Spread the love

ಅಯೋಧ್ಯೆ ಕಾಂಡದ ಈ ಪರ ವಿರೋಧಗಳ ನಡುವೆ ರಾಮಾಯಣದ ನಿಜವಾದ ಒಳ್ಳೆಯ ಗುಣ ಸ್ವಭಾವಗಳು ಮರೆಯಾಗಿ ತೀವ್ರ ವಿರೋಧ ಅಥವಾ ಉನ್ಮಾದ ಮಾತ್ರ ಪ್ರಾಮುಖ್ಯತೆ ಪಡೆಯುತ್ತಿದೆ. ವಾಸ್ತವದಲ್ಲಿ ರಾಮಾಯಣ ಅತ್ಯದ್ಭುತ ಸಾಹಿತ್ಯ ಕೃತಿ.
ಆಗಿನ ಕಾಲದಲ್ಲಿ ರಚಿತವಾದ ಈ ಕೃತಿ ಮನುಷ್ಯನ ಕಲ್ಪನಾಲೋಕದ ಉತ್ತುಂಗ ಸ್ಥಿತಿ ಎನ್ನಬಹುದು…..

ಇಂದಿನ ಪ್ರಜಾಪ್ರಭುತ್ವದ, ತಂತ್ರಜ್ಞಾನದ, ಮಹಿಳಾ ಸಮಾನತೆಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಆಧುನಿಕ ಕಾಲ ಘಟ್ಟದಲ್ಲಿ ನಿಂತು ನೋಡಿದಾಗ ರಾಮಾಯಣದಲ್ಲಿ ಸಾಕಷ್ಟು ದೌರ್ಬಲ್ಯಗಳು ಕಂಡುಬರುತ್ತವೆ. ಅದು ಸಹಜವೂ ಆಗಿದೆ. ಆದರೆ ‌ಇದನ್ನು ರಚಿಸುವಾಗ ಇದ್ದ ವ್ಯವಸ್ಥೆಯಲ್ಲಿ ರಾಮನೆಂಬ ಪಾತ್ರದ ಸುತ್ತ ಆಗಿನ ಮೌಲ್ಯಗಳನ್ನು ಚಿತ್ರಿಸಿದ ರೀತಿ ಅನನ್ಯ……

ಇಲ್ಲಿ ಮೂಲ ರಾಮಾಯಣ ಮತ್ತು ತದನಂತರದಲ್ಲಿ ರಚಿತವಾದ ಸಾವಿರಾರು ರಾಮಾಯಣ ಮತ್ತು ಅದರ ವ್ಯಾಖ್ಯಾನಗಳು ಅನೇಕಾನೇಕ ದೃಷ್ಟಿಕೋನಗಳನ್ನು ಹೊಂದಿರಬಹುದು. ಏನೇ ಆಗಲಿ ಅದರ ಒಟ್ಟು ಸಾರಾಂಶವನ್ನು ಸರಳವಾಗಿ ಯಾವುದೇ ಅತಿಯಾದ ವಿಮರ್ಶಾತ್ಮಕ ನಿಲುವುಗಳನ್ನು ತಳೆಯದೆ ನೋಡಿದರೆ ಸಿಗುವ ಚಿತ್ರಣವನ್ನು ಮಾತ್ರ ಗಮನಿಸಿದಾಗ……

ರಾಮ ಕೌಟುಂಬಿಕ ವ್ಯವಸ್ಥೆಯಲ್ಲಿ ಹಿರಿಯ ಮಗನ ಗೌರವಯುತ ಜವಾಬ್ದಾರಿ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುತ್ತಾನೆ. ( ಇಲ್ಲಿ ಏಕವಚನ ಪ್ರಯೋಗ ಸಹಜವಾಗಿ ಇರುತ್ತದೆ ಮತ್ತು ಆತ್ಮೀಯವಾಗಿ ಇರುತ್ತದೆ ಎಂಬ ಕಾರಣದಿಂದ ಮಾತ್ರ. ರಾಮರು ಎಂಬುದು ಅಷ್ಟು ಸೂಕ್ತವಲ್ಲ ).

ಮೊದಲೇ ಹೇಳಿದಂತೆ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಮಗ ಎಂಬುದು ಅರ್ಥ ಕಳೆದುಕೊಳ್ಳುತ್ತದೆ. ಏಕೆಂದರೆ ಗೌರವಕ್ಕಾಗಿ ಮಾತ್ರ ದೊಡ್ಡ ಮಗ. ಕಾನೂನಿನ ಪ್ರಕಾರ ಹೆಣ್ಣು ಮಕ್ಕಳು ಸೇರಿ ಎಲ್ಲರೂ ಸಮಾನರು ಮತ್ತು ಅವಿಭಕ್ತ ಕುಟುಂಬಗಳು ನಶಿಸಿ ಬಹುತೇಕ ಸಣ್ಣ ಕುಟುಂಬಗಳಾಗಿ ಮಾರ್ಪಾಟಾಗಿವೆ….

ರಾಮನ ಆದರ್ಶ ಗುಣಗಳಲ್ಲಿ
” ಪಿತೃ ವಾಕ್ಯ ಪರಿ ಪಾಲನೆ ” ಎಂಬುದು ಜನಪ್ರಿಯವಾಗಿದೆ. ತಂದೆಯ ಮಾತನ್ನು ಎಷ್ಟೇ ಕಠಿಣವಾದರು ಕೇಳಬೇಕು ಎಂಬ ಸಂದೇಶ. ಆಗಿನ ಕಾಲಕ್ಕೆ ಅದು ಸರಿ ಇದ್ದಿತು. ಈಗಲೂ ಒಂದು ಹಂತ ಮತ್ತು ಒಂದಷ್ಟು ನಿರ್ದಿಷ್ಟ ವಿಷಯಕ್ಕೆ ಸರಿ ಇದೆ. ಆದರೆ ಈಗಿನ ಹಣ ಕೇಂದ್ರಿತ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಶಿಕ್ಷಣ ಆಸ್ತಿ ಉದ್ಯೋಗ ಮದುವೆ ಮುಂತಾದ ವಿಷಯಗಳಲ್ಲಿ ತಂದೆಯ ಮಾತುಗಳನ್ನು ಸಂಪೂರ್ಣ ಪಾಲಿಸುವುದು ಕಷ್ಟವಾಗುತ್ತದೆ. ಅಲ್ಲದೇ ತಂದೆಯೇ ಭ್ರಷ್ಟ ಕುಡುಕ ಜೂಜುಕೋರ ಸಂಕುಚಿತ ಮನೋಭಾವದವರಾಗಿದ್ದರೆ ಆಗ ಪಾಲನೇ ಮಾಡುವುದು ಸೂಕ್ತವಲ್ಲ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇದರ ಅರ್ಥ ತಂದೆಯ ಮಾತನ್ನು ತಿರಸ್ಕರಿಸಬೇಕು ಎಂದಲ್ಲ. ವಿವೇಚನೆ ಬಳಸಬೇಕು ಎಂದಾಗುತ್ತದೆ…..

