Spread the love

ಮಧ್ಯಕಾಲೀನ ಯುಗದ ಅನಾಗರಿಕ ವ್ಯವಸ್ಥೆಯತ್ತ ಮಧ್ಯಪ್ರಾಚ್ಯ ದೇಶಗಳು ಮತ್ತು ವಿಶ್ವದಲ್ಲಿ ಮತ್ತೆ ಕ್ರೌರ್ಯದ ಅಟ್ಟಹಾಸ…..

ಉಕ್ರೇನ್ ರಷ್ಯಾ ಯುದ್ಧ ಮುಂದುವರೆಯುತ್ತಿರುವಾಗಲೇ ನಿರೀಕ್ಷೆಯಂತೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ಪ್ರಾರಂಭವಾಗಿದೆ.‌ ಜನವರಿ 29 ರಂದು ಬರೆದ ಲೇಖನದ ಊಹೆಗಳು ನಿಜವಾಗುತ್ತಿರುವುದು ತುಂಬಾ ದುಃಖದ ವಿಷಯ….

ಮೃತ ಶರೀರವನ್ನೂ ಅವಮಾನಿಸುವ ಮಾನವನ ಕ್ರೌರ್ಯ ತನ್ನ ಪರಾಕಾಷ್ಠೆಯನ್ನು ತಲುಪಿದೆ. ಒಬ್ಬ ಸೈನಿಕಳನ್ನು ಕೊಂದು ಆ ಶವವನ್ನು ಅರೆ ಬೆತ್ತಲೆ ಮಾಡಿ ಕೇಕೇ ಹಾಕುತ್ತಾ ಮೆರವಣಿಗೆ ಮಾಡುವುದನ್ನು ಇಡೀ ಮಾನವ ಜನಾಂಗ ಒಕ್ಕೊರಲಿನಿಂದ ಖಂಡಿಸದಿದ್ದರೆ ನಾಗರಿಕ ವಿಶ್ವಕ್ಕೆ ಭವಿಷ್ಯವಿಲ್ಲ…..

ಸೆರೆ ಸಿಕ್ಕ ಸೈನಿಕರನ್ನೇ ಅವರ ಹುದ್ದೆಗೆ ಸಮನಾಗಿ‌‌ ವಿರೋಧಿಗಳು ನಡೆಸಿಕೊಳ್ಳಬೇಕು ಎಂಬ ವಿಶ್ವಸಂಸ್ಥೆಯ ನಿಯಮವಿದೆ. ಏಕೆಂದರೆ ಪ್ರತಿ ಸೈನಿಕರು ದೇಶ ಪ್ರೇಮಿಗಳೇ. ಅವರವರ ದೇಶದ ಪರವಾಗಿ ಹೋರಾಡುತ್ತಾರೆ. ಆದರೆ ಶವವನ್ನು ಗೌರವಿಸಬೇಕು ಎಂಬುದು ಸಾಮಾನ್ಯ ಜ್ಞಾನ. ಒಮ್ಮೆ ಉಸಿರು ನಿಂತ ಮೇಲೆ ಆ ನಿರ್ಜೀವ ಶವವನ್ನು ಕನಿಷ್ಠ ಅಂತ್ಯಸಂಸ್ಕಾರ ಮಾಡಬೇಕು ಅಥವಾ ಆಸ್ಪತ್ರೆಗೆ ಸಂಶೋಧನೆಗೆ ನೀಡಬೇಕು ಅಥವಾ ಪ್ರಾಣಿಗಳಿಗೆ ಆಹಾರವಾಗಿಯಾದರೂ ನೀಡಬಹುದು. ಆದರೆ ಅದನ್ನು ಅವಮಾನಿಸುವುದು ಮತ್ತು ಅದರ ಮುಂದೆ ತಮ್ಮ ಪೌರುಷ ತೋರಿಸುವುದು ಅತ್ಯಂತ ವಿಕೃತ ಮನಸ್ಥಿತಿ….

