Spread the love

ಉಸಿರಾಗಲಿ ಕನ್ನಡ,
ಹಸಿರಾಗಲಿ ಕರ್ನಾಟಕ….

ಸುಮಾರು ಒಂದು ಲಕ್ಷ ತೊಂಬತ್ತೆರಡು ಚದರ ಕಿಲೋಮೀಟರ್ ವಿಸ್ತೀರ್ಣದ ಸುಮಾರು ಏಳು ಕೋಟಿ ಜನಸಂಖ್ಯೆಯ ವೈವಿಧ್ಯಮಯ ಭಾರತದ ವರ್ಣಮಯ ರಾಜ್ಯ ಕರ್ನಾಟಕ………

ಕಲ್ಯಾಣ ಕರ್ನಾಟಕದ ಬೀದರ್ ಕನ್ನಡ, ಬಳ್ಳಾರಿ ಕನ್ನಡ, ಕಿತ್ತೂರು ಕರ್ನಾಟಕದ ಬೆಳಗಾವಿ ಕನ್ನಡ, ಧಾರವಾಡ ಕನ್ನಡ, ಮಧ್ಯ ಕರ್ನಾಟಕದ ದಾವಣಗೆರೆ ಕನ್ನಡ, ಚಿತ್ರದುರ್ಗ ಕನ್ನಡ, ಮಲೆನಾಡು ಕರ್ನಾಟಕದ ಶಿವಮೊಗ್ಗ ಕನ್ನಡ, ಚಿಕ್ಕಮಗಳೂರು ಕನ್ನಡ, ಕೊಡಗಿನ ಕನ್ನಡ, ಕರಾವಳಿ ಕರ್ನಾಟಕದ ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಅರೆಭಾಷೆ ಕನ್ನಡ, ಹಳೆ ಮೈಸೂರು ಭಾಗದ ಚಾಮರಾಜನಗರದ ಕನ್ನಡ, ಮಂಡ್ಯದ ಕನ್ನಡ,
ತೆಲುಗು ಮಿಶ್ರಿತ ಕೋಲಾರ ಕನ್ನಡ, ತಮಿಳು ಮಿಶ್ರಿತ ಬೆಂಗಳೂರು ಕನ್ನಡ, ಇಂಗ್ಲೀಷ್ ಮಿಶ್ರಿತ ಸಾಫ್ಟ್ವೇರ್ ಕನ್ನಡ, ಉರ್ದು ಮಿಶ್ರಿತ ಮುಸ್ಲಿಂ ಕನ್ನಡ, ಮಲೆಯಾಳಂ ಮಿಶ್ರಿತ ಕೇರಳ ಕನ್ನಡ, ಚರ್ಚುಗಳ ಪ್ರಾರ್ಥನೆಯ ವಿಶಿಷ್ಟ ಗ್ರಾಂಥಿಕ ಕನ್ನಡ ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡ ಒಂದೇ ಭಾಷೆಯ ವಿವಿಧ ಉಚ್ಚಾರಣೆ ಮತ್ತು ಬಗೆಬಗೆಯ ಪದ ಪುಂಜಗಳು……..

ತುಂಬಾ ಸೂಕ್ಷ್ಮವಾಗಿ ದೇಹದ ಮುಖ ಚಹರೆಯ ಲಕ್ಷಣಗಳನ್ನು ಗುರುತಿಸಿದರೆ ಕೊಡಗಿನ, ಮಂಗಳೂರಿನ, ಹುಬ್ಬಳ್ಳಿಯ, ಮೈಸೂರಿನ, ರಾಯಚೂರಿನ, ಚಿಕ್ಕಬಳ್ಳಾಪುರದ, ಹಾಸನದ, ಉತ್ತರ ಕನ್ನಡದ ಹೀಗೆ ಕೆಲವು ಭಾಗದ ಜನರನ್ನು ಅವರು ಯಾವ ಜಿಲ್ಲೆಗೆ ಸೇರಿರಬಹುದು ಎಂಬುದನ್ನು ಸ್ವಲ್ಪ ಮಟ್ಟಿಗೆ ಊಹಿಸಬಹುದು……

