ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟ, ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ, ಧರ್ಮಸ್ಥಳ ಗ್ರಾಮದ ಪಾಂಗಾಳ ಮನೆಯ ಸೌಜನ್ಯಾ (17)ಳನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಪರಮಪಾಪಿಗಳಾದ ನಾಲ್ಕೈದು ಮಂದಿಯಿದ್ದ ರಕ್ಕಸರ ತಂಡ ಬಲವಂತವಾಗಿ ಅಪಹರಿಸಿದ್ದು 2012ರ ಅಕ್ಟೋಬರ್ 9ರಂದು ಅಪರಾಹ್ನ. ಮರುದಿನ, ಅಂದರೆ ಅಕ್ಟೋಬರ್ ಹತ್ತರಂದು ಪೂರ್ವಾಹ್ನ ರೇಪ್ & ಮರ್ಡರ್ ಆದ ಸ್ಥಿತಿಯಲ್ಲಿ ಈಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟ ಸಮೀಪದ ಕಾಲುಸಂಕ ಎಂಬಲ್ಲಿ ಪತ್ತೆಯಾಯಿತು.
ಅಪ್ರಾಪ್ತ ಪ್ರಾಯದ ಬಾಲಕಿಯ ಮೇಲೆ ನಡೆದ ಈ ಭಯಾನಕ ಕ್ರೌರ್ಯವನ್ನು ಮೊತ್ತಮೊದಲು ಅಧಿಕೃತವಾಗಿ ಮತ್ತು ಬಹಿರಂಗವಾಗಿ ಖಂಡಿಸಿದವರು ಹಾಗೂ ತಹಶೀಲ್ದಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದವರು ಬೆಳ್ತಂಗಡಿಯ ಜನವಾದಿ ಮಹಿಳಾ ಸಂಘಟನೆಯವರು (JMS). ಈ ಸಂಘಟನೆಯ ಪ್ರಮುಖರು ಅಕ್ಟೋಬರ್ 12ರಂದು ನಿಯೋಗದ ಮೂಲಕ ತೆರಳಿ ಈ ಮನವಿಯನ್ನು ಸಲ್ಲಿಸಿದ್ದರು.
ಅಕ್ಟೋಬರ್ 12ರಂದು ಮನವಿ ಸಲ್ಲಿಸಿದ ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ಬೆಳ್ತಂಗಡಿ ತಾಲೂಕು ಸಮಿತಿಯ ಪದಾಧಿಕಾರಿಗಳಾಗಿದ್ದ ಕಿರಣ ಪ್ರಭ, ಶ್ರೀಮತಿ ಕುಮಾರಿ, ನೆಬಿಸಾ, ಶ್ರೀಮತಿ ಅಪ್ಪಿ, ಎಸ್ ಎಫ್ ಐ ನಾಯಕಿ ದೀಕ್ಷಾ, ಪುಷ್ಪರಾಜ್, ಡಿ ವೈಎಫ್ಐ ನಾಯಕ ಲೋಕೇಶ್ ಮೊದಲಾದವರಿದ್ದರು. ಆಗ ಡಿವೈಎಫ್ಐ (ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ) ನಾಯಕರಾಗಿದ್ದ ಬಿ. ಎಂ. ಭಟ್ ಅವರೂ JMS ನಿಯೋಗದ ಜೊತೆಗಿದ್ದರು.
ಸೌಜನ್ಯಾಳ ಮೃತದೇಹ ಸಿಕ್ಕಿದ ದಿನ ಸಹಜವಾಗಿಯೇ ಒಂದೆರಡು ಸಾವಿರ ಮಂದಿ ಅಲ್ಲಿಗೆ ಬಂದು ಮೃತದೇಹವನ್ನು ನೋಡಿರಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಿಗಳೇ ಆಗಿದ್ದ ಮಲ್ಲಿಕ್ ಜೈನ್ (ಸೌಜನ್ಯಾಳ ತಾಯಿ ಕುಸುಮಾವತಿ ಗೌಡ ಅವರ ಹೇಳಿಕೆಯ ಪ್ರಕಾರ, ಈ ಮಲ್ಲಿಕ್ ಜೈನ್ ಸೌಜನ್ಯಾ ಪ್ರಕರಣದ ಶಂಕಿತ ಆರೋಪಿಯಾಗುತ್ತಾನೆ) ಹಾಗೂ ರವಿ ಪೂಜಾರಿ ಹಾಗೂ ಇತರರು ಅಕ್ಟೋಬರ್ 11ರಂದು ಅಮಾಯಕ ಸಂತೋಷ್ ರಾವ್ (ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ) ಎಂಬವರನ್ನು ಹಿಡಿದು ಗಂಭಿರವಾಗಿ ಹಲ್ಲೆ ನಡೆಸಿ, ರಾತ್ರಿಯಿಡೀ ತಮ್ಮ ವಶದಲ್ಲಿಯೇ ಇರಿಸಿಕೊಂಡು, ಅಕ್ಟೋಬರ್ 12ರಂದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು.
