Spread the love

” ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ….

ಬರಿ ಮಾತಲಿ ಹೇಳಲಾಗದೆ ಮನದಾಳದ ನೋವಾ…….” ಕನ್ನಡ ಚಲನಚಿತ್ರದ ಹಾಡಿನ ಪಲ್ಲವಿಯಿದು……

ಬಹುಶಃ ಇಂದಿನ ಒಟ್ಟು ವ್ಯವಸ್ಥೆಯನ್ನು ನೋಡಿದರೆ ಇದು ಕೇವಲ ಪ್ರೀತಿ ಪ್ರೇಮ ವಿರಹ ಅಥವಾ ಕೌಟುಂಬಿಕ ಸಮಸ್ಯೆಯ ಸುಳಿಗೆ ಸಿಲುಕಿದ ವ್ಯಕ್ತಿಯ ಭಾವನಾತ್ಮಕ ಸಾಲುಗಳು ಮಾತ್ರವಲ್ಲ ಸಮಾಜಮುಖಿ ಚಿಂತನೆಯ ವ್ಯಕ್ತಿಗಳ ಮನದಾಳದ ಮಾತುಗಳು ಸಹ ಇದೇ ರೀತಿ ಇರುತ್ತವೆ…..

ಪ್ರಜಾಪ್ರಭುತ್ವ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಮೂಲಭೂತ ಹಕ್ಕಾಗಿದ್ದರು ನಾವು ಕಂಡ ಸತ್ಯ ಮತ್ತು ವಾಸ್ತವವನ್ನು ಇಲ್ಲಿನ ಜನರ ಭಾವ ಭಕ್ತಿ ನಂಬಿಕೆಗಳ ಹಿನ್ನೆಲೆಯಲ್ಲಿ ಹೇಳುವುದು ಸ್ವಲ್ಪ ಕಷ್ಟವಾಗುತ್ತದೆ. ಬಹುತೇಕ ಎಲ್ಲಾ ಧರ್ಮಗಳ ಸಂಪ್ರದಾಯವಾದಿಗಳ ನಡುವೆ ನೀರಿನ ವಿರುದ್ಧ ಈಜುವುದು ಸುಲಭವಲ್ಲ. ಕೊಲೆ ಹಲ್ಲೆಯಷ್ಟು ತೀಕ್ಷ್ಣ ವಾತಾವರಣ ಇಲ್ಲದಿದ್ದರೂ ಒತ್ತಡ ಇದ್ದೇ ಇರುತ್ತದೆ….

ಭಾರತೀಯ ಜೀವನಶೈಲಿ ಮತ್ತು ಮೌಲ್ಯಗಳ ಪ್ರಭಾವ ನಮ್ಮ ಮೇಲೆ ಹೇಗಿರುತ್ತದೆ ಎಂದರೆ ಏಕವಚನದ ಪ್ರಯೋಗ ಸಹ ಮನಸ್ಸಿಗೆ ಘಾಸಿ ಉಂಟುಮಾಡುತ್ತದೆ. ಕೆಲವು ಮತಾಂಧ ದೇಶಗಳ ದೈಹಿಕ ಕೊಲೆ ಮತ್ತು ಇಲ್ಲಿನ ಮಾನಸಿಕ ಕೊಲೆ ಸಮ ಪ್ರಮಾಣದಲ್ಲಿ ಇರುತ್ತದೆ ಎಂಬುದನ್ನು ಗೆಳೆಯರು ಮರೆಯುತ್ತಾರೆ. ಅಭಿಪ್ರಾಯ ಭೇದವಿದ್ದಾಗ ದೈಹಿಕ ಹಲ್ಲೆ ಮಾತ್ರ ಘೋರ ಅಪರಾಧ ಬೈಗುಳ ಸಹಜ ಎನ್ನುವ ಪ್ರವೃತ್ತಿ ಕೆಲವರಲ್ಲಿದೆ. ಭಾರತದ ಮಣ್ಣಿನ ಗುಣ ಬೈಗುಳವನ್ನು ಸಹಿಸದ ಮೃದು ಮನಸ್ಸು ಎಂಬುದನ್ನು ಅರ್ಥಮಾಡಿಕೊಳ್ಳದೆ ಆಫ್ಘಾನಿಸ್ತಾನದ ತಾಲಿಬಾನಿಗಳಷ್ಟು ತಾವು ಕ್ರೂರಿಗಳಲ್ಲ ಎಂಬ ಸಮಾಧಾನಕರ ಉತ್ತರ ನೀಡುತ್ತಾರೆ. ಯಾವುದೇ ಹಿಂಸೆಯನ್ನು ಪ್ರಮಾಣಗಳಲ್ಲಿ ಅಳತೆ ಮಾಡುವ ಸಾಧನಗಳಿಲ್ಲ….

ಹಾಗೆಂದು ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಕಾಣುವ, ಅನಿಸುವ, ಅನುಭವದ ಸತ್ಯ ಮತ್ತು ವಾಸ್ತವವನ್ನು ಹೇಳಬಾರದೇ…..

