ಮತ್ತೆ ಮತ್ತೆ ಭುಗಿಲೇಳುವ ಕಾವೇರಿ ನದಿ ನೀರಿನ ವಿವಾದ……
ಶತಮಾನಗಳಷ್ಟು ಹಳೆಯದಾದ ಮತ್ತು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸುಮಾರು 75 ವರ್ಷಗಳ ನಂತರವೂ ಒಂದು ನೀರಿನ ಹಂಚಿಕೆಯ ವಿವಾದ ಇನ್ನೂ ಬಗೆಹರಿಸಲು ಸಾಧ್ಯವಾಗದೇ ಇರುವುದರ ವಿಫಲತೆಯ ಹೊಣೆ ಯಾರದು……
ಇಡೀ ಭಾರತ ದೇಶವೇ ಒಂದು ಎಂದು ಹೇಳುವ ನಾವು, ಸ್ವಾಭಾವಿಕವಾಗಿ ಪ್ರಕೃತಿಯ ಮಡಿಲಲ್ಲಿ ಇರುವ ನೀರನ್ನು,
ಕೇವಲ ಭಾಷೆಯ ಆಧಾರದಲ್ಲಿ ರಚಿತವಾಗಿರುವ ನಮ್ಮದೇ ಬೇರೆ ಬೇರೆ ಪ್ರದೇಶಗಳ ಭಿನ್ನತೆಯನ್ನು ಮೀರಿ ಹಂಚಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇದ್ದೇವೆ ಎಂದರೆ ನಾಚಿಕೆಯಾಗಬೇಕಿರಿವುದು ಯಾರಿಗೆ………
ಮಹಾನ್ ರಾಜ
ಕಾರಣಿಗಳು, ಆಡಳಿತಗಾರರು, ಪ್ರಕಾಂಡ ಪಂಡಿತರು,
ಬುದ್ಧಿಜೀವಿಗಳು, ನ್ಯಾಯವಾದಿಗಳು, ನೀರಾವರಿ ತಜ್ಞರುಗಳು ಇದ್ದರೂ,
ಸಹಜ ನ್ಯಾಯದ ಸಾಮಾನ್ಯ ಜ್ಞಾನದ ಮಾದರಿ ತಿಳಿದಿದ್ದರೂ,
ಮನುಷ್ಯನ ಮೂಲಭೂತ ಅವಶ್ಯಕತೆ ಕುಡಿಯುವ ನೀರು ಎಂದು ಅರಿವಿದ್ದರೂ, ಕೂಡ ಕೊಳ್ಳುವ ಸಣ್ಣ ಮಾತುಕತೆಯ ಮುಖಾಂತರ ಇದನ್ನು ಬಗೆಹರಿಲು, ಸಾಧ್ಯವಾಗದ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂದರೆ ಅವಮಾನವಾಗಬೇಕಿರುವುದು ಯಾರಿಗೆ…………
ನಾವೇ ಚುನಾಯಿಸಿದ ನಮ್ಮದೇ ಜನ ಪ್ರತಿನಿಧಿಗಳು ನಮ್ಮನ್ನು ಆಳುತ್ತಿರುವಾಗ, ನಮ್ಮದೇ ಸಮಸ್ಯೆಗಳನ್ನು, ಪರಿಹರಿಸುವ ಬದ್ಧತೆಯನ್ನು ಪ್ರದರ್ಶಿಸದ ಇವರನ್ನು ಏನೆಂದು ಕರೆಯಬೇಕು…....
ನೀರು ಯಾರಪ್ಪನ ಆಸ್ತಿಯೂ ಅಲ್ಲ, ಅದಕ್ಕೆ ಕರ್ನಾಟಕ, ತಮಿಳುನಾಡು, ಗೋವ ಎಂಬ ಮನುಷ್ಯ ನಿರ್ಮಿತ ರಾಜ್ಯಗಳ ಗಡಿ ಗೆರೆಗಳೇ ಗೊತ್ತಿಲ್ಲ……..
