ಧರ್ಮಸ್ಥಳ: ಮಾಧ್ವ ಬ್ರಾಹ್ಮಣರ ಗ್ರಂಥಗಳ ಪ್ರಕಾರ, ವಾದಿರಾಜರ ಕಾಲದಲ್ಲಿದ್ದುದು ಭೂತಾಲಯ ಮಾತ್ರವಂತೆ !
ಬಹುತೇಕ ಧಾರ್ಮಿಕ ಮುಂದಾಳುಗಳು (ಮುಖ್ಯವಾಗಿ, ಧಾರ್ಮಿಕ ತತ್ವ ಸಿದ್ಧಾಂತಗಳ, ಮತ ಪಂಥಗಳ ಪ್ರತಿಪಾದಕರು ಮತ್ತು ದೇವಸ್ಥಾನಗಳ ಆಡಳಿತದಾರರು ಹಾಗೂ ಅರ್ಚಕರು) ತಮ್ಮ ತಮ್ಮ ಸ್ವಾರ್ಥ ಸಾಧನೆಗಾಗಿ ಕಟ್ಟು ಕಥೆಗಳನ್ನು ಹರಿಯಬಿಡುವುದು, ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಇತ್ಯಾದಿ ಮಾಡುವುದು ಲಾಗಾಯ್ತಿನಿಂದಲೂ ನಡೆದುಕೊಂಡುಬಂದಿದೆ. ಇದಕ್ಕೆ ಪ್ರಮುಖ ಕಾರಣ, ಆರ್ಥಿಕ ಸ್ವಾರ್ಥ ಮತ್ತು ಭೂ ಸ್ವಾರ್ಥ ಹಾಗೂ ಇದು ಮನೆತನದ್ದು, ಕುಟುಂಬದ್ದು, ಜಾತಿಯವರದ್ದು ಆಗಿ ನಮ್ಮ ವಶದಲ್ಲಿಯೇ ಉಳಿದುಕೊಂಡಿರಬೇಕು ಎಂಬ ಸಂಕುಚಿತ ಸ್ವಾರ್ಥ.
ಧರ್ಮಸ್ಥಳ ದೇವಸ್ಥಾನವೂ ಈ ರೀತಿಯ ಸ್ವಾರ್ಥದಿಂದ ಹೊರತಾಗಿಲ್ಲ. ಹೆಗ್ಗಡೆಗಳು ಹಾಗೂ ಮಾಧ್ವ ಬ್ರಾಹ್ಮಣ ಆಚಾರ್ಯರುಗಳ ನಡುವೆಯೂ ದೇವಸ್ಥಾನ ನಿರ್ಮಾಣ ಮತ್ತು ಮಂಜುನಾಥೇಶ್ವರ ಲಿಂಗದ ವಿಷಯದಲ್ಲಿ ವಾದ – ಪ್ರತಿವಾದಗಳು ನಡೆದಿವೆ. ಮಾತ್ರವಲ್ಲ, ಗೊಂದಲಗಳನ್ನೂ ಹುಟ್ಟುಹಾಕುವ ಕೆಲಸವನ್ನೂ ಇವರು ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಬೌದ್ಧ ಮಂದಿರ ಇತ್ತು ಮತ್ತು ನಾಥ ಪಂಥದ ಕೇಂದ್ರವಾಗಿತ್ತು ಎಂಬುದನ್ನು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞರು ದಾಖಲಿಸಿದ್ದಾರೆ. ಆಚಾರ್ಯ ಶಂಕರರಿಗೆ ಸಂಬಂಧಿಸಿದ ಗ್ರಂಥಗಳಲ್ಲಿ ಮಂಜುನಾಥೇಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಿರುವುದು ಸ್ವತಹಾ ಶಂಕರಾಚಾರ್ಯರೇ ಎಂದೇ ಬರೆಯಲಾಗಿದೆ. ಮಾಧ್ವ ಬ್ರಾಹ್ಮಣ ಮಠಾಧೀಶರು, ವಿದ್ವಾಂಸರ ಪ್ರಕಾರ, ಇಲ್ಲಿ ಮಂಜುನಾಥೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಿ ದೇವಸ್ಥಾನವನ್ನು ನಿರ್ಮಿಸಿದ್ದೇ ವಾದಿರಾಜರು !
