ಗಾಂಧಿ,
ನಿನ್ನನ್ನು ಕೊಂದು ಸುಮಾರು 76 ವರ್ಷಗಳಾಯಿತು.
ನೀನು ಹತ್ಯೆಯಾದ ದಿನವಾದ ಜನವರಿ 30 ನ್ನು ಪ್ರತಿವರ್ಷ
” ಹುತಾತ್ಮರ ದಿನ ” ಎಂದು ಆಚರಿಸಿಕೊಂಡು ಬರುತ್ತಿದ್ದೇವೆ…..
ಅಂದು ಬ್ರಿಟೀಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದೆ. ಪ್ರಾರಂಭದ ದಿನಗಳಲ್ಲಿ ನಿನ್ನನ್ನು ಮಹಾತ್ಮ ಎನ್ನುತ್ತಿದ್ದರು. ಆದರೆ ಇತ್ತೀಚೆಗೆ ಯಾಕೋ ನಿನ್ನನ್ನು ಟೀಕಿಸುವವರೇ ಹೆಚ್ಚಾಗಿದ್ದಾರೆ. ಬಹಳ ಅನುಮಾನದಿಂದಲೇ ನೋಡುತ್ತಿದ್ದಾರೆ. ಜನರಿಗೆ ಈಗ ಹಣ ಹೆಚ್ಚಾಗಿದೆ, ಸಾಮಾಜಿಕ ಜಾಲತಾಣಗಳ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಜನ ಓದಿ ವಿದ್ಯಾವಂತಾಗಿದ್ದಾರೆ. ಆದ್ದರಿಂದ ಅವರಿಗೆ ಹಾಗೆ ಅನಿಸಿರಬಹುದು. ರಾಜಕೀಯ ಮನೆ ಮನೆಗೆ ವ್ಯಾಪಿಸಿರುವ ಕಾರಣವೂ ಇರಬಹುದು…..
ಇರಲಿ ಬಿಡು. ಜನರಿಗೆ ತಮ್ಮ ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದರಲ್ಲಿ ನಿನ್ನ ಪಾತ್ರವೂ ಬಹಳಷ್ಟಿದೆ…..
ನಿನ್ನ ಕನಸಿನ ಭಾರತದ ಸ್ವಾತಂತ್ರ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಿನಗಿರಬೇಕಲ್ಲವೇ.
ನಿನಗಾಗಿ ಸದ್ಯದ ಭಾರತದ ಒಂದು ಮುಖ ಈಗೋ ಇಲ್ಲಿದೆ…..
ಮತದಾರನಿಗೆ ಹಣ – ಹೆಂಡ ಪಡೆದು ಯಾರಿಗೆ ಬೇಕಾದರೂ ಮತ ಹಾಕುವ ಸ್ವಾತಂತ್ರ್ಯ ದೊರೆತಿದೆ.
ಹಾಗೆಯೇ ಗೆದ್ದ ಅಭ್ಯರ್ಥಿ ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಅಥವಾ ಮಂತ್ರಿಗಿರಿ ಕೊಡುತ್ತಾರೋ ಅವರ ಪಕ್ಷಕ್ಕೆ ಹಾರುವ ಸ್ವಾತಂತ್ರ್ಯ ಉಳಿಸಿಕೊಂಡಿದ್ದಾರೆ.
ಹಾಗೆಯೇ ಮಂತ್ರಿಯಾದವನು ತನ್ನ ಕುಟುಂಬದ ಏಳು ತಲೆಮಾರಿಗಾಗುವಷ್ಟು ಸಂಪತ್ತು ಗಳಿಸುವ ಸ್ವಾತಂತ್ರ್ಯವೂ ಸಿಕ್ಕಿದೆ…..
ಟಿವಿ, ಫೇಸ್ ಬುಕ್, ಎಕ್ಸ್, ಇನ್ಸ್ಟಾಗ್ರಾಂ, ವಾಟ್ಸ್ ಆಪ್ ಮುಂತಾದ ಮೀಡಿಯಾಗಳಲ್ಲಿ ಯಾರನ್ನು ಬೇಕಾದರೂ ಅವರ ವೈಯಕ್ತಿಕ ನೆಲೆಯಲ್ಲಿಯೂ ಬಾಯಿಗೆ ಬಂದಂತೆ ಮಾತನಾಡುವ ಸ್ವಾತಂತ್ರ್ಯವೂ ನಮಗಿದೆ.
ಸಾಹಿತಿಗಳು – ಕಲಾವಿದರು – ಹೋರಾಟಗಾರರು – ಮಠಾದೀಶರು ಮುಂತಾದ ಜನಪ್ರಿಯರೂ ಕೂಡ ತಮ್ಮ ಸ್ಥಾನ ಮತ್ತು ಜವಾಬ್ದಾರಿಯ ಅರಿವಿಲ್ಲದೆ ಜನರ ಮಧ್ಯೆ ಬೆಂಕಿಹಚ್ಚುವ ಸಂಪೂರ್ಣ ಸ್ವಾತಂತ್ರ್ಯ ಗಳಿಸಿಕೊಂಡಿದ್ದಾರೆ……
ಸಿಕ್ಕ ಸಿಕ್ಕ ವಿಷಯಗಳಿಗೆ ಇಡೀ ಭಾರತವನ್ನೇ ಬಂದ್ ಮಾಡಿ ಮನಸ್ಸೋ ಇಚ್ಚೆ ಗಲಭೆ ಮಾಡುವ ಮತ್ತು ಮಾಡಿಸುವ ಸ್ವಾತಂತ್ರ್ಯವೂ ನಮಗಿದೆ…..
ಕೆಲವು ಕೊಲೆ – ಅತ್ಯಾಚಾರ – ಭ್ರಷ್ಟಾಚಾರ – ವಂಚನೆ – ಕಳ್ಳತನವನ್ನು ಮಾಡಿಯೂ ಪೋಲೀಸರಿಂದಲೋ ತಪ್ಪಿದರೆ ನ್ಯಾಯಾಲಯದಿಂದಲೋ ಬಚಾವ್ ಆಗಿ ಬರುವ ಸ್ವಾತಂತ್ರ್ಯವೂ ಇದೆ……
ದಾರಿಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನು ಅಸಹ್ಯವಾಗಿ ಚುಡಾಯಿಸಿ ದೇಶದ – ದೇವರ – ಜಾತಿಯ – ಧರ್ಮದ ಪರವಾಗಿ ಜೈ ಎನ್ನುವ ಸ್ವಾತಂತ್ರ್ಯವೂ ನಮಗಿದೆ……
ತಾವು ಹುಟ್ಟಿದ ಜಾತಿ ಹೇಳಿಕೊಂಡು ನಮಗೇಗೆಬೇಕೋ ಹಾಗೆ ಅದರ ಲಾಭ ಪಡೆಯುವ ಸ್ವಾತಂತ್ರ್ಯವೂ ನಮಗಿದೆ…..
ಆದರೆ ಗಾಂಧಿ ಇದೆಲ್ಲದರ ನಡುವೆ ಬ್ರಿಟೀಷರ ಕಾಲದಲ್ಲಿ ಇದ್ದ ಆ ಗುಲಾಮಿ ಮನೋಭಾವ ಮಾತ್ರ ಬದಲಾಗಿಲ್ಲ. ಸ್ವತಂತ್ರ ಚಿಂತನೆ – ಕ್ರಿಯಾತ್ಮಕ ಬೆಳವಣಿಗೆ – ಪ್ರಬುಧ್ಧ ಮನಸ್ಥಿತಿ ಮಾತ್ರ ನಮಗೆ ದಕ್ಕಲಿಲ್ಲ…..
ಆಧುನಿಕ ಯುವಕರಂತೂ ಯಾವುದೋ ಸಿದ್ಧಾಂತಕ್ಕೋ, ಇಲ್ಲ ಯಥೇಚ್ಛ ಹಣಕ್ಕೋ ಅಥವಾ ತಂತ್ರಜ್ಞಾನಕ್ಕೋ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ.
