ಕೊನೆಗೂ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪದ್ಮಲತಾಳ ರೇಪ್ & ಮರ್ಡರ್ ಪ್ರಕರಣವನ್ನು ರೇಪಿಸ್ಟ್ ರಕ್ಕಸರು ಹಾಗೂ ಅಂದಿನ ರಾಮಕೃಷ್ಣ ಹೆಗಡೆ & ಬಿ. ರಾಚಯ್ಯರ ಜನತಾ ಪಕ್ಷದ ಸರಕಾರ ಮುಚ್ಚಿಹಾಕಲು ಯಶಸ್ವಿಯಾಯಿತು. ರೇಪ್ & ಮರ್ಡರ್ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಅಂದಿನ ಜನತಾ ಪಕ್ಷದ ಸರಕಾರ ಅನುಸರಿಸಿದ ಅದೇ ಮಾರ್ಗವನ್ನು ದಶಕದ ಹಿಂದೆ ಬಿಜೆಪಿ ಸರಕಾರ ಅನುಸರಿಸಿತು. ಅದೇ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಗ್ಯಾಂಗ್ ರೇಪ್ & ಮರ್ಡರ್ ಪ್ರಕರಣವನ್ನು ಡಿ. ವಿ. ಸದಾನಂದ ಗೌಡ ಹಾಗೂ ಆರ್. ಅಶೋಕ್ ಅವರ ಸರಕಾರ ಮುಚ್ಚಿಹಾಕಿತು. ಇದೀಗ ಕಾಂಗ್ರೆಸ್ ಸರಕಾರವೂ ಮತ್ತದೇ ಹಿಂದಿನ ಸರಕಾರಗಳು ಹಿಡಿದ ಹಾದಿಯನ್ನೇ ಅನುಸರಿಸಲು ಹೆಣಗಾಡುತ್ತಿರುವಂತೆ ಕಾಣುತ್ತದೆ.
ಸೌಜನ್ಯಾ ಪ್ರಕರಣದ ಕೋರ್ಟ್ ತೀರ್ಪಿನೊಂದಿಗೆ ಮತ್ತೆ ಹೋರಾಟ ಭುಗಿಲೆದ್ದಿರುವುದು ಈ ಬಾರಿಯ ಮತ್ತು ಈ ಪ್ರಕರಣದ ಒಂದು ಮೈಲಿಗಲ್ಲು. ಹೋರಾಟದ ಕಾವು ಏರುತ್ತಿರುವಂತೆಯೇ ಮತ್ತು ಹೋರಾಟವನ್ನು ಮತ್ತು ಪ್ರಕರಣವನ್ನು ಹಳ್ಳ ಹಿಡಿಸಲು ರೇಪಿಸ್ಟರು ಹಾಗೂ ಸುಪಾರಿ ಕಿಲ್ಲರ್ ಗಳು ಮತ್ತೆ ತಮ್ಮ ವಿಧವಿಧ ನಾಟಕಗಳನ್ನು , ಹುನ್ನಾರಗಳನ್ನು ಆರಂಭಿಸಿದ್ದಾರೆ. ಈ ಸಲ ರೇಪಿಸ್ಟರು ಸೌಜನ್ಯಾಳನ್ನು ಕೊಲ್ಲಲು ಉಪಯೋಗಿಸಿದ್ದು ಮಾತ್ರ “ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಉಜಿರೆ” ಎಂದು ಬರೆದಿದ್ದ ಕಾಲೇಜು ಟ್ಯಾಗ್ ನ್ನು ಎಂಬುದು ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶ.
ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಇಲ್ಲಿ ಹೆಚ್ಚೇನೂ ಬರೆಯುವ ಅಗತ್ಯ ಇಲ್ಲ. ಅದೀಗಾಗಲೇ ಬಹುತೇಕ ಯೂಟ್ಯೂಬ್ ಗಳಲ್ಲಿ, ವೆಬ್ ಸೈಟ್ ಗಳಲ್ಲಿ ಬಂದಿದೆ. ಆದರೆ ಇದೊಂದು “ಗ್ಯಾಂಗ್ ರೇಪ್” ಎಂಬ ವಿಷಯ ಮಾತ್ರ ಸಾಕಷ್ಟು ಫೋಕಸ್ ಆಗದಿರುವುದು ಉಲ್ಲೇಖಿಸಬೇಕೆನಿಸುತ್ತಿದೆ. ಮಾತ್ರವಲ್ಲ, ಈ ಗ್ಯಾಂಗ್ ರೇಪ್ ನಡೆದುದೆಲ್ಲಿ ಎಂಬ ಗಂಭೀರ ಪ್ರಶ್ನೆಯೊಂದಿಗೆ, ಸೌಜನ್ಯಾ ಗ್ಯಾಂಗ್ ರೇಪ್ & ಮರ್ಡರ್ ನ ಬಳಿಕವೂ ಈ ಪ್ರಕರಣದ ಪ್ರಮುಖ ಸಾಕ್ಷಿದಾರರಾದ ಮೂವರು ಕೊಲೆಗೀಡಾದುದು, ಈ ಮೂರೂ ಪ್ರಕರಣಗಳನ್ನೂ ಅಪಘಾತ ಮತ್ತು ಆತ್ಮಹತ್ಯೆಗಳೆಂದು ಪೊಲೀಸರು ಮತ್ತೆ ಮುಚ್ಚಿ ಹಾಕುವ ತಮ್ಮ ಕ್ರೌರ್ಯವನ್ನು ಮುಂದುವರಿಸಿರುವುದು ನಿಜಕ್ಕೂ ಆತಂಕಕಾರಿಯಾದುದೇ ಹೌದು. ಇವುಗಳ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗದಿರುವುದು, ಹೀಗೆ ಕೊಲೆಯಾದ ಮೂವರಿಗಾಗಿ ಯಾರೂ ಮರುಗದಿರುವುದು, ನ್ಯಾಯ ಕೇಳುವ ಕಡೆಗೆ ಯಾರೂ ಸರಿಯಾಗಿ ಗಮನಹರಿಸದಿರುವುದು ವಿಷಾದಿಸಲೇಬೇಕಾದ ವಿಷಯ.
