿಸಲು ಅಥವಾ ಸಮರ್ಥಿಸಲು ಸಾಕಷ್ಟು ವಿಷಯಗಳು ಸಿಗುತ್ತದೆ. ಆದರೆ ಅಂತಃಕರಣ ಪೂರ್ವಕವಾಗಿ, ಯಾವುದೇ ಪೂರ್ವಾಗ್ರಹ ಇಲ್ಲದೇ, ಪ್ರಕೃತಿಯ ಮೂಲದಿಂದ, ಭಾರತೀಯ ಮೌಲ್ಯಗಳ ಆಧಾರದ ಮೇಲೆ, ಸಂವಿಧಾನದ ಚೌಕಟ್ಟಿನಲ್ಲಿ, ದೇಶ ಮತ್ತು ಜನರ ಹಿತಾಸಕ್ತಿಗಳನ್ನೇ ಮುಖ್ಯವಾಗಿಸಿ ಚರ್ಚಿಸಿದಾಗ ಸ್ವಲ್ಪಮಟ್ಟಿಗೆ ಸತ್ಯ ಮತ್ತು ವಾಸ್ತವದ ಹತ್ತಿರ ಹೋಗಲು ಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಲ್ಲ. ಪರ ಅಥವಾ ವಿರೋಧಗಳು ಅತಿರೇಕವನ್ನು ತಲುಪಿಯಾಗಿದೆ….
ಆದರೂ ವಿಮರ್ಶಿಸುವ ಪ್ರಯತ್ನಗಳು ನಡೆಯುತ್ತಲೇ ಇರಬೇಕು. ಅದು ಪ್ರಜಾಪ್ರಭುತ್ವದ ಜೀವಂತಿಕೆಯ ಲಕ್ಷಣ…..
ಸೂಪರ್ ಮ್ಯಾನ್ or ಸ್ಟಂಟ್ ಮ್ಯಾನ್…..
Quality ಮತ್ತು Quantity
ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿ ಮುನ್ನಡೆಸುತ್ತಿರುವ ನರೇಂದ್ರ ದಾಮೋದರ ಮೋದಿಯವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು………
ಅಚ್ಚೇದಿನ್ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿಯವರ ಈ ಹತ್ತು ವರ್ಷಗಳನ್ನು ಹೇಗೆ ನೋಡುವುದು, ಹೇಗೆ ಅರ್ಥೈಸುವುದು…..
ಲಕ್ಷ ಲಕ್ಷ ಅಭಿಪ್ರಾಯಗಳು ನಮ್ಮ ಮುಂದಿವೆ. ನರೇಂದ್ರ ಮೋದಿ ಒಬ್ಬ ಸಂತ ಎಂದು ಪ್ರಾರಂಭವಾಗಿ ದೇಶವನ್ನು ಹೀನಾಯ ಪರಿಸ್ಥಿತಿಗೆ ತಂದರು ಎಂಬಲ್ಲಿಗೆ ಬಂದು ನಿಲ್ಲುತ್ತದೆ.
ಅಂತಿಮ ಅಭಿಪ್ರಾಯ ಮತ್ತು ತೀರ್ಮಾನ ನಿಮ್ಮದೇ ಆದರೂ ಯಾವ ಅಂಶಗಳ ಆಧಾರದ ಮೇಲೆ ಇದನ್ನು ನಿರ್ಧರಿಸಬೇಕು ಎಂಬುದನ್ನು ಮಾತ್ರ ಇಲ್ಲಿ ಹೇಳಲಾಗಿದೆ.
ತುಂಬಾ ಸರಳವಾದ ಒಂದು ಲೆಕ್ಕಾಚಾರ…..
ಭೂತ – ಭವಿಷ್ಯದ ಆಧಾರದ ಮೇಲೆ ಸಮರ್ಥನೆ ಅಥವಾ ವಿರೋಧ ಬೇಡ. ಕೇವಲ ಅವರ ಹತ್ತು ವರ್ಷಗಳ ಆಡಳಿತದಲ್ಲಿ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ನಮ್ಮ ನೆಲೆಯಲ್ಲಿ ನಿಂತು ನೋಡೋಣ.
ಈ ಹತ್ತು ವರ್ಷಗಳಲ್ಲಿ ನಮ್ಮ ವೈಯಕ್ತಿಕ ಬದುಕಿನಲ್ಲಿ ಆಗಿರುವ ಬದಲಾವಣೆ, ಹಾಗೆಯೇ ನಮ್ಮ ಕುಟುಂಬ, ನಮ್ಮ ಬೀದಿ, ನಮ್ಮ ಊರು ನಮ್ಮ ಹೋಬಳಿ, ತಾಲ್ಲೂಕು, ಜಿಲ್ಲೆ , ರಾಜ್ಯ ಮತ್ತು ದೇಶ ಇವೆಲ್ಲವೂ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಆಗಿದೆಯೇ ಅಥವಾ ಮೊದಲಿಗಿಂತ ಕಠಿಣ ಪರಿಸ್ಥಿತಿ ಎದುರಾಗಿದೆಯೇ ?
ತುಂಬಾ ನಿಷ್ಪಕ್ಷಪಾತವಾಗಿ ಯೋಚಿಸಬೇಕು. 360 ಡಿಗ್ರಿ ದೃಷ್ಟಿಕೋನದಿಂದ ಪರಿಶೀಲಿಸಬೇಕು. ಇಲ್ಲಿ ಬೇರೆಯವರಿಗೆ ಉತ್ತರಿಸುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ಉತ್ತರ ಹೇಳಬೇಕಿದೆ.
