ಸೌಜನ್ಯ ಹೋರಾಟ: ಪತ್ರಕರ್ತರಿಬ್ಬರ ತೆರೆಮರೆಯ ಕಾರ್ಯಾಚರಣೆ- ಫಿಕ್ಸ್ ಆಯ್ತು ಕೇಮಾರು ಸ್ವಾಮೀಜಿ ಎಂಟ್ರಿ !
ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ ಮತ್ತು ಎಸ್ಎಫ್ಐ ಸಂಘಟನೆಗಳು ಸಂಯುಕ್ತವಾಗಿ ಸೌಜನ್ಯಾ ನ್ಯಾಯಕ್ಕಾಗಿ 2013ರ ಫೆಬ್ರವರಿ 4 ಮತ್ತು 5ರಂದು ಎರಡು ದಿನಗಳ 24 ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿತು. ಹಳೆ ತಹಶೀಲ್ದಾರ್ ಕಚೇರಿ ಮುಂದೆ ನಡೆದ ಈ ಸತ್ಯಾಗ್ರಹದಲ್ಲಿ ಸೌಜನ್ಯಾ ಮನೆಯವರು ಹಾಗೂ ಬಂಧುಗಳೂ ಭಾಗವಹಿಸಿದ್ದರು. ಒಕ್ಟೋಬರ್ 9ರ ಒಳಗಾಗಿ ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಒದಗಿಸಲು ಸರಕಾರ ವಿಫಲವಾದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೋರಾಟ ನಿರತರು ಬಹಿರಂಗವಾಗಿಯೇ ಮುನ್ನೆಚ್ಚರಿಕೆ ನೀಡಿದರು.
ಬಳಿಕ ಈ ಮೇಲಿನ ಸಂಘಟನೆಗಳ ನಾಯಕರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಗ್ರಾಮ ಗ್ರಾಮಗಳಲ್ಲಿ ಸೌಜನ್ಯಾ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಆರು ತಿಂಗಳು ಕಳೆದರೂ ನ್ಯಾಯ ಮರೀಚಿಕೆ ಆಗಿಯೇ ಉಳಿದ ಕಾರಣ, ಮೇಲಿನ ಸಂಘಟನೆಗಳು ಅಕ್ಟೋಬರ್ 9ರಂದು ವಾಹನ ಜಾಥಾದ ಮೂಲಕ ಮಂಗಳೂರಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿತು. ಈ ಕಾರ್ಯಕ್ರಮವೂ ಸರಕಾರಕ್ಕೆ ಒತ್ತಡವಾಗುವ ನಿಟ್ಟಿನಲ್ಲಿ ಯಶಸ್ವಿಯಾಗಿ ನಡೆಯಿತು.
ಅಕ್ಟೋಬರ್ 18, ಸೌಜನ್ಯಾ ಹುಟ್ಟಿದ ದಿನವಾಗಿತ್ತು. ಅಂದು ಸೌಜನ್ಯಾ ನ್ಯಾಯಕ್ಕಾಗಿ ಬೆಳ್ತಂಗಡಿಯಲ್ಲಿ ಎಡ, ದಲಿತ, ಪ್ರಗತಿಪರ, ಜನಪರ ಸಂಘಟನೆಗಳು ಒಟ್ಟಾಗಿ ಉಪವಾಸ ಸತ್ಯಾಗ್ರಹ ನಡೆಸಿದರು. ಇದಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರೂ ಸೇರಿದರು. ಸಿಪಿಐಎಂನ ಮಾಜಿ ಶಾಸಕರಾದ ಕೋಲಾರದ ಜಿ. ವಿ. ಶ್ರೀರಾಮ ರೆಡ್ಡಿ, ಜನಪರ ಹೋರಾಟಗಾರ್ತಿ ಅತ್ರಾಡಿ ಅಮೃತಾ ಶೆಟ್ಟಿ ಸಹಿತ ಹಲವಾರು ಮಂದಿ ನಾಯಕರೂ ಉಪವಾಸದಲ್ಲಿ ಪಾಲ್ಗೊಂಡಿದ್ದರು. ಕೇಮಾರು ಸ್ವಾಮೀಜಿಗಳ ಸಹಿತ ಮೂವರು ಸ್ವಾಮೀಜಿಗಳೂ ಸೌಜನ್ಯಾ ನ್ಯಾಯಕ್ಕಾಗಿ ನಡೆದ ಉಪವಾಸದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಂದರೆ, ಅಕ್ಟೋಬರ್ ನಲ್ಲಿಯೇ ಸೌಜನ್ಯಾ ನ್ಯಾಯಪರ ಹೋರಾಟಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ಬೆಳವಣಿಗೆಯೂ ನಡೆಯಿತು. ಮಂಗಳೂರಿನ ಇಬ್ಬರು ಪತ್ರಕರ್ತರಿಗೆ, ಸೌಜನ್ಯಾ ನ್ಯಾಯಕ್ಕಾಗಿ ಇನ್ನೂ ವ್ಯಾಪಕವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಯುವಂತಾಗಬೇಕು ಹಾಗೂ ಈ ನಿಟ್ಟಿನಲ್ಲಿ ನಾವೂ ಏನಾದರೂ ಮಾಡಬೇಕೆಂದು ಅನಿಸಿತು. ಈ ಪತ್ರಕರ್ತರು ಆಗ; “ಜನಪರ ಸ್ವಾಮೀಜಿ” ಎನಿಸಿಕೊಂಡಿದ್ದ, ಪರಿಸರ ಚಳುವಳಿಯಲ್ಲೂ ಸಕ್ರಿಯರಾಗಿದ್ದ ಕೇಮಾರು ಶ್ರೀ ಸಾಂದಿಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರನ್ನು ಪದೇ ಪದೇ ಸಂಪರ್ಕಿಸಿ ಅವರಿಗೆ ಸೌಜನ್ಯಾ ಪ್ರಕರಣದಲ್ಲಿ ನಡೆದ ಅನ್ಯಾಯಗಳನ್ನು ಮನವರಿಕೆ ಮಾಡಿಕೊಟ್ಟರಲ್ಲದೆ, ಸೌಜನ್ಯಾ ನ್ಯಾಯಕ್ಕಾಗಿ ಅವರೇ ಸ್ವತಹಾ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಹೋರಾಟದ ರಂಗಕ್ಕೆ ಧುಮುಕುವಂತೆ ಪ್ರೇರೇಪಿಸಿದರು. ಈ ಕಾರ್ಯದಲ್ಲಿ ಆ ಇಬ್ಬರೂ ಪತ್ರಕರ್ತರೂ ಯಶಸ್ವಿಯೂ ಆದರು. ಕೇಮಾರು ಸ್ವಾಮೀಜಿಗಳು ಸೌಜನ್ಯಾ ನ್ಯಾಯಕ್ಕಾಗಿ ಗಟ್ಟಿಯಾಗಿ, ವ್ಯಾಪಕವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ನ್ಯಾಯ ಸಿಗುವವರೆಗೂ ನಿರಂತರವಾಗಿ ಧ್ವನಿ ಎತ್ತಲು ನಿರ್ಧರಿಸಿಯೇಬಿಟ್ಟರು.
ಈ ನಿರ್ಧಾರದ ಭಾಗವಾಗಿ, ನವೆಂಬರ್ 2ರಂದು ಸೌಜನ್ಯಾಳ ಮನೆಗೆ ಭೇಟಿ ನೀಡಲು ಕೇಮಾರು ಸ್ವಾಮೀಜಿ ದಿನಾಂಕವನ್ನು ನಿಗದಿಪಡಿಸಿದರು. ಪತ್ರಕರ್ತರಿಗೂ ತಿಳಿಸಿಬಿಟ್ಟರು. ಈ ಮಹತ್ವದ ಬೆಳವಣಿಗೆಯಿಂದಾಗಿ ಧರ್ಮಸ್ಥಳದ ಪಾಳೆಗಾರರಿಗೆ ಎದೆಯಲ್ಲಿ ಅವಲಕ್ಕಿ ಕುಟ್ಟಲು ಶುರುವಾಯಿತು. ವಿಷಯ ತಿಳಿದು ತುಳುನಾಡಿನ ಧಾರ್ಮಿಕ ವಲಯದಲ್ಲಿ ಸಂಚಲನ ಸೃಷ್ಟಿಯಾಯಿತು. ಕೇಮಾರು ಸ್ವಾಮೀಜಿ ಆಗ ಕರಾವಳಿ ಕರ್ನಾಟಕದಲ್ಲಿ ಹಿಂದುತ್ವವಾದಿ ಸಂಘಟನೆಗಳ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಜನಪ್ರಿಯ ಸ್ವಾಮೀಜಿಯಾಗಿದ್ದರು.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ.