ಅಹಿಂಸೆಯ ಅರ್ಥ ಶರಣಾಗತಿ ಅಥವಾ ಹೇಡಿತನವಲ್ಲ. ಅದು ಹಿಂಸೆಯ ವಿರೋಧಿ. ರಕ್ಷಣೆ ಮತ್ತು ಶಾಂತಿಯ ಅತ್ಯುತ್ತಮ ಮಾರ್ಗ. ಭಾರತದ ಹೆಮ್ಮೆ. ವಿಶ್ವಕ್ಕೆ ನಮ್ಮ ಬಹುದೊಡ್ಡ ಕೊಡುಗೆ……
ನಿಧಾನವಾಗಿ ಇತಿಹಾಸದ ಕೆಲವು ದೇಶಗಳ ಜನಾಂಗೀಯ ಘರ್ಷಣೆಗಳನ್ನು ಗಮನಿಸುತ್ತಾ ಬನ್ನಿ. ಅಲ್ಲಿ ಹರಿದ ರಕ್ತದ ಕೋಡಿ ಎಷ್ಟು ಲೀಟರ್ ಇರಬಹುದು ಗೊತ್ತೆ. ಬಹುಶಃ ಸಾವಿರಾರು ಟಿಎಂಸಿ ನೀರಿನ ಜಲಾಶಯದಷ್ಟಾಗುತ್ತದೆ….
ತುಂಬಾ ಹಿಂದಕ್ಕೆ ಹೋದರೆ ಅದು ನದಿ ನೀರು ನಾಚುವಷ್ಟಿರುತ್ತದೆ. ಇಪ್ಪತ್ತು ಇಪ್ಪತೊಂದನೆ ಶತಮಾನಗಳ ಬಗ್ಗೆ ಮಾತ್ರ ನೋಡುವುದಾದರೆ……
ಬಹುದೊಡ್ಡ ಜನಾಂಗೀಯ ಹಿಂಸೆ ಹಿಟ್ಲರನ ಕಾಲದ ಜರ್ಮನಿಯ ನಾಜಿ – ಯಹೂದಿಗಳ ನಡುವಿನ ದ್ವೇಷ ಮತ್ತು ಲಕ್ಷಾಂತರ ಜನರ ಮಾರಣ ಹೋಮ. ಅಷ್ಟೇ ಪ್ರಮಾಣದ ಹಿಂಸೆ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಮಯದಲ್ಲಿ ಆದ ಹಿಂದೂ ಮುಸ್ಲಿಂ ಹತ್ಯಾಕಾಂಡ. ಇರಾಕ್ ನ ಸುನ್ನಿ ಖುರ್ದಿಶ್ ನಾಗರಿಕ ಯುದ್ಧಗಳು, ಆಫ್ರಿಕಾದ ಹಲವಾರು ಬುಡಕಟ್ಟು – ಆದಿವಾಸಿಗಳ ನಡುವಿನ ಆಂತರಿಕ ಕ್ಷೋಬೆಗಳು, ಮಧ್ಯಪ್ರಾಚ್ಯ ರಾಷ್ಟ್ರಗಳಾದ ಸಿರಿಯಾ ಯೆಮೆನ್ ಈಜಿಪ್ಟ್ ಇಸ್ರೇಲ್ ಪ್ಯಾಲೆಸ್ಟೈನ್ ಮುಂತಾದ ದೇಶಗಳ ಜನಾಂಗೀಯ ಹೋರಾಟಗಳು, ಪಾಕಿಸ್ತಾನ ಆಫ್ಘನಿಸ್ಥಾನ ದೇಶಗಳ ಭಯೋತ್ಪಾದಕ ಕೃತ್ಯಗಳು, ಶ್ರೀಲಂಕಾದ ತಮಿಳು ಮತ್ತು ಸಿಂಹಳೀಯರ ನಡುವಿನ ಭಯಂಕರ ಕಾದಾಟ, ಅಮೆರಿಕಾ ಕಪ್ಪು ಬಿಳಿಯರ ನಡುವಿನ ದೀರ್ಘಕಾಲದ ಗಲಭೆಗಳು, ಬರ್ಮಾದ ಬೌದ್ದ ಮತ್ತು ರೋಹಿಂಗ್ಯಾ ಹೊಡೆದಾಟಗಳು ಹೀಗೆ ಇನ್ನೂ ಈ ಕ್ಷಣದಲ್ಲಿ ನೆನಪಾಗದ ನೂರಾರು ನಾಗರಿಕ ಯುದ್ದಗಳು ಮನುಷ್ಯ ರಕ್ತದಿಂದ ಈ ಭೂಮಿಯನ್ನು ಮಲಿನ ಗೊಳಿಸಿವೆ……
ಈ ಹಿನ್ನೆಲೆಯಲ್ಲಿ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯ ಅಷ್ಟೇ ವೈವಿಧ್ಯಮಯ ಮತ್ತು ಅನೇಕ ಜನಾಂಗಗಳ ತವರು ನೆಲ ಭಾರತದ ಜನರ ಮಾನಸಿಕ ಗುಣಮಟ್ಟದ ಬಗ್ಗೆ ಸ್ವಲ್ಪ ಯೋಚಿಸೋಣ…….
