ಇತ್ತೀಚೆಗೆ ಆತ್ಮೀಯ ಗೆಳೆಯರಾದ, ಮಂತ್ರ ಮಾಂಗಲ್ಯದ ರೀತಿ ಮದುವೆಯಾಗಿದ್ದ ಶ್ರೀ ಯುವರಾಜ್ ಅವರ ಮಗಳು ಮಯೂರಿಯ ಒಂದನೇ ವರ್ಷದ ಜನುಮ ದಿನಾಚರಣೆಯನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದರು. ಎಲ್ಲ ಸಾಂಪ್ರದಾಯಿಕ ಸಂಭ್ರಮಗಳನ್ನು ಒಳಗೊಂಡ ಆದರೆ ಸರಳ ಮತ್ತು ಅರಿವಿನ ಸಾಂಸ್ಕೃತಿಕ ಹಬ್ಬದಂತೆ ಇದ್ದದ್ದು ಒಂದು ಮಾದರಿಯಾಗಿದೆ…..
ಸಾಮಾನ್ಯವಾಗಿ ಹತ್ತು ವರ್ಷದ ಒಳಗಿನ ಮಕ್ಕಳಿಗೆ ಹುಟ್ಟು ಹಬ್ಬದ ಆಚರಣೆ ಹೆಚ್ಚು ಸಂತೋಷ ಮತ್ತು ಅರ್ಥಪೂರ್ಣವಾಗಿರುತ್ತದೆ. ನಂತರ ಬಹುತೇಕ ಕೇವಲ ಔಪಚಾರಿಕ ಮಾತ್ರ. ಆ ಎಳೆಯ ಮುಗ್ಧ ಮನಸ್ಥಿತಿ ಕಡಿಮೆಯಾಗುತ್ತಾ ಸಾಗುತ್ತದೆ……
ಮಕ್ಕಳೆಂದರೆ ತಂದೆ ತಾಯಿಯ ದೇಹದ ಮುಂದುವರಿದ ಭಾಗ. ತಾಯಿ ಕರುಳಿನ ಸಂಬಂಧ. ರಕ್ತ ಮಾಂಸಗಳ ಹಂಚಿಕೆ. ಇಂತಹ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ಮತ್ತು ನೆಮ್ಮದಿಯಿಂದ ಇರುವಂತೆ ಪ್ರಯತ್ನಿಸುವುದೇ ಎಲ್ಲಾ ಪೋಷಕರ ಜೀವನದ ಅಂತಿಮ ಗುರಿಯಾಗಿರುತ್ತದೆ…..
ಅದನ್ನು ಕೇವಲ ಹುಟ್ಟು ಹಬ್ಬದ ಆಚರಣೆ ಅಥವಾ ಅವರಿಗೆ ಒಳ್ಳೆಯ ಊಟ ಬಟ್ಟೆ ಕೊಡುವುದು ಅಥವಾ ಅವರಿಗೆ ಉತ್ತಮ ಶಿಕ್ಷಣ ಕೊಡುವುದು ಅಥವಾ ಅವರಿಗೆ ಶ್ರೀಮಂತ ಆಸ್ತಿ ಮಾಡುವುದರಿಂದ ಮಾತ್ರ ಮಕ್ಕಳ ಭವಿಷ್ಯ ಅತ್ಯುತ್ತಮವಾಗಿರುತ್ತದೆ ಎಂಬುದು ಅಂತಹ ಒಳ್ಳೆಯ ಯೋಚನೆಯಲ್ಲ….
ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ನಾವು ಕೊಡುವ ಮಾನವೀಯ ಮೌಲ್ಯಗಳ ಸಂಸ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಎಷ್ಟರಮಟ್ಟಿಗೆ ನಾವು ಪ್ರಗತಿಪರವಾಗಿ ಉಳಿಸಿದ್ದೇವೆ ಎಂಬುದರ ಆಧಾರದ ಮೇಲೆ ಮಕ್ಕಳ ಸಂತೋಷದ ಬದುಕು ನಿರ್ಧಾರವಾಗುತ್ತದೆ….
