Spread the love

ಎಲ್ಲಾ ವಾದ – ಪ್ರತಿವಾದಗಳ ಬಳಿಕ ನಡೆದ ಶಾಲಾ ವಾರ್ಷಿಕೋತ್ಸವದ ದಿನ ರಾತ್ರಿ ವೇದವಲ್ಲಿ ಟೀಚರ್ ಜೊತೆ ತಂಡವೊಂದು ಅಸಭ್ಯವಾಗಿ ನಡೆದುಕೊಂಡ ಘಟನೆಯೂ ನಡೆಯಿತು. ಜೊತೆಗೆ ಬೆದರಿಕೆಯನ್ನೂ ಹಾಕಿತು. ಆದರೂ ಟೀಚರ್ ಸ್ವಲ್ಪವೂ ಎದೆಗುಂದಲಿಲ್ಲ, ಶರಣಾಗತಿಯನ್ನೂ ಘೋಷಿಸಲಿಲ್ಲ. ಮುಂದಿಟ್ಟ ಹೆಜ್ಜೆ ಹಿಂತೆಗೆಯುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಮ್ಯಾನೇಜ್ಮೆಂಟ್ ಮಾನವೀಯತೆಯನ್ನೂ ಮರೆತು, ನ್ಯಾಯವನ್ನೂ ಧಿಕ್ಕರಿಸಿ ವೇದವಲ್ಲಿಯವರನ್ನು ಸೇವೆಯಿಂದ ವಜಾಗೊಳಿಸಿತು.

1979 ಎಪ್ರಿಲ್ ನಾಲ್ಕು. ವೇದವಲ್ಲಿ ಅವರನ್ನು ಪ್ರೀತಿಸಿ ಮದುವೆಯಾದ ಡಾ. ಹೆರಳೆ ಅವರು, ನಿತ್ಯದ ಕರ್ತವ್ಯದಂತೆ ಅಂದು ಬೆಳಗ್ಗೆಯೂ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಮತ್ತೆ ಅವರು ಮನೆಗೆ ಮರಳುವುದು ಸಂಜೆಯೇ.

ಮನೆಯಲ್ಲೀಗ ವೇದವಲ್ಲಿ ಒಬ್ಬರೇ. ಮಧ್ಯಾಹ್ನ ಊಟದ ಸಮಯ. ವೇದವಲ್ಲಿ ಟೀಚರ್ ಅವರನ್ನು ಕೊಲ್ಲಲು ಸುಪಾರಿ ಪಡೆದಿದ್ದ ರಕ್ಕಸರ ಗ್ಯಾಂಗ್, ಏಕಾಏಕಿ ಮನೆಯೊಳಗೆ ನುಗ್ಗಿದೆ. ಕ್ಷಣಮಾತ್ರದಲ್ಲಿ ಸ್ನಾನಗೃಹದೊಳಕ್ಕೆ ಎಳೆದೊಯ್ದಿದೆ. ಹೆಣ್ಣೊಬ್ಬಳ ದೇಹದ ಮೇಲೆ ಕೊಲ್ಲುವ ಮೊದಲು ಯಾವ ನೀಚಾತಿನೀಚ ಕುಕೃತ್ಯವನ್ನೆಸಗಬಹುದೋ ಅದನ್ನೆಸಗಿದೆ. ಕೆಲಸ ಮುಗಿಸಿದ ಬಳಿಕ ಪೆಟ್ರೋಲ್ ಸುರಿದು ಬೆಂಕಿಹಚ್ಚಿಬಿಟ್ಟಿದ್ದಾರೆ ನರಾಧಮರು…

ಈ ರಾಕ್ಷಸೀ ಕುಕೃತ್ಯವನ್ನು ಮನೆಯ ಹೊರಗಿನಿಂದ ಗಮನಿಸಿದವಳು, ವೇದವಲ್ಲಿ ಮನೆಗೆ ಮನೆಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ಉಜಿರೆ ಹೈಸ್ಕೂಲ್ ವಿದ್ಯಾರ್ಥಿನಿ. ಚೆಕ್ಕಿತ್ತಾಯರ ಮಗಳು. ಈಕೆ ಮನೆಯ ಹೊರಗಿನಿಂದಲೇ ಮನೆಯೊಳಗಿನ ವಿದ್ಯಾಮಾನವನ್ನು ನೋಡಿದ್ದು, ರೇಪಿಸ್ಟರ ತಂಡ ಗಮನಿಸಿತ್ತು.

ಘಟನೆಯ ಪ್ರತ್ಯಕ್ಷದರ್ಶಿ ಸಾಕ್ಷಿಯನ್ನು ಉಳಿಸಿದರೆ ವೇದವಲ್ಲಿ ಟೀಚರ್ ಅವರ ರೇಪ್ & ಮರ್ಡರ್ ಬಯಲಾಗುತ್ತದೆ. ಕರುಣೆ ಎಂಬ ಪದವೇ ರೇಪಿಸ್ಟರ ಜೀವನದಲ್ಲಿ ಇರಲಿಲ್ಲ, ಇರುವುದೂ ಇಲ್ಲ. ಇರಲು ಹೇಗೆ ತಾನೇ ಸಾಧ್ಯ ? ಕೃತ್ಯ ಅಕಸ್ಮಾತ್ ಆಗಿ ಆ ವಿದ್ಯಾರ್ಥಿನಿಯ ಕಣ್ಣಿಗೆ ಬಿದ್ದಿತ್ತು. ಅಷ್ಟೇ ಸಾಕಿತ್ತು ಆಕೆಯ ಪ್ರಾಣ ತೆಗೆಯಲು. ಬಳಿಕ ಆ ಅಮಾಯಕ, ಮುಗ್ದ ಬಾಲಕಿಯ ಶವ ಸಿಕ್ಕಿದ್ದು ಬಾವಿಯಲ್ಲಿ…!

(ಮುಂದುವರಿಯುವುದು)

~ ಶ್ರೀರಾಮ ದಿವಾಣ, ಉಡುಪಿ.

error: No Copying!