ಭಾರತದಲ್ಲಿ ಸಹ ಬಹಳಷ್ಟು ಯುದ್ದಗಳು, ನರಮೇಧಗಳು, ರಕ್ತಪಾತಗಳು, ದಾಳಿಗಳು ನಡೆದಿವೆ. ಆದರೆ ಅದೇ ಸಮಯದಲ್ಲಿ ಅಹಿಂಸೆಯ ದೊಡ್ಡ ಪ್ರತಿಪಾದನೆ ಭಾರತದಲ್ಲಿ ನಡೆದು ಅದು ಸಾಕಷ್ಟು ಪ್ರಭಾವವೂ ಬೀರಿರುವುದು ಕಂಡುಬರುತ್ತದೆ. ಆ ಕಾರಣದಿಂದಾಗಿಯೇ ಭಾರತೀಯರು ವೈಯಕ್ತಿಕ ಮಟ್ಟದಲ್ಲಿ ಬಹುತೇಕ ಹಿಂಸಾ ವಿರೋಧಿಗಳು ಎನ್ನಬಹುದು. ಅದಕ್ಕೆ ಉದಾಹರಣೆಯಾಗಿ ಗೌತಮ ಬುದ್ಧನ ಅಹಿಂಸಾ ಮಾರ್ಗ ವಿಶ್ವದ ಅನೇಕ ಕಡೆ ವ್ಯಾಪಿಸಿತು. ವರ್ಧಮಾನ ಮಹಾವೀರ ಸಹ ಅತ್ಯಂತ ಪ್ರಬಲ ಅಹಿಂಸೆಯ ಚಿಂತಕ. ಮಹಾತ್ಮ ಗಾಂಧಿ ಅಹಿಂಸೆಯ ಮೂಲಕವೇ ಸ್ವಾತಂತ್ರ್ಯ ಚಳವಳಿ ಮುನ್ನಡೆಸಿ ವಿಶ್ವಕ್ಕೇ ಮಾದರಿಯಾದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಆ್ಯಂಗ್ ಸಾನ್ ಸೂಕಿ, ಅಬ್ರಹಾಂ ಲಿಂಕನ್ ಮುಂತಾದವರು ನ್ಯಾಯಪರ, ಮಾನವೀಯತೆಯ ಪರವಾದ ಹೋರಾಟಗಾರರಾದರೂ ಬುದ್ದ ಗಾಂಧಿಯಂತ ಸತ್ವಯುತ ಮತ್ತು ತೀವ್ರ ಅಹಿಂಸಾವಾದಿಗಳಲ್ಲ. ಭಾರತೀಯರ ಈ ಅಹಿಂಸಾ ಪ್ರೀತಿಯ ಹಿಂದೆ ಒಂದಷ್ಟು ಜೀವ ಭಯವೂ ಅಡಗಿದೆ. ಇಲ್ಲಿನ ಜನ ಅನವಶ್ಯಕವಾಗಿ ಹೊಡೆದಾಟ ಬಡಿದಾಟಗಳಿಂದ ದೂರ ಉಳಿಯುವ ಮನಸ್ಥಿತಿ ಹೊಂದಿದ್ದಾರೆ. ಹೇಡಿತನ ಅಲ್ಲದಿದ್ದರು ಶರಣಾಗತಿಯ ಭಾವ ಹೆಚ್ಚಾಗಿದೆ…..
