Spread the love

ಸುಮಾರು ‌72 ಲಕ್ಷ ಜನರು ಒಬ್ಬ ಬಿಗ್ ಬಾಸ್ ಸ್ಪರ್ಧಿಯ ಪರವಾಗಿ ಮೊಬೈಲ್ ಆಪ್ ಮ‌ೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ಜನಪ್ರಿಯ ಬಿಗ್ ಬಾಸ್ ನಿರೂಪಕ ನಟ ಸುದೀಪ್ ಹೇಳಿದ್ದಾರೆ. ಉಳಿದ ಸ್ಪರ್ಧಿಗಳ ಬೆಂಬಲ ಎಲ್ಲವನ್ನೂ ಒಟ್ಟು ಮಾಡಿದರೆ ಸುಮಾರು ಒಂದು ಕೋಟಿ ಆಗಬಹುದು. ಅವರ ಮಾತುಗಳು ಸತ್ಯ ಇರಬಹುದು ಎಂಬ ಭರವಸೆಯೊಂದಿಗೆ,…

ಕರ್ನಾಟಕದ ಒಟ್ಟು ಜನಸಂಖ್ಯೆ ಸುಮಾರು 7 ಕೋಟಿ. ಅದರಲ್ಲಿ ಮತದಾರರ ಸಂಖ್ಯೆ ಸುಮಾರು 5 ಕೋಟಿ. ಅದರಲ್ಲಿ ಅಂದಾಜು 50 ಲಕ್ಷ ನಕಲಿ ಅಥವಾ ನಿಧನರಾಗಿದ್ದಾರೆ ಅಥವಾ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇದ್ದಾರೆ. ಅಂದರೆ ಒಟ್ಟು 4 ಕೋಟಿ 50 ಲಕ್ಷ ಮತದಾರರು. ಸಾಮಾನ್ಯವಾಗಿ ಯಾವುದೇ ಚುನಾವಣಾ ಸಂದರ್ಭದಲ್ಲಿ ಜನ ಪ್ರತಿನಿಧಿಗಳ ಆಯ್ಕೆ ಮಾಡಲು ಸರಾಸರಿ 70% ಮತದಾನ ಆಗುತ್ತದೆ. ಅಂದರೆ ಸುಮಾರು ‌3 ಕೋಟಿಗಿಂತ ಸ್ವಲ್ಪ ಹೆಚ್ಚು ಜನರು ಮಾತ್ರ ಮತ ಚಲಾಯಿಸುತ್ತಾರೆ.

ಅತ್ಯಂತ ಮಹತ್ವದ ತಮ್ಮ ಜೀವನವನ್ನೇ ನಿರ್ಧರಿಸುವ ಚುನಾವಣೆಯಲ್ಲಿ 2/3 ವರ್ಷಕ್ಕೊಮ್ಮೆ ಮತ ಚಲಾಯಿಸಲು ಸೋಮಾರಿತನ ಪ್ರದರ್ಶಿಸುವ ಮತದಾರರು ಯಾವುದೋ ಒಂದು ಚಾನೆಲ್ ನ ಒಂದು ಕಾರ್ಯಕ್ರಮದ ಯಾವುದೋ ಸಂಬಂಧವಿಲ್ಲದ ಒಬ್ಬ ವ್ಯಕ್ತಿಯ ಪರವಾಗಿ ಪ್ರತಿ ವಾರ ಸಮಯ ಮಾಡಿಕೊಂಡು ಬಹುತೇಕ ತಮ್ಮ ಮೊಬೈಲ್ ಮೂಲಕ ಮತ ಚಲಾಯಿಸುವ ಆಸಕ್ತಿ ತೆಗೆದುಕೊಳ್ಳುತ್ತಾರೆ ಎಂದರೆ ಅವರ ಮನೋಭಾವ ಹೇಗಿರಬಹುದು, ಅವರ ಜವಾಬ್ದಾರಿ ಮನಸ್ಥಿತಿ ಹೇಗಿರಬಹುದು ಎಂದು ಆಶ್ಚರ್ಯವಾಗುತ್ತದೆ.