ಎಲ್ಲಾ ಧರ್ಮಗಳ ಮತಾಂಧರು ಸಹ ತಮ್ಮ ಧರ್ಮದ ವಿರೋಧಿಗಳ ಬಗ್ಗೆ ಈ ರೀತಿಯಲ್ಲಿ ವರ್ತಿಸಿರುವ ಸಾಕಷ್ಟು ಉದಾಹರಣೆಗಳಿವೆ. ಮನುಷ್ಯರನ್ನು ನಾಗರಿಕವಾಗಿ ಮಾಡಲು ಸಾಧ್ಯವಾಗದ ಧರ್ಮಗಳು ಇರಬೇಕೆ ಎಂಬ ಮೂಲಭೂತ ಪ್ರಶ್ನೆ ಕಾಡುತ್ತದೆ. ಕಾರ್ಲ್ ಮಾರ್ಕ್ಸ್ ಹೇಳಿದ ಧರ್ಮ ಎಂಬುದು ಅಫೀಮು ಎನ್ನುವ ಮಾತು ಮತ್ತೆ ಮತ್ತೆ ದೃಢವಾಗುತ್ತಿದೆ…..

ಮೊದಲೇ ಹೇಳಿದಂತೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ಶುರುವಾಗಿದೆ. ಇದು ಯಾವ ಯಾವ ಆಯಾಮ ಪಡೆಯುತ್ತದೋ ಊಹಿಸುವುದು ಕಷ್ಟ. ಅಮೆರಿಕ ಇಸ್ರೇಲ್ ಗೆ ಬೆಂಬಲಿಸಿದರೆ ಮುಸ್ಲಿಂ ರಾಷ್ಟ್ರಗಳು ಪ್ಯಾಲೆಸ್ಟೈನ್ ಬೆಂಬಲಿಸಿ ಭೀಕರ ಮೂರನೇ ಮಹಾಯುದ್ಧ ಆರಂಭವಾದರೂ ಆಶ್ಚರ್ಯವಿಲ್ಲ…..

ಈಗಲಾದರು ಮನುಷ್ಯ ಜನಾಂಗ ಶಾಂತಿಯ ಪರವಾಗಿ ಮಾತನಾಡಬೇಕಿದೆ. ವ್ಯಾಟಿಕನ್ ಸಿಟಿ, ಜರುಸಲೇಂ, ಮೆಕ್ಕಾ, ಮದೀನಾ, ಅಯೋಧ್ಯ, ವಾರಣಾಸಿ, ಅಮೃತಸರ್, ಗಯಾ ಮುಂತಾದ ಧಾರ್ಮಿಕ ಸ್ಥಳಗಳು, ನ್ಯೂಯಾರ್ಕ್‌, ವಾಷಿಂಗ್ಟನ್, ಬೀಜಿಂಗ್, ಇಂಗ್ಲೆಂಡ್, ಬರ್ಲಿನ್, ಪ್ಯಾರಿಸ್, ಟೋಕಿಯೊ, ದೆಹಲಿ, ದುಬೈ ಇತ್ಯಾದಿ ನಗರಗಳ ಜನರು ಶಾಂತಿಯ ಧ್ವನಿ ಮೊಳಗಿಸಬೇಕಿದೆ……