ಭಾರತದ ಬಹುತೇಕ ಜನರು ಮೃದು ಸ್ವಭಾವದ ಸೌಮ್ಯ ನಡವಳಿಕೆಯವರು. ಇತ್ತೀಚಿನ ವರ್ಷಗಳಲ್ಲಿ ಕೆಲವು ಅತಿರೇಕಿ ಸಂಘಟನೆಗಳ ಪ್ರಚೋದನೆಯಿಂದ ಒಂದಷ್ಟು ಆಕ್ರಮಣಕಾರಿ ಮನೋಭಾವ ಮೇಲ್ನೋಟಕ್ಕೆ ಕಾಣುತ್ತಿದ್ದರೂ, ದೇಶ ಧರ್ಮದ ಹೆಸರಿನಲ್ಲಿ ಬಹಿರಂಗ ಕೂಗಾಟ ಅರಚಾಟ ಒಂದಷ್ಟು ಹೊಡೆದಾಟ ಇದ್ದರೂ, ಒಟ್ಟಾರೆ ಕೌಟುಂಬಿಕ ಮನಸ್ಥಿತಿಯನ್ನೇ ಹೊಂದಿರುವವರೇ ಹೆಚ್ಚು. ಹಿಂಸೆಗೆ ಪರ್ಯಾಯವಾಗಿ ಹೊಂದಾಣಿಕೆ ಭಾರತೀಯರ ಮೂಲ ಗುಣ…..
ಸಾಮಾಜಿಕ ಜಾಲತಾಣಗಳು ಜನಪ್ರಿಯವಾದ ನಂತರ ಕೆಲವರು ಸ್ವಲ್ಪ ಅತಿಯಾದ ಆಕ್ರೋಶಗಳನ್ನು ಬರಹಗಳಲ್ಲಿ ಮೂಡಿಸುತ್ತಾರೆ, ಮತ್ತೆ ಹಲವರು ಗಾಳಿ ಸುದ್ದಿ ಹಬ್ಬಿಸಿ ಒಂದಷ್ಟು ಕೆರಳಿಸುವುದು ಬಿಟ್ಟರೆ ಬೀದಿಗಿಳಿದು ಹೊಡೆದಾಡುವ ಧೈರ್ಯ ತೀರಾ ಅಪರೂಪ. ಒಂದು ವೇಳೆ ಆ ಹುಮ್ಮಸ್ಸು ತೋರಿದರು ಅವರ ಕುಟುಂಬದವರು ಅದಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ಸಕಾರಾತ್ಮಕವಾಗಿಯೇ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹಿಂಸೆಗೆ ಮುನ್ನುಗ್ಗುವ ಧೈರ್ಯ ಅತ್ಯಂತ ಅಪಾಯಕಾರಿ…….
ಹಾಗೆಯೇ ಭಾರತೀಯ ಜೀವನಶೈಲಿಯಲ್ಲಿ ಪ್ರಶ್ನಿಸುವ ಮನೋಭಾವ ಇದೆ. ದೇವರ ಅಸ್ತಿತ್ವ, ಧರ್ಮದ ನೈತಿಕತೆ, ಕಬೀರ ಮೀರಾಬಾಯಿ ಕನಕ ಪುರಂದರ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಅರವಿಂದ ಘೋಷ್, ರಾಮಕೃಷ್ಣ ಪರಮಹಂಸ ಮುಂತಾದವರ ಭಕ್ತಿ ಪಂಥದ ಚಳವಳಿಗಳು, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿ, ನಾರಾಯಣ ಗುರು, ಪೆರಿಯಾರ್ ರಂತ ವಿಚಾರವಾದಿಗಳು, ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣನವರಂತ ಕ್ರಾಂತಿಕಾರಿಗಳು ಇತ್ಯಾದಿಗಳ ಪ್ರಭಾವದಿಂದಾಗಿ ಸ್ವಲ್ಪ ಮಟ್ಟಿಗೆ ಚಿಂತನಶೀಲ ಗುಣಗಳು ಬೆಳೆದಿವೆ. ಇದು ಕೂಡ ಸಕಾರಾತ್ಮಕ ನಡವಳಿಕೆಯೇ…..
