ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಜೈಭೀಮ್, ಈಗ ಕಾಟೇರ ಹೀಗೆ ಭಾರತದ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ನಿರಂತರವಾಗಿ ಈ ಸಮಾಜದ ಅನ್ಯಾಯ ಅಕ್ರಮ ಹಿಂಸೆ ತಾರತಮ್ಯಗಳನ್ನು ಮನರಂಜನೆ, ವ್ಯಾಪಾರ ಮತ್ತು ಕಲಾತ್ಮಕವಾಗಿ ಚಿತ್ರಿಸಿ ಯಶಸ್ಸು ಪಡೆಯಲಾಗುತ್ತಿದೆ. ಜನರು ಸಹ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಹಿಂಸೆ ಕ್ರೌರ್ಯ ಅಸಮಾನತೆ ಅಮಾನವೀಯತೆಯು ಒಂದು ಮನರಂಜನೆ ಎಂಬಲ್ಲಿಗೆ ನಮ್ಮ ಮನಸ್ಥಿತಿಗಳು ಬಂದು ತಲುಪಿದೆ……
ಒಮ್ಮೆ ಹಾಗೇ ಯೋಚಿಸಿ ನೋಡಿ. ಈ ದೇಶದ ಲಕ್ಷಾಂತರ ದೇವಸ್ಥಾನಗಳಲ್ಲಿ ಪ್ರತಿನಿತ್ಯ ದೇವರ ಪೂಜೆಗಳು ಅತ್ಯಂತ ಶ್ರದ್ದಾ ಭಕ್ತಿಯಿಂದ ಮಾಡಲಾಗುತ್ತದೆ. ಈ ದೇಶದ ಲಕ್ಷಾಂತರ ಮಸೀದಿಗಳಲ್ಲಿ ಪ್ರತಿನಿತ್ಯ ದಿನಕ್ಕೆ ಐದು ಬಾರಿ ನಮಾಜು ಮಾಡಲಾಗುತ್ತದೆ. ಈ ದೇಶದ ಲಕ್ಷಾಂತರ ಚರ್ಚುಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆ ಮಾಡಲಾಗುತ್ತದೆ. ಇನ್ನು ಕೆಲವು ಧರ್ಮಗಳಲ್ಲಿ ಅವರವರದೇ ರೀತಿಯಲ್ಲಿ ದೇವರನ್ನು ಸ್ಮರಿಸುತ್ತಾರೆ…..
ಈ ದೇಶದ ಸುಮಾರು ಶೇಕಡಾ 95% ಜನರಿಗೆ ದೇವರು ಮತ್ತು ಧರ್ಮದ ಬಗ್ಗೆ ಅಪಾರ ನಂಬಿಕೆಯಿದೆ.
ಆಶ್ಚರ್ಯಕರ ವಿಷಯವೆಂದರೆ ಈಗಲೂ ಹಿಂಸಾತ್ಮಕ ಚಿತ್ರಗಳು ಅತ್ಯಂತ ಯಶಸ್ವಿಯಾಗುತ್ತವೆ.
ಪ್ರತಿನಿತ್ಯ ರಾಮ ಅಲ್ಲಾ ಯೇಸು ಅವರಿಗೆ ಸಲ್ಲಿಸುವ ಭಕ್ತಿಯಲ್ಲಿ ಕನಿಷ್ಠ 10% ನಮ್ಮ ಕಾಯಕ ಧರ್ಮದ ಪ್ರಾಮಾಣಿಕತೆಯನ್ನು ನಡವಳಿಕೆಯಾಗಿ ರೂಪಿಸಿಕೊಂಡಿದ್ದರೆ ಈ ದೇಶ ಒಂದೇ ಕ್ಷಣದಲ್ಲಿ ಶೇಕಡಾ 90% ಹಿಂಸೆ ಮುಕ್ತವಾಗಿ ಸಮ ಸಮಾಜದ ನಿರ್ಮಾಣವಾಗುತ್ತಿತ್ತು. ಅದು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಅದರ ಅರ್ಥ ನಾವು ಮನುಷ್ಯ ಮುಖವಾಡದೊಂದಿಗೆ ಬದುಕುತ್ತಿರುವ ಕಾಡು ಮೃಗಗಳು ಎಂದು ಹೇಳಬಹುದೇ….
ಕೆ ಜಿ ಎಫ್, ಸಲಾರ್, ಜವಾನ್, ಅನಿಮಲ್ ನಂತಹ ಕ್ರೌರ್ಯದ ಸಿನಿಮಾಗಳ ಸಾವಿರಾರು ಕೋಟಿಯ ಯಶಸ್ಸು ಏನನ್ನು ಸೂಚಿಸುತ್ತದೆ. ಅದರಲ್ಲೂ ಅನಿಮಲ್ ಸಿನಿಮಾ ಅತ್ಯಂತ ರಣಭಯಂಕರ ಹಿಂಸೆಯನ್ನು ಪ್ರತಿಪಾದಿಸುತ್ತದೆ.
” ಅನಿಮಲ್ ” ಹಿಂದಿ ಚಲನಚಿತ್ರ………
2023 ರ ಕೊನೆಯಲ್ಲಿ ಮಂಗಳೂರಿನಲ್ಲಿ ಅನಿರೀಕ್ಷಿತವಾಗಿ ಈ ಚಲನಚಿತ್ರ ವೀಕ್ಷಿಸುವ ಅವಕಾಶ ಮೂಡಿಬಂದಿತು. ಆಗ ಉದ್ಭವಿಸಿದ ಕೆಲವು ಅನುಮಾನಗಳು ನಿಮ್ಮ ಮುಂದೆ……
ಭಾರತದ ಕೇಂದ್ರ ಸೆನ್ಸಾರ್ ಮಂಡಳಿ ಸಂಪೂರ್ಣ ಸತ್ತು ಹೋಗಿದೆಯೇ ?
ಸಿನಿಮಾ ನಿರ್ಮಾಣಕ್ಕೆ ಕಥೆ ಚಿತ್ರಕಥೆಗಳ ಬರಗಾಲ ಬಂದಿದೆಯೇ ?
ಚಿತ್ರ ನಿರ್ದೇಶಕರ
ಕ್ರಿಯಾತ್ಮಕತೆಗೆ ಗ್ರಹಣ ಬಡಿದಿದೆಯೇ ?
ಪ್ರೇಕ್ಷಕರಿಗೆ ಹುಚ್ಚು ಹಿಡಿದಿದೆಯೇ ?
ಅಥವಾ,
ಈ ಚಲನಚಿತ್ರ ಆಧುನಿಕ ಭಾರತೀಯ ಸಮಾಜದ ಪ್ರತಿ ಬಿಂಬವೇ ?
ಕ್ರಿಯಾತ್ಮಕತೆ, ವಾಣಿಜ್ಯ ಹಿತಾಸಕ್ತಿ ಮನರಂಜನೆಯ ಒಟ್ಟು ಉದ್ದೇಶ ಫಲ ಇದಾಗಿರಬಹುದೇ ?
ಹಿಂಸೆ ಅಶ್ಲೀಲತೆಯ ವಿಕೃತತೆ ತನ್ನ ಉಚ್ಛ್ರಾಯ ಹಂತ ತಲುಪಿದೆಯೇ ?
ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪರಿವರ್ತನೆ ಹೊಂದಿದೆಯೇ ?
ಅಥವಾ,
ಮುಕ್ತತೆ ಸಹಜವಾಗಿ ಹೀಗೆ ರೂಪಾಂತರ ಹೊಂದುತ್ತದೆಯೇ ?
ಆ ಬದಲಾವಣೆ ಒಪ್ಪಿಕೊಳ್ಳದ ನಾವು ಅಸಹಜ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದೇವೆಯೇ ?
ಅದು ಕಲಾ ಮಾಧ್ಯಮದ ಹೊಸ ಪ್ರಯೋಗವೇ ?
ವ್ಯವಸ್ಥೆ ಕಾರ್ಯನಿರ್ವಹಿಸುವುದೇ ಹೀಗೆಯೇ ?
ಹತ್ತಾರು ಪ್ರಶ್ನೆಗಳ ಜೊತೆಗೆ ಸಮಗ್ರ ಚಿಂತನೆಯ ಹಾದಿಯಲ್ಲಿ ನಡೆದಾಗ…..
