Spread the love

ಈ ಪುಣ್ಯ ನೆಲದಲ್ಲಿ
ಮಕ್ಕಳ ಮೇಲೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ, ಕೊಲೆಗಳಾದಾಗ ಜನರು ಜಾತಿ, ಧರ್ಮ, ಸಂಬಂಧ, ಪಕ್ಷ, ಲಾಭ ನಷ್ಟ, ನಮ್ಮವರಾ, ಇಲ್ಲಾ ಬೇರೆಯವರಾ? ಗಣ್ಯ ವ್ಯಕ್ತಿಗಳಾ ಅಥವಾ ಅವರ ಸಂಬಂಧಿಕರಾ ಎಂದು ನೋಡುವುದನ್ನು ಮೊದಲು ಬಿಡಬೇಕು.

ಕುಮಾರಿ ಸೌಜನ್ಯ ಅಥವಾ ಇನ್ನಾವುದೋ ಅನ್ಯಾಯಕ್ಕೊಳಗಾದ ಹೆಣ್ಣು ಮಗಳು ನಮ್ಮ ಅಕ್ಕನೋ,ತಂಗಿಯೋ ಅಂತ ಭಾವಿಸಿ ಭಯ, ಅಂಜಿಕೆ ಬಿಟ್ಟು ಸ್ವಯಂ ಪ್ರೇರಿತರಾಗಿ ನಿರಂತರವಾಗಿ ಬೀದಿಗಿಳಿದು ಕಾನೂನಿ ನಡಿಯಲ್ಲಿ ನ್ಯಾಯ ಪಡೆಯುವವರೆಗೆ ಹೋರಾಟ ನಡೆಸಬೇಕು.

ಪುರುಷರೂ ಸೇರಿದಂತೆ ದೇಶದ ಪ್ರತಿಯೊಬ್ಬ ಮಹಿಳೆ ಮೊದಲು ಅತ್ಯಾಚಾರದಂತಹ ನೀಚ ಕೃತ್ಯದ ವಿರುದ್ಧ ಸಿಡಿದೇಳಬೇಕು. ವಿಷಯ ಗೊತ್ತಿದ್ದರೆ ಕಾನೂನಿನ ಕೈಗೆ ಆ ಪಿಶಾಚಿಗಳನ್ನು ಒಪ್ಪಿಸುವುದರಿಂದ ಹಿಡಿದು ನ್ಯಾಯಾಲಯ ದಲ್ಲಿ ಸಾಕ್ಷಿ ಹೇಳಲು ಹಿಂಜರಿಯಬಾರದು.

ಇಂತಹ ವಿಷಯಗಳಲ್ಲಿ ಬಡವ ಶ್ರೀಮಂತ, ಜಾತಿ ಧರ್ಮ ನೋಡಿದರೆ ಲಾಭ ನಷ್ಟ ಲೆಕ್ಕಾಚಾರ ಹಾಕಿದರೆ ಅತ್ಯಾಚಾರಿಗಳು ಕಾನೂನಿನಿಂದ ತಪ್ಪಿಸಿ ಕೊಳ್ಳುವ ಸಾಧ್ಯತೆಯೇ ಹೆಚ್ಚು. ಅತ್ಯಾಚಾರಿ, ಕೊಲೆಗಡುಕನಂತಹ ಕ್ರೂರಿ ಯಾವ ಜಾತಿ ಧರ್ಮಕ್ಕೂ ಸೇರಿದವನಲ್ಲ, ಅವನಿಗೆ ಸಂಬಂಧಗಳ ಬೆಲೆಯೂ ಅಗತ್ಯವಿಲ್ಲ ಅನ್ನುವುದನ್ನು ನಾವು ಗಮನಿಸಬೇಕು.

ನಮ್ಮನ್ನಾಳುವ ಸರಕಾರಗಳು ಇಂತಹ ವಿಷಯಗಳಲ್ಲಿ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಅನ್ನುವ ರೀತಿಯಲ್ಲಿ ವರ್ತಿಸುವುದೇ ಹೆಚ್ಚು. ಸಣ್ಣ ಪುಟ್ಟ ಪ್ರತಿಭಟನೆ ಗಳು ಸರಕಾರಕ್ಕೆ ಕೋಣನ ಮುಂದೆ ವೀಣೆ ನುಡಿಸಿದಂತೆ. ರಾಜಕೀಯ ಒತ್ತಡಗಳು ಇಲ್ಲದಿದ್ದರೆ ನಮ್ಮ ಪೊಲೀಸ್ ಇಲಾಖೆ ಖಂಡಿತವಾಗಿಯೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅಪರಾಧಿಯ ಹೆಡೆಮುರಿ ಕಟ್ಟು ವುದರಲ್ಲಿ ಯಾವುದೇ ಸಂಶಯವಿಲ್ಲ.

ಇಲಾಖೆಯ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ, ಸಮಾಜ ಘಾತುಕರನ್ನು, ಅತ್ಯಾಚಾರಿ ಕೊಲೆಗಡುಕರನ್ನು ಬಗ್ಗು ಬಡಿದ ಅದೆಷ್ಟೋ ಉದಾಹರಣೆ ನಮ್ಮ ಮುಂದಿದೆ.

ಅತ್ಯಾಚಾರ, ಕೊಲೆ, ದರೋಡೆ, ಇನ್ನಿತರ ಯಾವುದೇ ಪ್ರಕರಣಗಳಲ್ಲಿ ಅಪರಾಧಿಗಳು ತಪ್ಪಿಸಿ ಕೊಳ್ಳಲು, ಕಾನೂನಿನ ಕಣ್ಣಿಗೆ ಮಣ್ಣೆರೆಚಲು ಸಾರ್ವಜನಿಕರಾದ ನಾವುಗಳು, ನಮಗೂ ನಡೆದ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲದವರಂತೆ ವರ್ತಿಸುವುದು ಕೂಡ ಒಂದು ಕಾರಣ.

ಹೀಗಾದರೆ ಸೌಜನ್ಯ ಬಿಡಿ ಅತ್ಯಾಚಾರ ಕ್ಕೊಳಗಾದ, ಹತ್ಯೆಯಾದ ಯಾವ ಮಹಿಳೆಗೆ ನ್ಯಾಯ ಸಿಗಲು ಸಾಧ್ಯ? ಅಪರಾಧಿ ಎಲ್ಲಿ? ಒಂದು ವೇಳೆ ಅಪರಾಧಿ ಸಿಕ್ಕರೂ ನ್ಯಾಯ ಪಡೆಯಲು ತಪ್ಪೇ ಮಾಡದೇ ಪಾಪಿಗಳ ಕೈಯಲ್ಲಿ ಹತ್ಯೆಯಾದ ನಮ್ಮ ಮುಗ್ದ ಹೆಣ್ಮಕ್ಕಳು ಮತ್ತೆ ಬರುತ್ತಾರೆಯೇ? ಸೌಜನ್ಯ ಪ್ರಕರಣದಲ್ಲಿ ನಿಜವಾದ ಅಪರಾಧಿ ಸಿಗುವವರೆಗೂ ಹೋರಾಟ ಮುಂದುವರಿಯಲಿ ಎಂಬುದೇ ಹಾರೈಕೆ.

ಶ್ರೀನಿವಾಸ್ ವಡ್ಡರ್ಸೆ
ಉಡುಪಿ ಜಿಲ್ಲೆ.
ಸಾಮಾಜಿಕ ಹೋರಾಟಗಾರರು.

error: No Copying!