ಆದರೆ ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ರಾಜಕೀಯದ ಕಾರಣದಿಂದಾಗಿ ಕೆಲವು ರಾಜಕೀಯ ಪಕ್ಷಗಳು ಮತ್ತು ಅದರ ಮುಂಚೂಣಿ ನಾಯಕರು ತಮ್ಮ ಅಧಿಕಾರಕ್ಕಾಗಿ ಜನರಿಗೆ ದೇಶ ಮತ್ತು ಧರ್ಮದ ಹೆಸರಿನಲ್ಲಿ ಮಂಕುಬೂದಿ ಎರಚಿ ಅವರನ್ನು ಸಮ್ಮೋಹನಕ್ಕೆ ಒಳಪಡಿಸಿದ್ದಾರೆ. ಪ್ರೀತಿ ಅಹಿಂಸೆಯ ಜಾಗದಲ್ಲಿ ದ್ವೇಷ ಸೇಡನ್ನು ನೆಟ್ಟಿದ್ದಾರೆ. ಮುಖ್ಯವಾಗಿ ಹಿಂದೂ ಮುಸ್ಲಿಮರ ಮಧ್ಯೆ ಬಹುದೊಡ್ಡ ಕಂದಕ ನಿರ್ಮಿಸುತ್ತಿದ್ದಾರೆ. ಅದು ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕಾಶ್ಮೀರ, ಕರ್ನಾಟಕದ ಸ್ವಲ್ಪ ಭಾಗ, ಇದೀಗ ಹರ್ಯಾಣ ಮತ್ತು ಸ್ವಲ್ಪ ಭಿನ್ನವಾದರು ಮಣಿಪುರ ಬೆಂಕಿಯ ಜ್ವಾಲೆಯಲ್ಲಿ ಸುಡುತ್ತಿದೆ. ಇದರ ಹಿಂದಿರುವುದು ಕೇವಲ ಅಧಿಕಾರ ರಾಜಕೀಯ ಮಾತ್ರ ಎಂದು ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ. ದೂರದೃಷ್ಟಿಯ ಕೊರತೆಯ ಪರಿಣಾಮ ಸಂಕುಚಿತ ಮನೋಭಾವಕ್ಕೆ ಬಲಿಯಾಗಿ ಸಮಗ್ರತೆಯನ್ನು ಅರಿಯದೆ ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ………
ಇದು ಯಾವ ಹಂತ ತಲುಪಿದೆ ಎಂದರೆ ಒಂದು ರಾಷ್ಟ್ರೀಯ ಪಕ್ಷ ಮುಸ್ಲಿಮರಿಗೆ ಹಿಂದುಗಳನ್ನು ತೋರಿಸಿ ಅವರು ಅಪಾಯಕಾರಿ ಆದ್ದರಿಂದ ನಿಮ್ಮ ರಕ್ಷಣೆಗೆ ನಾವಿದ್ದೇವೆ ನಮ್ಮನ್ನು ಬೆಂಬಲಿಸಿ ಎಂದರೆ ಮತ್ತೊಂದು ರಾಷ್ಟ್ರೀಯ ಪಕ್ಷ ಹಿಂದುಗಳಿಗೆ ಮುಸ್ಲಿಮರನ್ನು ತೋರಿಸಿ ಅವರು ಅಪಾಯಕಾರಿ ಆದ್ದರಿಂದ ನಾವು ನಿಮ್ಮ ರಕ್ಷಣೆಗೆ ಇದ್ದೇವೆ ಅದಕ್ಕಾಗಿ ನಮ್ಮನ್ನು ಬೆಂಬಲಿಸಿ ಎಂದು ಹೇಳುತ್ತದೆ. ವಾಸ್ತವದಲ್ಲಿ ನೂರಾರು ವರ್ಷಗಳಿಂದ ಸಾಮಾನ್ಯ ಜನರು ಶಾಂತಿ ಸೌಹಾರ್ದತೆಯಿಂದಲೇ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದಾರೆ. ಆದರೆ ಅಧಿಕಾರ ದಾಹದ ರಾಜಕಾರಣಿಗಳು ಇವರ ನಡುವೆ ಸಣ್ಣ ಪುಟ್ಟ ಘಟನೆಗಳನ್ನು ದೊಡ್ಡದು ಮಾಡಿ ಬೆಂಕಿ ಹಚ್ಚುತ್ತಿದ್ದಾರೆ……