ಇಲ್ಲಿ ಮತ್ತೊಂದು ವಿಷಯ ನೆನಪಿಡಿ, ನರೇಂದ್ರ ಮೋದಿ ನಮ್ಮ ದೊಡ್ಡಪ್ಪ ಅಲ್ಲ, ರಾಹುಲ್ ಗಾಂಧಿ ನಮ್ಮ ಚಿಕ್ಕಪ್ಪ ಅಲ್ಲ, ಮಮತಾ ಬ್ಯಾನರ್ಜಿ ಮಾಯಾವತಿಯವರು ನಮ್ಮ ಆಂಟಿಯರಲ್ಲ. ಅವರು ನಮ್ಮಿಂದ ಅಜಗಜಾಂತರ ದೂರದಲ್ಲಿದ್ದಾರೆ. ಅವರಿಂದ ನಮಗೆ ವೈಯಕ್ತಿಕವಾಗಿ ಯಾವುದೇ ಲಾಭವೂ ಇಲ್ಲ ನಷ್ಟವೂ ಇಲ್ಲ.
ಈ ಮಣ್ಣಿನಲ್ಲಿ ಹುಟ್ಟಿದ್ದೇವೆ, ಇಲ್ಲಿನ ಗಾಳಿ ನೀರು ಆಹಾರ ಸೇವಿಸಿದ್ದೇವೆ. ಈ ದೇಶಕ್ಕೆ ಕೃತಜ್ಞರಾಗಿರುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಒಬ್ಬ
ವ್ಯಕ್ತಿ ಮುಖ್ಯವಲ್ಲ ಇಲ್ಲಿನ ಜನರು ಮತ್ತು ದೇಶ ಮುಖ್ಯ.
ಜಾತಿ ಧರ್ಮ ಭಾಷೆ ಎಲ್ಲವೂ ಮನುಷ್ಯನ ಸೃಷ್ಟಿ. ಮನುಷ್ಯನ ಏಳಿಗೆಯೇ ನಿಜವಾದ ಅಭಿವೃದ್ಧಿ. ಆ ದೃಷ್ಟಿಕೋನದಿಂದ ಆಡಳಿತವನ್ನು ನೋಡಬೇಕು.
ಅತ್ಯುತ್ತಮ ಆಡಳಿತ ಎಂಬ ಭಜನೆಯಾಗಲಿ ಅಥವಾ ಕೆಟ್ಟ ಆಡಳಿತ ಎಂಬ ದ್ವೇಷವೂ ಒಳ್ಳೆಯದಲ್ಲ. ಯಾವುದೋ ಪಕ್ಷ ಅಥವಾ ಪಂಥದ ವಕ್ತಾರರಂತೆ ಮಾತನಾಡುವುದು ಸುಲಭ. ಏಕೆಂದರೆ ಅವರನ್ನು ಹೊಗಳಲು ಮತ್ತು ಟೀಕಿಸಲು ಹಲವಾರು ಕಾರಣಗಳು ಸಿಗುತ್ತವೆ. ಅಂಕಿಅಂಶಗಳು ದೊರೆಯುತ್ತದೆ. ಆದರೆ ಅದು ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುವುದಿಲ್ಲ.
ಕೆಲವು ಆರ್ಥಿಕ ತಜ್ಞರು, ರಾಜಕೀಯ ಚಿಂತಕರು, ಮಾಧ್ಯಮ ಪಂಡಿತರುಗಳು ಹಲವಾರು ವೇದಿಕೆಗಳಲ್ಲಿ ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕರು ಮೋದಿಯವರ ಆಡಳಿತದ ಬಗ್ಗೆ ಲೇಖನಗಳನ್ನು ಬರೆಯುತ್ತಾರೆ. ಆದರೆ ನಾವುಗಳು ಇವುಗಳ ಪ್ರಭಾವಕ್ಕೆ ಒಳಗಾಗಬಾರದು. ಇದನ್ನು ಒಂದು ಮಾಹಿತಿ ಎಂದು ಪರಿಗಣಿಸಿ ಇದರ ಆಧಾರದ ಮೇಲೆ ನಾವೇ ಚಿಂತಿಸಿ ಒಂದು ಅಭಿಪ್ರಾಯ ರೂಪಿಸಿಕೊಳ್ಳಬೇಕು.
ನಮ್ಮಲ್ಲಿ ಸ್ವತಂತ್ರ ಚಿಂತನೆಯ ಕೊರತೆ ಬಹಳ ಇದೆ. ನಾವು ತಜ್ಞರಲ್ಲದೇ ಇರಬಹುದು. ಆದರೆ ಯೋಚಿಸುವ ಶಕ್ತಿ ಇದೆಯಲ್ಲವೇ, ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲಿ ಸಿಗುತ್ತದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ನಾನೇ ಆಗಲಿ ಅಥವಾ ಯಾರೇ ಆಗಿರಲಿ ಏನೇ ಬರೆದರು ಅದು ನಮ್ಮ ಅಭಿಪ್ರಾಯ. ದೇಶದ ಪ್ರತಿ ವ್ಯಕ್ತಿಯ ಸ್ವತಂತ್ರ ಚಿಂತನೆ ಬೆಳೆಸಿಕೊಂಡರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ. ಚುನಾವಣಾ ರಾಜಕೀಯದಲ್ಲಿ ತನ್ನ ಮತವನ್ನು ಜವಾಬ್ದಾರಿಯಿಂದ ಚಲಾಯಿಸಲು ಸಾಧ್ಯ.
ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತವನ್ನು ವಿಮರ್ಶಸಬೇಕು. ಈ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೇರಿದೆಯೇ ಅಥವಾ ಕುಸಿದಿದೆಯೇ, ಜಾತಿ ಧರ್ಮಗಳ ಸಾಮಾಜಿಕ ಸಾಮರಸ್ಯ ಉತ್ತಮವಾಗಿದೆಯೇ ಅಥವಾ ಹದಗೆಟ್ಟಿದೆಯೇ, ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ, ಅವರು ಘೋಷಿಸುವ ಯೋಜನೆಗಳು ಕೇವಲ ಪುಸ್ತಕದಲ್ಲಿ ಮಾತ್ರವೇ ಅಥವಾ ವಾಸ್ತವವಾಗಿ ಜಾರಿಯಾಗುತ್ತಿದೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸ್ಥೆಗಳನ್ನು ಅವರು ಸರಿಯಾಗಿ ನಿಭಾಯಿಸುತ್ತಿದ್ದಾರೆಯೇ ಅಥವಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆಯೇ ಅಥವಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಯೇ, ಅವರ ಪ್ರತಿ ಮಾತುಗಳಲ್ಲಿ ಇರುವ ಸ್ವಾಭಾವಿಕತೆ ಅಥವಾ ಕೃತಕತೆ ಎಷ್ಟು, ಅದರಲ್ಲಿ ಅಡಗಿರುವ ಪ್ರೀತಿ ವಿಶ್ವಾಸ ಕರುಣೆ ಸ್ವಾರ್ಥ – ನಿಸ್ವಾರ್ಥ ದ್ವೇಷ ಅಸೂಯೆ ಕ್ರೌರ್ಯದ ಪ್ರಮಾಣ ಯಾರ ಬಗ್ಗೆ ಹೇಗಿದೆ, ಭರವಸೆ ಮತ್ತು ಕಾರ್ಯಗತಗೊಳಿಸುವಿಕೆ ಇವುಗಳ ನಡುವಿನ ಅಂತರ ಎಷ್ಟಿದೆ ಮುಂತಾದ ವಿಷಯಗಳನ್ನು ಸೂಕ್ಷ್ಮವಾಗಿ ಮತ್ತು ಕೂಲಂಕುಷವಾಗಿ ನಮ್ಮ ಮನದಲ್ಲಿ ಚಿಂತನ ಮಂಥನ ನಡೆಸಬೇಕು.
ಇಲ್ಲಿಯೂ ನಮಗೆ ಲಾಭವಾಗುವ ವಿಷಯಗಳು ಉತ್ತಮ ಮತ್ತು ತೊಂದರೆಯಾಗುವ ವಿಷಯಗಳು ಕೆಟ್ಟದ್ದು ಎಂಬ ಆಧಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸದೆ ಒಟ್ಟು ದೇಶದ ಹಿತಾಸಕ್ತಿಯಿಂದ ನೋಡಬೇಕು. ಆಗ ಮಾತ್ರ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದ ಬಗ್ಗೆ ನಿಷ್ಪಕ್ಷಪಾತ ಮತ್ತು ವಾಸ್ತವ ವಿಮರ್ಶೆ ಸಾಧ್ಯ. ಅಷ್ಟು ಸಮಯ ಮತ್ತು ಆಸಕ್ತಿ ಇದ್ದರೆ ಮಾತ್ರ ಇದರ ಬಗ್ಗೆ ಒಂದಷ್ಟು ಖಚಿತವಾಗಿ ಮಾತನಾಡಬಹುದು. ಅವರ ಅವಧಿಯ Quality ಮತ್ತು Quantity ಯ ಪ್ರಮಾಣ ನಿರ್ಧರಿಸಬಹುದು.
ಭಾರತದ ಶ್ರೀಮಂತರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ, ಆರ್ಥಿಕ ಗಾತ್ರ ಹೇಗೆ ಬೆಳೆಯುತ್ತಿದೆ, ದೇಶದ ಜಾಗತಿಕ ವರ್ಚಸ್ಸು ಹೇಗೆ ವೃದ್ಧಿಸುತ್ತಿದೆ ಎಂದು ಯೋಚಿಸುವ ಮನಸ್ಸುಗಳು ಹಾಗೆಯೇ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ನಿರ್ಗತಿಕರು, ಸಾಮಾನ್ಯ ವರ್ಗದ ಜನ ಹೇಗೆ ನರಳುತ್ತಿದ್ದಾರೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಬೇಕು.
ಬುಲೆಟ್ ಟ್ರೈನ್ ಮತ್ತು ಹಸಿವಿನ ಸಾವು ಎರಡೂ ನಿಮ್ಮನ್ನು ಕಾಡಬೇಕು, ಗಾಂಧಿ ಮತ್ತು ಗೋಡ್ಸೆ ಅರ್ಥವಾಗಬೇಕು, ಅಂಬೇಡ್ಕರ್ ಮತ್ತು ಮನುಸ್ಮೃತಿಯ ವಾಸ್ತವ ಪ್ರಜ್ಞೆ ಇರಬೇಕು. ಕಾರ್ಲ್ ಮಾರ್ಕ್ಸ್ ಮತ್ತು ಗೌತಮ್ ಅಧಾನಿ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
ಆಗ ಭಾರತದ ದಿಕ್ಕು ದೆಸೆಯ ಬಗ್ಗೆ ಒಂದು ಅಭಿಪ್ರಾಯ ವ್ಯಕ್ತಪಡಿಸಬಹುದು. ಮೋದಿಯವರ ಸಾಮರ್ಥ್ಯ ಮತ್ತು ಯೋಗ್ಯತೆ ಅಳೆಯಬಹುದು. ಅದರೊಂದಿಗೆ ನಮ್ಮ ಅರ್ಹತೆಗಳನ್ನು, ಮಾನವೀಯತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಬಹುದು.
ಸ್ವಾವಲಂಬನೆಯ ಭಾರತ ಆಗಬೇಕಾದರೆ ಸ್ವಾಭಿಮಾನಿ ಭಾರತ ಮೊದಲ ಆಧ್ಯತೆಯಾಗಬೇಕು. ಗುಲಾಮಗಿರಿ ಅಥವಾ ಭಜನೆ ಮಂಡಳಿ ಬಿಡಿ. ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳಿ. ಮನಸ್ಸಿನ ಅಗಾಧವಾದ ಸರೋವರದಲ್ಲಿ ಸ್ವಚ್ಛಂದವಾಗಿ ವಿಹರಿಸಿ. ಸ್ವಾತಂತ್ರ್ಯದ ಸವಿಯನ್ನು ಅನುಭವಿಸಿ…..
