Spread the love

ಕರ್ನಾಟಕ ಸರ್ಕಾರದ ಘೋಷಣೆ…….

ಘೋಷಣೆಯ ಹಿಂದಿನ ವಿವಿಧ ಮುಖಗಳು……

ಮೊದಲನೆಯ ಮುಖ….

ಈ ಘೋಷಣೆಯ ಹಿಂದೆ ಮುಂದಿನ ಲೋಕಸಭಾ ಚುನಾವಣೆಯ‌ ಮತಗಳಿಕೆಯ ರಾಜಕಾರಣ ಇರಬಹುದೇ ಎಂದರೆ ಖಂಡಿತ ಇದೆ ಅದು ಬಹಿರಂಗ ಸತ್ಯ. ಯಾವ ರೀತಿ ಅಯೋಧ್ಯೆ ರಾಮ ಮಂದಿರವನ್ನು ಆತುರಾತುರವಾಗಿ ಕಾರ್ಪೊರೇಟ್ ಶೈಲಿಯಲ್ಲಿ ಉದ್ಘಾಟನೆ ಮಾಡುತ್ತಾರೋ ಅದೇ ರೀತಿಯ ಚುನಾವಣಾ ರಾಜಕೀಯ ಎಂಬುದರಲ್ಲಿ ಸಂಶಯವಿಲ್ಲ…..

ಎರಡನೆಯ ಮುಖ…

ಸಾಂಸ್ಕೃತಿಕ ನಾಯಕ ಅಥವಾ ವಕ್ತಾರ ಅಥವಾ ರಾಯಭಾರಿ ಎಂದರೆ ಏನು ಎಂಬ ಬಗ್ಗೆ ಸಾಮಾನ್ಯರ ಮನಸ್ಸು ಕೇಳಬಹುದು…

ಒಂದು ಪ್ರದೇಶದ ಅಂದರೆ ಈ‌ ಸಂದರ್ಭದಲ್ಲಿ ಕರ್ನಾಟಕದ ಒಟ್ಟು ಪ್ರಾಕೃತಿಕ ವಾತಾವರಣ, ಇದು ಬೆಳೆದು ಬಂದ ಇತಿಹಾಸ, ಇಲ್ಲಿನ ಆಚಾರ ವಿಚಾರ ಸಂಪ್ರದಾಯ ನಂಬಿಕೆ ಆಡಳಿತ ಎಲ್ಲವನ್ನೂ ಒಳಗೊಂಡ ಜೀವನಶೈಲಿ, ಈ ನೆಲ ಈ ಜಲ ಪ್ರತಿಪಾದಿಸುವ ಎಲ್ಲಾ ‌ಮೌಲ್ಯಯುತ ಸೈದ್ಧಾಂತಿಕ ನಿಲುವುಗಳು, ಇಲ್ಲಿನ ಸಂವಿಧಾನ ಮತ್ತು ಧಾರ್ಮಿಕ ಆಚರಣೆಗಳು ಮತ್ತು ಒಟ್ಟಾರೆ ಇಡೀ ಪ್ರದೇಶದ ಸಾಂಸ್ಕೃತಿಕ ವ್ಯಕ್ತಿತ್ವ ಪ್ರತಿಬಿಂಬಿಸುವ ಮತ್ತು ಪ್ರತಿನಿಧಿಸುವ ಆದರ್ಶ ವ್ಯಕ್ತಿಯನ್ನು ‌ಸಾಮಾನ್ಯವಾಗಿ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತದೆ. ಇದಕ್ಕೆ ಇನ್ನಷ್ಟು ಅರ್ಥ – ಆಯಾಮಗಳು ಇರಬಹುದು…..

ಇದೇ ಅರ್ಥದಲ್ಲಿ ಭಾರತದ ‌ಸಾಂಸ್ಕೃತಿಕ ರಾಯಭಾರಿ ಎಂದು ಸ್ವಾಮಿ ವಿವೇಕಾನಂದರನ್ನು ಪರಿಗಣಿಸಲಾಗುತ್ತದೆ‌ ಎಂಬುದನ್ನು ನೆನಪು ಮಾಡಿಕೊಳ್ಳುತ್ತಾ….

ಮೂರನೆಯ ಮುಖ,….

