Spread the love

ನಿನ್ನೆ ದಿನಾಂಕ 4/11/2023 ಸೋಮವಾರ ಇಡೀ ದಿನ ಉತ್ತರ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ವಾಪಸ್ಸಾಗುವ ಹಾದಿಯಲ್ಲಿ ಕುಮಟಾ, ಅಂಕೋಲ, ಮಂಗಳೂರಿನಲ್ಲಿ ಒಂದೇ ದಿನ ಮೂವರು ಅತ್ಯಂತ ಕಡು ಬಡತನದಲ್ಲಿ ಹುಟ್ಟಿ, ಜೀವನದಲ್ಲಿ ವಿಶಿಷ್ಟ ಮತ್ತು ವಿಶೇಷ ಸಾಧನೆ ಮಾಡಿ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ ಪದ್ಮಶ್ರೀ ಪಡೆದವರನ್ನು ಪ್ರತ್ಯೇಕವಾಗಿ – ನೇರವಾಗಿ ಭೇಟಿ ಮಾಡಿ ಅವರೊಂದಿಗೆ ಕಾಫಿ, ಟೀ ಮತ್ತು ಲಘು ಉಪಹಾರ ಸೇವಿಸಿ ಒಂದಷ್ಟು ಮಾತುಕತೆಯಾಡಿ ತಡ ರಾತ್ರಿ ಬೆಂಗಳೂರು ತಲುಪಿದೆವು….

ಶ್ರೀಮತಿ ಸುಕ್ರಿ ಬೊಮ್ಮಗೌಡ ಉತ್ತರ ಕನ್ನಡದ ಅಂಕೋಲದವರು. ಜಾನಪದ ಕೋಗಿಲೆ ಎಂದು ಹೆಸರಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ತನ್ನ ಪೂರ್ವಿಕರಿಂದ ಬಳುವಳಿಯಾಗಿ ಬಂದ ಜಾನಪದ ಹಾಡುಗಳ ಸಂಪತ್ತನ್ನು ಸಾವಿರಾರು ಸಂಖ್ಯೆಗಳಲ್ಲಿ ಹಾಡುತ್ತಾ ಆ ಕಲೆಯನ್ನು ಜೀವಂತ ಇಟ್ಟಿದ್ದಾರೆ. ಈಗಾಗಲೇ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಪ್ರಸಾರವಾಗಿದೆ. ಅವರೊಂದು ಜಾನಪದ ವಿಶ್ವಕೋಶ. ವಯಸ್ಸಿನ ಪ್ರಭಾವದಿಂದಾಗಿ ಮಾತುಗಳು ಸ್ವಲ್ಪ ಅಸ್ಪಷ್ಟ. ಆದರೆ ಖಚಿತವಾಗಿ ವಿಷಯ ಮಂಡಿಸುತ್ತಾರೆ…..

ನಂತರ ವೃಕ್ಷ ಮಾತೆ ಎಂದು ಹೆಸರಾದ ಶ್ರೀಮತಿ ತುಳಸಿ ಗೌಡ ಅವರನ್ನು ಭೇಟಿಯಾದೆವು. ಸುಮಾರು 50 ವರ್ಷಗಳ ಹಿಂದೆಯೇ ಚಿಕ್ಕ ವಯಸ್ಸಿನಲ್ಲೇ ಕಾಡಿನ ಮಹತ್ವ ಅರಿತು ಕಾಡನ್ನು ಉಳಿಸಲು ಮತ್ತು ಬೆಳೆಸಲು ನಿರಂತರವಾಗಿ ಪ್ರಯತ್ನಿಸುತ್ತಾ, ತಾವು ಗಿಡ ನೆಡುತ್ತಾ, ಇತರರಿಗೂ ಪ್ರೋತ್ಸಾಹಿಸುತ್ತಾ ಲಕ್ಷಾಂತರ ಮರ ಬೆಳೆಸಿದ್ದಾರೆ. ಕಾಡು ಉಳಿದರೆ ನಾಡು ಉಳಿದೀತು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಈಗಲೂ ಸಕ್ರಿಯವಾಗಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ…..

