ಮಲ್ಪೆ: ದಿನಾಂಕ:21-01-2024(ಹಾಯ್ ಉಡುಪಿ ನ್ಯೂಸ್) ಬಂದರಿನಲ್ಲಿ ಬೋಟ್ ಗಳು ತಾಗಿತು ಎಂಬ ಕಾರಣಕ್ಕೆ ಬೋಟ್ ಚಾಲಕ ಹಲ್ಲೆ ನಡೆಸಿದ್ದಾನೆಂದು ಹಲ್ಲೆಗೊಳಗಾದ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಭಟ್ಕಳ,ಕರಿಕಲ್ ಗ್ರಾಮದ ನಿವಾಸಿ ಮಾರುತಿ ಎಂಬವರು ಮಲ್ಪೆಯ IND-KA-02MM-6105 ಭಾಗ್ಯನಿಧಿ ಹೆಸರಿನ ಬೋಟಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 19/01/2024 ರಂದು ಮೀನುಗಾರಿಕೆ ಮುಗಿಸಿ ಬೋಟ್ ಮಲ್ಪೆ ಬಂದರಿಗೆ ಬಂದಿದ್ದು, ಬಂದರಿನಲ್ಲಿ ಮೀನು ಖಾಲಿ ಮಾಡಿ ಬೋಟ್ ಬಾಪುತೋಟ ಧಕ್ಕೆಗೆ ಹೋಗುವಾಗ ಮಲ್ಪೆ ಬಂದರಿನ ಒಳಗೆ ಬರುತ್ತಿದ್ದ IND-KA-02 MM 5166ನೇ ಹಿಮಗಿರಿ ಎಂಬ ಬೋಟಿಗೆ ತಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬೋಟ್ ತಾಗಿದಾಗ ಹಿಮಗಿರಿ ಬೋಟಿನ ಡ್ರೈವರ್ ಸಂದೀಪ್ ಎಂಬವನು ಮಾರುತಿಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮಾರುತಿಯವರಿದ್ದ ಬೋಟಿಗೆ ಬಂದು ಹಾರೆಯನ್ನು ತೆಗೆದುಕೊಂಡು ಏಕಾಏಕಿ ಕ್ಯಾಬಿನ್ ಒಳಗೆ ಬಂದು ಮಾರುತಿಯವರಿಗೆ ಬಲಕೈಗೆ , ಬಲಭುಜಕ್ಕೆ ಹೊಡೆದಿದ್ದು, ಆ ಸಮಯ ಬೋಟಿನ ಮಾಲೀಕ ದಿನಕರ ರವರು ತಡೆಯಲು ಬಂದಾಗ ಆರೋಪಿ ಸಂದೀಪ್ ಅವರಿಗೂ ಹೊಡೆಯಲು ಬಂದಿದ್ದು ದಿನಕರರವರು ತಪ್ಪಿಸಿಕೊಂಡಿರುತ್ತಾರೆ ಎಂದಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಮಾರುತಿಯನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿದೆ.
ಗಾಯಗೊಂಡ ಮಾರುತಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 324, 504, 448 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.