ಆಹಾರದ ವೈವಿಧ್ಯತೆ ಬಹುತೇಕ ಪ್ರತಿ ನೂರು ಕಿಲೋಮೀಟರ್ ಗಳಿಗೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಕಲಬುರಗಿಯ ಜೋಳದ ರೊಟ್ಟಿ, ಯಾದಗಿರಿಯ ಖಡಕ್ ರೊಟ್ಟಿ, ವಿಜಯಪುರದ ಗೋದಿ ಹುಗ್ಗಿ, ಗುರೆಳ್ಳು ಚಟ್ನಿಪುಡಿ, ತುಮಕೂರಿನ ತಟ್ಟೆ ಇಡ್ಲಿ, ಚಿಕ್ಕಮಗಳೂರಿನ ಅಕ್ಕಿ ರೊಟ್ಟಿ, ಮಂಗಳೂರಿನ ಅಕ್ಕಿ ಕಡುಬು, ಉಡುಪಿ ಬನ್ಸ್, ಗೋಳಿ ಬಜೆ, ಉತ್ತರ ಕನ್ನಡದ ಹೋಳಿಗೆ ತುಪ್ಪ, ಹಲಸಿನ ಪಾಯಸ, ಮಾವಿನ ಸೀಕರಣೆ, ಮಾವಿನಮಿಡಿ ಉಪ್ಪಿನಕಾಯಿ, ದಕ್ಷಿಣ ಕನ್ನಡದ ಪತ್ರೊಡೆ, ಮಾಂಜಿ, ಭೂತಾಯಿ, ಭಾಂಗಡ ಮೀನು, ಕೋರಿ ರೊಟ್ಟಿ, ಸೀಗಡಿ ಚಟ್ನಿ, ಕಳಸ ಭಾಗದ ನೀರು ದೋಸೆ, ಬೆಂಗಳೂರು ಗ್ರಾಮಾಂತರದ ರಾಗಿ ಮುದ್ದೆ, ಬೆಂಗಳೂರಿನ ಚಪಾತಿ, ಬಂಗಾರಪೇಟೆಯ ಮಸಾಲ – ಪಾನಿಪುರಿ ಚಾಟ್ಸ್, ಹಾಸನ ಕೊಡಗಿನ ಬಾಡೂಟ ಮತ್ತು ಪಂದಿಕರಿ, ಮಂಡ್ಯ ರಾಮನಗರದ ನಾಟಿಕೋಳಿ ಸಾರು, ದಾವಣಗೆರೆಯ ‌ಬೆಣ್ಣೆದೋಸೆ, ಬಳ್ಳಾರಿಯ‌ ಖಾರ ಮಂಡಕ್ಕಿ, ಹಾವೇರಿ ರಾಣೆಬೆನ್ನೂರಿನ ಮಿರ್ಚಿ ಬೊಂಡಾ ಗಿರಮಿಟ್, ಧಾರವಾಡದ ಪೇಡ, ಬೆಳಗಾವಿಯ ವಡಾಪಾವ್ ಮತ್ತು ಕುಂದಾ, ಗೋಕಾಕ್ ಕರದಂಟು, ಬೆಂಗಳೂರು ನಗರದ ರಾಗಿ ರೊಟ್ಟಿ ಕೊಬ್ಬರಿ ಚಟ್ನಿ……….

ಇತ್ತೀಚಿನ ರಾಜಕೀಯದಲ್ಲಿ…
ಹಾಸನದ ದೇವೇಗೌಡ ಕುಟುಂಬ, ಬೆಳಗಾವಿಯ ಜಾರಕಿಹೊಳಿ ಕುಟುಂಬ, ಬೀದರಿನ ಖಂಡ್ರೆ ಕುಟುಂಬ, ಕಲಬುರ್ಗಿಯವ ಖರ್ಗೆ – ಗುತ್ತೇದಾರ್ ಕುಟುಂಬ, ವಿಜಯಪುರದ ಪಾಟೀಲ್ ಕುಟುಂಬ, ಚಿಕ್ಕಬಳ್ಳಾಪುರದ ರೆಡ್ಡಿ ಕುಟುಂಬ, ರಾಯಚೂರಿನ ನಾಯಕ್ ಕುಟುಂಬ, ಚಾಮರಾಜನಗರದ ಶ್ರೀನಿವಾಸ ಪ್ರಸಾದ್ ಕುಟುಂಬ, ಬೆಂಗಳೂರು ಗ್ರಾಮಾಂತರದ ಶಿವಕುಮಾರ್ ಮತ್ತು ಬಚ್ಚೇಗೌಡ ಕುಟುಂಬ, ಯಾದಗಿರಿಯ ದರ್ಶನಾಪುರ ಕುಟುಂಬ, ಬಳ್ಳಾರಿಯ ರೆಡ್ಡಿ ಕುಟುಂಬ, ಕಾವೇರಿಯ ಉದಾಸಿ ಕುಟುಂಬ, ಚಿಕ್ಕೋಡಿಯ ಕತ್ತಿ ಕುಟುಂಬ, ಹುಬ್ಬಳ್ಳಿಯ ಶೆಟ್ಟರ್ ಕುಟುಂಬ, ಕೋಲಾರದ ಕೆ ಎಚ್ ಮುನಿಯಪ್ಪ ಕುಟುಂಬ, ರಾಮನಗರದ ಕುಮಾರಸ್ವಾಮಿ ಕುಟುಂಬ, ಗದಗಿನ ಎಚ್ ಕೆ ಪಾಟೀಲ್ ಕುಟುಂಬ, ದಾವಣಗೆರೆಯ ಶಾಮನೂರು ಕುಟುಂಬ, ಮೈಸೂರಿನ ಸಿದ್ದರಾಮಯ್ಯ ಕುಟುಂಬ..

