Spread the love

ಕರ್ನಾಟಕದ ಹೆಬ್ಬಾಗಿಲು ವಿಧಾನಸೌದದ ಮುಂದೆ ಸರ್ಕಾರ ಮತ್ತು ನೊಂದಾಯಿತ ಸಾರ್ವಜನಿಕರಿಂದ ಭಾರತದ ಸಂವಿಧಾನ ಪೀಠಿಕೆಯ ಓದು ಕಾರ್ಯಕ್ರಮವಿದೆ….

ಸಂವಿಧಾನದ ಆಶಯಗಳ ಬಗ್ಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಪ್ರಶಂಸನೀಯ. ಆದರೆ….

ಸಂವಿಧಾನದ ಆಶಯಗಳು ಇರುವುದು ಕೇವಲ ಓದುವುದಕ್ಕಾಗಿಯಲ್ಲ ಅದನ್ನು ಕಾಯಾ ವಾಚಾ ಮನಸಾ ಅನುಸರಿಸಲಿಕ್ಕಾಗಿ.‌ ಶಾಸಕಾಂಗ ಕಾರ್ಯಾಂಗದ ಎಷ್ಟು ಜನರಿಗೆ ಅದನ್ನು ಓದುವ ಅರ್ಹತೆ, ಯೋಗ್ಯತೆ, ನೈತಿಕತೆ ಇದೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆ…..

ಶೇಕಡಾ 80 % ರಾಜಕಾರಣಿಗಳು, ಶೇಕಡಾ 85% ಸರ್ಕಾರಿ ಅಧಿಕಾರಿಗಳು, ಶೇಕಡಾ 70% ಮತದಾರರು, ಶೇಕಡಾ 60% ವಿವಿಧ ವೃತ್ತಿಪರರು, ಶೇಕಡಾ 50% ಧಾರ್ಮಿಕ ಮುಖಂಡರು, ಶೇಕಡಾ 40% ನ್ಯಾಯಾಂಗ ವ್ಯವಸ್ಥೆ ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭ್ರಷ್ಟಾಚಾರ ಮಾಡುತ್ತಾರೆ. ಉಳಿದ ಕೆಲವರು ಆರ್ಥಿಕ ಭ್ರಷ್ಟಾಚಾರ ಮುಕ್ತವಾಗಿದ್ದರು ಧಾರ್ಮಿಕ, ಮೌಡ್ಯ, ಸುಳ್ಳುಗಳಂತ ಮಾನಸಿಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ….

ಸಂವಿಧಾನದ ಮೂಲ ಆಶಯವಾದ ವ್ಯಕ್ತಿ ಸ್ವಾತಂತ್ರ್ಯ, ದೇಶದ ಸಾರ್ವಭೌಮತ್ವ, ಜನಾಂಗೀಯ ಸೌಹಾರ್ದತೆ, ಧರ್ಮ ನಿರಪೇಕ್ಷ, ವೈಜ್ಞಾನಿಕ ಮನೋಭಾವ ಇದಕ್ಕೆ ಬಹುತೇಕ ವಿರುದ್ಧವಾಗಿ ಬದುಕುತ್ತಿರುವವರೇ ಹೆಚ್ಚಾಗಿದ್ದಾರೆ. ‌ಇಂತಹ ಸಂದರ್ಭದಲ್ಲಿ ಎಲ್ಲಾ ದಿನಾಚರಣೆಗಳು ಒಂದು ಮನರಂಜನಾ ಪ್ರಹಸನದಂತೆ ಕಾಣುತ್ತಿದೆ……..