ಎಚ್ಚೆತ್ತುಕೊಳ್ಳಬೇಕಾದ ಸಾಮಾನ್ಯ ಜನ ಅನಾವಶ್ಯಕವಾಗಿ ಗೊಂದಲಕ್ಕೆ ಒಳಗಾಗಿ ಆತಂಕದಿಂದ ಮತ್ತಷ್ಟು ತಪ್ಪು ಮಾಡುತ್ತಿದ್ದಾರೆ. ದೇಶದ ಒಳಗಡೆ ನಿಧಾನವಾಗಿ ಆಂತರಿಕ ಕಲಹಗಳು ಭುಗಿಲೇಳುತ್ತಿವೆ. ಇದನ್ನು ಈಗಲೇ ನಿಯಂತ್ರಿಸಬೇಕು. ಚುನಾವಣೆ, ಧರ್ಮ, ಅಧಿಕಾರಕ್ಕಿಂತ ದೇಶ ಮತ್ತು ಮನುಷ್ಯ ಮುಖ್ಯವಾಗಬೇಕು. ಸಾಮಾನ್ಯ ಜನ ಅನವಶ್ಯಕವಾಗಿ ರಾಜಕೀಯ ಪಕ್ಷಗಳು ಅಥವಾ ಸೈದ್ದಾಂತಿಕ ಎಡ ಬಲ ಚಿಂತನೆಗಳನ್ನು ಬದಿಗಿರಿಸಿ ಮಾನವೀಯತೆ ಮತ್ತು ಭಾರತೀಯತೆಯ ಪರವಾಗಿ ಧ್ವನಿ ಎತ್ತಬೇಕು. ದೇಶದ ಹಿತಾಸಕ್ತಿಯೇ ಮುಖ್ಯವಾಗಬೇಕು…..
ಇಲ್ಲದಿದ್ದರೆ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ನಮ್ಮ ನಡುವೆಯೇ ದ್ವೇಷ ಹುಟ್ಟಿಸುತ್ತಾರೆ. ಇದು ಈಗಾಗಲೇ ಸಾಕಷ್ಟು ಆಗಿ ಹೋಗಿದೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಜನ ಬೇರೆ ಬೇರೆ ಗುಂಪುಗಳನ್ನು ರಚಿಸಿಕೊಂಡು ಒಂದು ಧರ್ಮ ಒಂದು ಪಕ್ಷದ ಪರವಾಗಿ ಮಾತನಾಡುತ್ತಾ, ಇನ್ನೊಂದು ಧರ್ಮ ಮತ್ತು ಪಕ್ಷವನ್ನು ಅತ್ಯಂತ ತೀವ್ರವಾಗಿ ದ್ವೇಷಿಸುತ್ತಾ ನಮ್ಮ ನಡುವೆಯೇ ದೇಶ ಭಕ್ತರು ಮತ್ತು ದೇಶ ದ್ರೋಹಿಗಳು ಎಂದು ಇಲ್ಲದ ಆಪಾದನೆ ಮಾಡುತ್ತಾ ಒಬ್ಬರಿಗೊಬ್ಬರು ನಾಶ ಮಾಡಲು ಸಮಯ ಮತ್ತು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅದರ ದುಷ್ಪರಿಣಾಮವೇ ಇಂದಿನ ಗಲಭೆಗಳು…..
ಆದ್ದರಿಂದ ದಯವಿಟ್ಟು ಸಂಯಮ ಪಾಲಿಸಿ. ಪ್ರಬುದ್ಧತೆ ಬೆಳೆಸಿಕೊಳ್ಳಿ. ಟೀಕಿಸುವ ಮುನ್ನ ಸಮಗ್ರತೆ ಇರಲಿ. ಇಲ್ಲದಿದ್ದರೆ ಭಾರತದಲ್ಲಿ ಮತ್ತೊಂದು ಜನಾಂಗೀಯ ಘರ್ಷಣೆ ನಡೆದು ರಕ್ತಪಾತ ನಿಶ್ಚಿತ. ಸಾಯುವವರು ಯಾರು ಎಂಬುದು ಮಾತ್ರ ನಿರ್ಧಾರವಾಗಬೇಕಿದೆ. ಗೆಲ್ಲುವವರು ಯಾರೂ ಇಲ್ಲ. ಸೋಲುವುದು ಮಾತ್ರ ನಾವು ನೀವು………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..