ಹುಟ್ಟಿದ ಕ್ಷಣದಿಂದ, ಹುಟ್ಟಿದ ಸ್ಥಳದಿಂದ, ತನ್ನ ಸಹಜ ಧರ್ಮಕ್ಕೆ ಅನುಗುಣವಾಗಿ, ಹರಿಯುತ್ತಾ ಸಾಗುತ್ತದೆ. ಅದರ ದಿಕ್ಕು ಮತ್ತು ಲಭ್ಯತೆಯ ಆಧಾರದಲ್ಲಿ ಸಂಪೂರ್ಣ ಉಪಯೋಗ ಪಡೆಯುವ ಜವಾಬ್ದಾರಿ ನಮ್ಮದು………..
ಕನಿಷ್ಠ ನಮ್ಮ ನಿಯಂತ್ರಣಕ್ಕೆ ಒಳಪಟ್ಟ ನಮ್ಮದೇ ದೇಶದ ಒಳಗಡೆ ಅದರ ಗರಿಷ್ಠ ಉಪಯೋಗ ನಮ್ಮದಾಗಬೇಕು, ಭಾಷೆ ಪ್ರದೇಶದ ಹಂಗಿಲ್ಲದೆ………
ಆದರೆ ಇದಕ್ಕೆ ರಾಜಕೀಯ ಆಡಳಿತವೇ ಒಂದು ಬೃಹತ್ ಸಮಸ್ಯೆ ಆಗಿದೆಯೆಂದರೆ ಅದಕ್ಕೆ ಹೊಣೆ ಯಾರು……..
ಜನರೇ ಮತ್ತೆ ” ಬಲವೇ ನ್ಯಾಯ ” ( Might is right ) ಎಂಬ ಅನಾಗರೀಕತೆಯತ್ತ ಮುಖ ಮಾಡಬೇಕೆ……….
ಹಾಗಾದರೆ ಮಾನವನ ಇಲ್ಲಿಯವರೆಗಿನ ನಾಗರಿಕ ಅನುಭವ ವ್ಯರ್ಥವೇ. ನಮ್ಮ ಜ್ಞಾನವನ್ನು ಸ್ವಾರ್ಥ, ದುರಾಸೆ, ಮರೆಮಾಚಿದೆಯೇ……
ಇಲ್ಲ, ಹಾಗಾಗಲು ಬಿಡಬಾರದು. ಮಾತುಕತೆಯಿಂದ ಪರಿಹರಿಸಲಾಗದ ಸಮಸ್ಯೆ ಇದಲ್ಲ. ವ್ಯವಸ್ಥೆಯ ಲೋಪ ದೋಷ ಸರಿಪಡಿಸಿಕೊಳ್ಳುವ ಸುಸಮಯ ಇದು. ಇನ್ನಷ್ಟು ಹದಗೆಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ………
ಇಲ್ಲವೇ ನಾವೆಲ್ಲರೂ ಹೊಸ ವ್ಯವಸ್ಥೆಯತ್ತ ಹೆಜ್ಜೆಗಳನ್ನು ಇಡಬೇಕಾಗುತ್ತದೆ………..
ಚಂದ್ರಯಾನದ ಬಗ್ಗೆ ಅತಿಯಾದ ನಿರೀಕ್ಷೆಗಳು ಬೇಡ. ವ್ಯಂಗ್ಯವೂ ಬೇಡ. ಯಶಸ್ಸಿನ ಸಂಭ್ರಮ – ವಿಫಲತೆಯ ನೋವು ಒಂದು ಹಂತದ ನಿಯಂತ್ರಣದಲ್ಲಿ ಇರಲಿ…..….
ಏಕೆಂದರೆ ಖಗೋಳ ಕೌತುಕದ ಸಂಶೋಧನೆ ಮತ್ತು ಅಧ್ಯಯನ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲಿ ಸೋಲು ಗೆಲುವು ಎಂಬುದು ಇರುವುದಿಲ್ಲ. ಅನುಭವ ಮತ್ತು ಉಪಯೋಗ ಮಾತ್ರ ಇರುತ್ತದೆ…..