ಭಾರತ ಸರ್ಕಾರದ ಹತ್ತು ವರ್ಷಗಳು…..
ಅದನ್ನು ನರೇಂದ್ರ ಮೋದಿಯವರ ಆಡಳಿತದ ಅವಧಿ ಎನ್ನುವುದೇ ಹೆಚ್ಚು ಸೂಕ್ತವಾಗಿದೆ. ಬಹುತೇಕ ಈ ಹತ್ತು ವರ್ಷಗಳು ಭಾರತದ ಬಹುತೇಕ ರಾಜಕೀಯ, ಆಡಳಿತ, ಮಾಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಈ ಏಕ ವ್ಯಕ್ತಿಯ ಸುತ್ತಲೇ ತಿರುಗುತ್ತಿರುವುದು ವಾಸ್ತವ…..
ಈ ಹತ್ತು ವರ್ಷಗಳಲ್ಲಿ ನಿಜವಾಗಿಯೂ ಸಾಕಷ್ಟು ಬದಲಾವಣೆ ಆಗಿದೆ. ಅದರಲ್ಲಿ ಕೆಲವು ಉತ್ತಮ, ಕೆಲವು ಆತಂಕಕಾರಿ ಎರಡೂ ಇವೆ. ಕೆಲವು ತಕ್ಷಣದ ಪರಿಣಾಮ ಬೀರಿದರೆ ಮತ್ತೊಂದಿಷ್ಟು ದೀರ್ಘಕಾಲದಲ್ಲಿ ಪರಿಣಾಮ ಬೀರಬಹುದು. ಅವುಗಳಲ್ಲಿ ಕೆಲವು ಮುಖ್ಯವಾದವುಗಳು……..
1) ಭ್ರಷ್ಟಾಚಾರದ ವಿರುದ್ಧ ಆಕ್ರೋಶದಿಂದ ಮತದಾನ ಮಾಡಿದ ಭಾರತೀಯ ಮತದಾರರಿಗೆ ಮೋದಿ ಕೊಟ್ಟಿದ್ದೇನು ?
——— ಹೌದು 2014 ರಲ್ಲಿ ಮತದಾರರು ಬಯಸಿದ ಬಹುಮುಖ್ಯ ಬದಲಾವಣೆಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಬಹುಮುಖ್ಯವಾದುದು. ಅಣ್ಣಾ ಹಜಾರೆಯವರ ಹೋರಾಟದ ಮುಂದುವರಿದ ಭಾಗವಾಗಿ ಅನೇಕ ಹಗರಣಗಳ ಬಗ್ಗೆ ಮಾಧ್ಯಮಗಳು ಮಾಡಿದ ಅತಿರಂಜಿತ ವರದಿಗಳ ಪರಿಣಾಮ ಮತದಾರರು ನರೇಂದ್ರ ಮೋದಿಯವರನ್ನು ಬೆಂಬಲಿಸಿದರು. ಈ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ನಮಗೆ ಕೇಳಿಕೊಂಡು ಅದಕ್ಕೆ ತುಂಬಾ ವಿಶಾಲವಾದ ಮತ್ತು ಮುಕ್ತವಾದ ಆತ್ಮಸಾಕ್ಷಿಯ ನೆರಳಲ್ಲಿ ಯೋಚಿಸಿದರೆ ಉತ್ತರ ಸಿಗಬಹುದು.
ಭ್ರಷ್ಟಾಚಾರದ ಬಗ್ಗೆ ಇಡೀ ದೇಶದ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಮೋದಿಯವರಿಗೆ ಸಲ್ಲಬೇಕು. ಭ್ರಷ್ಟಾಚಾರ ಈ ದೇಶಕ್ಕೊಂದು ಶಾಪ ಎಂದು ನಿರಂತರವಾಗಿ ಮಾತನಾಡುತ್ತಾ ಬಂದರು. ಅನೇಕ ಭ್ರಷ್ಟರ ಮೇಲೆ ದಾಳಿಗಳಾದವು. ಭ್ರಷ್ಟಾಚಾರದ ನಿರ್ಮೂಲನೆಯ ಭಾಗವಾಗಿ ನೋಟು ಅಮಾನ್ಯೀಕರಣ, ಜಿಎಸ್ಟಿ, ಎಲ್ಲಾ ಆರ್ಥಿಕ ವ್ಯವಹಾರಗಳ ಡಿಜಟಲೀಕರಣ, ಬ್ಯಾಂಕ್ ಖಾತೆ ತೆರೆಯಲು ಯೋಜನೆಗಳು, ಯಾವುದೇ ದೊಡ್ಡ ಗಂಭೀರ ಹಗರಣ ನಡೆಯದಂತೆ ಎಚ್ಚರಿಕೆ ಮುಂತಾದ ಕ್ರಮಗಳನ್ನು ಕೈಗೊಂಡರು. ಅದಕ್ಕೆ ಅಭಿನಂದನಾರ್ಹರು.