ಅಕ್ಟೋಬರ್ 12ರಂದು ಸಹ ಧರ್ಮಸ್ಥಳದಲ್ಲಿರುವ ಪೊಲೀಸ್ ಉಪ ಠಾಣೆ ಮತ್ತು ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆ ಮುಂಭಾಗದಲ್ಲಿ ನೂರಾರು ಜನ ಜಮಾಯಿಸಿದ್ದರು. ಹೀಗೆ ಜಮಾಯಿಸಿದವರು ಅಂದು ಪೊಲೀಸರು ಹೇಳಿದ್ದನ್ನೇ ಮರುಮಾತಿಲ್ಲದೆ, ಯೋಚನೆಗೆ ಕೆಲಸಕೊಡದೆ, ಢಾಳಾಗಿ ನಂಬಿಕೊಂಡವರಾಗಿದ್ದರು. ಇವರು ಆಕ್ರೋಶಕ್ಕೆ ಒಳಗಾಗಿ ಪೊಲೀಸರಲ್ಲಿ ಕೇಳುತ್ತಿದ್ದುದು: ರೇಪಿಸ್ಟ್ ಸಂತೋಷನನ್ನು “ನಮ್ಮ ಕೈಗೆ ಕೊಡಿ” ಎಂದಾಗಿತ್ತು. ಇಷ್ಟು ಬಿಟ್ಟರೆ ಅಂದು ಅಲ್ಲಿ ಸೇರಿದ ಜನರಲ್ಲಿ ಬೇರೆ ಯಾವುದೇ ಡಿಮ್ಯಾಂಡ್ ಇರಲಿಲ್ಲ.
ನಿಜವಾದ ರೇಪಿಸ್ಟರು ಇಂಥವರೇ ಎಂದು ಆನಂತರದ ದಿನಗಳಿಂದ ಇಂದಿನವರೆಗೂ ಸೌಜನ್ಯಾಳ ತಾಯಿ ಬಹಿರಂಗವಾಗಿಯೇ ಕೆಲವರ ಹೆಸರನ್ನು ಹೇಳಿಕೊಂಡು ಬಂದಿದ್ದಾರೆ. ಇವರೆಲ್ಲರೂ ಅಂದಿನಿಂದ ಇಂದಿನವರೆಗೂ ಧರ್ಮಸ್ಥಳದಲ್ಲಿಯೇ ಇದ್ದಾರೆ. ಅಂದು ಜಮಾಯಿಸಿ ಸಂತೋಷ್ ರಾವ್ ರನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದವರಲ್ಲಿ ಯಾರಲ್ಲೂ ಸಹ ಅಂದಿನ ಆ ಆಕ್ರೋಶ ಈಗ ಇಲ್ಲ. ಈಗ ಯಾರಲ್ಲೂ ಆರೋಪಿಗಳನ್ನು ಕೇಳುವ ಅಗತ್ಯ ಕೂಡಾ ಇಲ್ಲ. ಆದರೆ……
ಸೌಜನ್ಯಾ ನ್ಯಾಯಪರ ಹೋರಾಟದ ಮುಂದುವರಿಕೆಯಾಗಿ ಡಿಸೆಂಬರ್ 17 ರಂದು ಜನವಾದಿ ಮಹಿಳಾ ಸಂಘಟನೆಯು ಬೆಳ್ತಂಗಡಿಯ ಹಳೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.
ಈ ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿಯ ಪ್ರಮುಖ ನಾಯಕಿಯರಲ್ಲದೆ ಪುಷ್ಪಾ, ಗೀತಾ, ಸುಂದರಿ, ಜಯಶ್ರೀ, ದೇವಕಿ ಮುಂತಾದವರೂ ಭಾಗವಹಿಸಿದ್ದರು. ಮಾತ್ರವಲ್ಲ ಜಿಲ್ಲಾ ಸಮಿತಿಯ ನಾಯಕಿಯಾಗಿದ್ದ ಪ್ರಮೀಳಾ ಅವರೂ ಮಂಗಳೂರಿನಿಂದ ಆಗಮಿಸಿ ಉಪಸ್ಥಿತರಿದ್ದರು.
ಸೌಜನ್ಯಾ ಪ್ರಕರಣ ನಡೆದ 2012ರ ಮೂರು ತಿಂಗಳ ಅವಧಿಯಲ್ಲಿ ಬೆಳ್ತಂಗಡಿಯಲ್ಲಿ ಜನವಾದಿ ಮಹಿಳಾ ಸಂಘಟನೆ ಹೊರತುಪಡಿಸಿ ಬೇರೆ ಯಾವುದೇ ಒಂದು ಸಂಘಟನೆಯೂ ಸೌಜನ್ಯಾ ನ್ಯಾಯಪರ ಹೋರಾಟ ನಡೆಸಿದ್ದೇ ಇಲ್ಲ.
2013ರಲ್ಲಿ ಸೌಜನ್ಯಾ ನ್ಯಾಯಪರ ಹೋರಾಟ ನಡೆದದ್ದು ಹೇಗೆ, ಯಾರೆಲ್ಲಾ ನಡೆಸಿದರು, ಯಾರು ಎಂಟ್ರಿ ಕೊಟ್ಟರು, ಯಾಕೆ ಎಂಟ್ರಿ ಕೊಟ್ಟರು ಎಂಬಿತ್ಯಾದಿ ಬರೆಯುವುದಾದರೆ ಹಲವಾರು ವಿಷಯಗಳಿವೆ. ಎಲ್ಲಾ ವಾಸ್ತವಾಂಶಗಳನ್ನೂ ಬರೆಯಬೇಕಾ, ಬೇಡವಾ, ಎಷ್ಟು ಬೇಕೋ ಅಷ್ಟೇ ಬರೆದರೆ ಸಾಕಲ್ವಾ ಎಂಬುದಷ್ಟೇ ಈಗ ಕಾಡುವ ಪ್ರಶ್ನೆ…
(ಮುಂದುವರಿಯುವುದು)
~ ಶ್ರೀರಾಮ ದಿವಾಣ
30/08/2023