ಮಕ್ಕಳ ಮನಸ್ಸು ಇತ್ತೀಚಿನ ವೇಗದ ಆಧುನಿಕ ಕಾಲದಲ್ಲಿ ಬಹುತೇಕ ಹತ್ತು ವರ್ಷದ ವೇಳೆಗೆ ಒಂದು ನಿರ್ದಿಷ್ಟವಾದ ಅಭಿಪ್ರಾಯ ರೂಪಿಸಿಕೊಳ್ಳುತ್ತದೆ. ಹಿಂದೆ 15/20 ವರ್ಷಕ್ಕೆ ಆಗುತ್ತಿದ್ದ ಮಾನಸಿಕ ಬದಲಾವಣೆ ಈಗ ತಂತ್ರಜ್ಞಾನ ಮತ್ತು ಸಮೂಹ ಸಂಪರ್ಕ ಮಾಧ್ಯಮಗಳ ಪ್ರಭಾವದಿಂದಾಗಿ ಸ್ವಲ್ಪ ಬೇಗ ಆಗುತ್ತದೆ….
ಆ ಸಮಯದಲ್ಲಿ ಮಕ್ಕಳಿಗೆ ಯಾವ ವಿಷಯಗಳು ಹೆಚ್ಚು ಆಕರ್ಷಣೆಗೆ ಒಳಗಾಗುತ್ತವೆ ಎಂಬುದನ್ನು ಅಷ್ಟು ಸುಲಭವಾಗಿ ಗ್ರಹಿಸಲು ಸಾಧ್ಯವಿಲ್ಲ ಮತ್ತು ಅದು ನಮ್ಮ ಸಂಪೂರ್ಣ ನಿಯಂತ್ರಣದಲ್ಲಿ ಸಹ ಇರುವುದಿಲ್ಲ. ಆದ್ದರಿಂದ ಅವರ ಮೇಲೆ ಸಾಧ್ಯವಾದಷ್ಟು ಒಳ್ಳೆಯ ಪ್ರಭಾವ ಬೀರುವಂತ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ……
ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸುವ ಬಗ್ಗೆ ಯಾವುದೇ ತಕರಾರು ಇಲ್ಲ.
ಇಲ್ಲಿ ಕೇಕ್ ಕತ್ತರಿಸುವುದು ಸೇರಿ ಯಾವುದೇ ಸಂಭ್ರಮಕ್ಕೆ ಅಡ್ಡಿಯಿಲ್ಲ. ಅದರ ವಿಧಾನದ ಬಗ್ಗೆ ಸ್ವಲ್ಪ ಬೇಸರವಿದೆ. ಅಂದರೆ ಒಂದಷ್ಟು ಸಂಯಮ ಸಭ್ಯತೆ ಮತ್ತು ಸರಳತೆಯ ಜೊತೆಗೆ ಅರಿವಿನ ಆಚರಣೆ ಸಹ ಮುಖ್ಯವಾಗಬೇಕು….
ಆದರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಹುಟ್ಟು ಹಬ್ಬ ಒಂದು ಮೋಜಿನ, ಆಡಂಬರದ, ಹಣ ಅಂತಸ್ತು ಅಧಿಕಾರ ಪ್ರದರ್ಶನದ, ಒಣ ಪ್ರತಿಷ್ಠೆಯ ಆಚರಣೆ ಆಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ….