ಉಡುಪಿಯ ಮಾಧ್ವ ಮಠಗಳಲ್ಲಿ ಒಂದಾದ ಸೋದೆ ಮಠಾಧೀಶರಾಗಿದ್ದವರಲ್ಲಿ ಒಬ್ಬರು ವಾದಿರಾಜ ಸ್ವಾಮೀಜಿ. ಇವರ ಕಾಲ ಕ್ರಿ. ಶ 1480 – 1600. ಮಾಧ್ವರ ಸಂಬಂಧವಾದ ವಾದಿರಾಜರಿಗೆ ಸಂಬಂಧಿಸಿದ ಗ್ರಂಥಗಳಲ್ಲೆಲ್ಲ, ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ಲಿಂಗವನ್ನು ನೂತನವಾಗಿ ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಾಣವನ್ನೂ ಮಾಡಿಸಿದವರು ವಾದಿರಾಜರು ಎಂದೇ ಬರೆಯಲಾಗಿದೆ.
ಜೈನ ಮನೆತನದ ಯಜಮಾನನ ಕೋರಿಕೆಗೆ ಮೆಚ್ಚಿದ ವಾದಿರಾಜರು, “ನಿಮ್ಮ ಸ್ಥಳವು ಕೇವಲ ಭೂತಾಲಯವಾದುದರಿಂದ, ಯಾವ ದೇವರ ಸನ್ನಿಧಾನವೂ ಇಲ್ಲದುದರಿಂದ ನಾವಲ್ಲಿಗೆ ಬರುವಂತಿಲ್ಲ. ಮತ್ತು ನಮ್ಮ ಸಂಸ್ಥಾನದ ದೇವರ ಪೂಜೆಯನ್ನು ಅಲ್ಲಿ ಮಾಡುವಂತಿಲ್ಲ”.
(ಭಾವಿ ಸಮೀರ ಶ್ರೀಮದ್ವಾದಿರಾಜ ಗುರುಸಾರ್ವಭೌಮರು / ಪಂಡಿತ ಅಡ್ಡೆ ವೇದವ್ಯಾಸಾಚಾರ್ಯ / 1965) ಎಂದರಂತೆ.
ವಾದಿರಾಜರು ಸಂಚರಿಸುತ್ತಾ ಧರ್ಮಸ್ಥಳದ ಸಮೀಪದ ಹಳ್ಳಿಯೊಂದಕ್ಕೆ ಬಂದರಂತೆ. ಯಾವ ಹಳ್ಳಿ ಎಂದು ಬರೆಯಲಾಗಿಲ್ಲ. ಆ ಕಾಲದಲ್ಲಿ ಧರ್ಮಸ್ಥಳದಲ್ಲಿ ದೇವಸ್ಥಾನವೇ ಇರಲಿಲ್ಲವಂತೆ. ಆದರೆ, ಆ ಕಾಲದಲ್ಲಿ ಆ ಸ್ಥಳವು ಅಣ್ಣಪ್ಪ ಎಂಬಿವೇ ಮೊದಲಾದ ಭೂತಗಳ ಸ್ಥಾನ ಮಾತ್ರವೇ ಆಗಿದ್ದಿತ್ತಂತೆ. ಈ ಸ್ಥಳದ ಅಧಿಕಾರವು ಜೈನ ಸಂಪ್ರದಾಯದ ಮನೆತನದವರ ಅಧೀನದಲ್ಲಿತ್ತಂತೆ. ವಾದಿರಾಜರು ಸಮೀಪದ ಹಳ್ಳಿಗೆ ಬಂದ ಸಂದರ್ಭದಲ್ಲಿ, ಈ ಜೈನ ಮನೆತನದ ಯಜಮಾನನು ಬ್ರಾಹ್ಮಣರನ್ನು ಕೂಡಿಕೊಂಡು ವಾದಿರಾಜರ ಬಳಿಗೆ ಬಂದು, “ನಾಳೆಯ ದಿನ ನಮ್ಮೂರಿಗೆ ದಿಗ್ವಿಜಯ ಮಾಡಿ, ಅಲ್ಲೊಂದು ದಿನದ ಪೂಜೆಯನ್ನು ಮಾಡಿ ನಮ್ಮನ್ನುದ್ಧರಿಸಬೇಕು” ಎಂದು ಕೇಳಿಕೊಂಡರಂತೆ.
(ಮುಂದುವರಿಯುವುದು)
~ ಶ್ರೀರಾಮ ದಿವಾಣ , ಉಡುಪಿ.