ಜ್ಞಾನದ ಮರು ಪೂರಣ……
ಜ್ಞಾನ – ಬುದ್ದಿ – ತಿಳಿವಳಿಕೆ…..
ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ………
ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಮುಗಿದು ಹೋಗುವ ಮತ್ತು ಎಂದೂ ಮುಗಿಯದ ವಸ್ತುಗಳು ಎಂದು….
ಜ್ಞಾನ ಮೊದಲ ಪಟ್ಟಿಯಲ್ಲಿ ಸೇರುತ್ತದೆ. ಆದರೆ ಅದರ ವಿಶೇಷತೆ ಎಂದರೆ ಅದಕ್ಕೆ ಎರಡನೇ ಪಟ್ಟಿಯಲ್ಲಿಯೂ ಸ್ಥಾನ ಕಲ್ಪಿಸಬಹುದು. ಅದು ವ್ಯಕ್ತಿಗಳ ಶ್ರಮ ಸಾಧನೆ ಮತ್ತು ಪ್ರಯತ್ನದ ಮೇಲೆ ಅವಲಂಬಿಸಿರುತ್ತದೆ……
ಒಂದಷ್ಟು ಜನ ಜ್ಞಾನ ಎಂದರೆ ಹಣ ಅಧಿಕಾರ ಆಸ್ತಿ ಸಂಪಾದನೆ ಎಂದು ಭಾವಿಸಿರುತ್ತಾರೆ. ಅದರ ಆಧಾರದ ಮೇಲೆ ಜ್ಞಾನವನ್ನು ಅಳೆಯುತ್ತಾರೆ. ಎಷ್ಟು ಯಶಸ್ವಿಯಾಗುವರೋ ಅಷ್ಟು ಜ್ಞಾನಿಗಳು ಎಂಬ ಅರ್ಥದಲ್ಲಿ…….
ಇನ್ನೊಂದಿಷ್ಟು ಜನ ಅಕ್ಷರ ಕಲಿಕೆಯ ಮೂಲಕ ಅಂಕಗಳ ಆಧಾರದ ಮೇಲೆ ಪಡೆಯುವ ಉದ್ಯೋಗ ಸಂಬಳ ಮತ್ತು ಸ್ಥಾನಮಾನಗಳನ್ನು ಜ್ಞಾನದ ಬಲದಿಂದ ಪಡೆದದ್ದು ಎಂದು ಅರ್ಥೈಸುತ್ತಾರೆ…….
ಮತ್ತೆ ಕೆಲವರು ಜ್ಞಾನವೆಂಬುದು ಅರಿವಿನ ಕ್ರಮ. ಅದು ಒಂದು ಜೀವನಶೈಲಿ. ಬದುಕಿನ ಅನುಭವದ ಮೂಲಕ ಗಳಿಸಿಕೊಳ್ಳವ ತಿಳಿವಳಿಕೆ ಎಂದೂ ಕರೆಯುತ್ತಾರೆ……
ಇನ್ನೂ ಹಲವರು ಜ್ಞಾನ ಓದಿನಿಂದ, ಪ್ರಯಾಣ ಪ್ರವಾಸದಿಂದ, ಸಜ್ಜನರ ಸಹವಾಸದಿಂದ, ಚಿಂತನೆಗಳಿಂದ, ಅಲೌಕಿಕ ಶಕ್ತಿಗಳಿಂದ, ಧ್ಯಾನ ಯೋಗ ಮುಂತಾದ ಆಧ್ಯಾತ್ಮಿಕ ಶಕ್ತಿಯಿಂದ ಮೂಡುವ ಅನುಭವದ ಅನುಭಾವ ಎಂದೂ ಕರೆಯುತ್ತಾರೆ……
ಈ ಎಲ್ಲಾ ಅಭಿಪ್ರಾಯಗಳು ಜ್ಞಾನಕ್ಕೆ ಹೇರುವ ಮಿತಿಗಳು ಅಥವಾ ನಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿ ನಾವು ಮಾಡಿಕೊಳ್ಳಬಹುದಾದ ಸಮಾಧಾನ ಮಾತ್ರ……
