Spread the love

ಇಸ್ರೇಲ್ ದೇಶದ ಅತಿಯಾದ ಆಕ್ರಮಣಕಾರಿ ಮನೋಭಾವ ಈ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇಸ್ರೇಲ್ ತನ್ನ ಶಕ್ತಿಯ ವಿರಾಟ್ ರೂಪ ಪ್ರದರ್ಶಿಸುತ್ತಿದೆ. ಕೋಪ ದ್ವೇಷ ಮತ್ತು ಸೇಡು – ಪ್ರತೀಕಾರದ ಹಾದಿಯಲ್ಲಿ ಜಗತ್ತಿನ ಹಿತಾಸಕ್ತಿ ಮರೆಯುತ್ತಿದೆ…….

ಹೌದು, ತನ್ನ ಜನಗಳ ರಕ್ಷಣೆ ಎಲ್ಲಾ ದೇಶಗಳಿಗು ಮುಖ್ಯ. ಆದರೆ ತನ್ನ ದೇಶ ಎಂಬ ಸ್ವಾರ್ಥಕ್ಕಾಗಿ ಮಿತಿಮೀರಿದ ವರ್ತನೆ ಇಡೀ ವಿಶ್ವಕ್ಕೇ ವ್ಯಾಪಿಸಿ ಅದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಾರದಲ್ಲವೇ…….

ಇತಿಹಾಸ ಅನೇಕ ಪಾಠಗಳನ್ನು ಹೇಳುತ್ತದೆ. ಈ ರೀತಿಯ ಹಿಂಸೆಗಳಿಗೆ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗು ಒಂದು ಮಿತಿ ಇರುತ್ತದೆ. ಏಕೆಂದರೆ ಆಕ್ರಮಣಗಳು ಸಹ ಎಲ್ಲಾ ದೇಶಗಳ ಮೇಲೆ ನಿರಂತರವಾಗಿ ನಡೆಯುತ್ತಲೇ ಇದೆ. ಹಾಗೆಂದು ಎಲ್ಲಾ ಶತ್ರುಗಳನ್ನು ಸಂಪೂರ್ಣ ನಾಶ ಮಾಡಲು ಸಾಧ್ಯವಿಲ್ಲ. ಶತ್ರು ಮತ್ತು ಮಿತ್ರರೊಂದಿಗೆ ಬದುಕುವುದು ಸಹ ಎಲ್ಲಾ ಕಾಲಕ್ಕೂ ಅನಿವಾರ್ಯ. ನಮ್ಮ ಶತ್ರುಗಳು ಸಹ ಮತ್ತೆ ಮತ್ತೆ ಸಂಘಟಿತರಾಗುತ್ತಲೇ ಇರುತ್ತಾರೆ. ಅದೇ ಇತಿಹಾಸದ ಪಾಠ……

ಕೆಲವು ಆದಿವಾಸಿ ಸಮುದಾಯಗಳು ಮತ್ತು ಅಪರೂಪದ ಜನಾಂಗಗಳು ತಮ್ಮತಮ್ಮಲ್ಲೇ ಹೊಡೆದಾಡಿಕೊಂಡು ಅಥವಾ ಪ್ರಾಕೃತಿಕ ವಿಕೋಪದಿಂದ ಅಥವಾ ಬೇರೆ ಬೇರೆ ಕಾರಣಗಳಿಂದ ನಾಶವಾಗಿರಬಹುದೇ ಹೊರತು ಸಂಖ್ಯೆಯಲ್ಲಿ ದೊಡ್ಡ ಸಮುದಾಯಗಳನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ……

ಯಹೂದಿಗಳನ್ನು ನಾಶ ಮಾಡಲು ಜರ್ಮನಿಯ ನಾಜಿಗಳಿಗೆ ಸಾಧ್ಯವಾಗಲಿಲ್ಲ,
ಶಿಯಾ, ಸುನ್ನಿ, ಖುರ್ದಿಷ್, ಪಠಾಣ್, ಸಿಂಧಿ, ರೆಡ್ ಇಂಡಿಯನ್ಸ್, ಕಾಶ್ಮೀರಿ ಪಂಡಿತರು, ಕ್ಯಾಥೊಲಿಕ್, ಪ್ರಾಟೆಸ್ಟಂಟ್ ಕ್ರಿಶ್ಚಿಯನ್ನರು, ಹೀನಯಾನ, ಮಹಾಯಾನ ಬೌದ್ಧರು, ಶ್ವೇತಂಬರ, ದ್ವಿಗಂಬರ ಜೈನರು, ಆರ್ಯ, ದ್ರಾವಿಡರು, ರೋಹಿಂಗ್ಯಾಗಳು, ಅರಬ್ಬರು, ಪರ್ಷಿಯನ್ನರು, ಹೂಣರು, ಆಫ್ರಿಕಾದ ಕರಿಯ ಜನಾಂಗದವರು, ಮಂಗೋಲಿಯನ್ನರು, ಭಾರತದ ಅಸ್ಪೃಶ್ಯರು, ಬ್ರಾಹ್ಮಣರು ಹೀಗೆ ಲಕ್ಷಾಂತರ ಸಮುದಾಯಗಳು ಈಗಲೂ ಅಸ್ತಿತ್ವದಲ್ಲಿದೆ. ಸಂಘರ್ಷಗಳ ನಡುವೆಯೂ ಬದುಕು ನಡೆಸುತ್ತಿವೆ. ಕೆಲವು ಸಾಮ್ರಾಜ್ಯಗಳು, ದೇಶಗಳು ನಾಶವಾಗಿರಬಹುದು. ಆದರೆ ಸಮುದಾಯಗಳು ಮತ್ತೆ ಮತ್ತೆ ಪುನರುಜ್ಜೀವನ ಹೊಂದುತ್ತವೆ. ಆದ್ದರಿಂದ ಯಹೂದಿಗಳು ಅಥವಾ ಪ್ಯಾಲೆಸ್ಟೈನ್ ಯಾರನ್ನು ಯಾರೂ ಸಂಪೂರ್ಣ ನಾಶ ಮಾಡಲು ಸಾಧ್ಯವಿಲ್ಲ…….

ಇಂತಹ ಪರಿಸ್ಥಿತಿಯಲ್ಲಿ ಮೊದಲ ಮತ್ತು ಎರಡನೇ ಮಹಾಯುದ್ಧದ ಪೂರ್ವದ ಘಟನೆಗಳನ್ನು ನೋಡಿದರೆ ಈಗ ನಡೆಯುತ್ತಿರುವ ವಿದ್ಯಮಾನಗಳಿಗೂ ಸ್ವಲ್ಪ ಸಾಮ್ಯತೆ ಇದೆ. ರೂಪ ಮಾತ್ರ ಬೇರೆ. ಆದರೆ ಬೆಂಕಿಯ ಕಿಡಿಗಳು ಮಾತ್ರ ಒಂದೇ. ಏಕೆಂದರೆ ಬೆಂಕಿಯ ಕಿಡಿಗಳು ಎಲ್ಲಿಂದಲೇ ಸಿಡಿದರು ಅಪಾಯ ಮಾತ್ರ ಒಂದೇ….

ಬಹುಶಃ ಮೂರನೆಯ ಮಹಾಯುದ್ಧಕ್ಕೆ ಭಯೋತ್ಪಾದನೆ ಎಂಬ ವಿಷಯವನ್ನು ವಿಶ್ವ ತಪ್ಪಾಗಿ ಗ್ರಹಿಸಿ ತಮ್ಮ ಸ್ವಾರ್ಥ ಸಾಧನೆಗೆ ಉಪಯೋಗಿಸಿಕೊಳ್ಳುತ್ತಿರುವುದೇ ಮೂಲ ಕಾರಣವಾಗಬಹುದು.

ಭಯೋತ್ಪಾದನೆಯ ಉದ್ದೇಶ ಹಿಂಸೆಯಿಂದ ಕಾರ್ಯ ಸಾಧನೆ. ಆದರೆ ಭಯೋತ್ಪಾದಕ ಸಂಘಟನೆಗಳ ಪ್ರಾರಂಭ, ಗುರಿ ಮತ್ತು ಅದಕ್ಕೆ ನೀಡುವ ಎಲ್ಲಾ ರೀತಿಯ ಬೆಂಬಲದ ಮೂಲವನ್ನು ಹುಡುಕುವುದು ಬಹಳ ಮುಖ್ಯ…..