ಸೀಡ್ ಲೆಸ್ ಆಗಿದ್ದಾರೆ….
ಒಟ್ಟಿನಲ್ಲಿ ನೀನು ಗಳಿಸಿಕೊಟ್ಟ ಸ್ವಾತಂತ್ರ್ಯದ ಅರ್ಥ ನಮಗೆ ಅರ್ಥವಾಗಿರುವುದು ಹೀಗೆ.
” ಸ್ವಾತಂತ್ರ್ಯವೆಂದರೆ ನಮಗಿಷ್ಟ ಬಂದಂತೆ ಆಡುವ ಸ್ವೇಚ್ಛಾಚಾರ ಅಥವಾ ಸ್ವಾತಂತ್ರ್ಯವೆಂದರೆ ಇನ್ನೊಬ್ಬರಿಗೆ ಮಾರಿಕೊಳ್ಳುವ ಗುಲಾಮಿತನ. “.
ಕ್ಷಮಿಸು ಗಾಂಧಿ ಆ ನಿನ್ನ ಕನಸಿನ
” ಸ್ವಾಭಿಮಾನಿ – ಸಮೃಧ್ಧ – ಸಮಾನತೆಯ – ಸ್ವಾವಲಂಬಿ ಭಾರತದ ಕನಸು ಇನ್ನೂ ನನಸಾಗಿಲ್ಲ.
ಆ ದಿನಗಳು ಬಂದಾಗ ನಾನೇ ನಿನಗೆ ತಿಳಿಸುತ್ತೇನೆ.”
ಅಲ್ಲಿಯವರಗೂ ನಿನ್ನಂತೆ ಹುತಾತ್ಮರಾದ ಎಲ್ಲರನ್ನೂ ಈ ದಿನ ನೆನಯುತ್ತಲೇ ಇರುತ್ತೇವೆ.
ಗಾಂಧಿಯನ್ನು ಹೀಗೂ ಅರ್ಥೈಸಲಾಗುತ್ತಿದೆ………
ಗುಲಾಮರಿಗೆ ಸ್ವಾತಂತ್ರ್ಯ ಕೊಡಿಸಿದ ದೇಶದ್ರೋಹಿ ಗಾಂಧಿ.
ಸತ್ಯವನ್ನು ತಲೆಹಿಡಿದ ಧರ್ಮದ್ರೋಹಿ ಗಾಂಧಿ.
ಅಹಿಂಸೆಯನ್ನು ಮುಂದೆ ಮಾಡಿದ ರಣಹೇಡಿ ಗಾಂಧಿ.
ಸರಳತೆಯನ್ನು ಪಾಲಿಸಿದ ಭ್ರಷ್ಟ ಗಾಂಧಿ.
ಸತ್ಯಾಗ್ರಹವನ್ನು ಆಯುಧವಾಗಿ ಬೆಳೆಸಿದ ಸ್ವಾರ್ಥಿ ಗಾಂಧಿ……
ಅಧಿಕಾರವನ್ನು ತಿರಸ್ಕರಿಸಿದ ನಿಷ್ಪ್ರಯೋಜಕ ಗಾಂಧಿ.
ಸಣಕಲು ದೇಹದ ಬೆತ್ತಲೆ ದೇಹವನ್ನು ವಿಶ್ವಕ್ಕೆ ತೋರಿಸಿದ ಭಿಕ್ಷುಕ ಗಾಂಧಿ.
ಅಸ್ಪೃಶ್ಯರನ್ನು ಹರಿಜನ ( ದೇವರ ಮಕ್ಕಳು ) ಎಂದು ಕರೆದು ದೇವರಿಗೇ ಅವಮಾನ ಮಾಡಿದ ಗಾಂಧಿ…..
ಮದ್ಯ ಮಾಂಸ ಸಿಗರೇಟು ತಿರಸ್ಕರಿಸಿ ಬದುಕು ವ್ಯರ್ಥ ಮಾಡಿದ ಮೂರ್ಖ ಗಾಂಧಿ.