ಅದೇರೀತಿ ಕೇವಲ ವಿರೋಧ ಪಕ್ಷಗಳನ್ನಷ್ಟೇ ಗುರಿ ಮಾಡಿ ದಾಳಿ ಮಾಡುವುದು, ಹೆದರಿಸಿ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೆಳೆಯುವುದು, ಇಡೀ ದೇಶದಲ್ಲಿ 300 ಕ್ಕೂ ಹೆಚ್ಚು ಶಾಸಕರನ್ನು ಬಹಿರಂಗ ಹರಾಜಿನಲ್ಲಿ ಖರೀದಿಸಿದಂತೆ ಮಾಡಿ ಸರ್ಕಾರಗಳನ್ನು ರಚಿಸಿರುವುದು, ತಮ್ಮ ಪಕ್ಷದ ಭ್ರಷ್ಟರನ್ನು ರಕ್ಷಿಸಿರುವುದು, ಹಗರಣಗಳ ಆರೋಪದ ಬಗ್ಗೆ ತನಿಖೆ ಮಾಡಿಸದಿರುವುದು ಹೀಗೆ ಕೆಲವು ವಿಷಯಗಳಲ್ಲಿ ಅಪ್ರಾಮಾಣಿಕ ಮತ್ತು ಪಕ್ಷಪಾತ ಮಾಡಿರುವುದನ್ನು ನಿಷ್ಪಕ್ಷಪಾತ ಮನಸ್ಸಿನ ಜನರು ಮರೆಯಲಾರರು.
2) ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದರು ಎಂದು ಹೇಳಲಾದ ಸಾಮಾನ್ಯ ವ್ಯಕ್ತಿ ಪ್ರಧಾನಿಯಾಗಿ ಆಯ್ಕೆಯಾದ ಅತ್ಯದ್ಭುತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋದಿ ಸಲ್ಲಿಸಿದ ಕೃತಜ್ಞತೆಗಳು ಏನು ?
——— ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ವೈವಿಧ್ಯಮಯ ದೇಶದಲ್ಲಿ ಅತ್ಯಂತ ಸಾಧಾರಣ ಕುಟುಂಬದ ಸಾಮಾನ್ಯ ವ್ಯಕ್ತಿ ಚುನಾವಣೆಯ ಮೂಲಕ ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಪಕ್ಷವನ್ನು ಎರಡು ಬಾರಿ ಹೀನಾಯವಾಗಿ ಸೋಲಿಸಿ ಅತ್ಯಂತ ಹೆಚ್ಚು ದಾಖಲೆಯ ಬಹುಮತದಿಂದ ಆಯ್ಕೆಗೊಂಡು ಈಗಲೂ ಜನಪ್ರಿಯತೆಯಲ್ಲಿ ಮುಂದುವರಿಯುತ್ತಿರುವುದು ಬಹುದೊಡ್ಡ ಸಾಧನೆ. ಚುನಾವಣಾ ಸಮಯದಲ್ಲಿ ಬಹಳ ಆಕ್ರಮಣಕಾರಿಯಾಗಿ ಪ್ರಚಾರ ಮಾಡುವ ಮೋದಿಯವರು ಚುನಾವಣಾ ಫಲಿತಾಂಶದ ನಂತರ ಸೋತಾಗಲು ವಿರೋಧಿಗಳನ್ನು ಅಭಿನಂದಿಸಿ ತಮ್ಮ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಾರೆ.
ಹಾಗೆಯೇ, ನ್ಯಾಯಾಂಗ ವ್ಯವಸ್ಥೆಯೂ ಸೇರಿ ಕೆಲವು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿರುವುದು, ವಿರೋಧ ಪಕ್ಷಗಳನ್ನು ತೀವ್ರವಾಗಿ ನಿರ್ಲಕ್ಷಿಸಿರುವುದು, ಸಂಪುಟದ ಇತರ ಸಚಿವರಿಗೆ ಯಾವುದೇ ಮಾನ್ಯತೆ ನೀಡದೆ ಏಕ ವ್ಯಕ್ತಿ ಪ್ರದರ್ಶನ ಮಾಡುವುದು, ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ಕೆಲವು ವಿವಾದಾತ್ಮಕ ಕಾನೂನುಗಳನ್ನು ಜಾರಿಗೊಳಿಸಲು ಪರೋಕ್ಷವಾಗಿ ಪ್ರಯತ್ನಿಸುವುದು ಮುಂತಾದ ತನ್ನನ್ನೇ ಬೆಳೆಸಿದ ಸಂವಿಧಾನದ ವಿರೋಧಿ ನಡವಳಿಕೆಗಳು ಕೂಡ ಅವರ ಅವಧಿಯಲ್ಲಿ ನಡೆಯುತ್ತಿದೆ.
3) ಹತ್ತು ವರ್ಷಗಳ ಹಿಂದಿನವರೆಗಿನ ಮತ್ತು ನಂತರದ ಈಗಿನ ಸಾಮಾಜಿಕ ಸಾಮರಸ್ಯ ಹೇಗಿದೆ ? ಅದಕ್ಕೆ ಮೋದಿಯವರ ಕೊಡುಗೆ ಏನು ?
———– ಭಾರತದ ಸಾಮಾಜಿಕ ವ್ಯವಸ್ಥೆಯ ರಚನೆಯೇ ಬಹಳ ಅಸಮಾನತೆಯಿಂದ ಕೂಡಿದೆ. ಜಾತಿ ವ್ಯವಸ್ಥೆ, ಆರ್ಯ ದ್ರಾವಿಡ ಭಿನ್ನತೆ, ನಗರ ಹಳ್ಳಿಗಳ ವ್ಯತ್ಯಾಸ, ಅಕ್ಷರಸ್ಥ ಅನಕ್ಷರಸ್ಥರ ಕಂದಕ, ಬಡವ ಶ್ರೀಮಂತರ ಬೇದ, ಭಾಷಾ ವೈವಿಧ್ಯತೆ, ಧಾರ್ಮಿಕ ಶ್ರೇಷ್ಠತೆಯ ವ್ಯಸನ ಎಲ್ಲವೂ ಸೇರಿ ಗೊಂದಲಮಯವಾಗಿದೆ. ಮೋದಿಯವರು ” ಏಕ್ ಭಾರತ್ ಶ್ರೇಷ್ಠ್ ಭಾರತ್ ” ಪರಿಕಲ್ಪನೆಯನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಘೋಷಣೆಯನ್ನು ಆಗಾಗ ಉಚ್ಚರಿಸುತ್ತಲೇ ಇರುತ್ತಾರೆ. ಒಂದೇ ಬಾರಿಗೆ ಚುನಾವಣೆ, ಒಂದೇ ರೇಷನ್ ಕಾರ್ಡ್, ಏಕರೂಪ ನಾಗರಿಕ ಸಂಹಿತೆ ಮುಂತಾದ ವಿಷಯಗಳನ್ನು ಜಾರಿ ಮಾಡಿ ಸಾಮರಸ್ಯ ಮೂಡಿಸುವ ಕನಸನ್ನು ಹೊಂದಿದ್ದಾರೆ. ಹಾಗೆ ಚಿಂತಿಸಲು ಅವರು ಸ್ವತಂತ್ರರು.
ಆದರೆ ಈ ಹತ್ತು ವರ್ಷಗಳಲ್ಲಿ ಭಾರತದ ಸಾಮಾಜಿಕ ಸಾಮರಸ್ಯ ಕುಸಿದಿದೆ. ಈ ವಿಷಯದಲ್ಲಿ ಮೋದಿಯವರ ಮಾತು ಮತ್ತು ಕೃತಿಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಅವರು ತಮ್ಮ ಮಾತೃ ಸಂಸ್ಥೆಯ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗ ಸತ್ಯ. ಇವರ ಕಾಲದಲ್ಲಿ ಕೋಮು ಗಲಭೆಗಳು ಕಡಿಮೆಯಾಗಿರುವುದು ನಿಜ. ಆದರೆ ಆಂತರ್ಯದಲ್ಲಿ ಅಸಮಾಧಾನ ಅಡಗಿದೆ. ಸಾಮಾಜಿಕ ಜಾಲತಾಣಗಳ ಪರಿಣಾಮವಾಗಿ ಈ ಸಾಮರಸ್ಯ ಹದಗೆಟ್ಟಿರುವುದು ಹೆಚ್ಚಾಗಿರುವುದಾದರೂ ಅದಕ್ಕೆ ವೇದಿಕೆ ಕಲ್ಪಿಸಿರುವುದು ಮೋದಿಯವರ ಆಡಳಿತ ವೈಖರಿ. ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ.
4) ಮೋದಿಯವರ ಆಡಳಿತದಲ್ಲಿ ಆರ್ಥಿಕ ಪ್ರಗತಿ ಹೇಗಿದೆ ? ಜನರ ಜೀವನಮಟ್ಟದಲ್ಲಿ ಸುಧಾರಣೆ ಆಗಿದೆಯೇ ?
————- ಈ ವಿಷಯದಲ್ಲಿ ಎರಡು ರೀತಿಯ ಬೆಳವಣಿಗೆಯನ್ನು ಗಮನಿಸಬಹುದು. ಒಂದು ಕಡೆ ಭಾರತದ ಒಟ್ಟು ಆರ್ಥಿಕತೆ ವಿಶ್ವಮಟ್ಟಲ್ಲಿ ಐದನೆಯ ಸ್ಥಾನಕ್ಕೆ ಏರಿದೆ. ಶೀಘ್ರದಲ್ಲೇ ಮೂರನೆಯ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಗಳು ಸಾಗಿವೆ. ಜಿಎಸ್ಟಿ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಿಂದ ರಫ್ತು ಹೆಚ್ಚಾಗುತ್ತಿದೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ಸ್ಥಾನಮಾನ ಬೆಳೆಯುತ್ತಿದೆ. ಬುಲೆಟ್ ಟ್ರೈನ್, ವಿಮಾನ ನಿಲ್ದಾಣಗಳು, ದೊಡ್ಡ ದೊಡ್ಡ ಫ್ಲೈ ಓವರ್ ಗಳು, ಸುರಂಗಮಾರ್ಗಗಳು, ಐಟೆಕ್ ಕಟ್ಟಡಗಳು ತಲೆ ಎತ್ತುತ್ತಿವೆ. ಷೇರು ಮಾರುಕಟ್ಟೆ ದಾಖಲೆ ಗರಿಷ್ಠ ಮಟ್ಟ ತಲುಪುತ್ತಿದೆ.
ಇನ್ನೊಂದು ಕಡೆ ಅಷ್ಟೇ ವೇಗದಲ್ಲಿ ಮಧ್ಯಮವರ್ಗದ ಜನರು ಕೆಳ ಮಧ್ಯಮವರ್ಗಕ್ಕೆ ಜಾರುತ್ತಿದ್ದಾರೆ. ಶಿಕ್ಷಣ ಆರೋಗ್ಯ ಸಾರಿಗೆ ದಿನ ನಿತ್ಯದ ಅವಶ್ಯಕ ವಸ್ತುಗಳು ದುಬಾರಿಯಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯ ಆಕ್ರಮಣದಿಂದ ಬದುಕು ಅತೃಪ್ತಿಯನ್ನು ಹೆಚ್ಚಿಸುತ್ತಿದೆ. ರಸ್ತೆ ಟೋಲ್ ಗಳೇ ದೊಡ್ಡ ಹೊರೆಯಾಗುತ್ತಿದೆ. ಬಡವ ಶ್ರೀಮಂತರ ಅಂತರ ಹೆಚ್ಚಾಗುತ್ತಿದೆ. ಹಿಂದಿಗಿಂತ ಇಂದು ಅನೇಕ ಕಾರಣಗಳಿಂದ ಬದುಕು ಭಾರವೆನಿಸುತ್ತಿದೆ.
