Spread the love

ಧರ್ಮಸ್ಥಳ: ಮೊದಲೇ ಇದ್ದ ಶಿವಲಿಂಗದ ಮೇಲೆ ಶ್ರೀನೃಸಿಂಹ ಸಾಲಿಗ್ರಾಮ ಇರಿಸಿದ್ದು ವಾದಿರಾಜರು !

ಮಾಧ್ವ ಮತೀಯ ಉಡುಪಿಯ ಸೋದೆ ಮಠದ ವಾದಿರಾಜ ಸ್ವಾಮೀಜಿಗಳ ಸಲಹೆಯಂತೆ, ಕುಡುಮಪುರ (ಧರ್ಮಸ್ಥಳ)ದಲ್ಲಿ ಜೈನ ಮನೆತನದ ಆಗಿನ ಅಧಿಕಾರಿ, ಒಂದೇ ರಾತ್ರಿಯಲ್ಲಿ ದೇವಸ್ಥಾನವನ್ನು ನಿರ್ಮಿಸಿದರಂತೆ. ವಾದಿರಾಜರು, ಮಂಗಳೂರಿನ ಸಪ್ತರ್ಷಿ ಕುಂಡದ ಸಮೀಪದಲ್ಲಿರುವ ಕದಿರೆ ದೇವಾಲಯದ ಶ್ರೀ ಮಂಜುನಾಥ ದೇವರ ಒಂದಂಶವನ್ನು ಸರಿಯಾದ ಮುಹೂರ್ತಕ್ಕೆ ಭೂತರಾಜರಿಂದ ತರಿಸಿದರಂತೆ. ಅನಂತರ ದಿವ್ಯ ಯಂತ್ರವನ್ನೂ ಮಾಡಿಸಿ ಜಪಿಸಿ ಸ್ಥಾಪಿಸಿ, ವಿಧಿ ಪ್ರಕಾರವಾಗಿ ಆ ಯಂತ್ರದ ಮೇಲೆ ಶ್ರೀ ಮಂಜುನಾಥನನ್ನು ಪ್ರತಿಷ್ಠಿಸಿದರಂತೆ. ಅನಂತರ ಆ ಲಿಂಗದ ತಲೆಯಲ್ಲಿ ಶ್ರೀನೃಸಿಂಹ ಸಾಲಿಗ್ರಾಮವನ್ನಿಟ್ಟರಂತೆ ! ಆನಂತರ ತಮ್ಮ ಸೇವಕರಾದ ಶ್ರೀ ಭೂತರಾಜರನ್ನು ಅಲ್ಲಿ ಒಂದಂಶದಿಂದಿರುವಂತೆ ಆಜ್ಞಾಪಿಸಿ, ಈ ದೇವಾಲಯದಲ್ಲಿ ಯಾವಾಗಲೂ ತಪ್ಪದೆ ಬ್ರಾಹ್ಮಣ ಭೋಜನಾದಿಗಳೂ, ಬಂದ ಯಾತ್ರಿಕರಿಗೆ ಮಹಾಧರ್ಮಗಳೂ ನಡೆಯತಕ್ಕದ್ದೆಂದು ಆ ಸ್ಥಳಾಧಿಪತಿಗೆ ಬೋಧಿಸಿ ಅನುಗ್ರಹಿಸಿದರಂತೆ.

(ಭಾವಿ ಸಮೀರ ಶ್ರೀಮದ್ವಾಧಿರಾಜ ಗುರುಸಾರ್ವಭಾಮರು / ಪುಟ 225).

