Spread the love

ಮೂರು ಮುಖ್ಯ ‌ಸಂಭ್ರಮಗಳೋ, ಆಚರಣೆಗಳೋ,
ದಿನಗಳೋ,
ಸಿದ್ದಾಂತಗಳಿಗೋ,
ಘಟನೆಗಳಿಗೋ,
ಸಾಕ್ಷಿಯಾದ 2024 ರ ಜನವರಿ ತಿಂಗಳು….

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕರ್ನಾಟಕ ಸರ್ಕಾರ,
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಮತ್ತು ಇಂದು ಅಧಿಕೃತವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ ರಚಿಸಿದ ಸಂವಿಧಾನ ಜಾರಿಯಾದ ಗಣರಾಜ್ಯೋತ್ಸವ…….

ಮೊದಲನೆಯದು ಸಮ ಸಮಾಜ ನಿರ್ಮಾಣದ ಮನುಷ್ಯ ಪ್ರಜ್ಞೆಯ ಅಥವಾ ಜೀವಪರ ನಿಲುವುಗಳ ಬಸವಣ್ಣನವರ ಚಿಂತನೆ,
ಎರಡನೆಯದು ದೈವ ಪ್ರಜ್ಞೆ ಅಥವಾ ಭಕ್ತಿ ಭಾವಗಳ ಅಗೋಚರ ಶಕ್ತಿಯ ಆರಾಧನೆ,
ಮೂರನೆಯದು ಎರಡನ್ನೂ ಮೀರಿದ ವಾಸ್ತವ ನೆಲೆಯ ನೀತಿ ನಿಯಮಗಳ ಕಾನೂನುಗಳು….

ಎಷ್ಟೊಂದು ವಿಚಿತ್ರ ಮತ್ತು ವೈವಿಧ್ಯಮಯ ವಾತಾವರಣ ಸೃಷ್ಟಿಯಾಗಿದೆ ನೋಡಿ. ಇನ್ನೂ ವಿಶೇಷವೆಂದರೆ ಈ ಮೂರು ಚಿಂತನೆಗಳ ಪರವಾಗಿ ಮತ್ತು ವಿರುದ್ಧವಾಗಿ ಅಷ್ಟೇ ಪ್ರಮಾಣದ ಸಂಘರ್ಷವೂ ಜಾರಿಯಲ್ಲಿದೆ…..

ಬಸವ ತತ್ವವೇ ನಿಜವಾದ ಪ್ರಾಕೃತಿಕ ಧರ್ಮ ಮತ್ತು ಆಡಳಿತ, ಅದೇ ಮಾನವೀಯತೆಯ ನಾಗರಿಕ ಸಮಾಜ ಎಂದು ಕೆಲವು ವರ್ಗಗಳು ಪ್ರತಿಪಾದಿಸಿದರೆ, ಅದೇ ಸಮಯದಲ್ಲಿ ಪ್ರಭು ಶ್ರೀರಾಮನ ಆದರ್ಶಗಳೇ ಮನುಷ್ಯ ಜೀವನದ ಧ್ಯೇಯೋದ್ದೇಶ, ರಾಮ ರಾಜ್ಯವೇ ನಿಜವಾದ ಆಡಳಿತ ವ್ಯವಸ್ಥೆ ಎಂದು ಪ್ರತಿಪಾದಿಸುತ್ತದೆ….

ಇನ್ನು ಸಂವಿಧಾನ ಮೊದಲಿನ ಬಸವ ತತ್ವ ಆಶಯವನ್ನು ಒಪ್ಪಿಕೊಂಡರು, ಧಾರ್ಮಿಕ ಸ್ವಾತಂತ್ರ್ಯದ ನಿಲುವುಗಳನ್ನು ಸಹ ಸ್ವೀಕರಿಸುತ್ತಾ, ಎರಡರ ಮಧ್ಯೆ ಒಂದು ರೀತಿಯ ಸಮನ್ವಯ ಸಾಧಿಸಿ ಸಮಾಜ ಮತ್ತು ಆಡಳಿತದಲ್ಲಿ ಕ್ರಮಬದ್ಧತೆ ತರಲು ನೀತಿ ನಿಯಮಗಳನ್ನು ರೂಪಿಸಿದೆ…..