ಒಂದು ಟೇಬಲ್ ನಿಂದ ಇನ್ನೊಂದು ಟೇಬಲ್ ಗೆ ಫೈಲ್ ವರ್ಗಾವಣೆಯಾಗಲು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಧಿಕಾರಿಗಳು ವರ್ಗಾವಣೆಯಾಗಲು, ಉದ್ಯೋಗ, ಪ್ರಶಸ್ತಿ, ಅಧಿಕಾರ ಪಡೆಯಲು, ಹುಟ್ಟು ಸಾವಿನ ಸರ್ಟಿಫಿಕೇಟ್ ಪಡೆಯಲು ಹೀಗೆ ಪ್ರತಿ ನಿಮಿಷವೂ ಕೋಟಿಗಳ ಲೆಕ್ಕದಲ್ಲಿ ಲಂಚಾವತಾರದ ನಾಟಕ ನಡೆಯುತ್ತಿರುತ್ತದೆ…..

ಭಾರತದ ಶೇಕಡಾ 50 ಕ್ಕೂ ಹೆಚ್ಚು ಎಲ್ಲಾ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯಲ್ಲಿ ತಾತ ಅಪ್ಪ ಮಕ್ಕಳ ವಂಶಪಾರಂಪರ್ಯ ಆಡಳಿತ ಈಗಲೂ ಮುಂದುವರೆಯುತ್ತಿದೆ. ಆ ವಂಶಪಾರಂಪರ್ಯ ಆಯ್ಕೆಯಲ್ಲೂ ಶೇಕಡಾ 90 ರಷ್ಟು ಜಾತಿಯ ಪ್ರಭಾವವಿರುವುದು ಅಷ್ಟೇ ವಾಸ್ತವ……..

ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇಕಡಾ 80% ರಷ್ಟು ನ್ಯಾಯವು ಉಳ್ಳವರ ಪರವಾಗಿಯೇ ಇರುತ್ತದೆ. ಅದಕ್ಕೆ ಕಾರಣಗಳು ಏನೇ ಇರಲಿ ಆದರೆ ಅಪರಾಧಿಗಳಿಗೆ ಹೆಚ್ಚು ಅನುಕೂಲಕರ ನೆರಳನ್ನು ಒದಗಿಸುವುದು ನ್ಯಾಯಾಲಯಗಳು. ಅಪರಾಧಿಗಳಿಗೆ ಆಗುವ ಶಿಕ್ಷೆಯ ಪ್ರಮಾಣ ಮತ್ತು ನಿರಪರಾಧಿಗಳು ಅನುಭವಿಸುವ ಯಾತನೆಯ ಪ್ರಮಾಣವನ್ನು ಅನುಭವದ ಆಧಾರದ ಮೇಲೆ ಗ್ರಹಿಸುವ ಮೂಲಕ ಇದನ್ನು ದೃಢಪಡಿಸಬಹುದು….

ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಭಾರತದ ಪ್ರಜಾಪ್ರಭುತ್ವ ಯಶಸ್ಸಿನ ಹಾದಿಯಲ್ಲಿದೆ ಎಂದು ಹೇಳಬಹುದು. ಆದರೆ ಅದಕ್ಕೆ ಒಂದಷ್ಟು ರಿಪೇರಿ ಮಾಡಬೇಕಿದೆ. ಮುಖ್ಯವಾಗಿ ಸಮಗ್ರ ಚಿಂತನೆಯ ಜಾಗೃತ ಮನಸ್ಸಿನ ಮತದಾರರನ್ನು ಸೃಷ್ಟಿಸಬೇಕಿದೆ. ಆ ಮೂಲಕ ಒಳ್ಳೆಯ ಜನ ಪ್ರತಿನಿಧಿಗಳು ಆಯ್ಕೆಯಾದರೆ ಮೊದಲನೆಯ ಹಂತದ ಸುಧಾರಣೆ ಸಾಧ್ಯವಾಗುತ್ತದೆ. ಅದು ಸಾಧ್ಯವಾದಲ್ಲಿ ಕಾರ್ಯಾಂಗದ ಮೇಲೆ ಹಿಡಿತ ಸಾಧಿಸಬಹುದು. ಆಗ ಇತರೆ ಅಂಗಗಳು ಸರಿ ದಾರಿಗೆ ಬರುತ್ತದೆ……