ಇಲ್ಲಿ ನಾವು ಗಮನಿಸಬೇಕಾದ ಒಂದು ಪ್ರಮುಖ ವಿಷಯವೆಂದರೆ; ಶಿವಲಿಂಗ ಧ್ವೇಷಿಗಳೂ, ಆಚಾರ್ಯ ಶಂಕರರನ್ನೂ ಮಣಿಮಂತ ರಾಕ್ಷಸನ ಅವತಾರವೆಂದೂ, ಶೈವರನ್ನು ರಾಕ್ಷಸ ಸಂತಾನದವರೆಂದೂ ಬರೆದ (ಸುಮಧ್ವ ವಿಜಯ / ಮಣಿಮಂಜರಿ / ವಾಯುಸ್ತುತಿ ಇತ್ಯಾದಿ ಇತ್ಯಾದಿ) ಬರೆಯುತ್ತಲೇ ಇರುವ, ಹೇಳಿದ, ಹೇಳುತ್ತಲೇ ಇರುವ ಮಾಧ್ವ ಯತಿಗಳು, ಅದರಲ್ಲೂ ಮುಖ್ಯವಾಗಿ ವಾದಿರಾಜರು ಹೊಸದಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ನೂತನಾಗಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುವುದುಂಟೆ ? ಖಂಡಿತಾ ಇಲ್ಲ ! ಆ ಸ್ಥಳದಲ್ಲಿ ಶಿವಲಿಂಗ ಮೊದಲೇ ಇತ್ತು ಮತ್ತು ಹೀಗೆ ಮೊದಲೇ ಇದ್ದ ಕಾರಣಕ್ಕಾಗಿಯೇ ವಾದಿರಾಜರು ಆ ಶಿವಲಿಂಗದ ತಲೆಯ ಮೇಲೆ ಶ್ರೀನೃಸಿಂಹ ಸಾಲಿಗ್ರಾಮವನ್ನು ಇರಿಸಿದ್ದಾಗಿದೆ ಎಂಬುದನ್ನು ಒಪ್ಪಬಹುದಾಗಿದೆ.

ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ (ಶಿವಲಿಂಗ) ಲಿಂಗದ ಕೆಳಗಡೆ ವಾದಿರಾಜರು ದಿವ್ಯಯಂತ್ರವೊಂದನ್ನು ಇರಿಸಿದ್ದಾರೆಂದು ಮಾಧ್ವ ಸಂಬಂಧವಾದ ಗ್ರಂಥಗಳಲ್ಲಿ ಬರೆಯಲಾಗಿದೆಯಾದರೆ, ಆಚಾರ್ಯ ಶಂಕರರ ಸಂಬಂಧವಾದ , ಅದ್ವೈತ ಸಂಬಂಧವಾದ ಗ್ರಂಥಗಳಲ್ಲಿ; ಆಚಾರ್ಯ ಶಂಕರರು ತಾವು ಸಂದರ್ಶಿಸಿದ ಕ್ಷೇತ್ರಗಳಲ್ಲೆಲ್ಲ ಆ ಆ ಕ್ಷೇತ್ರಗಳ ಮಹಿಮೆಯನ್ನು ಹೆಚ್ಚಿಸಲು ಶ್ರೀಚಕ್ರ ಮತ್ತು ಶಿವಚಕ್ರಗಳನ್ನು ಸ್ಥಾಪಿಸಿದ್ದಾರೆ ಎಂದೂ ಬರೆಯಲಾಗಿದೆ.

ವಾದಿರಾಜರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶೈವ ದೇವಸ್ಥಾನವನ್ನು ವೈಷ್ಣವ ದೇವಸ್ಥಾನವನ್ನಾಗಿ ಪರಿವರ್ತಿಸಿದ ಬಗ್ಗೆ (ದೇವರ ಮತಾಂತರ !?) ಶೈವರ ಕೆಲವು ಗ್ರಂಥಗಳಲ್ಲಿ ಉಲ್ಲೇಖಗಳಿವೆ. “1635ರಲ್ಲಿ ಉಡುಪಿಯ ಸೋದೆ ಮಠದ ವಾದಿರಾಜ ಸ್ವಾಮಿಗಳು ಧರ್ಮಸ್ಥಳಕ್ಕೆ ಬಂದು ಆ ಶಿವಾಲಯವನ್ನು ವೈಷ್ಣವ ಪದ್ಧತಿಯ ಉಪಾಸನಾ ಕ್ರಮಕ್ಕೆ ಪರಿವರ್ತಿಸಿ ಶ್ರೀ ಮಧ್ವಾಚಾರ್ಯರ ದ್ವೈತ ಸಂಪ್ರದಾಯವನ್ನು ಅಲ್ಲಿ ಬರುವಂತೆ ಮಾಡಿದರೆಂದೂ ಕೂಡಾ ವ್ಯಕ್ತವಾಗುತ್ತದೆ. ಶ್ರೀ ಮಂಜುನಾಥೇಶ್ವರ ಲಿಂಗವನ್ನು ಆದಿ ಶಂಕರರೇ ಪ್ರತಿಷ್ಠಿಸಿದ್ದರಿಂದ ವಾದಿರಾಜರಿಗೆ ಆ ಲಿಂಗವನ್ನು ತೆಗೆದು ತನ್ನ ವೈಷ್ಣವ ಮೂರ್ತಿಯನ್ನು ಇಡಲು ಪ್ರತಿಷ್ಠಾ ಮಹತ್ವದಿಂದ ಸಾಧ್ಯವಾಗಲಿಲ್ಲ. ಅದರ ಬದಲಿಗೆ ಅವರು ತನ್ನ ಮಾಧ್ವ ಮತದವರನ್ನೇ ಅರ್ಚಕರನ್ನಾಗಿ ಅಲ್ಲಿ ಇಟ್ಟು ಲಿಂಗದ ಬದಿಯಲ್ಲಿ ಶಾಲಿಗ್ರಾಮಗಳನ್ನು ಇರಿಸಿ ಶೈವಾಗಮವನ್ನು ನಿಲ್ಲಿಸಿ ಈಶ್ವರನಿಗೆ ಪ್ರಿಯವಾದ ಬಿಲ್ವ , ವಿಭೂತಿಗಳ ಬಳಕೆಯನ್ನು ತಪ್ಪಿಸಿ, ತುಲಸೀ ಗಂಧ ಪ್ರಸಾದಗಳ ವಿತರಣಾ ಕ್ರಮವನ್ನು ಏರ್ಪಡಿಸಿ ಅಜ್ಞ ಭಕ್ತಾದಿಗಳಿಗೆ ಮಂಜುನಾಥನ ಪ್ರಸಾದವೆಂದೇ ಹೇಳಿ ಜನತೆಯನ್ನು ವಂಚಿಸುವ ಪ್ರಕರಣವನ್ನು ಏರ್ಪಸಿದರೆಂದು ತಿಳಿಯಬೇಕಾಗುತ್ತದೆ. ಶ್ರೀ ವಾದಿರಾಜರ ಮೇಲಿನ ಕರ್ತವ್ಯದಿಂದ ಅವರೇ ಮಂಜುನಾಥನನ್ನು ಪ್ರತಿಷ್ಠಿಸುದರೆಂದೂ ಕೂಡಾ ಆ ಮೇಲಿನ ಮಾಧ್ವ ಯತಿಗಳು ಪ್ರಚಾರಗೊಳಿಸಿದರು. ಲಿಂಗ ಪೂಜಾ ಧ್ವೇಷಿಗಳೂ, ಶಿವನು ವಿಷ್ಣುವಿನ ಒಂಭತ್ತನೇ ತರಗತಿಯ ಕೆಳಮಟ್ಟದ ವಿಷ್ಣುವಿ‌ನ ಕಿಂಕರನೆಂದು ಹೇಳುವ ಶ್ರೀ ವಾದಿರಾಜರು ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ಲಿಂಗವನ್ನು ಪ್ರತಿಷ್ಠಿಸಿದರು ಎಂಬ ಮಾತಿಗೆ ಏನಾದರೂ ಅರ್ಥವಿದೆಯೇ ?”.
(ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂಶೋಧನಾತ್ಮಕ ಐತಿಹಾಸಿಕ ಹಿನ್ನೆಲೆ ಮತ್ತು ಮರೆಯಾದ ಸಿದ್ಧಿವಿನಾಯಕ ದೇವರು / ಪುಟ 41 / ಡಾ. ಮ. ಸು. ಅಚ್ಯುತ ಶರ್ಮ / ಸತ್ಯಶೋಧ ಪ್ರಕಾಶನ ಮಂಗಳೂರು / 1970)

ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞರ ಸಂಶೋಧನಾತ್ಮಕ ಬರೆಹಗಳು, ಅದ್ವೈತ ಹಾಗೂ ದ್ವೈತ ಸಂಬಂಧವಾದ ಗ್ರಂಥಗಳ ಆಧಾರಗಖಿಂದ ಒಂದೆರಡು ವಿಷಯಗಳನ್ನು ಸ್ಪಷ್ಟವಾಗಿ ಹೇಳಬಹುದು. ಧರ್ಮಸ್ಥಳದಲ್ಲಿ (ಕುಡುಮಪುರ) ಮೂಲದಲ್ಲಿದ್ದುದು ಬೌದ್ಧ ಮಂದಿರ, ನಾಥ ಪಂಥಕ್ಕೆ ಸೇರಿದ ಶ್ರೀ ಮಂಜುನಾಥ ದೇವರು. ಆದಿ ಶಂಕರರ ಕಾಲದಲ್ಲಿ ಅಥವಾ ಆದಿ ಶಂಕರರ ಕಾಲದ ನಂತರ, ವಾದಿರಾಜರ ಕಾಲಕ್ಕಿಂತ ಮೊದಲು ಅದ್ವೈತ ಮತಾಚಾರ್ಯರು ನಾಥ ಪಂಥದ ಶ್ರೀ ಮಂಜುನಾಥ ದೇವರನ್ನು ಅದ್ವೈತ ತತ್ವ ಸಂಪ್ರದಾಯಗಳಿಗೆ ಅನುಗುಣವಾಗಿ ಶ್ರೀ ಮಂಜುನಾಥೇಶ್ವರ (ಶಿವಾಲಯ) ದೇವಸ್ಥಾನವನ್ನಾಗಿ ಪರಿವರ್ತಿಸಿದರು.
ದ್ವೈತ ಮತಾನುಯಾಯಿಯಾದ ವಾದಿರಾಜರು ಶಿವಲಿಂಗದ ಮೇಲೆ ಶ್ರೀನೃಸಿಂಹ ಸಾಲಿಗ್ರಾಮವನ್ನು ಇರಿಸಿ ದ್ವೈತ ತತ್ವ ಸಂಪ್ರದಾಯಕ್ಕೆ ಅನುಸಾರವಾಗಿ ವೈಷ್ಣವ ದೇವಸ್ಥಾನವನ್ನಾಗಿ ಪರಿವರ್ತಿಸಿದರು.