ಕರ್ನಾಟಕದ ಇತಿಹಾಸ – ವರ್ತಮಾನದಲ್ಲಿ ಬಸವಣ್ಣನವರನ್ನು ಹೊರತುಪಡಿಸಿ ಬೇರೆ ಯಾರಾದರೂ ಈ ಸ್ಥಾನಕ್ಕೆ ಅರ್ಹರು ಇರಬಹುದೇ ಅಥವಾ ಇದ್ದಾರೆಯೇ ಎಂದು ನಮ್ಮಲ್ಲೇ ಪ್ರಶ್ನಿಸಿಕೊಂಡಾಗ……

ನನ್ನ ವೈಯಕ್ತಿಕ ಜ಼್ಞಾನದ ಮಿತಿಯಲ್ಲಿ ಸಮಗ್ರ ಚಿಂತನೆಯ ನಂತರ ಆ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಬಸವಣ್ಣನವರು ಮಾತ್ರ. ಬಹುಶಃ ಅವರಿಗೆ ಸ್ಪರ್ಧೆ ನೀಡುವ ಅಥವಾ ಅವರ ಹತ್ತಿರಕ್ಕೆ ಬರುವ ಯಾವ ವ್ಯಕ್ತಿಯು ಸಿಗುವುದಿಲ್ಲ. ಹಾಗೆಂದು ಕರ್ನಾಟಕದಲ್ಲಿ ಇತರೆ ಸಾಧಕರು ಇಲ್ಲವೆಂದಲ್ಲ. ವಿವಿಧ ಕ್ಷೇತ್ರಗಳ ಅತ್ಯದ್ಭುತ ಸಾಧಕರು ಇದ್ದಾರೆ. ಆದರೆ ಜೀವಪರ ನಿಲುವುಗಳು, ಸಮ ಸಮಾಜದ ಹೋರಾಟಗಳು, ಅನುಭವದ ಅನುಭಾವ ಚಿಂತನೆಗಳು ಬಸವಣ್ಣ ಕರ್ನಾಟಕಕ್ಕೆ ಮಾತ್ರವಲ್ಲ ವಿಶ್ವಕ್ಕೇ ಮಾದರಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು.

ಬಸವಣ್ಣನವರ ನಾಗರಿಕ ಸಮಾನತೆ ಎಲ್ಲಾ ಎಲ್ಲೆಗಳನ್ನು ಮೀರಿದ್ದು. ಜೊತೆಗೆ ಅದು ಚಿಂತನೆಯ ರೂಪದಲ್ಲಿ ಮಾತ್ರವಲ್ಲದೆ ಪ್ರಾಯೋಗಿಕವಾಗಿ ಸಹ ಆಚರಣೆಯ ಮಹತ್ವ ಪಡೆದಿದೆ. ಈ ನೆಲದ ಮಣ್ಣಿನ ಗುಣವನ್ನು ಹೊಂದಿದೆ. ಕಾಯಕ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ಬಸವಣ್ಣನವರ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆ ಮಾಹಿತಿಗಳು ಎಲ್ಲರಿಗೂ ಲಭ್ಯವಿದೆ. ಅದನ್ನು ಇನ್ನೊಮ್ಮೆ ಓದಿ ಮನನ ಮಾಡಿಕೊಳ್ಳಬಹುದು……

ನಾಲ್ಕನೆಯ ಮುಖ,
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಹೆಮ್ಮೆಯೋ ? ನಾಚಿಕೆಯೋ ?….

ತಾಂತ್ರಿಕವಾಗಿ ಮತ್ತು ನೈತಿಕವಾಗಿ ಅತ್ಯಂತ ಹೆಮ್ಮೆಯ ವಿಷಯ. ಆದರೆ ವಾಸ್ತವಿಕವಾಗಿ ತುಂಬಾ ನಾಚಿಕೆ ಮತ್ತು ಅವಮಾನಕರ ವಿಷಯ…

ಇದಕ್ಕೆ ಹೆಜ್ಜೆ ಹೆಜ್ಜೆಗೂ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು…..