ಇವುಗಳ ಆಧಾರದ ಮೇಲೆ ಅತ್ಯಂತ ಸುಂದರ, ಸುಖಮಯ, ಆರೋಗ್ಯಕರ ಸಮಾಜ ನಿರ್ಮಾಣವಾಗಿ‌ ಸಮಪಾಲು ಸಮಬಾಳಿನ ಕಲ್ಯಾಣ ದೇಶ ನಿರ್ಮಾಣವಾಗಬೇಕಿತ್ತು ಮತ್ತು ನಿರ್ಮಾಣವಾಗಿದೆ ಸಹ. ಆದರೆ ಯಾರಿಗೆ ಎಂಬುದು ಗಮನಿಸಬೇಕು……

ಸಾವಿನ ವ್ಯಾಪಾರಿಗಳು…….
ಮಾನವೀಯತೆಯ ಕಳಂಕಗಳು…..

ಇದನ್ನು ಬಹಳ ನೋವು, ವಿಷಾದ ಮತ್ತು ಆಕ್ರೋಶದಿಂದ ಹೇಳಬೇಕಾಗಿದೆ…

ಈ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರು ವರ್ಗಗಳು ಸೃಷ್ಟಿಯಾಗಿವೆ…..

ಕೊಲ್ಲುವವರು ಮತ್ತು ಸಾಯುವವರು,….

ಹೇಗೋ ಬದುಕುತ್ತಾ ನೋವಿನಲ್ಲಿರುವವರು…..

ಎಲ್ಲಾ ಸಂಪತ್ತುಗಳನ್ನು ಅನುಭವಿಸುತ್ತಾ ಮಜಾ ಉಡಾಯಿಸುವವರು………

ಮೊದಲನೆಯ ಗುಂಪಿನಲ್ಲಿರುವವರು,…….

ತಾವು ಮತ್ತು ತಮ್ಮವರ ಬದುಕಿಗಾಗಿ ಅಥವಾ ದೇಶ ಸೇವೆಯ ಅತಿ ಭಾವುಕತೆಯಿಂದ ದುಡಿಯುವ ಸೈನಿಕರು, ಅರೆ ಸೈನಿಕರು, ಗಡಿ ಭದ್ರತಾ ಪಡೆಯವರು, ಪೋಲೀಸರು ಮುಂತಾದ ಯೂನಿಫಾರಂನ ಶಿಸ್ತಿನ ಸಿಪಾಯಿಗಳು…..

ಅದೇ ರೀತಿ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದು ಇಡೀ ಸಮಾಜವನ್ನೇ ಬದಲಾಯಿಸುತ್ತೇವೆ ಎಂಬ ಹುಚ್ಚು ಹಪಹಪಿಗೆ ಬಿದ್ದು ಅವಾಸ್ತವಿಕ ಅಮಾನವೀಯ ಹಿಂಸೆಯಲ್ಲಿ ಮುಳುಗೇಳುತ್ತಿರುವ ನಕ್ಸಲರು ಮತ್ತು ಕೆಲವು ಪ್ರತ್ಯೇಕತಾ ವಾದಿಗಳು….

ಇನ್ನು ಧರ್ಮ ದೇವರು ಎಂದು ಏನೇನೂ ಹುಚ್ಚು ಕಲ್ಪನೆಯ ಅಮಲಿಗೆ ಬಿದ್ದು ದೇಶಭಕ್ತಿಯ ಹೆಸರಿನಲ್ಲಿ ಕೊಲ್ಲುವವರು ಮತ್ತು ಕೊಲೆಯಾಗುವವರು……

ಎಡ ಬಲ ಪಂಥಗಳ ಪ್ರತಿಪಾದಕರು ಇದೇ ಗುಂಪಿಗೆ ಸೇರುತ್ತಾರೆ.