ವಾದಿರಾಜರು ಧರ್ಮಸ್ಥಳಕ್ಕೆ ಸಮೀಪದ ಹಳ್ಳಿಯೊಂದಕ್ಕೆ ಹೋಗಿದ್ದಾಗ, ಧರ್ಮಸ್ಥಳದ ಜೈನ ಮನೆತನದ ಅಧಿಕಾರಿಗಳು ವಾದಿರಾಜರು ಇರುವಲ್ಲಿಗೆ ಬಂದು ಧರ್ಮಸ್ಥಳಕ್ಕೆ ಆಮಂತ್ರಿಸಿದಾಗ, “ನಿಮ್ಮ ಸ್ಥಳವು ಕೇವಲ ಭೂತಾಲಯವಾದುದರಿಂದ, ಯಾವ ದೇವರ ಸನ್ನಿಧಾನವೂ ಇಲ್ಲದುದರಿಂದ ನಾವಲ್ಲಿಗೆ ಬರುವಂತಿಲ್ಲ.” ಎಂದು ಹೇಳಲು ಮುಖ್ಯ ಕಾರಣವೇ, ದ್ವೈತ ಯತಿಗಳು ಶಿವನನ್ನು ದೇವರೆಂದು ಒಪ್ಪದೇ ಇರುವುದರಿಂದಾಗಿದೆ.

ಈ ಮೇಲಿನ ವಿಷಯಕ್ಕೆ ,
ಒ. ಪಿ. ನಂ. 105ರ 1949ರ ಜಡ್ಜ್ ಮೆಂಟ್ ಮೇಲೆ ಹಿಂದು ರಿಲೀಜಿಯಸ್ ಎಂಡೋಮೆಂಟ್ ಕಮಿಶನರ್ ರು ಧರ್ಮಸ್ಥಳ ಹೆಗ್ಗಡೆ ಮೇಲೆ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ವಿಚಾರದಲ್ಲಿ ಬೆಂಗಳೂರು ಹೈಕೋರ್ಟ್ ನಲ್ಲಿ ಮಾಡಿದ ಅಪೀಲ್ ಆರ್. ಎ. ನಂ. 165 – 1957ರ ಮೇಲೆ ತಾರೀಕು 30/08/1968ರಲ್ಲಿ ನೀಡಿದ ಜಡ್ಜ್ ಮೆಂಟ್ ನಲ್ಲಿ ಆರ್. ಡಬ್ಲ್ಯೂ. 11ನೇ ಸಾಕ್ಷಿದಾರ ಉಡುಪಿ ಸೋದೆ ಮಠದ ವಿಶ್ವೋತ್ತಮ ತೀರ್ಥ ಸ್ವಾಮೀಜಿಯವರು ಕೊಟ್ಟ ಹೇಳಿಕೆಯನ್ನು ಗಮನಿಸಬಹುದಾಗಿದೆ.

ಒಟ್ಟಿನಲ್ಲಿ ಖಡಾಖಂಡಿತವಾಗಿ ಹೇಳುವುದಾದರೆ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನವು ಒಂದು ಸಾರ್ವಜನಿಕ ದೇವಸ್ಥಾನವಾಗಿದೆ.

(ಮುಂದುವರಿಯುವುದು)

~ ಶ್ರೀರಾಮ ದಿವಾಣ, ಉಡುಪಿ.

error: No Copying!