ಮಾನವ ಇತಿಹಾಸದ ಎಲ್ಲಾ ಆಡಳಿತಾತ್ಮಕ ಪ್ರಯೋಗಗಳ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇರುವುದರಲ್ಲಿ ಇಂದಿಗೆ ಉತ್ತಮ ವ್ಯವಸ್ಥೆ ಎಂದು ಸಾಬೀತಾಗಿದೆ. ಆದರೆ ವಿವೇಚನೆ ಇರುವ ಮತದಾರರು ಇದ್ದಾಗ ಮಾತ್ರ ಈ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವ ಹೆಸರಿನ ರಾಜಪ್ರಭುತ್ವ ಅಥವಾ ವಿವಿಧ ಶೋಷಣಾ ರೂಪದ ಸರ್ವಾಧಿಕಾರಿ ಆಡಳಿತವೇ ಪರೋಕ್ಷವಾಗಿ ನಮ್ಮನ್ನು ನಿಯಂತ್ರಿಸುತ್ತದೆ…..

ಪ್ರಜಾಪ್ರಭುತ್ವ ದಿನದ ಈ ಸಂದರ್ಭದಲ್ಲಿ ಭಾರತದ ಸಾಮಾನ್ಯ ಪ್ರಜೆಗಳಾದ ನಾವು ಮಾನಸಿಕವಾಗಿ ಕೆಲವು ಪ್ರತಿಜ್ಞಾ ವಿಧಿಗಳನ್ನು ಕೈಗೊಳ್ಳಬೇಕು…….

” ಭಾರತದ ಪ್ರಜೆಯಾದ ನಾನು ಸಂವಿಧಾನದ ಪೀಠಿಕೆಯಲ್ಲಿರುವ ಆಶಯವನ್ನು ಓದುತ್ತೇನೆ ಮತ್ತು ಅರ್ಥಮಾಡಿಕೊಳ್ಳುತ್ತೇನೆ ಹಾಗು ಅದೇ ರೀತಿ ನನ್ನ ನಡವಳಿಕೆ ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸದಾ ಜಾಗೃತನಾಗಿರುತ್ತೇನೆ. ನನಗೆ ದೊರೆತಿರುವ ಎಲ್ಲಾ ಸ್ವಾತಂತ್ರ್ಯವನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ನಿಯಂತ್ರಿತ ರೀತಿಯಲ್ಲಿ ಮತ್ತು ಪ್ರಜ್ಞಾಪೂರ್ವಕವಾಗಿ ಅನುಭವಿಸುತ್ತೇನೆ. ಈ ಜನ ಈ ದೇಶ ನನ್ನದು ನಿಮ್ಮದು ನಮ್ಮೆಲ್ಲರದು ಎಂಬ ಅರಿವನ್ನು ಸದಾ ಜಾಗೃತವಾಗಿಟ್ಟಿರುತ್ತೇನೆ. ಭಾರತದ ಪ್ರಜೆಗಳೆಲ್ಲರು ನನ್ನ ಸಹೋದರ ಸಹೋದರಿಯರು ಎಂದೇ ಭಾವಿಸುತ್ತೇನೆ. ಯಾವುದೇ ಜಾತಿ ಧರ್ಮ ಭಾಷೆ ಪ್ರದೇಶ ಸಿದ್ದಾಂತಕ್ಕಿಂತ ನನ್ನ ದೇಶದ ಸಂವಿಧಾನವೇ ನನಗೆ ಮುಖ್ಯ. ಅದಕ್ಕೆ ಸಂಪೂರ್ಣ ನಿಷ್ಠನಾಗಿರುತ್ತೇನೆ. ಆ ಮೂಲಕ ಈ ಮಣ್ಣಿನ ಋಣ ತೀರಿಸಿ ಜೀವನದ ಸಾರ್ಥಕತೆ ಹೊಂದುತ್ತೇನೆ “

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!