ಗ್ರಾಮ ಸ್ವರಾಜ್ಯ ರೈತ ಸ್ವಾವಲಂಬನೆಗೆ ಒತ್ತುಕೊಟ್ಟು ಅಭಿವೃದ್ಧಿ ನಿರಾಕರಿಸಿದ ದಡ್ಡ ಗಾಂಧಿ.
ಇನ್ನೂ ಟೀಕಿಸಲು ಪದಗಳಿದ್ದರೆ ನಿಮಗೆ ಸ್ವಾಗತ….
ಗಾಂಧಿ ಮಹಾತ್ಮನೂ ಅಲ್ಲ ಹುತಾತ್ಮನೂ ಅಲ್ಲ.
ಅಸಲಿಗೆ ಆತ ಬರಿಗಣ್ಣಿಗೆ ಕಾಣುವುದೂ ಇಲ್ಲ.
ಶುಷ್ಕ ಮನಸ್ಸಿಗೆ ಗೋಚರಿಸುವುದೂ ಇಲ್ಲ.
ಮುಖವಾಡ ಹಾಕಿರುವವರಿಗೆ ಕನ್ನಡಿಯಲ್ಲಿ ನಮ್ಮ ನಿಜ ಮುಖ ಕಾಣುವುದೇ ?
ಕೈಗೆಟುಕದ ದ್ರಾಕ್ಷಿ ಸದಾ ಹುಳಿ.
ಅದಕ್ಕಾಗಿ ಗಾಂಧಿ
ಧರ್ಮ ವಿರೋಧಿ,
ದಲಿತ ವಿರೋಧಿ,
ಮುಸ್ಲಿಂ ವಿರೋಧಿ,
ಹಿಂದೂ ವಿರೋಧಿ,
ದೇಶ ವಿರೋಧಿ….
ಆದ್ದರಿಂದ ಗಾಂಧಿಯನ್ನು ಅವರ ವಿಚಾರಗಳನ್ನು ಈ ದೇಶದಿಂದ ತೊಲಗಿಸಿದರೆ ಮಾತ್ರ ನೆಮ್ಮದಿ ,
( ನೆಮ್ಮದಿ ನಮಗಲ್ಲ —– ಮೋಹನದಾಸ ಕರಮಚಂದನಿಗೆ )
ಆ ಕೆಲಸ ನಾವೆಲ್ಲರೂ ಸೇರಿ ಬೇಗ ಮಾಡುವ ಎಂಬ ಆಶಯದೊಂದಿಗೆ,
ಗಾಂಧಿಯನ್ನು ಕೊಂದ ಸಂಭ್ರಮ ದಿನದ ಶುಭಾಶಯಗಳನ್ನು ಕೋರುತ್ತಾ…..
(ಕೊರಗುತ್ತಾ………)
ಗಾಂಧಿಯನ್ನು ಕೊಂದದ್ದು ಗೋಡ್ಸೆ ಮಾತ್ರವಲ್ಲ…….
ಗಾಂಧಿ ತತ್ವಗಳನ್ನು ಸಮಾದಿ ಮಾಡಿದ ದೇಶದ ಭವಿಷ್ಯ !!!!!!?????….
ಪಿಕ್ಚರ್ ಅಭೀ ಬಾಕಿ ಹೈ.
ಗಾಂಧಿಯ ಸ್ವಗತ ಹೀಗಿರಬಹುದೆ…………….
ನಾನು ಅಷ್ಟೊಂದು ಕೆಟ್ಟವನೇ ??????…..
ಗುಂಡಿಟ್ಟು ಕೊಲ್ಲುವಷ್ಟು ಅಪರಾಧಿಯೇ ??????
ನನ್ನನ್ನು ಮಹಾತ್ಮ ಎಂದು ಕರೆದು ಭಾರತದ ಜನರನ್ನು ವಂಚಿಸಲಾಗಿದೆಯೇ ?????