ಏಕೆಂದರೆ ಇಷ್ಟೇ ಆಸಕ್ತಿ ಮತ್ತು ಜವಾಬ್ದಾರಿ ಹಾಗು ಸೂಕ್ಷ್ಮ ಅವಲೋಕನ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರತಿನಿಧಿಗಳನ್ನು ಆರಿಸುವ ಸಮಯದಲ್ಲಿ ವಹಿಸಿದ್ದರೆ ಖಂಡಿತ ನಮ್ಮ ಆಡಳಿತ ವ್ಯವಸ್ಥೆ ಇಷ್ಟೊಂದು ಹದಗೆಡುತ್ತಿರಲಿಲ್ಲ.

ಜನರು ಸಹ ಯಾವಾಗಲೂ ಇತರರನ್ನು ಮಾತ್ರ ಟೀಕಿಸುತ್ತಾ ಇರುವುದರ ಜೊತೆಗೆ ತಮ್ಮ ಮೂಲಭೂತ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ತಮ್ಮ ಆದ್ಯತೆಯನ್ನು ಮೊದಲು ಅರಿಯಬೇಕಿದೆ. ಉಪ್ಪಿನಕಾಯಿಯೇ ಊಟವಲ್ಲ. ಮನರಂಜನೆಯೇ ಬದುಕಲ್ಲ.

ಅತ್ಯಂತ ಭ್ರಷ್ಟ ವ್ಯವಸ್ಥೆಯಲ್ಲಿ ಬದುಕುತ್ತ ಅದರ ಬಗ್ಗೆ ಗಮನವೇ ಹರಿಸದೆ ಬೇರೆ ಅನಾವಶ್ಯಕ ವಿಷಯಗಳಲ್ಲಿ ‌ತಮ್ಮ ಸಮಯ ವ್ಯರ್ಥ ಮಾಡುವುದು ಅತ್ಯಂತ ಬೇಜವಾಬ್ದಾರಿ ನಡವಳಿಕೆ ಎಂದು ನೆನಪಿಸುತ್ತಾ……

ಹಿಂದೆ 2020 ರಲ್ಲಿ ಈಗಿನ ಬಿಗ್ ಬಾಸ್ ಸ್ಪರ್ಧಿ ದ್ರೋಣ್ ಪ್ರತಾಪ್ ಎಂಬ ಹುಡುಗನ ವಂಚನೆ ಪ್ರಕರಣ ಬಯಲಾದಾಗ ಮಾಧ್ಯಮಗಳು ಆತನನ್ನು ಸಿಕ್ಕಾಪಟ್ಟೆ ಟೀಕೆ ಮಾಡಿದಾಗ ಬರೆದ ಒಂದು ಲೇಖನವನ್ನು ಮತ್ತೆ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. ಯಾವುದೇ ಅಕ್ಷರ ಅಥವಾ ವಾಕ್ಯವನ್ನು ಬದಲಾವಣೆ ಮಾಡಿಲ್ಲ. ಆಗಿನ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಮಾತ್ರ ಈಗಲೂ ಅದು ಹೆಚ್ಚು ಪ್ರಸ್ತುತ ಎಂಬ ಕಾರಣದಿಂದಾಗಿ……

ದ್ರೋಣ್ ಪ್ರತಾಪ್….