ಬೇರೆ ಸಮುದಾಯಗಳನ್ನು ಬಿಡಿ, ಬಸವಣ್ಣನವರ ತತ್ವಗಳ ಆಧಾರದ ಮೇಲೆ ಪರಿವರ್ತನೆ ಹೊಂದಿ ಸ್ವತಃ ವೀರಶೈವ ಅಥವಾ ಲಿಂಗಾಯತ ಸಮುದಾಯವಾಗಿರುವ ಜನರಲ್ಲಿಯೇ ಜಾತಿಯ ಬೇರುಗಳು 2024 ಪ್ರಾರಂಭದ ಈ ದಿನಗಳಲ್ಲಿಯೂ ಅತ್ಯಂತ ಆಳವಾಗಿ ಬೇರೂರಿದೆ. ಜಾತಿಯ ಮೇಲು ಕೀಳು ಮೀರಿ ಅಸ್ಪೃಶ್ಯತೆ ಸಹ ಇನ್ನೂ ಜೀವಂತವಾಗಿದೆ. ಮರ್ಯಾದ ಹತ್ಯೆಗಳು ಸಹ ಆಗಾಗ ನಡೆಯುತ್ತಿವೆ. ಕಾರಣವೇನೇ ಇರಲಿ ಜಾತಿಗೊಂದು ಮಠಗಳು ಮೀರಿ ಒಳ ಪಂಗಡಗಳು ಮತ್ತು ಒಂದೇ ಪಂಗಡದ ಬೇರೆ ಬೇರೆ ಪಕ್ಷಗಳ ಬೆಂಬಲಿತ ಮಠಗಳು ಕಾರ್ಯನಿರ್ವಹಿಸುತ್ತಿವೆ….

ಚುನಾವಣಾ ಸಂದರ್ಭದ ಜಾತಿ ರಾಜಕೀಯ ಬಸವ ತತ್ವದ ಸಂಪೂರ್ಣ ವಿರುದ್ಧ ನಡೆಗಳನ್ನು ಹೊಂದಿದೆ. ಮತದಾರರು ಭ್ರಷ್ಟರಾಗಿದ್ದಾರೆ. ಅನೇಕ ಮಠ ಮಾನ್ಯಗಳು ನೇರವಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಾಗಿದ್ದಾರೆ. ಬಹುತೇಕ ಮಠಗಳು ವಾಣಿಜ್ಯೀಕರಣಗೊಂಡಿವೆ.‌ ಕೆಲವು ಲೈಂಗಿಕ ಹಗರಣಗಳಲ್ಲಿ ಸಿಕ್ಕಿ ಬಿದ್ದಿವೆ. ಹಲವು ಶಿಕ್ಷಣ – ಭೂ ಮಾಫಿಯಾ ವ್ಯವಹಾರ ಮಾಡುತ್ತಿವೆ….

ಅನೇಕ ಸಂಘ ಸಂಸ್ಥೆಗಳು ಅಪಾತ್ರರ ಕೈಗೆ ಸಿಲುಕಿ ಬಸವ ತತ್ವ ತನ್ನ ಗೌರವ ಕಳೆದುಕೊಳ್ಳುತ್ತಿದೆ. ಅನೇಕ ಜನರು ಈಗಲೂ ಅತ್ಯಂತ ಮೌಡ್ಯದ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಇವೆಲ್ಲವೂ ಅವರ ವಿಚಾರಗಳಿಗೆ ವಿರುದ್ಧ. ಆದ್ದರಿಂದ ವಾಸ್ತವ ನೆಲೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ಆ ರಾಜ್ಯ ಹೇಗಿರಬಹುದು ಎಂದು ಯಾರಾದರೂ ಅಧ್ಯಯನ ಮಾಡಿದರೆ ನಾಚಿಕೆಯಾಗುವುದು ಸಹಜ…..

ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಲ್ಲಿಯವರೆಗೆ ಅನಧಿಕೃತವಾಗಿದ್ದ ವಿಷಯ ಈಗ ಅಧಿಕೃತವಾಗಿದೆ. ಅದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತಾ……

ಐದನೆಯ ಮುಖ……

ಮುಂದೆ……

ಇಂದಿನಿಂದಲೇ ನಿಜವಾದ ಬಸವ ಅನುಯಾಯಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಇಡೀ ಕರ್ನಾಟಕವನ್ನು ಒಳಗೊಂಡ ಸಮ ಸಮಾಜದ ಕನಸಿಗೆ ಕಾರ್ಯಯೋಜನೆ ರೂಪಿಸಬೇಕಿದೆ. ಜಾತಿ ಪದ್ದತಿಯ ನಿರ್ಮೂಲನೆ ಮಾಡಿ ಅಂತರ್ಜಾತಿಯ ವಿವಾಹಗಳಿಗೆ ವೈಯಕ್ತಿಕ ಮಟ್ಟದಲ್ಲಿ ಆದರ್ಶವಾಗಬೇಕಿದೆ. ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಬಸವ ತತ್ವದ ಪ್ರಾಮುಖ್ಯತೆ ಮನವರಿಕೆ ಮಾಡಿಕೊಡಬೇಕಾಗಿದೆ…..