ಸಾಮಾನ್ಯ ಜನ ಈಗ ಮಾತನಾಡದಿದ್ದರೆ ಮುಂದೆ ಇವರ ಮಾತುಗಳು ಸಂಪೂರ್ಣ ಬಂದ್ ಆಗಬಹುದು. ಮತಾಂಧರು ತಾವು ನಾಶವಾಗಿ ಇಡೀ ಮಾನವ ಕುಲವನ್ನೇ ನಾಶ ಮಾಡಬಹುದು. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಅವರು ನರ ರಾಕ್ಷಸರು. ಧಾರ್ಮಿಕ ಮುಖಂಡರು ತಮ್ಮ ಧರ್ಮದ ‌ಶಾಂತಿಯ ಸಂದೇಶವನ್ನು ಬಹಿರಂಗವಾಗಿ ಹಿಂಸೆಯನ್ನು ಖಂಡಿಸುವ ಮೂಲಕ ಹೇಳಬೇಕು. ನಮ್ಮ ಧರ್ಮವೇ ಶ್ರೇಷ್ಠ ಎಂದರೆ ಯಾವ‌ ಧರ್ಮವೂ ಉಳಿಯುವುದಿಲ್ಲ. ಅಷ್ಟೇ ಏಕೆ ಮನುಷ್ಯ ಜನಾಂಗವೇ ಅಸ್ತಿತ್ವ ಕಳೆದುಕೊಳ್ಳುತ್ತದೆ…..

ಹಮಾಸ್ ಉಗ್ರರು ಇಸ್ರೇಲ್ ಮೇಲೆ ಮಾಡಿದ ನಿನ್ನೆಯ ದಾಳಿಯ ಸಂದರ್ಭದಲ್ಲಿ,…..
ಇದೇ ವರ್ಷದ ಜನವರಿ 29 ರಂದು ಬರೆದ ಲೇಖನದ ಯಥಾವತ್ತು ಮರು ಪ್ರಕಟಣೆ….
••••••••••••••••••••••••••••••••••••••••

ಇಸ್ರೇಲ್ – ಪ್ಯಾಲಿಸ್ಟೈನ್ ಹಿಂಸಾಚಾರ ಮತ್ತೆ ಭುಗಿಲೇಳಲಿದೆ….

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ದೇಶಗಳ ಸೇಡು, ಪ್ರತೀಕಾರ ಮತ್ತು ವಿವಾದಗಳ ಇತಿಹಾಸ ಗಮನಿಸಿ ಹೇಳುವುದಾದರೆ, ಶೀಘ್ರದಲ್ಲೇ ಇಸ್ರೇಲ್ ಪ್ಯಾಲಿಸ್ಟೈನ್ ಮೇಲೆ ತೀವ್ರ ಸ್ವರೂಪದ ದಾಳಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಇಸ್ರೇಲ್ ಸರ್ಕಾರದ ತುರ್ತು ಸಂಪುಟ ಸಭೆ ನಡೆಯುತ್ತಿದೆ. ಯಾವುದೇ ಕ್ಷಣ ದಾಳಿ ಆಗಬಹುದು……

ಏಕೆಂದರೆ ಪ್ಯಾಲೆಸ್ಟೈನ್ ಪ್ರಜೆಯೊಬ್ಬನು ಇಸ್ರೇಲ್ ನೆಲದಲ್ಲಿ ಬಂದೂಕಿನಿಂದ ಮನಬಂದಂತೆ ಗುಂಡು ಹಾರಿಸಿ ಸುಮಾರು 7 ಜನರನ್ನು ಹತ್ಯೆ ಮಾಡಿದ್ದಾನೆ. ಇದಕ್ಕೆ ಒಂದು ದಿನ ಮೊದಲು ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆ 9 ಜನರನ್ನು ಹತ್ಯೆ ಮಾಡಿದೆ. ಇಸ್ರೇಲ್ ಸೇನೆ ಆ ಹಂತಕನನ್ನು ಸಹ ಹೊಡೆದುರುಳಿಸಿದೆ…..

ತನ್ನ ನೆಲದ ರಕ್ಷಣೆಗಾಗಿ ಇಸ್ರೇಲ್ ಯಾವ ಹಂತದ ಕ್ರೌರ್ಯ ಮೆರೆಯಲು ಹೇಸುವುದಿಲ್ಲ. ಅದರ ಸೇಡಿನ ಇತಿಹಾಸ ಭಯಾನಕವಾಗಿದೆ. ಒಂದು ತಲೆಗೆ ಎರಡು ತಲೆ ಎಂಬ ಸಿದ್ದಾಂತ ಅಳವಡಿಸಿಕೊಂಡಿದೆ….