ದ್ರೋಣ್ ಪ್ರತಾಪ್ ಎಂಬ ಎಳೆಯ ಹುಡುಗನ ವೈಮಾನಿಕ ಸಾಧನೆ ಮತ್ತು ಅನುಮಾನಗಳ ಸುತ್ತಾ……

ಮೇಲ್ನೋಟಕ್ಕೆ ಆತನ ಧ್ವನಿ, ಇಂಗ್ಲಿಷ್‌ ಭಾಷೆ, ದ್ರೋಣ್ ತಂತ್ರಜ್ಞಾನದ ಬಗ್ಗೆ ಆತನಿಗಿರುವ ಜ್ಞಾನ ನಿಜಕ್ಕೂ ಕುತೂಹಲ ಮತ್ತು ಆಕರ್ಷಕವಾಗಿದೆ. ಗ್ರಾಮೀಣ ಪ್ರತಿಭೆಯಾದ ಆತನ ವಯಸ್ಸು ಸುಮಾರು 24 ರ ಸುತ್ತಮುತ್ತ ಇರಬೇಕು. ಕಳೆದ ಎರಡು ಮೂರು ವರ್ಷಗಳಲ್ಲಿ ಆ ಯುವ ವಿಜ್ಞಾನಿಯ ಸ್ಪೂರ್ತಿದಾಯಕ ಸುದ್ದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿತ್ತು. ಇತ್ತೀಚೆಗೆ ಒಂದು ವಾರದಿಂದ ಆತನ ಸಾಧನೆಯ ಸುತ್ತ ಅದೇ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸುತ್ತಿವೆ.

ಮೊದಲನೆಯದಾಗಿ ಆತ ಇನ್ನೂ ಎಳೆಯ ವಯಸ್ಸಿನ ಯುವಕ. ನಾವು ಏನೇ ಅಭಿಪ್ರಾಯ ವ್ಯಕ್ತಪಡಿಸುವ ಮೊದಲು ಆತನ ವಯಸ್ಸನ್ನು ಪರಿಗಣಿಸಬೇಕು.

ಎರಡನೆಯದಾಗಿ ಆತ ಕೊಲೆ ದರೋಡೆ ಅತ್ಯಾಚಾರ ದೇಶದ್ರೋಹದಂತ ಕ್ರಿಮಿನಲ್ ಅಪರಾಧ ಮಾಡಿಲ್ಲ.

ಆತ ಹೇಳಿಕೊಂಡಿದ್ದು ಆತ ಕೆಲವು ಸ್ಥಳೀಯ ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ದ್ರೋಣ್ ಕ್ಯಾಮರಾ ಸಂಶೋಧನೆ ಮಾಡಿದೆ, ಅದಕ್ಕಾಗಿ ಹಣವನ್ನು ಹೊಂದಿಸಲು ಆತ ಪಟ್ಟ ಕಷ್ಟವನ್ನು ತುಂಬಾ ಮನಮಿಡಿಯುವಂತೆ ವಿವರಿಸುತ್ತಾನೆ. ನಂತರ ಜಪಾನ್ ಜರ್ಮನಿ ಸೇರಿ ಅನೇಕ ದೇಶಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿರುವೆನು ಎಂದು ಹೇಳಿಕೊಂಡು ಸಾಕಷ್ಟು ಸನ್ಮಾನಗಳನ್ನು ಪಡೆದಿದ್ದಾನೆ. ಐಐಎಂ ಐಐಸಿ ಗಳಲ್ಲಿ ವಿಷಯ ತಜ್ಞನಾಗಿ ಭಾಷಣ ಮಾಡಿದ್ದಾನೆ. ಅದಕ್ಕಾಗಿ ಆತ ಪಡಬಾರದ ಕಷ್ಟ ಪಟ್ಟಿದ್ದಾನೆ.

ಇದರಲ್ಲಿ ಸಹಜವಾಗಿಯೇ ಅತಿರೇಕಗಳು, ಅತಿರಂಜಿತ ಸುದ್ದಿಗಳು ಇರುವುದು ಕಂಡುಬರುತ್ತದೆ. ಆತ ಯುವಕನಾದ್ದರಿಂದ ಸಿಕ್ಕ ಯಶಸ್ಸು ಮತ್ತು ವೇದಿಕೆಗಳನ್ನು ಅರಗಿಸಿಕೊಳ್ಳಲಾಗದೆ ಸಾಕಷ್ಟು ಬಿಲ್ಡ್ ಅಪ್ ಕೊಟ್ಟಿರುವುದು ಸಹ ಕಾಣುತ್ತಿದೆ. ಸಾಕಷ್ಟು ಕಾಲ್ಪನಿಕ ಘಟನೆಗಳನ್ನು ಪೋಣಿಸಿ ತನ್ನದೇ ‌ಜೀವನದಲ್ಲಿ ನಡೆದ ಘಟನೆಗಳು ಎಂಬಂತೆ ಹೇಳಿ ಕೊಂಡಿದ್ದಾನೆ. ಆ ವಯಸ್ಸಿನಲ್ಲಿ ಕೆಲವರಿಗೆ ಈ ರೀತಿಯ ಖಾಯಿಲೆ ಇರುತ್ತದೆ.