ಭೂಮಿಯ ಒಳಗಿನ ಕಲ್ಲಿನ ನಿರ್ಜೀವ ಬಂಡೆಯನ್ನು ಶಿಲೆಯಾಗಿ ರೂಪಿಸಿ ಅದನ್ನು ದೇವರೆಂದು ಕರೆದು ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ಭಕ್ತಿಯಿಂದ ಹೇಳಿದರೆ ಅದನ್ನು ಪ್ರಶ್ನಿಸಬಾರದೇ. ಜನರ ನಂಬಿಕೆ ಎಂದು ಮೌನವಾಗಿರಬೇಕೆ. ಇತರೆ ಧರ್ಮಗಳಲ್ಲಿ ಈ ರೀತಿಯ ಆಚರಣೆಗಳು ಇದೇ ಎಂದ ಮಾತ್ರಕ್ಕೆ ಇದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಕೆ. ಸಂಖ್ಯೆ ಮತ್ತು ಜನಪ್ರಿಯತೆಯ ಆಧಾರದ ಮೇಲೆ ಸತ್ಯವನ್ನು ನಿರ್ಧರಿಸಬೇಕೆ……

ಭಕ್ತಿ ಶ್ರದ್ಧೆ ನಂಬಿಕೆ ಭಾವ ನಿಜವೇ ಆಗಿದ್ದರೆ, ರಾಮನ ಆದರ್ಶಗಳೇ ಭಾರತೀಯರ ಜೀವನ ವಿಧಾನವಾಗಿದ್ದರೆ ಇಷ್ಟೊಂದು ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ವಂಚನೆ, ಮೋಸ, ದರೋಡೆ, ಭ್ರಷ್ಟಾಚಾರ, ಅಪಘಾತ, ಅನಾರೋಗ್ಯ, ಆತ್ಮಹತ್ಯೆ, ರಕ್ತಪಾತ, ಯುದ್ದಗಳು, ಭಯೋತ್ಪಾದಕರು ಎಲ್ಲಾ ಯಾರಿಂದ ಆಗುತ್ತಿರುವುದು. ಇದರಲ್ಲಿ ಬಹುಪಾಲು ದೇವರುಗಳ ಆರಾಧಕರೇ ಅಲ್ಲವೇ. ಅದನ್ನು ಹೇಳಬಾರದೇ….

ಮಂದಿರ ಮಸೀದಿ ಚರ್ಚುಗಳಿಗಿಂತ ಮನುಷ್ಯರ ಗುಣನಡತೆಗಳು ಮುಖ್ಯ ಎಂದು ಹೇಳಬಾರದೇ, ಒಂದು ಮಸೀದಿ ಮಂದಿರಕ್ಕಾಗಿ 500 ವರ್ಷಗಳ ಹೋರಾಟ ಮತ್ತು ಅನೇಕ ವ್ಯಕ್ತಿಗಳ ಪ್ರಾಣ ಮತ್ತು ಹಣ ವ್ಯರ್ಥವಾಗಿರುವುದು ಅದಕ್ಕಾಗಿ ಎರಡೂ ಧರ್ಮದವರು ನಡೆದುಕೊಂಡಿರುವುದು ಹಾಸ್ಯಾಸ್ಪದ ಎಂದು ಹೇಳಬಾರದೇ…….

ಸಣ್ಣ ಹೊಂದಾಣಿಕೆಯಿಂದ ಸುಖ ಸಮೃದ್ಧಿ ಸಾಧ್ಯವಾಗಬಹುದಾದ ರಷ್ಯಾ ಉಕ್ರೇನ್ ಅಥವಾ ಇಸ್ರೇಲ್ ಹಮಾಸ್ ಯುದ್ಧಗಳನ್ನು ರಾಕ್ಷಸೀ ಪ್ರವೃತ್ತಿಯ ಅನಾಗರಿಕ ವರ್ತನೆ, ನಿಮ್ಮ ದೇವರು ಧರ್ಮಗಳು ಏನು ಮಾಡುತ್ತಿವೆ ಎಂದು ಪ್ರಶ್ನಿಸಬಾರದೇ…..

ಒಂದಷ್ಟು ಭಿನ್ನ ಧ್ವನಿಗಳು ಪ್ರಶ್ನೆ ಮಾಡಲು ಅವಕಾಶ ನೀಡಿದರೆ ಪ್ರಜಾಪ್ರಭುತ್ವದ ಅರ್ಥ ಮತ್ತು ಸೊಗಸು ಹೆಚ್ಚಾಗುತ್ತದೆ ಎಂಬ ಸಣ್ಣ ಅರಿವೂ ಇಲ್ಲದಾಯಿತೆ. ಎಲ್ಲಾ ಧರ್ಮಗಳ ದೇವರನ್ನು ಪ್ರಶ್ನಿಸಿದರೇ ಮನುಷ್ಯರೇಕೆ ಉಗ್ರರಾಗುತ್ತಾರೆ…..