ಅದರಲ್ಲಿ ನಿಜವಾದ ಭಯೋತ್ಪಾದಕ ಸಂಘಟನೆಗಳು ಮತ್ತು ತನ್ನ ಅಸ್ತಿತ್ವಕ್ಕಾಗಿ ಅಥವಾ ತಪ್ಪು ತಿಳಿವಳಿಕೆಯಿಂದ ಅಥವಾ ಅಜ್ಞಾನ ಮತ್ತು ಮತಾಂಧತೆಯಿಂದ ಸೃಷ್ಟಿಯಾಗಿರುವ ಸಂಘಟನೆಗಳ ನಡುವಿನ ವ್ಯತ್ಯಾಸ ಗುರುತಿಸಬೇಕು. ಅದರಲ್ಲಿ ಕೆಲವು ಸಂಘಟನೆಗಳ ಬೇಡಿಕೆಯನ್ನು ವಿಶ್ವ ಸಮುದಾಯ ಈಡೇರಿಸುವ ಪ್ರಯತ್ನ ಮಾಡಬೇಕು. ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಿದರೆ ಭಯೋತ್ಪಾದನೆ ಎಂದಿಗೂ ನಿಲ್ಲುವುದಿಲ್ಲ. ನಿಜವಾದ ಭಯೋತ್ಪಾದಕ ಸಂಘಟನೆ ಗುರುತಿಸಿದರೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಅದನ್ನು ನಿವಾರಿಸಬಹುದು….

ಧರ್ಮ ಮತ್ತು ಪ್ರದೇಶದ ದೇಶ ಭಕ್ತಿಯ ಮೂಲಭೂತವಾದವನ್ನು ಬಲಿಷ್ಠ ಶಕ್ತಿಗಳು ದುರುಪಯೋಗ ಪಡಿಸಿಕೊಂಡು ತಮ್ಮ ಶತ್ರುಗಳ ವಿರುದ್ಧ ಉಪಯೋಗಿಸಿಕೊಳ್ಳಲು ಪ್ರಾರಂಭದಲ್ಲಿ ಈ ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿ ಮಾಡುತ್ತವೆ. ಸುಲಭವಾಗಿ ಅಂತಹ ಸಂಘಟನೆಗಳಿಗೆ ಆ ಪ್ರದೇಶದ, ಆ ಸಮುದಾಯಗಳ ಜೀವ ಬೆಂಬಲ ದೊರೆಯುತ್ತದೆ. ಒಂದು ಶಕ್ತಿ ತನ್ನ ಧರ್ಮ, ಸಮುದಾಯ ಮತ್ತು ಪ್ರದೇಶದ ರಕ್ಷಣೆಗೆ ಪ್ರಾಣ ನೀಡಲು ಸಂಘಟಿತವಾಗಿ ಹೋರಾಡಲು ಸಿದ್ದವಾದರೆ ಇನ್ನೊಂದು ಶಕ್ತಿ ಅದಕ್ಕೆ ತನ್ನ ಗುರಿ ತಲುಪಲು ಹಿಂಸೆಯ ಮಾರ್ಗದ ಭೋದನೆ ಮಾಡಲಾಗುತ್ತದೆ. ಅವರಿಗೆ ತಮ್ಮ ನೆಲ ಧರ್ಮದ ರಕ್ಷಣೆಯ ಸ್ವಯಂ ಹೋರಾಟವಾದರೆ ಇತರರಿಗೆ ಅದು ಭಯೋತ್ಪಾದನೆ. ಈ ಕಾರಣ ಮತ್ತು ವ್ಯತ್ಯಾಸ ಸ್ಪಷ್ಟವಾಗಿ ಗುರುತಿಸಬೇಕು.

ಒಬ್ಬರದು ಅಧೀಕೃತ ಸೈನಿಕ ಶಸ್ತ್ರಾಸ್ತ್ರಗಳ ಭಯೋತ್ಪಾದನೆಯಾದರೆ ಮತ್ತೊಬ್ಬರದು ಅನಧಿಕೃತ ಸ್ವಯಂ ಹೋರಾಟಗಾರರ ಭಯೋತ್ಪಾದನೆ. ಆದರೆ ಸಾಮಾನ್ಯ ಜನ ಶಿಷ್ಟಾಚಾರದ ಮಾದರಿಯಲ್ಲಿ ಅನಧಿಕೃತ ಸ್ವಯಂ ಸೇವಕರ ಹಿಂಸೆಯನ್ನು ಮಾತ್ರ ಭಯೋತ್ಪಾದನೆ ಎಂದು ಕರೆಯುತ್ತಾರೆ….