ಗಾಜಾ ಪ್ರದೇಶದ ವಿವಾದ ತುಂಬಾ ಹಳೆಯದು. ಇಸ್ರೇಲ್ – ಪ್ಯಾಲಿಸ್ಟೈನ್ ನಡುವಿನ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಇನ್ನೂ ಯಾವುದೇ ರೀತಿಯ ಸಂಧಾನ ಸಾಧ್ಯವಾಗಿಲ್ಲ. ಇದೊಂದು ವಿಚಿತ್ರ ಪರಿಸ್ಥಿತಿಯಲ್ಲಿದೆ.

ಇಸ್ರೇಲ್ ಎಂಬ ಜಗತ್ತಿನ ಒಂದು ವಿಶಿಷ್ಟ ಮತ್ತು ಬಲಿಷ್ಠ ಸಕ್ರಮವಾದ ಅಕ್ರಮ ದೇಶ…..

ಭಾರತದ ಬಹಳಷ್ಟು ಜನರಿಗೆ ಇಸ್ರೇಲ್ ಎಂಬ ದೇಶದ ಬಗ್ಗೆ ತುಂಬಾ ಅಭಿಮಾನ, ಮೆಚ್ಚುಗೆ ಮತ್ತು ಪ್ರೀತಿ ಇದೆ. ಭಾರತ ಇಸ್ರೇಲ್ ಮಾದರಿಯಲ್ಲಿ ಬೆಳೆಯಬೇಕು ಎಂಬ ಆಸೆ ಇದೆ…..

ಅದಕ್ಕೆ ವಿರುದ್ಧವಾಗಿ ಬಹುತೇಕ ಮುಸ್ಲಿಮರು ವಿಶ್ವದಲ್ಲಿ ಅತ್ಯಂತ ಹೆಚ್ಚು ದ್ವೇಷಿಸುವ ದೇಶ ಕೂಡ ಇಸ್ರೇಲ್ ಆಗಿದೆ. ಅದು ಸಂಪೂರ್ಣ ನಾಶವಾಗಲಿ ಎಂದು ಅವರ ಒಳ ಮನಸ್ಸು ಹೇಳುತ್ತದೆ…

ಹಾಗಾದರೆ ಏನಿದು ಇಸ್ರೇಲ್ ಎಂಬ ದೇಶದ ವಿಶೇಷತೆ…..

ಇಸ್ರೇಲ್ ದೇಶದ ಮೂಲ, ಅದರ ಉಗಮ, ಧರ್ಮ, ಅಲ್ಲಿನ ಜನಜೀವನ, ವಿಶ್ವಸಂಸ್ಥೆಯ ಮಾನ್ಯತೆ, ಇಸ್ರೇಲಿಗರ ಮೇಲಿನ ಜರ್ಮನ್ ದೌರ್ಜನ್ಯ, ನಿರಾಶ್ರಿತ ಶಿಬಿರಗಳು, ಪ್ಯಾಲಿಸ್ಟೈನ್ ಆಕ್ರಮಣ ಮತ್ತು ಸಂಘರ್ಷ ಎಲ್ಲವನ್ನೂ ಗೂಗಲ್ ನಲ್ಲಿ ಓದಬಹುದು. ಆದರೆ ಇಲ್ಲಿ ಮುಖ್ಯವಾಗಿ ಇಸ್ರೇಲ್ ಮತ್ತು ಅದರ ಈಗಿನ ಪ್ರಭಾವವನ್ನು ನಾವು ಹೇಗೆ ಗ್ರಹಿಸಬಹುದು ಎಂಬುದರ ಸುತ್ತ ಒಂದು ನೋಟ…..

