Spread the love

ಜೀವ ನೀಡುವ ತಂದೆ,
ಜನ್ಮ ನೀಡುವ ತಾಯಿ,
ತುತ್ತು ನೀಡುವ ಅಕ್ಕ,
ಬಟ್ಟೆ ತೊಡಿಸುವ ಅಣ್ಣ,
ಕೈ ಹಿಡಿದು ನಡೆಯುವ ತಮ್ಮ,
ಅಪ್ಪಿ ಮಲಗುವ ತಂಗಿ,
ನನ್ನೊಳಗಿನ ಗಂಡ/ಹೆಂಡತಿ,
ನನ್ನ ಭವಿಷ್ಯವೇ ಆದ ಮಗ,
ಸರ್ವಸ್ವವೇ ಆದ ಮಗಳು,
ನನ್ನಾಟದ ಜೀವ ಅಜ್ಜ,
ನನ್ನ ಮುನಿಸಿನ ಜೀವ ಅಜ್ಜಿ……….

ವಾವ್,
ನಮ್ಮನ್ನು ಬೆಸೆದ ರಕ್ತ ಸಂಬಂಧಗಳೇ ನಿಮಗೂ ನಿಯತ್ತಾಗಿರಲು ಸಾಧ್ಯವಾಗುತ್ತಿಲ್ಲ.
ನಿಮ್ಮ ಋಣ ತೀರಿಸಲೂ ಸಾಧ್ಯವಾಗುತ್ತಿಲ್ಲ.

ಎಷ್ಟೊಂದು ಪ್ರೀತಿ,
ಎಷ್ಟೊಂದು ಪ್ರೇಮ,
ಎಷ್ಟೊಂದು ಅಕ್ಕರೆ,
ಎಷ್ಟೊಂದು ವಾತ್ಸಲ್ಯ,
ಎಷ್ಟೊಂದು ಮಮತೆ,
ಎಷ್ಟೊಂದು ತ್ಯಾಗ,
ನೀವು ನನಗಾಗಿ ಮಾಡಿರುವಿರಿ,

ಆದರೆ,
ನಾನು ಮಾಡುತ್ತಿರುವುದೇನು ?

ಬಾಲ್ಯ ನನಗರಿವಿಲ್ಲದೆ ಕಳೆದೆ,
ಪ್ರೌಡದಲ್ಲಿ ನಿಮ್ಮನ್ನು ನಿರ್ಲಕ್ಷಿಸುತ್ತಾ ಕಳೆದೆ,
ಯೌವ್ವನದಲ್ಲಿ ನಿಮ್ಮನ್ನು ದ್ವೇಷಿಸುತ್ತಾ ಬೆಳೆದೆ,
ಉದ್ಯೋಗ/ ವ್ಯವಹಾರದಲ್ಲಿ ನಿಮ್ಮಿಂದ ದೂರವಾಗಿ ನಡೆದೆ,
ಮುಪ್ಪಿನಲಿ ಕೆಲವರು ನನ್ನಿಂದಲೇ ದೂರವಾದಿರಿ,
ಕೆಲವರನ್ನು ನಾನೇ ದೂರ ಮಾಡಿದೆ,

ಛೆ,
ಎಂತಹ ಅನ್ಯಾಯ,
ಎಂತಹ ವಿಪರ್ಯಾಸ,
ಎಂತಹ ಪಶ್ಚಾತ್ತಾಪ,
ಎಂತಹ ದೌರ್ಭಾಗ್ಯ,
ಎಂತಹ ವಿಷಾದ ಪರಿಸ್ಥಿತಿ,

ತಂದೆ ತಾಯಿಯನ್ನು ದೇವರಂತೆ ಪೂಜಿಸಬೇಕೆಂದಿದ್ದೆ,
ಮದುವೆ ಮಕ್ಕಳ ನಂತರ ಅವರು ಹೆಚ್ಚು ಕಾಡಲೇ ಇಲ್ಲ,
ಅಜ್ಜ ಅಜ್ಜಿಗೆ ಆಶ್ರಯ ನೀಡಬೇಕೆಂದಿದ್ದೆ,
ಅವರು ನೆನಪಾಗಲೇ ಇಲ್ಲ,
ಹೆಂಡತಿ/ಗಂಡನಿಗೆ, ನನ್ನ ಎಲ್ಲವನ್ನೂ ನೀಡಬೇಕೆಂದಿದ್ದೆ,
ಆದರೆ, ಏನೋ ಕಸಿವಿಸಿಯಾಗಿ ಒಂದಾಗಿದ್ದರೂ ಅಪರಿಚಿತರಂತಾದೆ,
ನನ್ನ ಭವಿಷ್ಯದ ಕನಸಾದ ಮಗ ಮದುವೆಯ ನಂತರ ನನ್ನಿಂದ ದೂರಾದ,
ಮಗಳು ಪರರ ಪಾಲಾದಳು…

ಭಾರತೀಯ ಮನಸ್ಸುಗಳ,
ಭಾರತದ ಸಾಮಾಜಿಕ ವ್ಯವಸ್ಥೆಯ,
ಕೆಲವು ಕೌಟುಂಬಿಕ ಮತ್ತು ಆಂತರ್ಯದ ಸಮಸ್ಯೆಗಳ ವ್ಯಂಗ್ಯ ಮತ್ತು ದುರಂತ
ನನ್ನ ಅನುಭವದ ಕಣ್ಣಲ್ಲಿ ಮೂಡಿದ ಚಿತ್ರಣ….
ನಿಮ್ಮೆಲ್ಲರಿಗಾಗಿ………


ದಿನಾಂಕ 26/01/2024 ಶುಕ್ರವಾರ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಹೆಸರುಘಟ್ಟ ರಸ್ತೆಯ ನಿಸರ್ಗ ಶಾಲೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜ ವಂದನೆ ಸ್ವೀಕರಿಸಿ ಮಕ್ಕಳು, ಶಿಕ್ಷಕರು ಮತ್ತು ಪೋಷಕರಿಗೆ ಮಾನವೀಯ ಮೌಲ್ಯಗಳ ಕುರಿತು ನೆನಪಿಸಿದೆನು….

ದಿನಾಂಕ 28/01/2024 ಭಾನುವಾರ ಬೆಂಗಳೂರು ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಭವನದಲ್ಲಿ ನಡೆದ ಸುಮಾರು 9 ವಿಶ್ವವಿದ್ಯಾಲಯಗಳ ಎನ್ ಎಸ್ ಎಸ್ ಶಿಬಿರಾರ್ಥಿಗಳ ಶಿಬಿರದಲ್ಲಿ ಭಾಗವಹಿಸಿ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ವ್ಯಕ್ತಿತ್ವ ಕುರಿತು ಸಂವಾದ ನಡೆಸಿದೆನು….


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068………

error: No Copying!