ನಾನು ಕಪಟ ಮುಖವಾಡದ ಆತ್ಮ ವಂಚಕನೇ ???????
ಸತ್ಯಕ್ಕೆ ಸರಳತೆಗೆ ಅಹಿಂಸೆಗೆ ನಾನು ಅವಮಾನ ಮಾಡಿರುವೆನೇ ????????
ಸ್ವಾತಂತ್ರ್ಯ ಹೋರಾಟದ ಎಲ್ಲಾ ಹೆಸರನ್ನು ನಾನು ಪಡೆದ ಸ್ವಾರ್ಥಿಯೇ ?????
೧೮೬೯ ರ ಅಕ್ಟೋಬರ್ ೨ ರಂದು ನಾನು ಸ್ವತಂತ್ರವಾಗಿ ಉಸಿರಾಡಿದ ದಿನದಿಂದ ಜನವರಿ ೩೦ ೧೯೪೮ ರಂದು ನಾಥುರಾಂ ಘೋಡ್ಸೆ ಹೊಡೆದ ಗುಂಡಿನಿಂದ ನಾನು ಎಳೆದ ಕೊನೆಯ ಉಸಿರಿನವರೆಗೂ ನನ್ನ ಇಡೀ ಬದುಕೊಂದು ತೆರೆದ ಪುಸ್ತಕ……
ನನ್ನ ಬಗ್ಗೆ ಯಾವ ಅಭಿಪ್ರಾಯ ಹೊಂದಲೂ ನೀವು ಸ್ವತಂತ್ರರು……
ನನ್ನ ಮೇಲಿನ ಯಾವ ಆಪಾದನೆಯನ್ನು ನಾನು ನಿರಾಕರಿಸುವುದಿಲ್ಲ……….
ಆದರೆ ನಿಮ್ಮಲ್ಲಿ ನನ್ನ ಮನವಿ ಇಷ್ಟೆ……..
ಭಾರತದ ಅಧೀಕೃತ ನಾಗರಿಕ ಇತಿಹಾಸ ಪ್ರಾರಂಭವಾಗುವ ಸಿಂಧೂ ನಾಗರಿಕತೆಯ, ಹರಪ್ಪ ಮತ್ತು ಮಹೆಂಜೋದಾರೋ ದಿನಗಳಿಂದ ಈ ಕ್ಷಣದವರೆಗೆ ಎಲ್ಲವನ್ನೂ ಒಮ್ಮೆ ಅವಲೋಕಿಸಿ, ನಿಮ್ಮ ಜ್ಞಾನವನ್ನು ಮತ್ತು ಬದುಕಿನ ಅನುಭವಗಳನ್ನು ಅದರೊಂದಿಗೆ ಸಮೀಕರಿಸಿ.
ಈ ಬೃಹತ್ ಮತ್ತು ವೈವಿಧ್ಯಮಯ ನೆಲದಲ್ಲಿ ನಡೆದ ಹೋರಾಟಗಳು, ಅದರ ನಾಯಕತ್ವ, ಫಲಿತಾಂಶಗಳು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ನಂತರ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ….
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾನು ಬ್ರಿಟಿಷರ ಏಜೆಂಟ್ ಆಗಲು ಸಾಧ್ಯವೇ ? ಅದರಿಂದ ನಾನು ಪಡೆಯಬಹುದಾದ್ದರೂ ಏನು ?
ಅಹಿಂಸೆಯನ್ನು ಉಸಿರಾಡಿದ ನಾನು ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದವರ ಸಾವಿಗೆ ಕಾರಣ ಎಂದು ಭಾವಿಸುವಿರೇಕೆ ?
ಸರ್ವೋದಯವೇ ಬದುಕಿನ ಮೂಲ ಮಂತ್ರ ಎಂದು ನಂಬಿದ್ದ ನಾನು ಅಸ್ಪೃಶ್ಯತೆಯನ್ನು ಬೆಂಬಲಿಸುವುದು ಹೇಗೆ ತಾನೆ ಸಾಧ್ಯ….