ವಿಮಾನ ಸಂಶೋಧನೆ, ವಿದ್ಯುತ್ ಸಂಶೋಧನೆ, ಔಷಧಗಳ ಸಂಶೋಧನೆ ಹೀಗೆ ಮನುಷ್ಯನ ನಾನಾ ಸಂಶೋಧನೆಗಳ ಹಿಂದೆ ಅನೇಕ ಪ್ರಯತ್ನಗಳು ಸಾಗುತ್ತಲೇ ಇರುತ್ತದೆ….
ಆದರೆ ಸಮೂಹ ಸಂಪರ್ಕ ಮಾಧ್ಯಮಗಳ ಇಂದಿನ ದಿನಗಳಲ್ಲಿ ಅನವಶ್ಯಕವಾಗಿ ಜನ ಸಾಮಾನ್ಯರು ಅತಿಯಾದ ಪ್ರಚಾರ, ಪ್ರಸಾರ, ನಿರೀಕ್ಷೆಗಳು ಹೆಚ್ಚಾಗಿ ವಿಜ್ಞಾನಿಗಳ ಮೇಲೆ ಒತ್ತಡದ ಭಾರ ಅಧಿಕವಾಗುತ್ತದೆ. ಅದು ಸಂಶೋಧನೆಯ ಪರಿಣಾಮ ಮತ್ತು ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ…….
ಗೆದ್ದೇ ಗೆಲ್ಲಬೇಕು ಎಂಬ ಹಠಕ್ಕಿಂತ ಅಥವಾ ನಿರ್ಲಿಪ್ತ – ನಿರ್ಲಕ್ಷ್ಯ ಮನೋಭಾವಕ್ಕಿಂತ ಸಮಚಿತ್ತ ವ್ಯಕ್ತಿತ್ವದ ಕಾರ್ಯಾಚರಣೆಯ ಯಶಸ್ಸು ಯಾವಾಗಲೂ ಅತ್ಯುತ್ತಮ ಪರಿಣಾಮ ಬೀರಿ ಫಲಿತಾಂಶ ನೀಡುತ್ತದೆ ಎಂಬುದು ಬಹುತೇಕ ಯಶಸ್ಸಿನ ಗುಟ್ಟು…….
ಯಾರೋ ಏನೋ ವ್ಯಂಗ್ಯವಾಡುವುದು, ಅದಕ್ಕೆ ಇನ್ಯಾರೋ ಮತ್ತಷ್ಟು ಕೆಟ್ಟದಾಗಿ ಪ್ರತಿಕ್ರಿಯೆ ಕೊಡುವುದು ನಮ್ಮ ಇಡೀ ಸಮಾಜದ ಸೌಹಾರ್ದತೆ ಹಾಳಾಗಿ ಅದು ದೇಶದ ಸಾಮರಸ್ಯದ ನಾಶಕ್ಕೆ ಕಾರಣವಾಗುತ್ತದೆ. ಅದು ನಿಜವಾದ ದೇಶಭಕ್ತಿಯಲ್ಲ. ಪ್ರೀತಿ ವಿಶ್ವಾಸ ಸ್ನೇಹ ಸಮಯ ಸಹಕಾರ ತಾಳ್ಮೆ ಕರುಣೆ ಕ್ಷಮಾಗುಣ ಮುಂತಾದ ಮೌಲ್ಯಗಳೇ ನಿಜವಾದ ದೇಶಭಕ್ತಿ. ಕೇವಲ ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು ದೇಶ ಪ್ರೇಮದ ಲಕ್ಷಣಗಳಲ್ಲ ಎಂಬುದನ್ನು ನೆನಪಿಸಿಕೊಳ್ಳುತ್ತಾ…….
ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಹಾರೈಸೋಣ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..