ಸತ್ಯದ ಹುಡುಕಾಟದಲ್ಲಿಯು ಮನಸ್ಸು ಮಲಿನವಾಗುತ್ತಾ ಸಾಗುತ್ತದೆ…..
ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಬಿಸುತ್ತದೆ.
ಹೀಗೆ ಮಾತನಾಡಿದರೆ ನಮಗೆ ಮೆಚ್ಚುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ.
ಹಾಗೆ ಮಾತನಾಡಿದರೆ ನಮಗೆ ವಿರೋಧ ವ್ಯಕ್ತವಾಗುತ್ತದೆ ಎಂದೂ ಅರಿವಾಗತೊಡಗುತ್ತದೆ.
ಬೇರೆಯವರನ್ನು ಹೇಗೆ ಮೆಚ್ಚಿಸಬೇಕು,
ಬೇರೆಯವರನ್ನು ಹೇಗೆ ಉದ್ರೇಕಿಸಬೇಕು,
ಬೇರೆಯವರನ್ನು ಹೇಗೆ ಘಾಸಿಗೊಳಿಸಬೇಕು,
ಬೇರೆಯವರನ್ನು ಹೇಗೆ ಅವಮಾನಿಸಬೇಕು,
ಬೇರೆಯವರನ್ನು ಹೇಗೆ ನಿರ್ಲಕ್ಷಿಸಬೇಕು,
ಬೇರೆಯವರನ್ನು ಹೇಗೆ ಕೆಟ್ಟವರನ್ನಾಗಿ ಮಾಡಬೇಕು,
ಬೇರೆಯವರನ್ನು ಹೇಗೆ ಟಾರ್ಗೆಟ್ ಮಾಡಬೇಕು,
ಎಂದು ಸ್ಪಷ್ಟವಾಗುತ್ತಾ ಹೋಗುತ್ತದೆ.
ಹಾಗೆಯೇ,
ನಾವು ಹೇಗೆ ಬುದ್ದಿವಂತರೆನಿಸಿಕೊಳ್ಳಬೇಕು,
ನಾವು ಹೇಗೆ ಒಳ್ಳೆಯವರೆನಿಸಿಕೊಳ್ಳಬೇಕು,
ನಾವು ಹೇಗೆ ಜನಪ್ರಿಯರಾಗಬೇಕು,
ನಾವು ಹೇಗೆ ಹಣವಂತರಾಗಬೇಕು,
ನಾವು ಹೇಗೆ ಅಧಿಕಾರಕ್ಕೇರಬೇಕು,
ನಾವು ಹೇಗೆ ಪ್ರಚಾರ ಪಡೆಯಬೇಕು,
ನಾವು ಹೇಗೆ ದೊಡ್ಡವರೆನಿಸಬೇಕು,
ನಾವು ಹೇಗೆ ಪ್ರಶಸ್ತಿ ಪಡೆಯಬೇಕು,
ನಾವು ಹೇಗೆ ಸನ್ಮಾನಿಸಿಕೊಳ್ಳಬೇಕು ,
ಎಂಬುದೂ ಗೊತ್ತಾಗತೊಡಗುತ್ತದೆ.
ಈ ಮಧ್ಯೆ ಸತ್ಯದ ಹುಡುಕಾಟ ದಾರಿ ತಪ್ಪುತ್ತದೆ……..
ಆದರೆ ಇವೆಲ್ಲವನ್ನೂ ಮೀರಿ, ಸ್ವಾರ್ಥವನ್ನು ಗೆದ್ದು,
ವಿಶಾಲ ಮನೋಭಾವದಿಂದ ಮನಸ್ಸನ್ನು ನಿಯಂತ್ರಣಕ್ಕೆ ಪಡೆದುಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದಾಗ ಮಾತ್ರ ನಾವು ಸತ್ಯದ ಹತ್ತಿರಕ್ಕೆ ಹೋಗಬಹುದು.
ಇದಕ್ಕಾಗಿ ಮತ್ತೊಮ್ಮೆ ಮಗುವಿನ ಮುಗ್ಧತೆ, ಕುತೂಹಲ ಬೆಳೆಸಿಕೊಳ್ಳಬೇಕು.
ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಸಾಧ್ಯವಾದಷ್ಟು ಸ್ಥಿತಪ್ರಜ್ನತೆಯಿಂದಿರಬೇಕು.
ಆತ್ಮ ವಂಚನೆ ಮಾಡಿಕೊಂಡು ಅಲ್ಲಿಯೇ ಕಳೆದುಹೋಗಬಾರದು.
ಆದರೆ ಇದು ಅಷ್ಟು ಸುಲಭವಲ್ಲ.
ಬದುಕಿನ ಸಂಕೀರ್ಣತೆ ನಮ್ಮನ್ನು ನಮ್ಮ ದಾರಿಯಲ್ಲಿ ಹೋಗಲು ಬಿಡುವುದಿಲ್ಲ. ಸಾಕಷ್ಟು ಅಡೆತಡೆಗಳು ಎದುರಾಗುತ್ತದೆ. ಅದನ್ನು ದೃಢವಾಗಿ ಎದುರಿಸಬೇಕು. ಬಹುಮುಖ್ಯವಾಗಿ ನಿರಂತರತೆ ಕಾಪಾಡಿಕೊಳ್ಳಬೇಕು.
ಇತರರ ಹಾಸ್ಯ ವ್ಯಂಗ್ಯ ಕೋಪ ಅಸೂಯೆ ಕಾಲೆಳೆಯುವಿಕೆ ಜೊತೆಗೆ,
ನಮ್ಮ ಕಣ್ಣ ಮುಂದಿನ ಹಣ ಅಧಿಕಾರ ಪ್ರಚಾರ ಪ್ರಶಸ್ತಿ ಸನ್ಮಾನಗಳ ಮೋಹವನ್ನು ಗೆಲ್ಲಬೇಕು.
ಅಲಂಕಾರವನ್ನು ಮೆಟ್ಟಿ ನಿಲ್ಲಬೇಕು.
ಆಗ ಸತ್ಯದ ಸನಿಹ ಹೋಗಬಹುದು.
ನಾವೆಲ್ಲಾ ಸತ್ಯದ ಹುಡುಕಾಟದ ಒಂದೇ ದೋಣಿಯ ಪಯಣಿಗರಾಗೋಣ,
ಒಂದೇ ಬಳ್ಳಿಯ ಹೂವುಗಳಾಗೋಣ,
ಆ ನಿರೀಕ್ಷೆಯಲ್ಲಿ ………………
ನಿನ್ನೆ ದಿನಾಂಕ 2/10/2023 ಸೋಮವಾರ ಮಹಾತ್ಮ ಗಾಂಧಿಯವರ 154 ನೇ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಅಶೋಕ ಹೋಟೆಲ್ ನ ಭಾಗವಾಗಿರುವ ಮತ್ತು ಅಲ್ಲಿಗೆ 1927 ರಲ್ಲಿ ಮಹಾತ್ಮ ಗಾಂಧಿಯವರು ಭೇಟಿ ನೀಡಿದ್ದ ಸ್ಥಳದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿಂತನಾ ವೇದಿಕೆಯವರು ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಗಾಂಧಿಯವರ ಕುರಿತು ಮಾತನಾಡಿದೆ…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………..