ಮಣಿಪಾಲ: ದಿನಾಂಕ:04-08-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲ ಪರಿಸರದಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿ ಭಯ ಸ್ರಷ್ಟಿಸಿದ್ದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪರಿಸರದಲ್ಲಿ ಯುವಕನೊಬ್ಬ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಾ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ದುಡುಕುತನ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರವು ದಿನಾಂಕ 02/08/2023 ರಂದು ಮಣಿಪಾಲ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಮನೋಹರ ಎ.ಕೆ ಅವರ ಗಮನಕ್ಕೆ ಬಂದಿರುತ್ತದೆ.
ಈ ಬಗ್ಗೆ ಅವರು ಕೂಡಲೇ ಮಾಹಿತಿ ಪಡೆದು ಆಶಿಕ್ ಎಂಬ ಯುವಕ KA-20-EW-1759 ಸುಜುಕಿ ಆಕ್ಸಸ್ ಸ್ಕೂಟರ್‌ನಲ್ಲಿ ದಿನಾಂಕ 25/06/2023 ರಂದು ಹೆರ್ಗಾ ಗ್ರಾಮದ ಪರೀಕ ಸೇತುವೆ ಮೇಲೆ ಹಾಗೂ ದಿನಾಂಕ 26/06/2023 ರಂದು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಎಂಬಲ್ಲಿ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಾ ಜನರ ಜೀವಕ್ಕೆ ಅಪಾಯಕರ ರೀತಿಯಲ್ಲಿ ದುಡುಕುತನ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ್ದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಮಣಿಪಾಲ ಪೊಲೀಸರು ಆತನನ್ನು ಬಂಧಿಸಿ ಸ್ವಯಂ ದೂರು ದಾಖಲಿಸಿರುತ್ತಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 279, 336 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.