ಹೇಗೆ ಹೇಳುವುದು ಸತ್ಯವನ್ನು ಇನ್ನೊಬ್ಬರಿಗೆ ನೋವಾಗದ ಹಾಗೆ,

ಹೇಗೆ ಹೇಳುವುದು ನಿಜವನ್ನು ಮತ್ತೊಬ್ಬರ ಭಾವನೆಗೆ ಧಕ್ಕೆ ಆಗದ ಹಾಗೆ,

ಹೇಗೆ ಹೇಳುವುದು ಸರಿ ಯಾವುದೆಂದು ಜನರಿಗೆ ಬೇಸರವಾಗದ ಹಾಗೆ,

ಹೇಗೆ ಹೇಳುವುದು ವಾಸ್ತವವನ್ನು ಎಲ್ಲರೂ ಮೆಚ್ಚುವ ಹಾಗೆ,

ಹಾಗೆ ಹೇಳಿದರೆ ಆ ಜಾತಿಯವರಿಗೆ ಕೋಪ,
ಹೀಗೆ ಹೇಳಿದರೆ ಈ ಜಾತಿಯವರಿಗೆ ಕೋಪ,

ಒಂದು ಹೇಳಿದರೆ ಆ ಧರ್ಮದವರಿಗೆ ಅಸಮಾಧಾನ,
ಇನ್ನೊಂದು ಹೇಳಿದರೆ ಈ ಧರ್ಮದವರಿಗೆ ಅಸಮಾಧಾನ,

ಅದು ಹೇಳಿದರೆ ಆ ಪಕ್ಷದವರಿಗೆ ಆಕ್ರೋಶ,
ಇದು ಹೇಳಿದರೆ ಈ ಪಕ್ಷದವರಿಗೆ ಆಕ್ರೋಶ,

ಸಭ್ಯವಾಗಿ ಹೇಳಿದರೆ ಹೇಡಿ ಎನ್ನುವಿರಿ,
ಅಸಭ್ಯವಾಗಿ ಹೇಳಿದರೆ ಕಚಡಾ ಎನ್ನುವಿರಿ,

ವಿನಯದಿಂದ ಹೇಳಿದರೆ ಕೇಳುವುದಿಲ್ಲ,
ಅಹಂಕಾರದಿಂದ ಹೇಳಿದರೆ ಒಪ್ಪುವುದಿಲ್ಲ,

ನಿಜ ಹೇಳಿದರೆ ಮೆಚ್ಚುವುದಿಲ್ಲ,
ಸುಳ್ಳು ಹೇಳಿದರೆ ಇಷ್ಟಪಡುವುದಿಲ್ಲ,

ಸುಮ್ಮನಿದ್ದರೆ ನಿಷ್ಪ್ರಯೋಜಕನೆನ್ನುವಿರಿ,
ಮಾತನಾಡಿದರೆ ಅಪಾಯಕಾರಿ ಎನ್ನುವಿರಿ,

ಹಾಗೆ ಹೇಳಿದರೆ ಬ್ಲಾಕ್ ಮಾಡುವಿರಿ,
ಹೀಗೆ ಹೇಳಿದರೆ ಸ್ವಾಗತ ಕೋರುವಿರಿ,

ಆದರೂ,
ಎಲ್ಲರನ್ನೂ ಮೆಚ್ಚಿಸುವಂತೆ,
ಎಲ್ಲರೂ ಇಷ್ಟಪಡುವಂತೆ ಹೇಳಬಹುದು,
ಯಾರಿಗೂ ನೋವಾಗದಂತೆ, ಬೇಸರವಾಗದಂತೆ, ಕೋಪಬರದಂತೆ ಹೇಳಬಹುದು,

ಹೇಗೆ ಗೊತ್ತೆ,
ಸತ್ಯದ ಸಮಾಧಿಯ ಮೇಲೆ ನಿಂತು,

ಏಕೆಂದರೆ,
ಕೆಲವೊಮ್ಮೆ ನಮ್ಮ ಮೂಗಿನ ನೇರಕ್ಕೆ ನೋಡಿದಾಗ,
ಆಕಾಶ ಕೆಳಗೂ,
ಭೂಮಿ ಮೇಲಕ್ಕೂ ಕಾಣುತ್ತದೆ,

ಆದ್ದರಿಂದ,
ಎಲ್ಲರೂ ಸಾಧ್ಯವಾದಷ್ಟು ವಿಷಯಗಳನ್ನು ಸಮಚಿತ್ತದಿಂದ, ವಿಶಾಲ ಮನೋಭಾವದಿಂದ, ಆತ್ಮಸಾಕ್ಷಿಗೆ ಅನುಗುಣವಾಗಿ ಚಿಂತಿಸಿ, ಅರ್ಥಮಾಡಿಕೊಳ್ಳಿ, ಪ್ರತಿಕ್ರಿಯಿಸಿ ಎಂದು ಮನವಿ ಮಾಡಿಕೊಳ್ಳುತ್ತಾ…..

ಹಾಗೆಯೇ ಪ್ರತಿ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಆತ್ಮಗೌರವವನ್ನು ಬೆಂಬಲಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068……..

error: No Copying!