ಸೌಜನ್ಯ ಪ್ರಕರಣದೊಂದಿಗೆ ಬೇರೆ ಬೇರೆ ರೀತಿಯಲ್ಲಿ ಲಿಂಕ್ ಇರುವ ಮೂವರೂ 2013ರ ಒಂದೇ ವರ್ಷದಲ್ಲಿ ನಿಗೂಢವಾಗಿ ಸಾವಿಗೀಡಾಗಲು ನಿಜಕ್ಕೂ ಏನು ಕಾರಣವಿರಬಹುದು ?
ಸೌಜನ್ಯ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದ ಕೊಯ್ಯೂರು ಗ್ರಾಮದ ದಿನೇಶ್ ಗೌಡ ವಾಹನ ಅಪಘಾತದಲ್ಲಿ ಮೃತರಾದರು ! ಇವರು ಸಂಚರಿಸುತ್ತಿದ್ದ ಬೈಕ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ ಸಂಸ್ಥೆಯ ಉದ್ಯೋಗಿಯೇ ಆಗಿರುವ ಬಾಲಕೃಷ್ಣ ಪೂಜಾರಿ ಚಲಾಯಿಸುತ್ತಿದ್ದ ಬೊಲೆರೋ ಜೀಪು ಢಿಕ್ಕಿ ಹೊಡೆಯಿತು ! (ಬೆಳ್ತಂಗಡಿ ಪೊಲೀಸ್ ಠಾಣೆ / ಅ. ಕ್ರ. 361 / 2013, ಕಲಂ 279, 302 ಐಪಿಸಿ).
ಕನ್ಯಾಡಿಯ ರವಿ ಪೂಜಾರಿ (25) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡನಂತೆ ! (ಬೆಳ್ತಂಗಡಿ ಪೊಲೀಸ್ ಠಾಣೆ / ಯುಡಿಆರ್ ನಂಬ್ರ 23/2013, ಕಲಂ 174 ಸಿ ಆರ್ ಪಿ ಸಿ).
ಸೌಜನ್ಯಾಳ ತಾಯಿ ಕುಸುಮಾವತಿ ಅವರು ತನ್ನ ಮಗಳನ್ನು ರೇಪ್ ಮಾಡಿದವರು ಇವರೇ ಎಂದು ಕಳೆದ ಒಂದು ದಶಕದಿಂದ ಹೇಳಿಕೊಂಡು ಬರುತ್ತಿರುವ ಹೆಸರುಗಳಲ್ಲಿ ಒಂದಾದ ದೀರಜ್ ಕೆಲ್ಲ ಎಂಬಾತನಿಗೆ ಸೇರಿದ ಮನೆಯಲ್ಲಿ ಕೆಲಸಕ್ಕಿದ್ದ ಮನೆ ಕೆಲಸದ ಮಹಿಳೆ ಶ್ರೀಮತಿ ವಾರಿಜ ಪೂಜಾರ್ತಿ (50) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರಂತಲ್ವ ! (ಬೆಳ್ತಂಗಡಿ ಪೊಲೀಸ್ ಸರ್ಕಲ್ ನ ವೇಣೂರು ಪೊಲೀಸ್ ಠಾಣೆ / ಯುಡಿಆರ್ ನಂಬ್ರ 23 / 2013, ಕಲಂ 174 (ಸಿ) ಸಿ ಆರ್ ಪಿ ಸಿ).
ಮೇಲಿನ ಮೂರೂ ಪ್ರಕರಣಗಳನ್ನೂ ಸೌಜನ್ಯಾ ಗ್ಯಾಂಗ್ ರೇಪ್ & ಮರ್ಡರ್ ಪ್ರಕರಣದ ತನಿಖಾ ಪ್ರಕ್ರಿಯೆಯ ಜೊತೆಗೆ ಸೇರಿಸುವ ಅಗತ್ಯ ಖಂಡಿತಾ ಇದೆ. ಇವರ ಸಾವಿಗೂ (ಕೊಲೆಗಳಿಗೂ !?) ನ್ಯಾಯ ಸಿಗಲೇಬೇಕಾಗಿದೆ. ಸೌಜನ್ಯಾ ಪ್ರಕರಣಕ್ಕೆ ನ್ಯಾಯ ಕೇಳುವಾಗ ಮೇಲಿನ ಮೂವರ ಸಾವಿಗೂ ನ್ಯಾಯ ಕೇಳುವ ಮತ್ತು ಎಸ್ ಐ ಟಿ ಮೂಲಕ ಮರು ತನಿಖೆಗೆ ಒತ್ತಾಯಿಸುವ ಕರ್ತವ್ಯ, ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ.