Spread the love

ಉಡುಪಿ: ದಿನಾಂಕ:23-06-2023(ಹಾಯ್ ಉಡುಪಿ ನ್ಯೂಸ್) ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಲೆಂದು ಬರುವ ಕ್ಷಯ ರೋಗಿಗಳಿಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷಯ ರೋಗದ ವಾರ್ಡ್ ಇಲ್ಲವೆಂದು ಚಿಕಿತ್ಸೆಗೆ ನಿರಾಕರಿಸಲಾಗುತ್ತಿದೆ ಹಾಗೂ ದೂರದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಎಂದು ಇಲ್ಲಿನ ವೈದ್ಯರು ಪುಕ್ಕಟೆ ಸಲಹೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.

ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷಯ ರೋಗದ ಚಿಕಿತ್ಸೆಗೆಂದು ಬರುತ್ತಿರುವವರಿಗೆ ಕ್ಷಯರೋಗದ ವಾರ್ಡ್ ಇಲ್ಲವೆಂದು ಕಾರಣ ಹೇಳಿ ಚಿಕಿತ್ಸೆ ನಿರಾಕರಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ. ಆಂಬ್ಯುಲೆನ್ಸ್ ವಾಹನಗಳಲ್ಲಿ ಜಿಲ್ಲೆಯ ಇತರ ಆಸ್ಪತ್ರೆಗಳಿಂದ ಬರುವ ಕ್ಷಯ ರೋಗಿಗಳನ್ನು ದಾಖಲಿಸಿ ಕೊಳ್ಳದೆ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯ ಬೇಕೆಂದು ಹೇಳಿ ಸಾಗ ಹಾಕುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.

ಪ್ರಭಾವಿ ರಾಜಕಾರಣಿಗಳ ಕಡೆಯಿಂದ ಫೋನ್ ಕರೆ ಬಂದಂತಹ ರೋಗಿಗಳಿಗೆ ಇದೇ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರಭಾವಿ ರಾಜಕಾರಣಿಗಳ ಕರೆ ಬಂದಾಗ ಕ್ಷಯ ರೋಗಿಗಳ ವಾರ್ಡ್ ಮರುಕ್ಷಣದಲ್ಲೇ ನಿರ್ಮಾಣ ವಾಗುವುದು ಹೇಗೆ? ಹಾಗಾದರೆ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಭಾವಿ ಕ್ಷಯರೋಗಿಗಳಿಗೆ ಮಾತ್ರ ಬೆಡ್ ಲಭಿಸುತ್ತದೆಯೇ? ಏನೂ ತಿಳಿಯದೆ ಬಂದ ಬಡ ರೋಗಿಗಳು ಇಲ್ಲಿ ಚಿಕಿತ್ಸೆ ಸಿಗದೆ ದೂರದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಅನುಕೂಲವಿಲ್ಲದೆ ವಾಪಾಸು ರೋಗದೊಂದಿಗೆ ಮನೆಗೆ ತೆರಳಿ ರೋಗ ಉಲ್ಬಣಗೊಂಡು ಸಾಯುವಂತಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಕೊಂಡು ಉಡುಪಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಉಡುಪಿ ಜಿಲ್ಲೆಯ ಕ್ಷಯ ರೋಗಿಗಳಿಗೆ ಕೂಡಲೇ ವಾರ್ಡ್ ವ್ಯವಸ್ಥೆ ಯನ್ನು ಮಾಡಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಲಭಿಸುವಂತೆ ಕ್ರಮಕೈಗೊಳ್ಳಬೇಕು ಎಂಬುದು ಜನಾಗ್ರಹವಾಗಿದೆ.

error: No Copying!