ಹೌದು, ಸುಮಾರು 86 ಲಕ್ಷ ಜನಸಂಖ್ಯೆ, ಸುಮಾರು 8000 ಚದರ ಮೈಲಿಯ ಚಿಕ್ಕ ದೇಶ ಇಸ್ರೇಲ್. ಆದರೆ ಅದರ ಸೈನಿಕ ಶಕ್ತಿ, ಅರ್ಥಿಕ ಶಕ್ತಿ, ತಂತ್ರಜ್ಞಾನ ವಿಶ್ವ ದರ್ಜೆಯ ಮಟ್ಟದಲ್ಲಿದೆ……

ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ, ಭಾರತದ ರಾ, ಪಾಕಿಸ್ತಾನದ ಐಏಸ್ಐ ಏಜೆನ್ಸಿಗಳಿಗಿಂತ ಇಸ್ರೇಲ್ ನ ಮೊಸಾದ್ ಎಂಬ ಬೇಹುಗಾರಿಕೆ ಸಂಸ್ಥೆ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ ಮತ್ತು ಸಾಬೀತು ಪಡಿಸಿದೆ…..

ಮ್ಯೂನಿಚ್ ಒಲಂಪಿಕ್ಸ್ ನಲ್ಲಿ ಅದರ ಪುಟ್ಬಾಲ್ ಆಟಗಾರರನ್ನು ಪ್ಯಾಲಿಸ್ಟೈನ್ ಉಗ್ರರು ಮಾಡಿದ ಹತ್ಯಾಕಾಂಡ, ಮಾನವ ಇತಿಹಾಸದ ಭಯಾನಕ ಘಟನೆಗಳಲ್ಲಿ ಒಂದಾಗಿ ದಾಖಲಾಗಿದೆ.

ಅದೇರೀತಿ ಭಯೋತ್ಪಾದಕರಿಂದ ಇಸ್ರೇಲ್ ವಿಮಾನ ಅಪಹರಣವಾದಾಗ ಆಫ್ರಿಕಾದಲ್ಲಿದ್ದ ಅದನ್ನು ಅದ್ಬುತ ಸಾಹಸ ಮಾಡಿ ಸಿನಿಮಾವನ್ನು ಮೀರಿಸುವ ರೀತಿಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು ಅದರ ಸಾಮರ್ಥ್ಯಕ್ಕೆ ಸಾಕ್ಷಿ…..

ಇಡೀ ಇಸ್ರೇಲ್ ದೇಶವನ್ನು ಅದರ ಅಜನ್ಮ ಶತ್ರುಗಳಾದ ಮುಸ್ಲಿಂ ದೇಶಗಳು ಸುತ್ತುವರಿದಿವೆ. ಭಯೋತ್ಪಾದನೆಯ ಉತ್ತುಂಗದಲ್ಲಿರುವ ಐಸಿಸ್ ಕೂಡ ಅದರ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಅದು ಇಸ್ರೇಲ್ ದೇಶದ ಬಹುದೊಡ್ಡ ಸಾಮರ್ಥ್ಯ.

ಹಾಗಾದರೆ ಇಸ್ರೇಲ್ ಒಂದು ಶ್ರೇಷ್ಠ ದೇಶ ಎಂದು ಪರಿಗಣಿಸಬಹುದೆ ?