ಇದು ಇತರರಿಗೆ ಮಕ್ಕಳ ಮತ್ತು ಪೋಷಕರ ತೋರಿಕೆ ಮತ್ತು ಹೋಲಿಕೆಯ ಕಾರಣ ಒಂದು ಮೋಜಿನ ಪಾರ್ಟಿಯಾಗಿ ಪರಿವರ್ತನೆ ಹೊಂದಿ ತನ್ನ ಮೂಲ ಆಶಯದಿಂದ ದೂರ ಸರಿಯುತ್ತಿದೆ. ಈ ರೀತಿಯ ಎಷ್ಟೋ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಅಲ್ಲಿ ಸಿನಿಮಾ ಅಥವಾ ಧಾರವಾಹಿ ನಟನಟಿಯರ ಅಥವಾ ಜನಪ್ರಿಯ ವ್ಯಕ್ತಿಗಳ ನಕಲುಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಈಗಿನ ಕಾಲದಲ್ಲಿ ಹೇಗಿದ್ದರು ಮಕ್ಕಳಿಗೆ ಅದು ತಿಳಿದೇ ತಿಳಿಯುತ್ತದೆ. ಆದರೆ ಮಕ್ಕಳಿಗೆ ನಿಜವಾಗಿ ಕೊರತೆಯಾಗುತ್ತಿರುವುದು ಭಾರತದ ಮಹತ್ವದ ಐತಿಹಾಸಿಕ ವ್ಯಕ್ತಿಗಳು ಮತ್ತು ಅವರ ವಿಚಾರಗಳು. ಬುದ್ದ ಮಹಾವೀರ ಅಶೋಕ ಅಕ್ಬರ್ ಕಬೀರ ಮೀರಾಬಾಯಿ ಶಂಕರಾಚಾರ್ಯರು ಬಸವಣ್ಣ ಅಲ್ಲಮ ಅಕ್ಕಮಹಾದೇವಿ ಸ್ವಾಮಿ ವಿವೇಕಾನಂದ ಸಂತ ಶಿಶುನಾಳ ಶರೀಫ ಮಹಾತ್ಮ ಗಾಂಧಿ ಬಾಬಾ ಸಾಹೇಬ್ ಅಂಬೇಡ್ಕರ್ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಮದರ್ ತೆರೇಸಾ ಹೀಗೆ ಅನೇಕ ವ್ಯಕ್ತಿಗಳ ವ್ಯಕ್ತಿತ್ವವನ್ನು ಹುಟ್ಟು ಹಬ್ಬದ ಸಂದರ್ಭದಲ್ಲಿ ನೆನಪಿಸುವ ಮತ್ತು ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಿದರೆ ಕನಿಷ್ಠ ಅವರ ಭವಿಷ್ಯದ ದಿನಗಳು ಸ್ವಲ್ಪ ಮಟ್ಟಿಗೆ ಉತ್ತಮವಾಗಬಹುದು. ಇಲ್ಲದಿದ್ದರೆ ಹುಟ್ಟು ಹಬ್ಬದ ಸಂದರ್ಭಗಳು ಸಹ ಹೊಸ ವರ್ಷದ ಆಚರಣೆಯಂತೆ ಅತಿರೇಕದ ವರ್ತನೆಗೆ ಕಾರಣವಾಗಿ ಮಕ್ಕಳಿಗೆ ನಿಜವಾದ ಸಂಸ್ಕಾರ ದೊರೆಯದೇ ಹೋಗಬಹುದು……
ಕೆಲವರು ಸಂತೋಷ ಕೂಟದಲ್ಲಿ ಈ ರೀತಿಯ ಶೈಕ್ಷಣಿಕ ವಾತಾವರಣ ಮನರಂಜನೆಗೆ ಕಿರಿಕಿರಿ ಉಂಟುಮಾಡುವುದಿಲ್ಲವೇ ಎಂಬ ಪ್ರಶ್ನೆ ಕೇಳಬಹುದು. ಬಹುಶಃ ನಾವುಗಳು ಈ ಮನರಂಜನೆ ಎಂಬ ವಿಷಯದಲ್ಲಿಯೇ ಹೆಚ್ಚು ದಾರಿ ತಪ್ಪುತ್ತಿರುವುದು ಎಂದು ಅನಿಸುತ್ತದೆ. ಮನರಂಜನೆ ಎಂದರೆ ಅಬ್ಬರದ ಸಂಗೀತ, ಮನಬಂದಂತ ನೃತ್ಯ, ಭಕ್ಷ್ಯ ಭೋಜನಗಳು, ಕೂಗಾಟ, ಅರಚಾಟ ಎಂಬ ಭ್ರಮೆ ಸೃಷ್ಟಿಸಲಾಗಿದೆ…..