” ಏಕ ಪತ್ನೀ ವ್ರತಸ್ಥ ” ಎಂಬುದು ಮತ್ತೊಂದು ‌ಆದರ್ಶ. ಭಾರತದ ನೆಲದಲ್ಲಿ ಸಾಂಪ್ರದಾಯಿಕವಾಗಿ ಗಂಡ – ಹೆಂಡತಿಯದು ಏಳು ಜನುಮದ ಸಂಬಂಧ ಎಂದು ನಂಬಲಾಗಿದೆ. ಹಾಗೆಯೇ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆ ನಿಟ್ಟಿನಲ್ಲಿ ಇದು ಸರಿ ಇದೆ. ಆದರೆ ಈಗಿನ ಕಾಲದಲ್ಲಿ ಪ್ರಾಯೋಗಿಕವಾಗಿ ಹೇಳುವುದಾದರೆ, ಜೀವನ ಪರ್ಯಂತ ಗಂಡ ಹೆಂಡತಿ ಜೊತೆಯಾಗಿದ್ದರೆ ಉತ್ತಮ ನಿಜ. ಒಂದು ವೇಳೆ ಉತ್ತಮ ಬಾಂಧವ್ಯ ಸಾಧ್ಯವಾಗದಿದ್ದರೆ ಕಾನೂನಿನ ಪ್ರಕಾರ ವಿಚ್ಛೇದನ ಪಡೆಯುವುದು ಸಹ ಅಪರಾಧವೇನು ಅಲ್ಲ. ಅನೈತಿಕತೆಗಿಂತ ಇದು ಸರಿಯಾದ ಮಾರ್ಗ. ಆದರೂ ಕೌಟುಂಬಿಕ ವ್ಯವಸ್ಥೆ ಮತ್ತು ಜನರ ನೆಮ್ಮದಿಯ ಗುಣಮಟ್ಟ ದೀರ್ಘಕಾಲ ಹೊಂದಿರಲು ಮತ್ತು ಮಕ್ಕಳ ಪಾಲನೆ ಪೋಷಣೆ ಬೆಳವಣಿಗೆಗೆ ಏಕ ಪತಿ ಮತ್ತು ಪತ್ನಿ ವ್ಯವಸ್ಥೆ ಅತ್ಯುತ್ತಮ…….

ಹಾಗೆಯೇ ಅಣ್ಣ ತಮ್ಮ ಅತ್ತಿಗೆ ಮುಂತಾದ ಸಂಬಂಧಗಳ ಪ್ರಾಮುಖ್ಯತೆ ಮತ್ತು ಮೋಹದ ಕುತಂತ್ರ ಜಾಲಗಳ ಬಗ್ಗೆಯೂ ಎಚ್ಚರಿಕೆಯ ಸಂದೇಶವಿದೆ. ಲಕ್ಷ್ಮಣ, ಸೀತೆ, ಭರತ, ಶತ್ರುಜ್ಞ, ಕೈಕೇಯಿ, ಮಂಥರೆ ಪಾತ್ರಗಳು ಇದನ್ನು ಪ್ರತಿನಿಧಿಸುತ್ತದೆ……

ರಾಮ ರಾಜ್ಯ ಎಂಬುದು ಮತ್ತೊಂದು ಆದರ್ಶ. ಆದರೆ ಆ ಆಡಳಿತದ ರೀತಿನೀತಿಗಳನ್ನು ಈಗಿನ ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ನೋಡಿದರೆ ಅನೇಕ ವಿಷಯಗಳನ್ನು ಒಪ್ಪುವುದು ಕಷ್ಟ. ಈಗ ಭೀಮ ರಾಜ್ಯ ( ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚನೆಯ ಸಂವಿಧಾನಾತ್ಮಕ ಆಡಳಿತ ) ಹೆಚ್ಚು ಪ್ರಸ್ತುತ. ಆದರೆ ಪ್ರಜೆಗಳ ಯೋಗಕ್ಷೇಮವೇ ರಾಜನ ಮೊದಲ ಆಧ್ಯತೆ ಎಂಬುದು ರಾಮ ರಾಜ್ಯದ ತಿರುಳು. ಕಳ್ಳತನ, ದರೋಡೆ, ಕೊಲೆ, ಅತ್ಯಾಚಾರ, ಸುಳ್ಳು, ವಂಚನೆಗಳಿಲ್ಲದ ಒಂದು ಆದರ್ಶ, ಪ್ರಜಾ ಕಲ್ಯಾಣದ ಕನಸನ್ನು ವಾಲ್ಮೀಕಿ ಕಟ್ಟಿ ಕೊಡುತ್ತಾರೆ……

ಹೀಗೆ ವನವಾಸ, ಸೀತಾಪಹರಣ, ಭಕ್ತ ಆಂಜನೇಯನ ಪ್ರವೇಶ, ರಾವಣ ಸಂಹಾರ, ಮತ್ತೆ ಪುರ ಪ್ರವೇಶ ಎಲ್ಲವೂ ರಾಮನ ಹೀರೋಯಿಸಂಗೆ, ಸೀತೆಯ ಪಾವಿತ್ಯಕ್ಕೆ ಧಕ್ಕೆಯಾಗದಂತೆ ವಾಲ್ಮೀಕಿ ಇದನ್ನು ಚಿತ್ರಿಸಿದ್ದಾರೆ….

ಇದರ ಪ್ರಭಾವ ಇಡೀ ರಾಷ್ಟ್ರಕ್ಕೆ ವ್ಯಾಪಿಸಿ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ರಾಮ ಲಕ್ಷ್ಮಣ ಸೀತೆ ಆಂಜನೇಯರ ಆರಾಧನಾ ಮಂದಿರಗಳನ್ನು ಸ್ಥಾಪಿಸಲಾಗಿದೆ. ಮರ್ಯಾದಾ ಪುರುಷ ಎಂದು ಸಾಂಕೇತಿಕವಾಗಿ ಗುರುತಿಸಲಾಗುತ್ತದೆ…..

ಕೆಲವು ಅತಿಮಾನುಷ, ಕೆಲವು ಅಸಮಾನತೆಯ, ಕೆಲವು ಸರ್ವಾಧಿಕಾರದ, ಕೆಲವು ಪುರುಷ ಕೇಂದ್ರೀಕೃತ ವ್ಯಕ್ತಿ ಮತ್ತು ಘಟನೆಗಳನ್ನು ಸಾಂಕೇತಿಕವಾಗಿ ಪರಿಗಣಿಸಿ ವಾಸ್ತವ ನೆಲೆಯಲ್ಲಿ ರಾಮಾಯಣವನ್ನು ಅಭ್ಯಸಿಸಿದರೆ ಅದು ಒಂದು ಅವಿಸ್ಮರಣೀಯ ಗ್ರಂಥವಾಗುತ್ತದೆ.

ಕೇವಲ ಭಕ್ತಿ ಭಾವನೆಗಳ, ಧಾರ್ಮಿಕ ನಂಬಿಕೆಯ, ರಾಜಕೀಯ ನಿಲುವುಗಳ ಬಲೆಗೆ ಸಿಲುಕಿದರೆ ರಾಮ ಮತ್ತು ರಾಮಾಯಣ ಅರ್ಥ ಕಳೆದುಕೊಳ್ಳುತ್ತದೆ….

ಯಾವಾಗಲೂ ಸಮಾಜದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ. ಆದರೆ ಕೆಲವೇ ಸ್ವಾರ್ಥಿಗಳು ತಮ್ಮ ಅನುಕೂಲಕ್ಕಾಗಿ ಜನರಲ್ಲಿ ಗೊಂದಲ ಮೂಡಿಸಿ, ಭಾವನೆ ಕೆರಳಿಸಿ ಲಾಭ ಮಾಡಿಕೊಳ್ಳುತ್ತಾರೆ. ಅದರಲ್ಲೂ ಧಾರ್ಮಿಕ ಮತ್ತು ರಾಜಕೀಯ ನಾಯಕರು ಜನರ ಭಯ ಭಕ್ತಿ ಅಜ್ಞಾನ ಮೌಡ್ಯಗಳನ್ನು ಸದಾ ಜೀವಂತ ಇಟ್ಟಿರುತ್ತಾರೆ. ಭಾರತದಲ್ಲಿ ಇದು ಅತಿಹೆಚ್ಚು.
ಮನುಷ್ಯರ ಯೋಚನೆಯ ಸಹಜತೆಯನ್ನೇ ಇವರು ನಾಶ ಮಾಡಿ ಗುಲಾಮಿತನ ಸೃಷ್ಟಿಸಿದ್ದಾರೆ. ಆದ್ದರಿಂದಲೇ ರಾಮ ಸ್ಥಾವರವಾಗಿದ್ದಾನೆಯೇ ಹೊರತು ಜಂಗಮವಾಗಿಲ್ಲ…

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ವಚನ ಸಾಹಿತ್ಯವನ್ನು ನೆನಪಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!