ಸೆಕ್ಸ್, ಕ್ರೌರ್ಯ, ಹುಚ್ಚುತನ, ವಿಕೃತ ಮನಸ್ಥಿತಿಗಳು, ಪ್ರೀತಿ ಪ್ರೇಮ ಸಂಬಂಧ ಸಂಗೀತ ಸಾಹಿತ್ಯ ಎಲ್ಲದಕ್ಕೂ ಪರ್ಯಾಯವಾಗಿ ಅಭಿವೃದ್ಧಿ ಹೊಂದುತ್ತಿರುವಂತೆ ಭಾಸವಾಗುತ್ತದೆ. ವೇಗ ಮತ್ತು ಸ್ಪರ್ಧೆಯ ಆಧುನಿಕ ಜಗತ್ತು ನಿಯಂತ್ರಣ ಮೀರುತ್ತಿರುವಂತಿದೆ.
ಅನಿಮಲ್ ಸಿನಿಮಾ ಸುಮಾರು 1000 ಕೋಟಿಯವರೆಗೆ ವ್ಯವಹಾರ ಮಾಡಿದೆ ಎಂಬ ಸುದ್ದಿ ಇದೆ. ಅದೊಂದು ಯಶಸ್ವಿ ಚಿತ್ರ ಎಂದೇ ಪರಿಗಣಿಸಲಾಗಿದೆ.
ಅದರ ನಾಯಕ – ನಾಯಕಿ ಮತ್ತು ನಿರ್ದೇಶಕ ಸೇರಿ ಇಡೀ ತಂಡ, ಮಾಧ್ಯಮಗಳು, ಪ್ರೇಕ್ಷಕರು ಎಲ್ಲರೂ ಅದನ್ನು ಬಹುತೇಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅದು ಒಂದು ರೀತಿಯ ಅದ್ಬುತ ಸಾಧನೆ ಎಂದೇ ಮಾತನಾಡಿಕೊಳ್ಳಲಾಗುತ್ತಿದೆ.
ಇತ್ತ ಕಡೆ ಜಾತಿ ಮತ್ತು ವರ್ಗ ಅಸಮಾನತೆಯ ಕನ್ನಡ ಚಲನಚಿತ್ರ ಕಾಟೇರ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜನರ ದ್ವಂದ್ವ ಮನಸ್ಥಿತಿ ಬಯಲಾಗುತ್ತಿದೆ……
ಅತ್ತ ಕಡೆ ಸಿನಿಮಾ ನಟನ ಹುಟ್ಟುಹಬ್ಬದ ಪ್ರಯುಕ್ತ ಕಟೌಟ್ ನಿಲ್ಲಿಸಲು ಹೋಗಿ ಮೂವರು ಯುವಕರು ಸಾವನ್ನಪ್ಪಿದ್ದಾರೆ…..
ನಿಜ ಜೀವನದಲ್ಲಿ ಅನೈತಿಕ ನಡವಳಿಕೆಯನ್ನು, ಸಂಬಂಧಗಳನ್ನು ಟೀಕಿಸುವ ಇದೇ ಜನ ಸಿನಿಮಾ ಧಾರವಾಹಿಗಳ ಆ ರೀತಿಯ ದೃಶ್ಯಗಳನ್ನು ಶಿಳ್ಳೆಹೊಡೆದು ಪ್ರೋತ್ಸಾಹಿಸುತ್ತಾರೆ…….
ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,
ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ.
ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ,
ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿಂಬಾಲಕರಾಗಿರುವಿರಿ.
ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ,
ಆದರೆ ವಾಸ್ತವದಲ್ಲಿ ಅದೇ ಎಲ್ಲವೂ ನನಗೆ ಇರಲಿ ಎಂದು ದುರಾಸೆ ಪಡುವಿರಿ.
ಪತ್ರಿಕೆ ಟಿವಿಗಳಲ್ಲಿ ವೃದ್ದ ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ,
ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ.
ವರದಕ್ಷಿಣೆ ಸಾವುಗಳನ್ನು ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ,
ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆಂದು ಆಸೆ ಪಡುವಿರಿ.
ಬೇರೆ ಶ್ರೀಮಂತ ಸಮಾರಂಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ,
ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ.
ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ,
ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಿರಿ.
ಪೋಟೋಗಳಲ್ಲಿ ಸುಂದರ ಪರಿಸರ, ವಾತಾವರಣ ನೋಡಿ ಆನಂದಿಸುವಿರಿ,
ನಿಮ್ಮ ಸುತ್ತ ಮುತ್ತ ಕೆಟ್ಟ ವಾತಾವರಣ ಇಟ್ಟುಕೊಂಡಿರುತ್ತೀರಿ.