ಇಲ್ಲ, ಖಂಡಿತ ಇಲ್ಲ. ಇಸ್ರೇಲ್ ದೇಶದ ಅಸ್ತಿತ್ವವೇ ಒಂದು ವಿವಾದಾತ್ಮಕ ವಿಷಯ. ಅದನ್ನು ಹೊರತುಪಡಿಸಿ ಕಡಿಮೆ ಜನಸಂಖ್ಯೆಯ ಇಸ್ರೇಲ್ ಜ್ಯೂಯಿಷ್ ಜನಾಂಗವೇ ಒಂದು ಬಲಿಷ್ಠ ಅನುವಂಶೀಯ ಗುಣಗಳನ್ನು ಹೊಂದಿದೆ. ದೈಹಿಕ ಮತ್ತು ಮಾನಸಿಕ ಗಟ್ಟಿತನ ಅಪರೂಪವಾಗಿದೆ. ಅದರ ವಿದೇಶಾಂಗ ನೀತಿ ಆ ದೇಶ ಮಾತ್ರ ಅನುಸರಿಸಬಹುದಾದ ಅತ್ಯಂತ ಕಠಿಣ ನಿಯಮಗಳನ್ನು ಒಳಗೊಂಡಿದೆ. ನ್ಯಾಯ ನೀತಿ ಧರ್ಮಕ್ಕಿಂತ ಉಳಿವಿಗಾಗಿ ಎಂತಹ ಕೃತ್ಯಕ್ಕೂ ಸಿದ್ದವಾಗಿರುವುದು ಅದರ ಕಠೋರ ವಿದೇಶಾಂಗ ನೀತಿ…..

ಅದನ್ನು ವಿಶ್ವದ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ, ಆಧ್ಯಾತ್ಮಿಕ ವಿಷಯದಲ್ಲಿ ಆಳವಾದ ನಂಬಿಕೆ ಇಟ್ಟಿರುವ, ಅನೇಕ ಪರಕೀಯರ ದಾಳಿಗೆ ಒಳಗಾಗಿರುವ, ವೈವಿಧ್ಯತೆ ಹೊಂದಿರುವ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ, ಬೃಹತ್ ಜನಸಂಖ್ಯೆಯ, ಅಲಿಪ್ತ ನೀತಿಯ ಭಾಗವಾಗಿರುವ ಭಾರತ ಯಾವ ಕೋನದಿಂದಲೂ ಅನುಸರಿಸಲು ಸಾಧ್ಯವಿಲ್ಲ….

ಒಬ್ಬ ಹಿಂದು ಧರ್ಮದ ವ್ಯಕ್ತಿ, ಮುಸ್ಲಿಮರನ್ನು ನಾನಾ ಕಾರಣಗಳಿಗಾಗಿ ದ್ವೇಷಿಸುವವರಾಗಿದ್ದು,
ಮುಸ್ಲಿಮರ ಪ್ರಬಲ ವೈರಿಯಾದ ಕಾರಣಕ್ಕೆ ಇಸ್ರೇಲ್ ಅನ್ನು ಇಷ್ಟಪಡುವುದು ಒಂದು ರೀತಿಯ ಯೋಚನೆಯಾದರೆ,
ತನ್ನ ಧರ್ಮದ ಜನರು ವಾಸಿಸುವ ಪ್ರದೇಶವನ್ನು ಅತಿಕ್ರಮಣ ಮಾಡಿರುವ ಮತ್ತು ಅವರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿರುವ ಕಾರಣಕ್ಕಾಗಿ ಮುಸ್ಲಿಮರು ಇಸ್ರೇಲನ್ನು ದ್ವೇಷಿಸುವುದು ಇನ್ನೊಂದು ರೀತಿಯದು…..

ಸುಮಾರು 50 ಲಕ್ಷ ಜನಸಂಖ್ಯೆಯ ಪ್ಯಾಲಿಸ್ಟೈನ್ ಸಹ ತನ್ನ ಭೂಮಿಯ ಆಕ್ರಮಣದ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಇದೆ. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಯಾಸರ್ ಅರಾಫತ್ ಕಾಲದಿಂದಲೂ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ. ಭಾರತದ ವಿದೇಶಾಂಗ ನೀತಿಯ ಪ್ರಕಾರ ಅದಕ್ಕೆ ಬೆಂಬಲ ಸಹ ಇದೆ. ಆದರೂ ದೀರ್ಘಕಾಲದಿಂದ ಆಗಾಗ ಹಿಂಸಾಚಾರ ಭುಗಿಲೇಳುತ್ತಲೇ ಇದೆ….