ಸಂಜೆ ಭೇಟಿಯಾದ ಮತ್ತೊಬ್ಬ ಸಾಧಕರು ಮಂಗಳೂರಿನ ಹಾಜಬ್ಬ. ವೈಯಕ್ತಿಕವಾಗಿ ನನಗೆ ಅವರ ಸಾಧನೆಗಿಂತ ಅವರ ಮುಗ್ದತೆ ಮತ್ತು ಸರಳತೆ ತುಂಬಾ ಇಷ್ಟವಾಯಿತು ಮತ್ತು ಆಶ್ಚರ್ಯಕರವಾಯಿತು. ಪ್ರಶಸ್ತಿಗಳು ನಮ್ಮನ್ನು ದುರಹಂಕಾರಿಗಳಾಗಿ ಮಾಡದೆ ಮತ್ತಷ್ಟು ವಿನಯವಂತರಾಗಿ ಮಾಡಬೇಕು ಎಂದು ಹೇಳುವುದು ಕೇವಲ ಮಾತಾಗದೆ ಇವರ ವಿಷಯದಲ್ಲಿ ಸಂಪೂರ್ಣ ಸತ್ಯವಾಗಿದೆ. ತನಗಾದ ಅನಕ್ಷರತೆಯ ಅವಮಾನ ತಾನು ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣ ಎಂದು ಸ್ಪಷ್ಟವಾಗಿ ವಿವರಿಸಿದರು….

ಎರಡು ದಿನಗಳ ಸುಮಾರು 1500 ಕಿಲೋಮೀಟರ್ ಗಳ ಪ್ರಯಾಣ, ಪ್ರಕೃತಿಯ ಮಡಿಲ ಆಸ್ವಾದನೆ, ವಿಶೇಷ ಆರೋಗ್ಯಕರ ಆಹಾರ, ಆತ್ಮೀಯ ಗೆಳೆಯರ ಭೇಟಿ, ಒಂದು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ಜೊತೆಗೆ ಈ ಮುಗ್ಧ ಸಹಜ ಸಾಧಕರ ಭೇಟಿ ಮನಸ್ಸಿನಲ್ಲಿ ಸ್ವಲ್ಪ ನವೋತ್ಸಾಹ ಮೂಡಿಸಿದೆ. ಬಹುಶಃ ಬದುಕಿನ ಸಾರ್ಥಕತೆ ಅಡಗಿರುವುದೇ ಸಮಾಜಮುಖಿ ನಿಸ್ವಾರ್ಥ ಸಾಧಕರ ಸೇವೆಯನ್ನು ಗಮನಿಸಿ ನಾವು ಕೂಡ ಅವರಂತೆ ಒಂದಷ್ಟು ಪ್ರಯತ್ನ ಮಾಡಿದರೆ ಸಿಗುವ ನೆಮ್ಮದಿಯ ಹುಡುಕಾಟದಿಂದ…….

ಸ್ವಂತ ಬದುಕಿನ ನಡುವೆ ಸಮಾಜದ, ಪರಿಸರದ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಿ ಎಂದು ಅತ್ಯಂತ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಾ,

ಈ ಪ್ರವಾಸವನ್ನು ಆಯೋಜಿಸಿ ಎರಡು ದಿನ ಅನೇಕ ವಿಷಯಗಳನ್ನು ಮುಕ್ತವಾಗಿ ಮಾತನಾಡಿದ ಆತ್ಮೀಯ ಗೆಳೆಯರಾದ ಬೆಂಗಳೂರು ಬ್ಲೂಬೆಲ್ ಶಾಲೆಯ ಸಂಸ್ಥಾಪಕರು ಮತ್ತು ಚಿಂತಕರಾದ ರಾಜೇಶ ಅವರಿಗೂ, ಮಂಗಳೂರನಲ್ಲಿ ಜೊತೆಯಾದ ಸ್ವರೂಪ ಶಿಕ್ಷಣ ಅಕಾಡೆಮಿ ಮುಖಾಂತರ ಶೈಕ್ಷಣಿಕ ಕ್ರಾಂತಿಗೆ ಪ್ರಯತ್ನಿಸುತ್ತಿರುವ ಗೋಪಡ್ಕರ್ ಅವರಿಗೂ ಕೃತಜ್ಞತೆಗಳನ್ನು ಹೇಳುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!