ಆಂತರ್ಯದಲ್ಲಿ ಸ್ವಾರ್ಥಿಗಳಾಗಿರುವ ನಾವು,
ಬಹಿರಂಗವಾಗಿ ತ್ಯಾಗ ಜೀವಿಗಳನ್ನು ಕೊಂಡಾಡುತ್ತೇವೆ.
ಪರಿಸರ ನಾಶಮಾಡುವುದು,
ಮಳೆ ಬರುವುದಿಲ್ಲ ಎಂದು ಬೊಬ್ಬೆ ಹೊಡೆಯುವುದು.
ಕಾಡಿನಲ್ಲಿ ಊರು ನಿರ್ಮಿಸುವುದು,
ಕಾಡು ಪ್ರಾಣಿಗಳ ಹಾವಳಿ ಎಂದು ಕೂಗುವುದು.
ಕೆರೆ ಜಾಗದಲ್ಲಿ ಮನೆ ಕಟ್ಟುವುದು,
ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎಂದು
ದೂರುವುದು.
ಕೆರೆಗಳನ್ನು ನುಂಗಿ ಬಿಡುವುದು,
ಕುಡಿಯಲು ನೀರಿಲ್ಲ, ಅಂತರ್ಜಲ ಬತ್ತಿದೆ ಎಂದು ಬಾಯಿ ಬಡಿದುಕೊಳ್ಳುವುದು.
ವಾಯು ಮಾಲಿನ್ಯ ಮಾಡುವುದು,
ಶುದ್ದ ಗಾಳಿ ಇಲ್ಲ ಎಂದು ಕೊರಗುವುದು.
ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು,
ಆರೋಗ್ಯ ಸರಿಯಿಲ್ಲ ಎನ್ನುವುದು.
ಆಹಾರ ಕಲಬೆರಕೆ ಮಾಡುವುದು,
ರೋಗಗಳಿಗೆ ಆಹ್ವಾನ ನೀಡುವುದು.
ದಿಡೀರ್ ಶ್ರೀಮಂತಿಕೆಗೆ ದುರಾಸೆ ಪಡುವುದು,
ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು.
ಗೊತ್ತು ಗುರಿಯಿಲ್ಲದೆ vehicle ಗಳನ್ನು ರಸ್ತೆಗಿಳಿಸುವುದು,
Traffic jam ಎಂದು ಹಲುಬುವುದು.
ಸಂಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು,
ಕೋಪದಲ್ಲಿ ಡೈವೋರ್ಸ್ ಮಾಡಿಕೊಳ್ಳುವುದು.
ಹಣ ಪಡೆದು, ಜಾತಿ ನೋಡಿ ಓಟು ಹಾಕುವುದು,
ಸರ್ಕಾರ ಸರಿಯಿಲ್ಲ ಎಂದು ಕೊರಗುವುದು.
ಈಗಲಾದರೂ ಎಚ್ಚೆತ್ತುಕೊಳ್ಳೋಣ,
ಪರಿಸ್ಥಿತಿ ಕೈ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ.
ಇದೆಲ್ಲಾ ಖಂಡಿತವಾಗಿ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ.
ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ನಮ್ಮನ್ನಾಳುವ ಸರ್ಕಾರಗಳಿಗೆ ಮಾತ್ರ.
ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ.
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ
ಪರಿವರ್ತನೆ ಮಾಡಿಕೊಳ್ಳೋಣ.
ಮಾತಿಗೂ, ಕೃತಿಗೂ ಅಂತರ ಹೆಚ್ಚಾದಾಗ ಈ ಆತ್ಮವಂಚಕತನ ಬೆಳೆಯುತ್ತದೆ.
ಇದಕ್ಕೆ ನಾವ್ಯಾರು ಹೊರತಲ್ಲ,
ಆದರೆ ಇದು ಅಪಾಯಕಾರಿ.
ಇದನ್ನು ನಾವು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸೋಣ.
ನಮ್ಮ ನಡೆಗೂ, ನುಡಿಗೂ ಅಂತರ ಕಡಿಮೆ ಇರಲಿ.
ಸಾಧ್ಯವಾದಷ್ಟೂ ಹೇಳುವುದನ್ನು ಮಾಡೋಣ – ಮಾಡುವುದನ್ನು ಹೇಳೋಣ.
ನಮ್ಮ ಮಕ್ಕಳೂ ಅದನ್ನೇ ಮುಂದುವರಿಸುತ್ತಾರೆ.
ಈ ವಿಷಯದಲ್ಲಿ ಈಗಿನಿಂದಲೇ ಬದಲಾಗೋಣ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……..