ಮಾನವೀಯತೆಯ ನೆಲೆಯಲ್ಲಿ ಸಮಾಜ ನಿರ್ಮಿಸುವ ಕನಸಿನ ನಾನು ಮುಸ್ಲಿಂ ಪಕ್ಷಪಾತಿ ಎಂದು ಹೇಳುವುದು ತಪ್ಪು ಅಭಿಪ್ರಾಯವಲ್ಲವೇ ?
ಹರಿದು ಹಂಚಿಹೋಗಿದ್ದ ಭಾರತದ ಸಂಸ್ಥಾನಗಳನ್ನು ಒಗ್ಗೂಡಿಸಿ ವಿಭಿನ್ನ ಆಚರಣೆ ನಂಬಿಕೆಗಳ ಜನರನ್ನು ಒಟ್ಟು ಮಾಡಿ ಬ್ರಿಟಿಷರು ಒಡೆದು ಆಳುವ ನೀತಿಯನ್ನು ಮೀರಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ, ಅನೇಕ ಏರಿಳಿತಗಳನ್ನು ಮೆಟ್ಟಿ ನಿಲ್ಲುವಾಗ ಕಾಲಾ ನಂತರದ ಬದಲಾವಣೆಗಳ, ಫಲಿತಾಂಶಗಳ ಆಧಾರದ ಮೇಲೆ ನನ್ನನ್ನು ನಿರ್ಧರಿಸುವುದು ಸರಿಯೇ ?
ಸಣ್ಣ ಸಣ್ಣ ಸಂಘ ಸಂಸ್ಥೆಗಳಲ್ಲಿ, ಫೇಸ್‌ಬುಕ್ ವಾಟ್ಸ್ ಆಪ್ ಗುಂಪುಗಳಲ್ಲಿಯೇ ಹಲವಾರು ವೈರುದ್ಯ ಚರ್ಚೆಗಳು ಟೀಕೆಗಳು ಅಸೂಯೆಗಳು ಗಲಾಟೆಗಳು ನಡೆಯುತ್ತವೆ. ಸಹಕಾರ ಮತ್ತು ಹೊಂದಾಣಿಕೆ ಸಾಧ್ಯವಾಗುವುದಿಲ್ಲ. ಇನ್ನು ಇಡೀ ದೇಶವನ್ನು ಒಗ್ಗೂಡಿಸಿ ಪರಕೀಯರ ವಿರುದ್ಧ ಹೋರಾಡುವುದು ಸುಲಭವೇ ? ಯಾವ ನಿರ್ಧಾರ ತೆಗೆದುಕೊಂಡರು ಒಬ್ಬರಲ್ಲ ಒಬ್ಬರು ವಿರೋಧಿಸುತ್ತಲೇ ಇರುತ್ತಾರೆ. ….
ಜೊತೆಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಸಹ ಇರುತ್ತದೆ. ಸತ್ಯವೋ ಮಿಥ್ಯವೋ, ನಂಬಿಕೆಯೋ ಮೂಡ ನಂಬಿಕೆಯೋ ಜನರ ಭಾವನೆಗಳಿಗೆ ನೇರ ಘಾಸಿ ಮಾಡುವಂತಿಲ್ಲ. ಸೌಮ್ಯವಾಗಿ ಅದನ್ನು ತಿಳಿ ಹೇಳಬೇಕು….
ಒಂದು ಪ್ರಮುಖ ಕ್ರಿಕೆಟ್ ಮ್ಯಾಚಿನಲ್ಲಿ ಇರುವ ಉತ್ತಮ ೧೧ ಜನರನ್ನು ಆಯ್ಕೆ ಮಾಡಿ ಆಡಲಾಗುತ್ತದೆ. ಫಲಿತಾಂಶ ಗೆದ್ದರೆ ನಮ್ಮ ನಿರ್ಧಾರ ಎಲ್ಲರೂ ಮೆಚ್ಚುತ್ತಾರೆ. ಸೋತರೆ ಅದೇ ಅಂಶಗಳನ್ನು ಟೀಕಿಸಲು ಉಪಯೋಗಿಸಿಕೊಳ್ಳುತ್ತಾರೆ.