ಒಂದೆರಡು ಅಂತರರಾಷ್ಟ್ರೀಯ ದ್ರೋಣ್ ಪ್ರದರ್ಶನ ಮಳಿಗೆಗಳಿಗೆ ಭೇಟಿಕೊಟ್ಟು ಅಲ್ಲಿ ನಡೆದ ವಿಚಾರ ಸಂಕಿರಣಗಳನ್ನು ನೋಡಿ ಅದರಿಂದ ಪ್ರೇರಿತನಾಗಿ ಕೆಲವು ನಾಟಕೀಯ ಕಥೆ ಕಟ್ಟಿರಬಹುದು. ಅದರಿಂದ ಸಿಕ್ಕ ಯಶಸ್ಸಿನ ಅಲೆಯ ಮೇಲೆ ಸುಳ್ಳಿನ ಸರಮಾಲೆ ನಿರ್ಮಿಸಿರಬಹುದು. ಒಂದಷ್ಟು ಹಣ ಮಾಡಿಕೊಂಡಿರಬಹುದು. ಕೊನೆಗೆ ಪ್ರಧಾನ ಮಂತ್ರಿಗಳಿಂದ ತನಗೆ ಕರೆ ಬಂದಿದೆ ಎಂದು ಹೇಳಿಕೊಂಡು ಅದು ಅತಿಯಾಗಿ ಯಾರೋ ಈತನ ಚಲನವಲನಗಳನ್ನು ಗಮನಿಸಿ ತನಿಖೆ ಮಾಡಿ ಸಾಕಷ್ಟು ವಿಷಯ ಬಯಲು ಮಾಡಿರಬಹುದು.

ಹಾಗಂತ ಈಗ ಆತನನ್ನು ವಿಲನ್ ರೀತಿ ಬಿಂಬಿಸುವುದು ಸರಿಯಲ್ಲ. ಹಾಗೆಯೇ ಮನಃಪೂರ್ವಕವಾಗಿ ಬೆಂಬಲಿಸುವುದೂ ಬೇಡ. ಒಂದು ನಿರ್ಲಕ್ಷ್ಯ ಮಾತ್ರ ಸಾಕು. ತಪ್ಪು ಮಾಡಿದ್ದರೆ ತಿದ್ದಿಕೊಳ್ಳಲಿ, ಸರಿ ಇದ್ದರೆ ದೃಢಪಡಿಸಿ ಮತ್ತಷ್ಟು ಸಾಧನೆ ಮಾಡಲಿ.

ಏಕೆಂದರೆ,
ಒಂದು ವೇಳೆ ಆತನ ಸಾಧನೆಗಳು ಭೋಗಸ್ ಆಗಿದ್ದರೆ ಇನ್ನು ಮುಂದೆ ಆತನ ಆಟ ನಡೆಯುವುದಿಲ್ಲ. ಆತ್ಮಸಾಕ್ಷಿ ಇದ್ದರೆ ಆತ ತಪ್ಪನ್ನು ಒಪ್ಪಿಕೊಂಡು ಮುಂದೆ ತನ್ನ ಬದುಕನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲು ಅವಕಾಶ ಕೊಡಬೇಕು. ಈ ತಪ್ಪಿಗಾಗಿ ಆತನನ್ನು ಸಾರ್ವಜನಿಕವಾಗಿ ತುಂಬಾ ಹಿಂಸೆ ಮತ್ತು ಅವಮಾನಕ್ಕೆ ಗುರಿ ಮಾಡುವುದು ಒಳ್ಳೆಯದಲ್ಲ. ಆತ ಇನ್ನೂ ಯುವಕ. ಮಾನಸಿಕವಾಗಿ ಕುಸಿದು ಏನಾದರೂ ಅನಾಹುತಕ್ಕೆ ಕೈ ಹಾಕುವಂತೆ ಮಾಡಬಾರದು. ಅವನಿಗೆ ಮತ್ತೊಂದು ಅವಕಾಶ ಕೊಡಲೇಬೇಕು.