ರಷ್ಯಾ ಉಕ್ರೇನ್ ಮೇಲೆ ಮಾಡುತ್ತಿರುವುದು ಏನು, ಚೀನಾ, ಭಾರತ ಮತ್ತು ತೈವಾನ್ ಮೇಲೆ ಮಾಡುತ್ತಿರುವುದು ಏನು, ಪ್ಯಾಲೆಸ್ಟೈನ್ ಇಸ್ರೇಲ್ ಮೇಲೆ ಮಾಡುತ್ತಿರುವುದು, ಇಸ್ರೇಲ್ ಪ್ಯಾಲಿಸ್ಟೈನ್ ಮೇಲೆ ಮಾಡುತ್ತಿರುವುದು ಏನು, ಪಾಕಿಸ್ತಾನ ಭಾರತದ ಮೇಲೆ ಮಾಡುತ್ತಿರುವುದು ಏನು, ಅಮೆರಿಕ ಕ್ಯೂಬಾ ಮೇಲೆ ಮಾಡುತ್ತಿರುವುದು ಏನು,
ತಾಲಿಬಾನ್, ಐಎಸ್ಐಎಸ್ಐ, ಲಷ್ಕರ್ ಐ ತೊಯಿಬಾ, ಹಮಾಸ್, ಆಲ್ ಖೈದಾ, ಹಿಜಬುಲ್ ಮುಜಾಯಿದ್ ಮುಂತಾದ ಸಂಘಟನೆಗಳು ಮಾಡುತ್ತಿರುವುದು ಏನು,
ಎಲ್ಲವೂ ಅಧಿಕೃತ ಮತ್ತು ಅನಧಿಕೃತ ಹಿಂಸೆಯೇ ತಮ್ಮ ದೇಶ ಮತ್ತು ಧರ್ಮದ ಹೆಸರಿನಲ್ಲಿ…..

ಈ ಎಲ್ಲವನ್ನೂ ಪರಿಶೀಲಿಸಿದಾಗ ಈ ತಕ್ಷಣಕ್ಕೆ ಅಲ್ಲದಿದ್ದರೂ ಕೆಲವು ಸಮಯದ ನಂತರವಾದರು ಮೂರನೆಯ ಮಹಾಯುದ್ಧ ನಿಶ್ಚಿತ ಎಂದೇ ಕಾಣುತ್ತದೆ….

ಈ ಸನ್ನಿವೇಶದಲ್ಲಿ ಸರಿ – ತಪ್ಪುಗಳ ಚರ್ಚೆ ಅಥವಾ ಇತಿಹಾಸದ ಸತ್ಯಗಳ ಹುಡುಕಾಟ ಒಂದು ವ್ಯರ್ಥ ಪ್ರಯತ್ನ ಮಾತ್ರ. ಈಗ ಬೇಕಾಗಿರುವುದು ಸಂಘರ್ಷ ನಿಲ್ಲಿಸುವ ಸಾಧ್ಯತೆಯ ಹೊಂದಾಣಿಕೆ ಮಾತ್ರ…….

ವಿಶ್ವಸಂಸ್ಥೆಯನ್ನು ಪುನರ್ ರಚಿಸಿ, ಅದರಲ್ಲಿ ವಿಟೊ ಅಧಿಕಾರ ತೆಗೆದುಹಾಕಿ, ವಿಶ್ವಶಾಂತಿಗಾಗಿಯೇ ಮತ್ತೊಂದು ಉಪವಿಭಾಗ ರಚಿಸಿ ಅದರಲ್ಲಿ ಎಲ್ಲಾ ದೇಶಗಳ ಧಾರ್ಮಿಕ, ಆಡಳಿತ, ಸಾಮಾಜಿಕ, ಬಲಿಷ್ಠ ಉದ್ಯಮಿಗಳ ಸದಸ್ಯರನ್ನು ಒಟ್ಟುಗೂಡಿಸಿ ಬಹುಮತದ ಆಧಾರದ ಮೇಲೆ ತೀರ್ಮಾನ ಮಾಡುವ ಮತ್ತು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸುವ ಮತ್ತು ಅಂತಿಮವಾಗಿ ಅದನ್ನೇ ಒಪ್ಪುವ ಇಲ್ಲದಿದ್ದರೆ ಇಡೀ ವಿಶ್ವ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗುವ, ದೇಶಗಳ ಆಂತರಿಕ ವ್ಯವಸ್ಥೆಯ ರೀತಿ ಕಾರ್ಯನಿರ್ವಹಿಸುವ ಒಂದು ವಿಧಾನ ಬಹುಶಃ ಸಮಸ್ಯೆಗಳನ್ನು ಕಡಿಮೆ ಮಾಡಿ ವಿಶ್ವಶಾಂತಿ ಸಾಧ್ಯವಾಗಿ ಮಾನವ ಕುಲ ಉಳಿಯಬಹುದು. ಇಲ್ಲದಿದ್ದರೆ ಮೂರನೇ ಮಹಾಯುದ್ಧ ಮಾನವ ಜನಾಂಗಕ್ಕೆ ಬಹುದೊಡ್ಡ ಹೊಡೆತ ಕೊಡಬಹುದು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!