ಏಕೆಂದರೆ ಜ್ಞಾನವೆಂಬುದು ಒಂದು ಮಿತಿಗೆ ಒಳಪಡುವ ಅನುಭಾವವಲ್ಲ. ಅದನ್ನು ನಿರ್ಧಿಷ್ಟವಾಗಿ ಹೀಗೆ ಎಂದು ಕಟ್ಟಿಹಾಕಲು ಸಾಧ್ಯವಿಲ್ಲ. ಅದು ನಿಂತ ನೀರಲ್ಲ. ಹರಿಯುವ ನದಿ. ಆದರೆ ಅದನ್ನು ನಾವು ಆಗಾಗ ತುಂಬಿಸುತ್ತಿರಬೇಕು. ಅದು ನಿರಂತರವಾಗಿ ತನ್ನ ಚಲನಶೀಲ ಗುಣವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಪ್ರಯತ್ನವೂ ಮುಖ್ಯ. ಎಂದೋ ಏನೋ ಓದಿದ ಕೇಳಿದ ನೋಡಿದ ಚಿಂತಿಸಿದ ವಿಷಯಗಳ ಮೇಲೆ ರೂಪಿಸಿಕೊಂಡ ಜ್ಞಾನ ಎಲ್ಲಾ ಕಾಲಕ್ಕೂ ಸಲ್ಲುತ್ತದೆ ಅಷ್ಟು ಸಾಕು ಎಂಬ ಅಜ್ಞಾನ ಕೆಲವರಲ್ಲಿ ಇರುತ್ತದೆ. ಐಎಎಸ್ ಕೆಎಎಸ್ ಸೇರಿ ಆ ರೀತಿಯ ಅಧಿಕಾರಿಗಳೇ ಇರಬಹುದು, ವೈದ್ಯ, ಇಂಜಿನಿಯರ್, ಶಿಕ್ಷಕ, ವಕೀಲ, ವಿಜ್ಞಾನಿ, ಚಾಲಕ ಸೇರಿ ಆ ರೀತಿಯ ವೃತ್ತಿ ನಿರತರೇ ಇರಬಹುದು, ರಾಜಕಾರಣಿ, ಧರ್ಮಾಧಿಕಾರಿ, ವ್ಯಾಪಾರಿ ರೀತಿಯ ಮಹತ್ವಾಕಾಂಕ್ಷಿಗಳೇ ಇರಬಹುದು ಅಥವಾ ಇವುಗಳಿಗೆ ಸೇರದ ಇನ್ನೂ ಯಾರೇ ಆಗಿರಲಿ ಒಂದು ಹಂತದವರೆಗೆ ಕಷ್ಟ ಪಟ್ಟು ಆ ವಿಷಯದಲ್ಲಿ ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಾರೆ ಮತ್ತು ಅದನ್ನು ತಮ್ಮ ಭೌತಿಕ ಬೆಳವಣಿಗೆಗೆ ಉಪಯೋಗಿಸಿಕೊಳ್ಳುತ್ತಾರೆ. ಅಲ್ಲಿ ಒಂದಷ್ಟು ಯಶಸ್ಸು ಹಣ ಅಧಿಕಾರ ಸಿಕ್ಕ ನಂತರ ಜ್ಞಾನವನ್ನು ನಿರ್ಲಕ್ಷಿಸುತ್ತಾರೆ ಅಥವಾ ವೇಗ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕಳೆದುಹೋಗುತ್ತಾರೆ ಅಥವಾ ತಮಗೆ ಈಗಾಗಲೇ ಜ್ಞಾನದ ಅರಿವು ಸಾಕಷ್ಟು ಇದೆ. ಅದೇ ಕಾರಣದಿಂದಾಗಿ ನಾವು ಈ ಯಶಸ್ಸು ಪಡೆದಿರುವುದು ಎಂದು ಭಾವಿಸಿ ತೃಪ್ತರಾಗಿರುತ್ತಾರೆ ಅಥವಾ ಆ ರೀತಿಯ ಅಜ್ಞಾನ ಅಹಂಕಾರ ಮನೋಭಾವ ಹೊಂದಿರುತ್ತಾರೆ……
ಆ ಪರಿಸ್ಥಿತಿಯನ್ನೇ ಮುಗಿದು ಹೋಗುವ ಜ್ಞಾನದ ಹಂತ ಎಂದು ಕರೆಯುವುದು. ನಮ್ಮ ಅರಿವಿಗೆ ನಾವು ಹೇರಿಕೊಳ್ಳುವ ಮಾನಸಿಕ ಮಿತಿ ಇದು. ಇದು ಕ್ರಮೇಣ ನಮ್ಮ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ವಿಫಲವಾಗಿ ಅತೃಪ್ತಿ ಅಸಮಾಧಾನ ಅಸಹನೆಗೆ ಕಾರಣವಾಗುತ್ತದೆ. ಏಕೆಂದರೆ ನಮಗರಿವಿಲ್ಲದೆ ಜ್ಞಾನವೆಂಬ ಅರಿವಿನ ವಿಟಮಿನ್ ಕೊರತೆ ನಮಗೆ ಕಾಡುತ್ತದೆ ಮತ್ತು ನಮಗಿರುವ ಜ್ಞಾನದ ಮಟ್ಟ ನಮ್ಮ ಮಾನಸಿಕ ಸಮತೋಲನ ಕಾಪಾಡಲು ಸಾಕಾಗುವುದಿಲ್ಲ…..