ಕೆಲವು ವಿಷಯಗಳಲ್ಲಿ ಇಸ್ರೇಲ್ ಅತ್ಯಂತ ಸ್ಪೂರ್ತಿದಾಯಕ ಮತ್ತು ಕೆಲವು ವಿಷಯಗಳಲ್ಲಿ ಅತ್ಯಂತ ಕಠೋರ ನೀತಿ ನಿಯಮಗಳನ್ನು ಹೊಂದಿದೆ…..

ಕೆಲವು ಪ್ರತಿಭೆಗಳು ಸಾಮರ್ಥ್ಯಗಳು ಸ್ವಾಭಾವಿಕವಾಗಿ ಕೆಲವರಿಗೆ ಒಲಿದಿರುತ್ತವೆ. ಅದು ಕ್ರೀಡೆ, ಸಂಗೀತ, ರಾಜಕೀಯ, ವಿಜ್ಞಾನ, ಕಲೆ, ನಟನೆ ಏನೇ ಇರಲಿ ಅದನ್ನು ಅನುಕರಣೆ ಮಾಡುವುದಕ್ಕೆ ಬದಲಾಗಿ ಒಂದಷ್ಟು ಅಂಶಗಳನ್ನು ಅಳವಡಿಸಿಕೊಳ್ಳಬಹುದು.
ನಮ್ಮದೇ ದಾರಿಯಲ್ಲಿ ಸಾಗುವುದು ಯಾವಾಗಲೂ ಉತ್ತಮ……

ಅದೇರೀತಿ ಇಸ್ರೇಲ್ ನಮಗೆ ಆದರ್ಶ ಮತ್ತು ಎಚ್ಚರಿಕೆ ಎರಡನ್ನೂ ಹೇಳುತ್ತದೆ.

ಇಸ್ರೇಲ್ ಮತ್ತು ಪ್ಯಾಲಿಸ್ಟೈನ್ ಎರಡೂ ದೇಶಗಳು ಒಂದು ರೀತಿಯ ದೌರ್ಜನ್ಯಕ್ಕೆ ಬೇರೆ ಬೇರೆ ಕಾರಣಗಳಿಗಾಗಿ ಒಳಗಾಗಿವೆ.
ಏನೇ ಆಗಲಿ ಪ್ಯಾಲಿಸ್ಟೈನ್ ಮತ್ತು ಇಸ್ರೇಲ್ ವಿವಾದವನ್ನು ಆಧುನಿಕ ಕಾಲದ ಹೊಸ ದೃಷ್ಟಿಕೋನದಿಂದ ಮತ್ತೊಮ್ಮೆ ವಿಮರ್ಶಿಸಿ ಹೊಸ ಪರಿಹಾರ ಕಂಡುಕೊಳ್ಳಬೇಕಿದೆ. ಇತಿಹಾಸದ ನೆನಪುಗಳು ಮತ್ತು ವಾಸ್ತವಗಳು ಏನೇ ಇರಲಿ ಕನಿಷ್ಠ ಮುಂದಿನ ಪೀಳಿಗೆಗಾಗಿ ಎರಡೂ ದೇಶಗಳು ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಅನಿವಾರ್ಯ.
ಇಲ್ಲದಿದ್ದರೆ ಹಿಂಸಾಚಾರ ಎರಡೂ ದೇಶಗಳ ನಾಶಕ್ಕೆ ಕಾರಣವಾಗುತ್ತದೆ ಮತ್ತು ಅನ್ಯಾಯವಾಗಿ ಅನೇಕ ಜೀವಗಳು ಜಾಗದ ಕಾರಣಕ್ಕೆ ಉಸಿರು ನಿಲ್ಲಿಸಬೇಕಾಗುತ್ತದೆ.

ವಿಶ್ವದ ಬಲಿಷ್ಠ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ಈ ವಿವಾದ ಬಗೆಹರಿಸಲು ಆದ್ಯತೆ ನೀಡಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068……

error: No Copying!