ಯಾರು ಈ ಸಾಂಸ್ಕೃತಿಕ ನಾಯಕ ಎಂದು ಹೆಸರಾಗಲು ಪ್ರಯತ್ನಿಸಿದರೋ ಅವರು ಅಧಿಕಾರ ಪ್ರಶಸ್ತಿ ಮೀರಿ ಒಂದಷ್ಟು ತ್ಯಾಗಕ್ಕೆ ಸಿದ್ದರಾಗಬೇಕಿದೆ. ಕೇವಲ ಯಾವುದೋ ಕಟ್ಟಡಗಳಿಗೆ, ನಿಲ್ದಾಣಗಳಿಗೆ, ಪ್ರದೇಶಗಳಿಗೆ,
ಶಿಕ್ಷಣ ಸಂಸ್ಥೆಗಳಿಗೆ, ಪ್ರಶಸ್ತಿಗಳಿಗೆ ಬಸವಣ್ಣನವರ ಹೆಸರು ಘೋಷಿಸುವುದೇ ಒಂದು ಸಾಧನೆಯಾಗಬಾರದು…

ಇನ್ನು ಹತ್ತು ವರ್ಷಗಳಲ್ಲಿ ಚುನಾವಣೆಯಲ್ಲಿ ಜಾತಿ ಮೀರಿದ ಅರ್ಹ ವ್ಯಕ್ತಿ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ಪರಿಸ್ಥಿತಿ ಕರ್ನಾಟಕದ ರಾಜಕೀಯದಲ್ಲಿ ನಿರ್ಮಾಣವಾಗಬೇಕು….

ಮದುವೆಗಳು ಮನುಷ್ಯ ಸಂಬಂಧಗಳ ನಡುವೆ ಆಗಬೇಕೆ ಹೊರತು ಜಾತಿಗಳ ನಡುವೆಯಲ್ಲ……

ಯಾವುದೇ ಮಠ ಮಾನ್ಯಗಳ ಪೀಠಾಧೀಶರಾಗಿ ಯಾವುದೇ ಅರ್ಹ ವ್ಯಕ್ತಿ ಮುಖ್ಯಸ್ಥರಾಗಿ ಬೇಕೆ ಹೊರತು ಆ ಜಾತಿಯವರು ಮಾತ್ರವಲ್ಲ.

ಯಾವುದೇ ಜಾತಿ ಪಂಗಡಗಳು ಆ ಹೆಸರಿನಲ್ಲಿ ಮೀಸಲಾತಿ ಹೋರಾಟ ಮಾಡಬಾರದು. ಎಲ್ಲರೂ ನಮ್ಮವರೇ ಎಂದು ಭಾವಿಸಬೇಕು. ಜಾತಿಯೇ ಇಲ್ಲದಿದ್ದರೆ ಜಾತಿಯ ಮೀಸಲಾತಿ ಪ್ರಶ್ನೆಯೇ ಬರುವುದಿಲ್ಲ. ಮೊದಲು ಹೋರಾಟ ಮಾಡಬೇಕಾಗಿರುವುದು ಜಾತಿ ನಿರ್ಮೂಲನೆಗಾಗಿಯೇ ಹೊರತು ಮೀಸಲಾತಿ ವಿರುದ್ದವಲ್ಲ….

ಹೀಗೆ ಇನ್ನೂ ಅನೇಕ ಸಾಧ್ಯತೆಗಳು ಇವೆ. ‌ಅದನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಕ್ಕೆ ಅರ್ಥವಿರುತ್ತದೆ. ಇಲ್ಲದಿದ್ದರೆ ಔಪಚಾರಿಕತೆಯಿಂದ ನಮ್ಮಂತ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ…..

ನುಡಿದಂತೆ ನಡೆ ಇರಲಿ ಎಂದು ಮನವಿ ಮಾಡಿಕೊಳ್ಳುತ್ತಾ…..
ಶರಣು ಶರಣಾರ್ಥಿಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!