ಸಾಕಾನೆ ‘ಅರ್ಜುನ’ನನ್ನು ಕಾಡಾನೆ ದಾಳಿ ನಡೆಸಿ ತಿವಿದು ತಿವಿದು ಹತ್ಯೆಗೈದ ಬೇಸರದ, ದುರಂತ ಘಟನೆ ನಿನ್ನೆ ಚಿತ್ರ ಸಹಿತ ಸುದ್ಧಿಯಾಗಿದೆ. ಈ ಹತ್ಯೆಗೆ ಸರಕಾರವೇ ಹೊಣೆ ಹೊರಬೇಕು.
ನಮ್ಮ ಆಳುವ ಸರಕಾರದ ಮಂತ್ರಿಗಳು, ಅಧಿಕಾರಿ ವರ್ಗ ಜನ – ಜೀವಿಗಳ ಮಾನ ಪ್ರಾಣಗಳ ಸಹಿತ ಯಾವುದೇ ವಿಷಯಗಳಲ್ಲಿ ಏನಾದರೊಂದು ಸಾವು ನೋವು ಸಂಭವಿಸುವ ವರೆಗೂ ಮಾನವೀಯ ನೆಲೆಯಲ್ಲಿ, ಕಾಳಜಿಯಿಂದ ಮುಂದಾಲೋಚಿಸಿ ನೀತಿ ನಿಯಮ ರೂಪಿಸುವುದೇ ಇಲ್ಲ. ಏನಾದರೊಂದು ಆದ ಮೇಲೆಯೇ ಎಚ್ಚೆತ್ತುಕೊಳ್ಳುವುದು. ಆಳುವ ವ್ಯವಸ್ಥೆಯನ್ನು ಮುನ್ನಡೆಸುವವರಿಗೆ ತಮ್ಮ ಆದ್ಯತೆ ಏನು, ಹೇಗಿರಬೇಕು, ಯಾವುದಕ್ಕಿರಬೇಕು ಎಂದು ಯೋಚಿಸಿ ಒಂದು ತೀರ್ಮಾನಕ್ಕೆ ಬರುವವರೆಗೂ ಸಾವು ನೋವುಗಳು ಇಲ್ಲಿ ಹೀಗೆಯೇ ಮುಂದುವರಿಯುತ್ತಿರುತ್ತದೆ.
ಜನರ ಕಣ್ಣಿಗೆ ಕಾಣುವುದು, ಜನರು ಚರ್ಚಿಸುವುದು ಹೊಗಳುವುದು, ವೈಭವೀಕರಿಸುವುದು ಟಿವಿ ಛಾನೆಲ್ ಗಳು, ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಬರುವುದು ಭ್ರಷ್ಟ – ದುಷ್ಟ ರಾಜಕಾರಣಿಗಳು ಬಹಿರಂಗಕ್ಕೆ ತೋರಿಸುವ ಅವರ ಮುಖಗಳನ್ನು ನೋಡಿ. ರಹಸ್ಯವಾಗಿ, ತೆರೆಮರೆಯಲ್ಲಿ ರಾಜಕಾರಣಿಗಳ, ಮಂತ್ರಿಗಳ, ಅಧಿಕಾರಿಗಳ ಅಸಲಿ ಮುಖ ಅನಾವರಣವಾಗುವುದೇ ಇಲ್ಲ.
ಹೀಗೆಯೇ ಪ್ರಾಣಿಗಳದ್ದು ಸಹ. ಸಾಕು ಪ್ರಾಣಿಗಳ ಆಟ – ಜಾಣತನ, ಸಾಹಸ – ಸಾಧನೆಗಳನ್ನು ಮಾಧ್ಯಮಗಳಲ್ಲಿ ತೋರಿಸುವಾಗ ಮೆಚ್ಚುತ್ತೇವೆ. ನೋಡಿ ಖುಷಿಪಡುತ್ತೇವೆ. ಆದರೆ ಅವುಗಳನ್ನು ಉಳಿದ ಸಮಯಗಳಲ್ಲಿ ಪಳಗಿಸುವಾಗ ನೀಡುವ ಚಿತ್ರ ಹಿಂಸೆ ಸಾರ್ವಜನಿಕರ ಅರಿವಿಗೆ ಬರುವುದೇ ಇಲ್ಲ. ಆನೆಯಂಥ ಮೂಕ ಪ್ರಾಣಿಗಳನ್ನು ಕೆಲವೊಂದು ರಿಸ್ಕ್ ಕಾರ್ಯಾಚರಣೆಗಳಿಗೂ ದುರ್ಬಳಕೆ ಮಾಡ್ತಾರೆ. ಅವುಗಳಿಗೂ ಒಂದು ಹಕ್ಕು ಇದೆ ಎಂಬುದನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ.