ಎರಡನೆಯ ಗುಂಪಿನಲ್ಲಿರುವವರು,……

ಹೇಗೋ ಏನೋ ಊಟ ಬಟ್ಟೆ ವಾಸಕ್ಕೆ ಅನುಕೂಲವಾದರೆ ಸಾಕು ಎಂದು ಅದಕ್ಕಾಗಿ ಜೀವನವನ್ನೇ ಸವೆಸುವ ರೈತರು, ಕಾರ್ಮಿಕರು, ಬಡವರನ್ನು ಒಳಗೊಂಡ ಮಧ್ಯಮ ವರ್ಗ. ವರದಕ್ಷಿಣೆಗಾಗಿ ಸಾಯುತ್ತಾ, ಪ್ರೀತಿ ಪ್ರೇಮಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾ, ಜಾತಿಗಾಗಿ ಹೊಡೆದಾಡಿಕೊಳ್ಳುತ್ತಾ, ಅಜ್ಞಾನ ದುರಹಂಕಾರದಿಂದ ಅಪಘಾತಕ್ಕೆ ಬಲಿಯಾಗುತ್ತಾ, ಹೆಣ್ಣಾದ ತಪ್ಪಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾ, ಅನೇಕ ಕೊರಗುಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾ ಬದುಕುವ ಸಾಮಾನ್ಯರು……..

ಮೂರನೇ ಗುಂಪಿನಲ್ಲಿ,……..

ಅಧಿಕಾರಸ್ತ ರಾಜಕಾರಣಿಗಳು, ದೊಡ್ಡ ದೊಡ್ಡ ಭ್ರಷ್ಠ ಅಧಿಕಾರಿಗಳು, ಬೃಹತ್ ಉದ್ಯಮಿಗಳು, ಮಾಫಿಯಾದವರು, ಅತಿ ವಂಚಕ ದಲ್ಲಾಳಿಗಳು, ಜನಪ್ರಿಯ ಸಿನಿಮಾ ನಟರುಗಳು, ಎಲ್ಲಾ ಧರ್ಮಗಳ ಧರ್ಮಾಧಿಕಾರಿಗಳು , ಮಾಧ್ಯಮಗಳ ಧಣಿಗಳು ಮುಂತಾದ ಜನರಿದ್ದಾರೆ….‌.

ಮೊದಲನೆಯ ವರ್ಗದವರು ತಮ್ಮ ಜೀವ – ಜೀವನದ ಜೊತೆ ಸೆಣೆಸುತ್ತಾ ಅಭದ್ರತೆಯಲ್ಲಿಯೇ ಬದುಕುತ್ತಾ ಬಹುತೇಕ ಅಕಾಲ ಮರಣಕ್ಕೆ ತುತ್ತಾಗುತ್ತಾರೆ……

ಎರಡನೆಯ ವರ್ಗದವರ ಬದುಕಿಡೀ ಬಹುತೇಕ ಸಂಘರ್ಷಮಯವಾಗಿಯೇ ಕಳೆಯುತ್ತದೆ. ಇವರೇ ಬಹುಸಂಖ್ಯಾತರು……

ಆದರೆ ಈ ಮೂರನೇ ವರ್ಗ ಇದೆಯಲ್ಲ ಇದು ಅತಿ ಕಡಿಮೆ ಸಂಖ್ಯೆಯಲ್ಲಿದ್ದರೂ ನಮ್ಮ ಸಂಪತ್ತಿನ ಬಹುಭಾಗವನ್ನು ಆಕ್ರಮಿಸಿ ಮಜಾ ಮಾಡುತ್ತಾ, ಮೊದಲನೇ ವರ್ಗವನ್ನು ಭಾವನಾತ್ಮಕವಾಗಿ ಪೋಷಿಸಿತ್ತಾ ತಮ್ಮ ಹಿತ ಕಾಯ್ದುಕೊಂಡರೆ, ಎರಡನೇ ವರ್ಗವನ್ನು ಸಿನಿಮಾ, ಕ್ರಿಕೆಟ್, ಧಾರಾವಾಹಿ, ದೇವರು, ಧರ್ಮ, ವಿಶ್ವ ನಾಯಕತ್ವ, ದುಡ್ಡು, ವಿಡಿಯೋ ಗೇಮ್, ದೇಶಭಕ್ತಿ, ಶೌರ್ಯ, ಶೋಷಣೆ, ಹೋರಾಟ, ಸಮಾಜ ಸುಧಾರಣೆ ಮುಂತಾದ ಹುಚ್ಚು ಹಿಡಿಸುವ ಅಫೀಮಿನಂತ ವಿಷಯಗಳಲ್ಲಿ ಬಂಧಿಸಿಬಿಡುತ್ತಾರೆ……

ಈಗ ಯೋಚಿಸಿ ಹೇಳಿ,

ಶ್ರಮ ಪಡುವವರು ಯಾರೋ ?
ಸುಖ ಪಡುವವರು ಇನ್ಯಾರೋ ?
ಈ ಸಮಯದಲ್ಲಿ ಎಲ್ಲರ ಮುಖವಾಡಗಳು ಕಳಚಿ ಬೀಳುತ್ತಿದೆ.