ಆದ್ದರಿಂದ ಆ ಜ್ಞಾನವೆಂಬ ಅನುಭಾವವನ್ನು ನಿರಂತರವಾಗಿ ಬ್ಯಾಟರಿ ಚಾರ್ಜ್ ಮಾಡುವಂತೆ ಆಗಾಗ ಮಾಡುತ್ತಲೇ ಇರಬೇಕು. ಅದು ಕಡಿಮೆಯಾಗುತ್ತಿದ್ದಂತೆ ಮತ್ತೆ ಮತ್ತೆ ಚಾರ್ಜ್ ಮಾಡಬೇಕು. ಇಲ್ಲದಿದ್ದರೆ ಅದು ಡೆಡ್ ಸ್ಥಿತಿಗೆ ಬರುತ್ತದೆ ಮುಂದೆ ಅದನ್ನು ಉಪಯೋಗಿಸುವುದು ಕಷ್ಟ…..
ಆದರೆ ಜ್ಞಾನದ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು ಎಂಬುದು ವ್ಯಕ್ತಿಯ ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಪ್ರದೇಶವಾರು ಸೇರಿ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಕಾಯಕದಿಂದ, ಯೋಗದಿಂದ, ಧ್ಯಾನದಿಂದ, ಭಕ್ತಿಯಿಂದ, ಅಧ್ಯಯನದಿಂದ, ಚಿಂತನೆಯಿಂದ, ಪ್ರವಾಸದಿಂದ, ಅಭ್ಯಾಸದಿಂದ, ಯೋಚನಾ ಶಕ್ತಿಯ ಹೊಸ ಪ್ರಯೋಗಗಳಿಂದ, ಜನರ ಒಡನಾಟದಿಂದ, ಪ್ರಕೃತಿಯ ಮಡಿಲಿನ ವಾಸದಿಂದ, ಕೆಲವೊಮ್ಮೆ ಮೌನದಿಂದ, ನಿರ್ಲಿಪ್ತತೆಯಿಂದ, ಕಲಿಕೆಯಿಂದ, ವಿಶಾಲ ಹೃದಯದಿಂದ ಹೀಗೆ ನಾನಾ ರೀತಿಯಲ್ಲಿ ಅದನ್ನು ಚಾರ್ಜ್ ಮಾಡಿಕೊಳ್ಳವ ಅವಕಾಶ ಮತ್ತು ಸಾಧ್ಯತೆ ಇರುತ್ತದೆ. ಇದರಿಂದಾಗಿ ನಮ್ಮ ಒಟ್ಟು ವ್ಯಕ್ತಿತ್ವ ವಿಕಸನವಾಗಿ ನಮ್ಮ ಜೀವನಮಟ್ಟ ಸುಧಾರಿಸುತ್ತದೆ.
ಜ್ಞಾನಕ್ಕೆ ಅಪಾರ ಶಕ್ತಿ ಇದೆ. ಅದು ನಮ್ಮ ನೋವು ನಲಿವುಗಳನ್ನು ನಿಯಂತ್ರಿಸುತ್ತದೆ. ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡುತ್ತದೆ. ಕ್ರಿಯೆ ಪ್ರತಿಕ್ರಿಯೆಗಳು ನಮ್ಮ ಹಿಡಿತಕ್ಕೆ ಸಿಗುವಂತೆ ಮಾಡುತ್ತದೆ. ನಮ್ಮೊಳಗಿನ ಅಜ್ಞಾನವನ್ನು ನಮಗೆ ತಿಳಿಸಿಕೊಡುತ್ತದೆ. ಹಾಗೆಯೇ ನಮ್ಮೊಳಗಿನ ಅಪಾರ ಸಾಮರ್ಥ್ಯವನ್ನು ನಮಗೆ ಪರಿಚಯಿಸಿ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಮ್ಮ ದೈನಂದಿನ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ.
ಬೆಳಕಿನ ಹಬ್ಬ ದೀಪಾವಳಿಯ ಜ್ಯೋತಿ ಬೆಳಗುವ ಸಾಂಪ್ರದಾಯಿಕ ವ್ಯವಸ್ಥೆಯ ಸಾಂಕೇತಿಕತೆ ಇದನ್ನು ಪ್ರತಿಬಿಂಬಿಸುತ್ತದೆ. ನಾವು ನಮ್ಮೊಳಗಿನ ಜ್ಞಾನದ ಹಣತೆಯನ್ನು ಬೆಳಗಿಸುವ ಸಂಕಲ್ಪ ಮಾಡಲು ಈ ಹಬ್ಬವನ್ನು ಉಪಯೋಗಿಸಿಕೊಳ್ಳೋಣ ಎಂದು ಮನವಿ ಮಾಡುತ್ತಾ……
ಎಷ್ಟೋ ಸಂದರ್ಭಗಳಲ್ಲಿ ಇಂದಿನ ಜ್ಞಾನ ಮುಂದಿನ ಅಜ್ಞಾನವಾಗಲೂಬಹುದು
ಅದು ಚಲಿಸದೇ ತಟಸ್ಥವಾದಾಗ, ಆದ್ದರಿಂದ ಇಂಧನದ ರೀತಿ ಜ್ಞಾನವನ್ನು ಮರು ಪೂರಣ ಮಾಡುತ್ತಲೇ ಇರೋಣ………
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……..