ಸರಕಾರದ, ವ್ಯವಸ್ಥೆಯ, ಶ್ರೀಮಂತರ, ಪ್ರತಿಷ್ಠಿತರ ಪ್ರತಿಷ್ಠೆ ಮರೆಸಲು, ಯಾರಯಾರದೋ ಲಾಭಕ್ಕೆ, ಸ್ವಾರ್ಥಕ್ಕೆ ಪ್ರಾಣಿಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ. ಅವುಗಳಿಗೆ ಚಿತ್ರಹಿಂಸೆ ನೀಡಲಾಗುತ್ತದೆ. ಮಾತ್ರವಲ್ಲ, ಅವುಗಳನ್ನು ಅಪಾಯಕಾರಿ ಕಾರ್ಯಾಚರಣೆಗಳಲ್ಲೂ ಬಳಸಿಕೊಳ್ಳಲಾಗುತ್ತದೆ.
ಮೂಕ ಜೀವಿಗಳನ್ನು ಯಾವುದೇ ಕಾರಣಕ್ಕೂ, ಪಳಗಿಸುವ ಹೆಸರಲ್ಲಿ ಹಿಂಸಿಸುವುದು ನಿಲ್ಲಬೇಕು. ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಉಪಯೋಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮೂಕ ಜೀವಿಗಳಿಗೆ ಸಂಬಂಧಿಸಿದಂತೆಯೇ ಒಂದು ಹಿಂಸಾರಹಿತ, ಮಾನವೀಯ ನೀತಿಯನ್ನು ಸರಕಾರ ಇನ್ನಾದರೂ ರೂಪಿಸಲೇಬೇಕು. ಈಗ ಇರುವ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಗತ್ಯ ಇದ್ದರೆ ಮಾಡಬೇಕು. ನಡೆದ ಸಾವು ನೋವಿನ ಹೊಣೆಯನ್ನು ಸರಕಾರವೇ ಹೊತ್ತುಕೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ನಿಷ್ಕಾಳಜಿಯ ಅರಣ್ಯ ಮಂತ್ರಿಗಳನ್ನು ಬದಲಾಯಿಸಬೇಕು ಅಥವಾ ಅವರಿಂದ ರಾಜಿನಾಮೆ ನೀಡಬೇಕು.
ಅರ್ಜುನನ ಹತ್ಯೆ ಈ ನಿಟ್ಟಿನಲ್ಲಿ ಸರಕಾರಕ್ಕೆ ಪಾಠವಾಗಬೇಕು. ಸೂಕ್ತ ರಕ್ಷಣೆಯ ವ್ಯವಸ್ಥೆ ಇಲ್ಲದೆ ಸಾಕು ಪ್ರಾಣಿಗಳನ್ನು ಅಪಾಯಕಾರಿ ಕಾರ್ಯಾಚರಣೆಯಲ್ಲಿ ಉಪಯೋಗಿಸುವುದನ್ನು ಇನ್ನಾದರೂ ಕೂಡಲೇ ನಿಷೇಧಿಸಲೇಬೇಕು. ಮೂಕಜೀವಿಗಳನ್ನು ಯಾರೂ, ಯಾವುದೆ ರೀತಿಯಲ್ಲಿ, ಯಾವುದೇ ಕಾರಣ, ನೆಪ ಮುಂದಿಟ್ಟುಕೊಂಡು ಹಿಂಸೆಗೆ ಒಳಪಡಿಸುವುದನ್ನು ನಿಲ್ಲಿಸಲೇಬೇಕು.
~ ಶ್ರೀರಾಮ ದಿವಾಣ ( ಮೂಡುಬೆಳ್ಳೆ)