ಕೃಷಿಯಲ್ಲಿಯೂ ಕರ್ನಾಟಕ ಅತ್ಯಂತ ವೈಶಿಷ್ಟ್ಯಪೂರ್ಣ ಗುಣಗಳನ್ನು ಹೊಂದಿದೆ. ಎಲ್ಲಾ ರೀತಿಯ ಕಾಳು ಸೊಪ್ಪು ಹಣ್ಣು ತರಕಾರಿ ವಾಣಿಜ್ಯ ಬೆಳೆಗಳಲ್ಲಿ ವೈವಿಧ್ಯತೆ ಇದೆ. ಕಲ್ಯಾಣ ಕರ್ನಾಟಕ ಭಾಗದ ತೊಗರಿ, ಹತ್ತಿ, ಭತ್ತ, ದ್ರಾಕ್ಷಿ, ಜೋಳ, ದಾಳಿಂಬೆ, ಕಿತ್ತೂರು ಭಾಗದ ಕಬ್ಬು, ನೆಲಗಡಲೆ, ಕಡಳೆ, ಸಪೋಟ, ಗುರೆಳ್ಳು, ಕರಾವಳಿ ಭಾಗದ ತೆಂಗು ಅಡಿಕೆ, ಸುವರ್ಣ ಗಡ್ಡೆ, ವಿವಿಧ ಔಷಧೀಯ ಸಸ್ಯಗಳು, ಮಲೆನಾಡಿನ ತೆಂಗು ಅಡಿಕೆ ಬಾಳೆ ಮೆಣಸು ಏಲಕ್ಕಿ, ಕೋಲಾರ ಭಾಗದ ಮಾವು ಟೊಮೆಟೊ, ಹೂವುಗಳು, ಹಾಸನ ಬೆಂಗಳೂರು ಭಾಗದ ಆಲೂಗಡ್ಡೆ ಕೋಸು ಮುಂತಾದ ವಿವಿಧ ತರಕಾರಿಗಳು, ತುಮಕೂರು ಭಾಗದ ನೆಲಗಡಲೆ, ರಾಮನಗರದ ರೇಷ್ಮೆ, ಮಂಡ್ಯದ ಕಬ್ಬು, ಚಾಮರಾಜನಗರದ ಹೊಗೆಸೊಪ್ಪು, ಬೆಂಗಳೂರಿನ ಎಲ್ಲಾ ರೀತಿಯ ತರಕಾರಿಗಳು ಎಲ್ಲವೂ ಲಭ್ಯ……

ಹಾಗೆಯೇ ಸಾಹಿತ್ಯಿಕವಾಗಿ ಎಷ್ಟೊಂದು ವಿಭಿನ್ನತೆ ಇದೆ ಎಂದರೆ, ಕರಾವಳಿಯ ಕಡಲ ತೀರದ ಭಾರ್ಗವ ಶಿವರಾಮ ಕಾರಂತ, ಮೊದಲ ರಾಷ್ಟ್ರ ಕವಿ ಗೋವಿಂದ ಪೈ, ಉತ್ತರ ಕರ್ನಾಟಕದ ಯುಗದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡ್, ಮಲೆನಾಡಿನ ರಸ ಋಷಿ ಕುವೆಂಪು, ಯು.ಆರ್. ಅನಂತಮೂರ್ತಿ, ಕೋಲಾರದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೆಳಗಾವಿಯ ಜಾನಪದ ಸಾಹಿತಿ ಚಂದ್ರಶೇಖರ ಕಂಬಾರ, ಸಮುದ್ರ ಗೀತೆಗಳ ವಿನಾಯಕ ಕೃಷ್ಣ ಗೋಕಾಕ್ ಈ ಜ್ಞಾನಪೀಠಿಗಳಲ್ಲದೇ ಅಸಂಖ್ಯಾತ ಸಾಹಿತಿಗಳು ಎಲ್ಲಾ ಭಾಗಗಳಲ್ಲು ವಿಸ್ತರಿಸಿದ್ದಾರೆ…….

ಇದು ಕೇವಲ ಸಂಕ್ಷಿಪ್ತ, ನೆನಪಾದ ಕೆಲವು ಮಾಹಿತಿಗಳು ಮಾತ್ರ. ಆಳದಲ್ಲಿ ಇನ್ನೂ ಸಾಕಷ್ಟು ವಿಷಯಗಳಿವೆ. ಕೆಲವು ಈ ಕ್ಷಣದಲ್ಲಿ ನೆನಪಾಗುತ್ತಿಲ್ಲ. ಹೆಚ್ಚಿನ ಮಾಹಿತಿ ಇದ್ದವರು ಹಂಚಿಕೊಳ್ಳಬಹುದು. ಕೆಲವು ತಪ್ಪುಗಳು ಇರಬಹುದು……

ಇಷ್ಟೊಂದು ವೈವಿಧ್ಯಮಯ ಕರ್ನಾಟಕದ ರಾಜ್ಯೋತ್ಸವದ ಶುಭಾಶಯಗಳು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!