ಮನುಷ್ಯ – ದೇವರು – ಸಂವಿಧಾನ……..

ನಮ್ಮ ಆಯ್ಕೆ ಯಾವುದು….

ವರ್ತಮಾನದ ಬಹುದೊಡ್ಡ ಘೋರ ದುರಂತವೆಂದರೆ ನಮ್ಮ ನಡುವಿನ ಸಾಮಾನ್ಯ ಜನರಿಗೆ ತಾವಿರುವ ಪರಿಸ್ಥಿತಿಯ ಅರಿವೇ ಇಲ್ಲ. ಎಲ್ಲೋ ದೂರದ, ಯಾವುದೋ ಕಾಣದ, ರಾಜಕಾರಣಿ ಮತ್ತು ದೇವರಿಗೆ ಕೊಡುವ ಗೌರವ – ಭಕ್ತಿ ನಮ್ಮದೇ ಸುತ್ತಮುತ್ತಲಿನ ಜನರಿಗೆ ಕೊಡುವುದಿಲ್ಲ. ಕಷ್ಟದ ಸಮಯಕ್ಕೆ ಹತ್ತಿರದ ಜನರೇ ಸಹಾಯ ಮಾಡುವುದು. ಯಾವ ದೇವರು, ಯಾವ ರಾಜಕಾರಣಿಗಳು ಬರುವುದಿಲ್ಲ. ಅಷ್ಟು ಸಣ್ಣ ತಿಳಿವಳಿಕೆಯೂ ಇಲ್ಲದೇ ದೇವರು ಧರ್ಮದ ಹೆಸರಿನಲ್ಲಿ ನಾವೇ ಕಚ್ಚಾಡುತ್ತೇವೆ ಮತ್ತೆ ನಾವೇ ನಮ್ಮ ನಡುವೆ ಒಗ್ಗಟ್ಟು ಇಲ್ಲ ಎಂದು ಹೇಳುತ್ತೇವೆ….

ಪ್ರೀತಿ ಮಾನವೀಯತೆಗಿಂತ ರೋಷ ಸೇಡು ಅಸೂಯೆ ಕೆಟ್ಟ ಬೈಗುಳ ನಮ್ಮ ನಡುವೆ ಮೇಲುಗೈ ಪಡೆಯುತ್ತಿದೆ. ವಿಚಾರ ಭಿನ್ನಾಭಿಪ್ರಾಯಗಳು ಏನೇ ಇರಲಿ ಕನಿಷ್ಟ ಸೌಜನ್ಯ ಸಭ್ಯತೆ ಮರೆಯಾದರೆ ದೇಶದ ಸಂವಿಧಾನದ ಮೌಲ್ಯಗಳು ಉಳಿಯುವುದು ಕಷ್ಟ….

ಸಾಮಾನ್ಯರೆ,
ಏಳಿ ಎದ್ದೇಳಿ, ನಿಮ್ಮ ಜೀವ ಅಮೂಲ್ಯ. ಈಗ ಇರುವುದಕ್ಕಿಂತ ಉತ್ತಮ ಬದುಕು ಕಟ್ಟಿಕೊಳ್ಳುವ ಅವಕಾಶ ಈ ಸೃಷ್ಟಿ ಈ‌ ಸಂವಿಧಾನ ನಮಗೆ ನೀಡಿದೆ. ಅದು ನಮ್ಮ ಕೈಯಲ್ಲೇ ಇದೆ. ಸ್ವಲ್ಪ ತಾಳ್ಮೆ ವಿವೇಚನೆ ವಿಶಾಲ ಮನೋಭಾವ ಬೆಳೆಸಿಕೊಂಡರೆ ಸಾಕು.

ಅತ್ಯುತ್ತಮ ಆಡಳಿತಗಾರರು ನಮ್ಮ ನಡುವೆಯೇ ಇದ್ದಾರೆ.
ಅವರನ್ನು ಗುರುತಿಸುವ ಕೆಲಸ ಮಾಡೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068…….

error: No Copying!