ಒಂದು ವೇಳೆ ಆತ ನಿಜವಾಗಲೂ ಪ್ರತಿಭಾವಂತನಾಗಿದ್ದು ಈಗಿನ ಸುದ್ದಿಗಳು ಅತಿರಂಜಿತವಾಗಿದ್ದರೆ ಆಗಲೂ ಆತ ತನ್ನ ಮುಂದಿನ ಎಲ್ಲಾ ಸಾಧನೆಗಳನ್ನು ದಾಖಲೆ ಸಮೇತ ನಿರೂಪಿಸಲು ಜಾಗೃತನಾಗುತ್ತಾನೆ‌. ಏಕೆಂದರೆ ಮಾಧ್ಯಮಗಳು ಮುಂದೆ ಅನುಮಾನ ವ್ಯಕ್ತಪಡಿಸಬಹುದು ಎಂಬ ತೂಗುಕತ್ತಿ ಅವನ ಮನಸ್ಸಿನಲ್ಲಿ ಇದ್ದೇ ಇರುತ್ತದೆ.

ಈ ಸಮಾಜ ಈ ರೀತಿಯ ವಿಷಯಗಳಲ್ಲಿ ತುಂಬಾ ಭಾವುಕವಾಗಿ ತಕ್ಷಣವೇ ಪ್ರತಿಕ್ರಿಯಿಸುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯನ್ನು ಹಿಂದೆ ಮುಂದೆ ನೋಡದೆ ವೈಭವೀಕರಿಸುವುದು ನಂತರ ಮತ್ತೆ ಅದೇ ದಾಟಿಯಲ್ಲಿ ಹಿಯಾಳಿಸುವುದು ಸರಿಯಲ್ಲ. ಸ್ವಯಂ ಸಂಯಮ ವಿವೇಚನೆ ಪ್ರಬುದ್ದತೆ ಬೆಳೆಸಿಕೊಳ್ಳಬೇಕಿದೆ. ಯುವಕರಿಗೆ ಈ ರೀತಿಯ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಾತಾವರಣ ನಿರ್ಮಿಸಬೇಕಿದೆ. ಒಟ್ಟು ವ್ಯವಸ್ಥೆಯಲ್ಲಿ ಮುಕ್ತ ವಾತಾವರಣ ಇದ್ದಾಗ ಈ ರೀತಿಯ ಘಟನೆಗಳು ನಡೆಯುವುದು ಕಡಿಮೆ. ವೈಭವೀಕರಣ ಹೆಚ್ಚಾದಾಗ ಅದರ ಬಲೆಯೊಳಗೆ ಬೀಳಲು ಮನಸ್ಸುಗಳು ಹಾತೊರೆಯುತ್ತವೆ. ಅಪರೂಪದ ಪ್ರಕರಣಗಳಲ್ಲಿ ಇದನ್ನು ಮೀರುವ ಪ್ರಬುದ್ದತೆ ಕೆಲವರಿಗೆ ಇದೆ.