ಕೆಲವರು ಈ ಕಾರ್ಯಯೋಜನೆಗಳು ಭವಿಷ್ಯದಲ್ಲಿ ಉತ್ತಮ ಪರಿಣಾಮ ಬೀರಬಹುದು ಎಂದರೆ ಮತ್ತೆ ಕೆಲವರು ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದೂ ಹೇಳುತ್ತಾರೆ. ಆರ್ಥಿಕ ಪರಿಸ್ಥಿತಿಯನ್ನು ಭವಿಷ್ಯವೇ ನಿರ್ಧರಿಸಬೇಕು. ಆದರೆ ಆರ್ಥಿಕ ಕೇಂದ್ರೀಕೃತ ಯೋಜನೆಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಮಾನವೀಯ ಮೌಲ್ಯಗಳು ತೀರಾ ಕೆಳಮಟ್ಟಕ್ಕೆ ಕುಸಿಯುತ್ತಿದೆ ಎಂಬುದು ವಾಸ್ತವ.
5) ಮೋದಿಯವರ ವಿದೇಶಾಂಗ ನೀತಿಯು ದೇಶದ ಭದ್ರತೆಗೆ ಪೂರಕವೇ ? ಮಾರಕವೇ ?
——- ಗುಜರಾತಿ ಮೂಲದ ಮೋದಿಯವರು ನೀತಿ ನಿಯಮಗಳಿಗಿಂತ ಎಲ್ಲದರಲ್ಲೂ ಲಾಭದ ದೃಷ್ಟಿಕೋನದಿಂದಲೇ ನೋಡುತ್ತಾರೆ. ಆ ದೃಷ್ಟಿಯಿಂದ ಈ ಕ್ಷಣದಲ್ಲಿ ಭಾರತಕ್ಕೆ ಅವರ ಅತ್ಯಂತ ಕ್ರಿಯಾಶೀಲ ವಿದೇಶಿ ಭೇಟಿಗಳಿಂದ ಸ್ವಲ್ಪಮಟ್ಟಿಗೆ ಲಾಭವಾಗುತ್ತಿರುವುದು ನಿಜ. ವ್ಯಾಪಾರ ವಹಿವಾಟಿನ ಜೊತೆಗೆ ಭಾರತದ ಬಗ್ಗೆ ವಿದೇಶಿಯರಲ್ಲಿ ಒಳ್ಳೆಯ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬುದಾಗಿ ಬಿಂಬಿಸುತ್ತಿದ್ದಾರೆ. ವೈಯಕ್ತಿಕವಾಗಿಯೂ ತಮ್ಮ ಇಮೇಜನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ರಷ್ಯಾ ಮತ್ತು ಅಮೆರಿಕಾದೊಂದಿಗೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ.
ಆದರೆ ಮೋದಿಯವರ ನಂತರದ ಆಡಳಿತಗಾರರಿಗೆ ಈ ರೀತಿಯ ವೈಯುಕ್ತಿಕ ಮಟ್ಟದ ವಿದೇಶಾಂಗ ನೀತಿ ಅನುಸರಿಸುವುದು ಕಷ್ಟ. ಅಲಿಪ್ತ ನೀತಿಯ ನಮ್ಮ ಅತ್ಯುತ್ತಮ ವಿದೇಶಾಂಗ ನೀತಿ ಎಡಬಿಡಂಗಿಯಾಗುವ ಸಾಧ್ಯತೆಯೂ ಇದೆ. ಶಾಂತಿಯ ಕಾಲದಲ್ಲಿ ಅದರ ಪರಿಣಾಮ ಗೊತ್ತಾಗುವುದಿಲ್ಲ. ಆದರೆ ಯುದ್ದ, ವ್ಯಾಪಾರದ ಸಂಘರ್ಷ ಮುಂತಾದ ಸಂದರ್ಭದಲ್ಲಿ ವಿದೇಶಾಂಗ ನೀತಿ ಅಗ್ನಿ ಪರೀಕ್ಷೆಗೆ ಒಳಪಡುತ್ತದೆ. ವಿದೇಶಾಂಗ ನೀತಿಯನ್ನು ವೈಯಕ್ತಿಕ ಇಚ್ಛೆಯ ಮಟ್ಟಕ್ಕೆ ಇಳಿಸಿದ ಅಪಕೀರ್ತಿ ಮೋದಿಯವರಿಗೆ ಸಲ್ಲುತ್ತದೆ.
6) ಭಾರತದ ಭದ್ರತಾ ದೃಷ್ಟಿಯಿಂದ ಮೋದಿಯವರ ಸಾಧನೆ ಏನು ?
——– ಸ್ವಲ್ಪ ಮಟ್ಟಿಗೆ ಆಕ್ರಮಣಕಾರಿ ಮತ್ತು ಯುದ್ದೋತ್ಸಾಹಿ ಮೋದಿಯವರು ದೇಶದ ರಕ್ಷಣೆಗಾಗಿ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂಬುದು ನಿರ್ವಿವಾದ. ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯನ್ನು ಮಾಡುತ್ತಿದ್ದಾರೆ. ವಿದೇಶೀ ಶಕ್ತಿಗಳ ಜೊತೆ ಪ್ರಬಲ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದಾರೆ.
ಆತ್ಮ ನಿರ್ಬರ ಭಾರತ ಎಂಬ ಪರಿಕಲ್ಪನೆಯ ಅಡಿಯಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಶ್ರಮಿಸುತ್ತಿದ್ದಾರೆ. ಸೈನ್ಯದ ಆಧುನಿಕತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಈ ವಿಷಯದಲ್ಲಿ ಅವರ ಸಾಧನೆ ತೃಪ್ತಿಕರ ಅಥವಾ ಹೆಮ್ಮೆ ಪಡುವಂತೆ ಇದೆ. ಭಾರತದ ರಕ್ಷಣಾ ವ್ಯವಸ್ಥೆ ಬಲಗೊಂಡಿದೆ. ಆದರೂ ಚೀನಾದ ಆಕ್ರಮಣ ತಡೆಯಲು ಸಾಧ್ಯವಾಗಿಲ್ಲ. ಚೀನಾ ಈಗಲೂ ಒಳ ಪ್ರವೇಶಿಸಿದೆ ಎಂದು ವರದಿಗಳು ಹೇಳುತ್ತವೆ. ಭಾರತದ ನಿಜವಾದ ಅಹಿಂಸಾ ಶಕ್ತಿಗೆ ವಿರುದ್ಧವಾಗಿ ಭಾರತವನ್ನು ಶಸ್ತ್ರಾಸ್ತ್ರ ಶಕ್ತಿಯಾಗಿ ಬೆಳೆಸುವ ಪ್ರಯತ್ನ ಎಷ್ಟು ಸರಿ ಎಂಬ ಪ್ರಶ್ನೆ ಕೆಲವರನ್ನು ಕಾಡಬಹುದು.
