Spread the love

ಧರ್ಮಸ್ಥಳ: ನಾಥಪಂಥದ ಮಂಜುನಾಥ ಮಂದಿರ ಶಂಕರಾಚಾರ್ಯರ ಕಾಲದಲ್ಲಿ ಮಂಜುನಾಥೇಶ್ವರ ದೇವಸ್ಥಾನವಾಯಿತು

ಧರ್ಮಸ್ಥಳದಲ್ಲಿದ್ದ ಬೌದ್ಧ ಮಂದಿರ , ನಾಥ ಪಂಥದ ಶ್ರೀ ಮಂಜುನಾಥ (ಶ್ರೀ ಮಂಜುಶ್ರೀ) ದೇವರ ಮಂದಿರವು ಶಂಕರಾಚಾರ್ಯರ ಕಾಲದಲ್ಲಿ ಶೈವರ ಶ್ರೀ ಮಂಜುನಾಥೇಶ್ವರ ದೇವಸ್ಥಾನವಾಗಿ ಪರಿವರ್ತಿಸಲ್ಪಟ್ಟಿತು ಎಂಬುದು ಒಪ್ಪಬಹುದಾದ ವಾಸ್ತವವಾಗಿದೆ. ಇಲ್ಲಿ ಸ್ವತಹಾ ಶಂಕರಾಚಾರ್ಯರೇ ಮಂಜುನಾಥೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದರು ಎಂಬುದು ಒಂದು ಪ್ರತೀತಿಯಾಗಿದೆ.

ಜಯಪುರ ಶ್ರೀ ವಿಶ್ವನಾಥ ರಾಜ ಗೋಪಾಲ ಶರ್ಮ ಎಂಬವರ ಸಂಪಾದಕತ್ವದಲ್ಲಿ ಹಿಂದಿ ಭಾಷೆಯಲ್ಲಿ ಪ್ರಕಟಿಸಲ್ಪಟ್ಟ ಅತ್ಯಂತ ಹಳೆಯ ಪುಸ್ತಕವಾದ “ಶ್ರೀ ಮಜ್ಜಗದ್ಗುರು ಶಂಕರ ಮಠಗಳ ವಿಮರ್ಶೆ”ಯ ಅಧ್ಯಾಯ 6ರ ಪುಟ 63ರಲ್ಲಿ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಲಿಂಗವನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪನೆ ಮಾಡಿದರು ಎಂಬ ಬಗ್ಗೆ ಮಾಹಿತಿ ಇದೆ.

“ಕರ್ನಾಟಕ ಮೆ ಧರ್ಮಸ್ಥಲ ಏಕ ಪವಿತ್ರ ತೀರ್ಥ ಸ್ಥಾನ ಹೈ | ಯಹಾಂ ಕಾ ಪುರಾತನ ಪ್ರಸಿದ್ಧ ಮಂದಿರ ಮಂಜುನಾಥೇಶ್ವರ ಕಾ ಹೈ || ಯಹ ದಕ್ಷಿಣ ಕನ್ನಡ ಜಿಲ್ಲೆ ಮೆ ಹೈ | ಪೂರ್ವ ಕಾಲ ಮೆ ಇಸ ಮಂದಿರ ಮೆ ಮಂಜುನಾಥೇಶ್ವರ ಲಿಂಗ ಕೀ ಸ್ಥಾಪನಾ ಆದಿ ಶಂಕರಾಚಾರ್ಯ ನೇ ಕೀ ಥೀ | (ಪುಟ 63 / ಶ್ರೀ ಮಜ್ಜಗದ್ಗುರು ಶಂಕರ ಮಠಗಳ ವಿಮರ್ಶೆ)

ಧರ್ಮಸ್ಥಳದಲ್ಲಿರುವುದು ಲಿಂಗ ಅಥವಾ ಶಿವಲಿಂಗ. “ಹರಿ ಸರ್ವೋತ್ತಮ” ಎಂಬ ತತ್ವದ ಮಾಧ್ವ ಬ್ರಾಹ್ಮಣರು ಹೊಸದಾಗಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಮಂಜುನಾಥೇಶ್ವರ ಎಂಬ ನೂತನವಾದ ದೇವಸ್ಥಾನವನ್ನು ಎಲ್ಲಿಯೂ ಹೊಸದಾಗಿ ನಿರ್ಮಿಸುವ ಕೆಲಸಕ್ಕೆ ಕೈ ಹಾಕಲಾರರು. ಶಂಕರಾಚಾರ್ಯರ ಅದ್ವೈತದ ವಿರುದ್ಧ ದ್ವೈತದ ಮಧ್ವಾಚಾರ್ಯರು, ವಾದಿರಾಜರು ನಡೆಸಿದ ದಾಳಿ, ಆಕ್ರಮಣ, ವಾಗ್ವಾದ, ಅವಹೇಳನ ಇತ್ಯಾದಿಗಳ ಬಗ್ಗೆ ಕನಿಷ್ಠ ಅರಿವು ಇರುವ ಯಾರೊಬ್ಬರೂ ಮಾಧ್ವರು (ದ್ವೈತಿಗಳು / ವಾದಿರಾಜರು) ಧರ್ಮಸ್ಥಳ ಗ್ರಾಮದಲ್ಲಿ ಹೊಸದಾಗಿ ಶ್ರೀ ಮಂಜುನಾಥೇಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.

ಹಿಂದಿನಿಂದಲೇ ಇದ್ದ ಲಿಂಗವನ್ನು ಬದಲಾಯಿಸಲು ಸಾಧ್ಯವಾಗದೇ ಇದ್ದಾಗ ಮಾತ್ರ ಪುನಃ ಪ್ರತಿಷ್ಠಾಪನೆ ಮಾಡಿರುತ್ತಾರಷ್ಟೆ. ಈ ಎಲ್ಲಾ ಕಾರಣಗಳಿಂದಾಗಿ, ಒಂದು ವಿಷಯವನ್ನು ಮಾತ್ರ ಯಾವುದೇ ಅನುಮಾನಕ್ಕೆ ಎಡೆ ಇಲ್ಲದಂತೆ ಸ್ಪಷ್ಟವಾಗಿ ಒಪ್ಪಿಕೊಳ್ಳಬಹುದು. ಅದೇನೆಂದರೆ, ಮಧ್ವಾಚಾರ್ಯರಿಗಿಂತ ಹಿಂದೆ ಇದ್ದ ಅದ್ವೈತ ಮತದ ಒಬ್ಬರು ಶಂಕರಾಚಾರ್ಯರು ಧರ್ಮಸ್ಥಳ ಗ್ರಾಮದಲ್ಲಿದ್ದ ಬೌದ್ಧ ಮಂದಿರ ಅಥವಾ ನಾಥ ಪಂಥದ ಶ್ರೀ ಮಂಜುನಾಥ ದೇವರ ಮಂದಿರವನ್ನು ಅದ್ವೈತ ತತ್ವಕ್ಕನುಗುಣವಾಗಿ ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನಾಗಿ ಪರಿವರ್ತಿಸಿ ಪುನಃ ಪ್ರತಿಷ್ಠಾಪನೆ ಮಾಡಿದರು.

(ಮುಂದುವರಿಯುವುದು)

~ ಶ್ರೀರಾಮ ದಿವಾಣ , ಉಡುಪಿ.

error: No Copying!