ನಮ್ಮ ನಿಜವಾದ ತಾಖತ್ತು, ಸಾಮರ್ಥ್ಯ, ಧೈರ್ಯ ವ್ಯಕ್ತಪಡಿಸಬೇಕಿರುವುದು ಈ ರೀತಿಯ ಸಣ್ಣ ಪುಟ್ಟ ಹುಡುಗರ ಮೇಲಲ್ಲ. ಈ ನಾಡಿನ ಸಂಪನ್ಮೂಲಗಳನ್ನು ನಮ್ಮ ಕಣ್ಣ ಮುಂದೆಯೇ ದೋಚುವವರ ಬಗ್ಗೆ ತೋರಿಸಿ ನಿಮ್ಮ ಆಕ್ರೋಶವನ್ನು, ಭ್ರಷ್ಟ ಅಧಿಕಾರ ರಾಜಕಾರಣಿಗಳ ಬಗ್ಗೆ ತೋರಿಸಿ ನಿಮ್ಮ ಕೋಪವನ್ನು, ಸುಳ್ಳು ಬಿಲ್ಲು ತೋರಿಸಿ ಕೋಟ್ಯಾಂತರ ಹಣ ವಂಚಿಸುವವರು ಬಗ್ಗೆ ಇರಲಿ ನಿಮ್ಮ ಹೋರಾಟ, ಪರಿಸರ ನಾಶಕ್ಕೆ ಪೂರಕವಾದ ಕಾನೂನುಗಳನ್ನು, ಕೃಷಿಗೆ ಮಾರಕವಾದ ನೀತಿಗಳನ್ನು ಜಾರಿಗೊಳಿಸುವ ಸರ್ಕಾರದ ವಿರುದ್ಧವಿರಲಿ ನಿಮ್ಮ ಧೈರ್ಯ…….

ಸಮಾಜ ಪ್ರಬುದ್ದತೆಯೆಡೆಗೆ ಸಾಗಬೇಕಾದರೆ ನಮ್ಮ ಪ್ರತಿಕ್ರಿಯೆಗಳು ಸಹ ಅಷ್ಟೇ ಪ್ರಬುದ್ದವಾಗಿರಬೇಕು. ಕ್ಷಮೆಗೆ ಅರ್ಹವಾದ, ಕಲಿಕೆಯ ಹಂತದಲ್ಲಿ ಮಾಡಬಹುದಾದ ತಪ್ಪುಗಳನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. ಆದರೆ ಸಮಾಜಕ್ಕೆ ಮಾರಕವಾದ ಮಾಫಿಯಾಗಳು ಮಾಡುವ ಅನಾಹುತಕಾರಿ ವಂಚನೆಗಳನ್ನು ಬಯಲು ಮಾಡಿ ಅವರನ್ನು ಕಾನೂನಿನ ವ್ಯಾಪ್ತಿಯಲ್ಲಿ ತಿರಸ್ಕರಿಸುವ ಶಿಕ್ಷೆಗೆ ಗುರಿಪಡಿಸುವ ಧೈರ್ಯ ತೋರಿಸಬೇಕು.

ಎಷ್ಟೋ ಸಾಹಿತಿ, ಪತ್ರಕರ್ತರು ಸಹ ತಾವು ಎಲ್ಲೋ ಓದಿದ, ಕೇಳಿದ, ನೋಡಿದ ಘಟನೆಗಳನ್ನೇ ತಮ್ಮ ಜೀವನದ ಸ್ವಂತ ಘಟನೆಗಳು ಎಂದು ನಕಲು ಮಾಡಿ ಬರೆದು ಜನರನ್ನು ವಂಚಿಸುವುದು ಈಗಲೂ ನಡದೇ ಇದೆ.
ಕತೆ ಕವನಗಳನ್ನು ಕದ್ದು ತಮ್ಮ ಹೆಸರಿನಲ್ಲಿ ಪ್ರಕಟಿಸುವುದು ಇದೆ. ಆದ್ದರಿಂದ ದ್ರೋಣ್ ಪ್ರತಾಪನ ಬಗ್ಗೆ ಸಹಾನುಭೂತಿ ಇರಲಿ. ಆತನ ಅವಮಾನಕ್ಕಿಂತ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಡೋಣ. ಸಾಧನೆಯೋ ಪ್ರಚಾರವೋ ಅವನೇ ನಿರ್ಧರಿಸಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068…….

error: No Copying!