ಮನರಂಜನೆ – ಮನೋಲ್ಲಾಸ – ಜೀವನೋತ್ಸಾಹ, ಪ್ರಪುಲ್ಲ ಮನಸ್ಸು – ಮುದ ನೀಡುವ ಮನಸ್ಥಿತಿ – ಚೇತೋಹಾರಿ ಭಾವ – ಸುಂದರ ಕನಸು ಎಲ್ಲವೂ ವಾಸ್ತವವಾಗಿ ಮತ್ತು ನೈಜವಾಗಿ ಉಂಟಾಗುವುದು ಸಹಜ ಆಂತರಿಕ ಅರಿವಿನಿಂದಲೇ ಹೊರತು ಕೃತಕ ಮತ್ತು ಬಾಹ್ಯ ವಸ್ತು ಅಥವಾ ಆಚರಣೆಯಿಂದಲ್ಲ. ಒಳ್ಳೆಯ ಕಾರ್ಯಕ್ರಮಗಳು ಸ್ವಲ್ಪ ಮಟ್ಟಿಗೆ ಬೋರು ಎನಿಸಬಹುದು. ಆದರೆ ಇಂದಿನ ಯುವ ಜನಾಂಗ ದಾರಿ ತಪ್ಪುತ್ತಿರುವ ರೀತಿ ಮತ್ತು ಅವರಲ್ಲಿ ಬೆಳೆಯುತ್ತಿರುವ ಹಿಂಸಾ ಮನೋಭಾವ ಮುಂದೆ ಅಪಾಯಕಾರಿ ಹಂತ ತಲುಪಿ ಅದು ಅವರ ಭವಿಷ್ಯಕ್ಕೆ ಮಾರಕವಾಗುವುದಕ್ಕಿಂತ ಈಗ ಬೋರು ಎನಿಸಿದರೂ ಪರವಾಗಿಲ್ಲ. ಒಳ್ಳೆಯದನ್ನು ಸ್ವಲ್ಪ ಒತ್ತಾಯ ಪೂರ್ವಕವಾಗಿ ಹೇಳೋಣ. ಅಂತಿಮವಾಗಿ ನಮ್ಮ ಮಕ್ಕಳು ಉತ್ತಮ ಭವಿಷ್ಯ ಮತ್ತು ಆರೋಗ್ಯಕರ ಸಮಾಜ ನಮಗೆ ಮುಖ್ಯವಾಗಬೇಕಲ್ಲವೇ….
ಹೊಸ ವರ್ಷದ ಆಚರಣೆಯ ಅತಿರೇಕ, ಸ್ವೇಚ್ಛಾಚಾರವನ್ನು ನಾವುಗಳು ನೋಡಿಲ್ಲವೇ….
ಆದ್ದರಿಂದ ಆಸಕ್ತಿ ಇರುವವರು, ಅವಕಾಶ ಇರುವವರು, ಜವಾಬ್ದಾರಿ ಇರುವವರು, ಪ್ರಬುದ್ಧ ಮನಸ್ಸಿನವರು ತಮ್ಮ ಮಕ್ಕಳ ಹುಟ್ಟು ಹಬ್ಬದ ಆಚರಣೆಯ ಸಮಯದಲ್ಲಿ ದಯವಿಟ್ಟು ಇದನ್ನು ನೆನಪಿಟ್ಟುಕೊಳ್ಳಿ ಎಂದು ಪ್ರೀತಿ ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………