ಸಾಮೂಹಿಕವಾಗಿ,
ಆಕ್ರಮಣಕಾರಿಯಾಗಿ ಬ್ರಿಟಿಷರನ್ನು ಓಡಿಸುವುದು ಸಾಧ್ಯವಿರಲಿಲ್ಲ ಅಥವಾ ಸಂಪೂರ್ಣ ಸತ್ಯ ಅಹಿಂಸೆಯ ಶರಣಾಗತಿ ಸಹ ಪ್ರಯೋಜನವಿರಲಿಲ್ಲ. ಇಡೀ ಒಕ್ಕೂಟವನ್ನು ಜಾಗೃತಗೊಳಿಸಿ ಯಾವುದೇ ಸಾವು ನೋವುಗಳಿಲ್ಲದೆ ಪರಕೀಯರನ್ನು ಭಾರತ ಬಿಟ್ಟು ತೊಲಗುವಂತೆ ಮಾಡುವುದು ಬಹುದೊಡ್ಡ ಸವಾಲಾಗಿತ್ತು…
ರಕ್ತ ಹರಿಸಿ ಹೋರಾಡಿದ್ದರೆ ಆಗುತ್ತಿದ್ದ ಅಪಾರ ಸಂಕಷ್ಟಗಳನ್ನು ಊಹಿಸಿದರೆ ಗೆಲುವಿಗಿಂತ ಯಾಥಾಸ್ಥಿತಿಯೇ ಉತ್ತಮ ಎಂದು ಖಂಡಿತ ಅನಿಸುತ್ತಿತ್ರು.
ಏನಾದರಾಗಲಿ,
ನಾನು ಮಹಾತ್ಮನೋ ಹುತಾತ್ಮನೋ ಎಂಬುದು ಮುಖ್ಯವಲ್ಲ.
ನನ್ನ ಎಲ್ಲಾ ಮೂರ್ತಿಗಳನ್ನು, ಸ್ಮಾರಕಗಳನ್ನು ,
ಹೆಸರುಗಳನ್ನು ನಾಶ ಮಾಡಿ ಚಿಂತೆಯಿಲ್ಲ. ಘೋಡ್ಸೆಯ ದೇವಸ್ಥಾನಗಳನ್ನು ಎಲ್ಲಾ ಕಡೆಯೂ ನಿರ್ಮಿಸಿ ಬೇಸರವಿಲ್ಲ.
ಆದರೆ ಭಾರತ ದೇಶ ಮಾತ್ರ ನಾಶವಾಗದಿರಲಿ. ಇಲ್ಲಿನ ಜನ ನೆಮ್ಮದಿಯಿಂದ ಇರಲಿ. ತಮ್ಮ ಒಳ ಜಗಳಗಳಿಂದ ಮತ್ತೊಮ್ಮೆ ಪರಕೀಯರ ದಾಳಿಗೆ ಒಳಗಾಗದಿರಲಿ ಎಂದು ಆಶಿಸುತ್ತಾ…….
ನಾನು ಗುಂಡಿಗೆ ಬಲಿಯಾದ ಜನವರಿ ೩೦ ರ ಈ ದಿನವನ್ನು ಹರ್ಷಿಸುವವರಿಗೂ, ದುಃಖ್ಖಿಸುವವರಿಗೂ ನೆನಪಿಸುತ್ತಾ…..
ಇಂತಿ,
ಅನಂತದಲ್ಲಿ ಲೀನನಾಗಿ ಭಾರತದ ಭೂ ಪ್ರದೇಶದ ಮೇಲೆ ಆಕಾಶದಲ್ಲಿ ಸದಾ ಸಂಚರಿಸುತ್ತಿರುವ ಮೋಹನ ದಾಸ್ ಕರಮಚಂದ್ ಗಾಂಧಿಯ ಆತ್ಮ………….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068………