7) ಮೋದಿ ಸರಳ ವ್ಯಕ್ತಿಯೇ ಅಥವಾ ಆಡಂಬರದ ಪ್ರದರ್ಶನ ಬಯಸುವ ಶೋಕಿ ಸ್ವಭಾವದವರೇ ?
———– ಕೌಟುಂಬಿಕ ಜವಾಬ್ದಾರಿ ಹೊಂದಿರದ, ಇಳಿ ವಯಸ್ಸಿನಲ್ಲಿಯೂ ಅತ್ಯುತ್ತಮ ಆರೋಗ್ಯ ಕಾಪಾಡಿಕೊಂಡಿರುವ, ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಮೋದಿಯವರು ಸರಳತೆಯ ಮುಖವಾಡ ಹೊಂದಿರುವ ಆಡಂಬರ ಪ್ರದರ್ಶನದ ವ್ಯಕ್ತಿ. ಮೇಲ್ನೋಟಕ್ಕೆ ಸರಳ ಎಂದು ಹೇಳಿದರು ಅತ್ಯುತ್ತಮ ಗುಣಮಟ್ಟದ ವಸ್ತ್ರ ವಿನ್ಯಾಸ, ಆಹಾರ ಕ್ರಮ, ದೇಹ ಸೌಂದರ್ಯದ ಮುತುವರ್ಜಿ, ಅತಿಹೆಚ್ಚು ಪ್ರಚಾರಪ್ರಿಯ, ಸದಾ ಮುಂಚೂಣಿಯಲ್ಲಿ ಇರಬೇಕು ಎಂದು ಹಾತೊರೆಯುವ ಗುಣ ಸ್ವಭಾವ, ಸರ್ವಾಧಿಕಾರಿ ಮನೋಭಾವವನ್ನು ಗುರುತಿಸಬಹುದು.
ಹೀಗೆ ಒಟ್ಟಾರೆಯಾಗಿ ನರೇಂದ್ರ ಮೋದಿಯವರು ಮೇಲ್ನೋಟಕ್ಕೆ ದೇಶವನ್ನು ಸುಭದ್ರ ಮತ್ತು ಪ್ರಗತಿಯ ಹಾದಿಯಲ್ಲಿ ನಡೆಸುತ್ತಿದ್ದಾರೆ ಎನಿಸಿದರು ಆಂತರ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಹುದೊಡ್ಡ ಅಪಾಯ ಮತ್ತು ಸವಾಲನ್ನು ಒಡ್ಡುತ್ತಿದ್ದಾರೆ. ಏಕ ವ್ಯಕ್ತಿ ಪ್ರದರ್ಶನ ನೀಡುತ್ತಿದ್ದಾರೆ. ನಡೆ ನುಡಿಯ ನಡುವೆ ಸಾಕಷ್ಟು ಅಂತರದಲ್ಲಿ ಕೆಲಸ ಮಾಡುತ್ತಾರೆ.
ಏನೇ ಆಗಲಿ, ಗೋವಾ, ಮಣಿಪುರ, ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ರಾಜಕೀಯ ನಡೆಗಳು ಮತ್ತು ಜಾರಿ ನಿರ್ದೇಶನಾಲಯದ ದುರುಪಯೋಗ ಮೋದಿ ಆಡಳಿತದ ಕಪ್ಪು ಚುಕ್ಕೆಗಳಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಶ್ರೀಮಂತರ ಪರ ಬಡವರ ವಿರೋಧಿ ಆಪಾದನೆಯಿಂದ ಮುಕ್ತವಾಗುವುದು ಕಷ್ಟ. ಹಾಗೆಯೇ ಕೆಲವರ ಪಾಲಿಗೆ ಆಧುನಿಕ ಭಾರತದ ಶಿಲ್ಪಿ, ಸನಾತನ ಧರ್ಮದ ಪುನರುಜ್ಜೀವನ ಮಾಡಿದ ಮಹಾನ್ ಹಿಂದೂ ನಾಯಕ, ಇತಿಹಾಸ ಬದಲಿಸಿದ ಹರಿಕಾರ ಎಂದೂ ದಾಖಲಾಗಬಹುದು.
ಒಟ್ಟಿನಲ್ಲಿ ನಮ್ಮ ದೇಶದ ಪ್ರಧಾನಿಯವರ ಹತ್ತು ವರ್ಷಗಳ ಆಡಳಿತದ ಅವಧಿಯನ್ನು ಸಂವಿಧಾನಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ವಿಮರ್ಶಿಸುವ ಒಂದು ಸರಳ ವೈಯಕ್ತಿಕ ಪ್ರಯತ್ನವಿದು. ಇದು ಪರಿಪೂರ್ಣವೇನು ಅಲ್ಲ. ವಿಮರ್ಶೆಯ ವ್ಯಾಪ್ತಿ ತುಂಬಾ ವಿಶಾಲವಾದುದು. ಇದು ಸಾಮಾನ್ಯ ವ್ಯಕ್ತಿಯಾದ ನನ್ನ ಅಭಿಪ್ರಾಯ ಮಾತ್ರ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿದ್ದರೆ ಅದನ್ನೂ ಸ್ವಾಗತಿಸುತ್ತಾ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..